ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಗಜಲ್
ಮೌನ ಮಾತಾಗಲು ಕಾತರಿಸಿರುವೆ ಒಲವೇ
ಕಣ್ಣ ರೆಪ್ಪೆಯಲೇ ಕಾದಿರಿಸಿರುವೆ ಒಲವೇ
ಮಾಸದ ನೆನಪುಗಳು ಮಡುಗಟ್ಟಿವೆ ಒಳಗೆ
ಮಾಡದ ತಪ್ಪುಗಳ ಅಪ್ಪಿ ಕಾಡಿಸಿರುವೆ ಒಲವೇ
ತಲ್ಲಣಿಸೋ ಮನದೊಳಗೆ ಒಲ್ಲದ ನೆಪವನೊಡ್ಡಿ
ಇರುಳು ಉರುಳದೇ ಕಣ್ಣೀರ ಹನಿಸಿರುವೆ ಒಲವೇ
ನೋವ ನೀಡುತಲೇ ನೀ ಬಂದೆ
ನೋವ ನುಂಗುತಲೇ ನಾ ನಿಂದೆ
ಎದೆಯ ನದಿಯಲಿ ದುಃಖ ಹರಿಸಿರುವೆ ಒಲವೇ
ಅಂತರಾಳವ ಅರಿತವರೇ
ಅಂತರವ ಸೃಷ್ಟಿಸಿಹರೆಂದು
ನಿರಂತರ ಸಹಿಸಿ ಶೋಕಿಸಿರುವೆ ಒಲವೇ
ಹಳೆಯ ಕಹಿಯನು ಮರೆತು ಇಳೆಯ ಸವಿಯಲಿ ಬೆರೆತು
ನಂದದ ನಗುವಿನಲಿ ಶೋಭಿಸಿರುವೆ ಒಲವೇ
ಶೋಭಾ ಮಲ್ಲಿಕಾರ್ಜುನ್
ಪ್ರತಿಯೊಂದು ಸಾಲುಗಳು ಚೆನ್ನಾಗಿ ಮೂಡಿವೆ…
Supper