ಕಾವ್ಯ ಸಂಗಾತಿ
ಸಂತೆಬೆನ್ನೂರು ಫೈಜ್ನಟ್ರಾಜ್
ಬೇರು
ಅಜ್ಜ ಹೆಚ್ಚು ಮರ ನೆಡಲಿಲ್ಲ
ಮಾತುಗಳ ಹಂಚಿದ ಮಕ್ಕಳು ಮೊಮ್ಮಕ್ಕಳು
ಮಾತುಗಳ ಕಲಿಯುತ್ತಾ ಹೋದರು.
ಹೊಲದ ಬದುಗಳ ಮೇಲೆ ಕೂತು ಉಂಡ
ಬುತ್ತಿಯ ಅನ್ನದ ಅಗುಳು ನಾಲ್ಕು ದಿಕ್ಕಿಗೆ ಚೆಲ್ಲಿದ ಅಜ್ಜನ
ಕೈಗಳ ನೋಡುತ್ತಿದ್ದ ಮೊಮ್ಮಗ ಈಗ
ರೇಶನ್ ಅಂಗಡಿ ಎದುರು ಪಡಿತರ ಕಾರ್ಡ ಹಿಡಿದು
ಸರದಿ ಸಾಲು ಕಾಯುತ್ತಿದ್ದಾನೆ
ಅಜ್ಜ ಮುದ್ದೆಯ ಮಹತ್ವ ಹೇಳುತ್ತಲೇ
ಅಂಗಳದ ನಾಯಿ, ಹಿತ್ತಲ ಕಾಗೆಗಳಿಗೆ ಗುಕ್ಕು
ಮುದ್ದೆಯಿಕ್ಕಿ ತೋರಿದ ಅಗಣಿತ ಪ್ರೀತಿಗೆ ಈಗ ಜಾಗವಿಲ್ಲ
ಹದಿನೈದು ಇಪ್ಪತ್ತರ ಜಾಗವೀಗ ಮನೆ ಎಂದುಕೊಂಡ ಮೊಮ್ಮಗನಿಗೆ
ಅಪ್ಪನ ಮಲಗಿಸಲು ಜಗುಲಿಯಿಲ್ಲ
ಅವ್ವ ಯಾವುದೋ ಮೂಲೆಯಲ್ಲಿ ಮುದುಡಿದ್ದಾಳೆ ಅಜ್ಜನ
ಗೂರಲದನಿಗೆ ಮರಿಮಗನ ಸಿಂಡರಿಸುವಿಕೆಗೆ
ಮಾತುಗಳೇ ಮೂಲವಾಗಿವೆ. ತಲೆಗಳ ಅಂತರದಿ ಕಾಲ ಕ್ಯಾಲೆಂಡರಾಗಿದೆ
ಉರುಳುವುದೇ ಇಲ್ಲಿ ಮುಖ್ಯ!
ಹೊಲ ,ಗದ್ದೆ ,ಕಣಗಳು ಸೈಟಾಗಿ -ನೋಟಾಗಿದ್ದು ನೋಡಿದ
ಅಜ್ಜನ ಕಣ್ಣಲ್ಲಿ ನೀರು ಲಾವರಸ
ದಮ್ಮಿನ ಜೊತೆಯಲ್ಲಿ ಸಾವಿಗೆ ಪತ್ರಿಕೆ ಕಳಿಸುತ್ತಲೇ ಇದ್ದಾನೆ
ಮರವೊಂದು ನೂರು ಗೂಡುಗಳಿಗಾಸರೆ ಒಂದು ಗೂಡಿನ
ಹಕ್ಕಿಯ ಹಿಕ್ಕೆ ಸಾವಿರ ಮರದ ಜನನ ಮೂಲ!
ಅಜ್ಜ ಅಪ್ಪನ ಮೂಲೆಗಳು ಗರ್ಭಗುಡಿಯಾದಂದು ಮೊಮ್ಮಗ ನೂರು
ಹಕ್ಕಿಗಳ ರೆಕ್ಕೆ ಎದೆಯಲ್ಲಿ ಹುದುಗಿಸಿಕೊಂಡಂತೆ
ನಿರಂತರ ಹಸಿರಿಗೆ ಮೈ ಮನ ಮೂಲ! ತಲೆಗಳು ತೊಲೆಗಳು
ನಮ್ಮ ನೆಲದ ಆಸ್ತಿ; ಉಳಿಸಿಕೊಂಡ ಕ್ಷಣ
ಉಳಿದಂತೆ ನಾವು, ನೀವು ಮತ್ತು ಎಲ್ಲರೂ
ಸಂತೆಬೆನ್ನೂರು ಫೈಜ್ನಟ್ರಾಜ್
ತುಂಬಾ ಅರ್ಥಪೂರ್ಣವಾದ ಕವಿತೆ
ತಲೆತಲಾಂತರಗಳ ಅಂತರ
ಮನ್ವಂತರಗಳಾಗಿ ಮೂಡಿದೆ
Waah.. sir.. nenapugalu jokaali nann manadhali