ಪ್ರೇಮಾ ಟಿ ಎಂ ಆರ್ ಅವರ ಕವಿತೆ-ನನಗೆ ಗುರುಪ್ರಸಾದವೆಂದರೆ..

ನನಗೆ ಗುರುಪ್ರಸಾದವೆಂದರೆ
ಕೃಷ್ಣ ಮಠದ ಬೆಳಗಿನ ಗಂಟೆಯುಲಿ
ದತ್ತ ಮಂದಿರದ ಹೂವಿನ ಘಮ್ಮ

ನನಗೆ ಗುರುಪ್ರಸಾದವೆಂದರೆ
ಅಮ್ಮನ ಮಡಿಲು ಅಪ್ಪನ ಹೆಗಲಿನಷ್ಟು
ಬದ್ಧತೆ ಶುದ್ಧತೆ ದಿವ್ಯತೆ

ನನಗೆ ಗುರುಪ್ರಸಾದವೆಂದರೆ
ತೀರಿಸಲಾಗದ ಸಾಲ
ಮರೆಯಲಾಗದ ಋಣಭಾರ

ನನಗೆ ಗುರುಪ್ರಸಾದವೆಂದರೆ
ಕೆ ಆರ್ ಹೆಗ್ಡೆ ಸರ್ ಬೆರಳೊಳಗಿನ ಚಾಕ್ ಪೀಸ್
ಅವರ ನಿರ್ವ್ಯಾಜ್ಯ ನಗು
ಬ್ಲಾಕ್ ಬೋರ್ಡ ತುಂಬಾ ಆಲಜಿಬ್ರಾ ಖೆಮಿಸ್ಟ್ರಿ

ನನಗೆ ಗುರುಪ್ರಸಾದವೆಂದರೆ
ನಮ್ಮ ಪುಂಡಾಟಕ್ಕೆ ಕೆಂಪಾಗುವ
ಆರ್ ಎಸ್ ಭಟ್ ಸರ್ ಅಚ್ಚ ಬಿಳುಪಿನ ಬಣ್ಣ
ಚೂಪು ಮೂಗು

ನನಗೆ ಗುರುಪ್ರಸಾದವೆಂದರೆ
ಎನ್ ಎಸ್ ನಾಯ್ಕ್ ಸರ್ ಎದೆಯಲ್ಲಿ
ಹಿಸ್ಟ್ರಿಯಾಗಿಯೇ ಉಳಿದುಹೋದ
ಅನಭಿವ್ಯಕ್ತ ಅಕ್ಕರೆ

ನನಗೆ ಗುರುಪ್ರಸಾದವೆಂದರೆ
ಎ ಆರ್ ನಾಯ್ಕ ಸರ್ ಹಿಂದಿಯಷ್ಟೇ
ಚಂದದ ಮಗು ಮನದ ಮುಗ್ಧತೆ

ನನಗೆ ಗುರುಪ್ರಸಾದವೆಂದರೆ
ಸರೋಜಿನಕ್ಕೋರ ಹಣೆಮೇಲಿನ
ದುಂಡು ಕುಂಕುಮ ಸಡಿಲ ಜಡೆ
ಇದ್ದರೆ ಇವರಂತಿರಬೇಕೆಂಬ ಒಳತುಡಿತ

ನನಗೆ ಗುರುಪ್ರಸಾದವೆಂದರೆ
ಎನ್ ಬಿ ನಾಯ್ಕಸರ್ ಗೌರವ ಕೊಟ್ಟು
ಪಡೆವ ರೀತಿ
ಒಮ್ಮೆ ಓಡಿಸಬೇಕೆಂದು ಬಯಸಿದ
ಅವರ ಬಜಾಜ್ ಎಮ್ ಏಟಿ
ಗಣಿತವೆಂಬ ಮಹಾ ಸಾಗರವ ದಾಟಿಸಿದ
ಅವರ ಜೊಮೆಟ್ರಿ

ನನಗೆ ಗುರುಪ್ರಸಾದವೆಂದರೆ
ಏರು ತಗ್ಗಿನ ಮೈದಾನದಲ್ಲಿ
ಪಟಗಾರ ಮಾಷ್ಟ್ರ ಸೀಟಿ
ಎಡವಿ ಬಿದ್ದಾಗ ಅವರೆದೆಯೊಳಗಿನ
ಅವ್ವನಕ್ಕರೆಯ ಪ್ರೀತಿ

ನನಗೆ ಗುರುಪ್ರಸಾದವೆಂದರೆ
ಹೊನ್ನಪ್ಪಣ್ಣ ಗಣೇಶಣ್ಣ ಶಂಕ್ರಮಾಸ್ಟ್ರ
ಎದೆಯಲ್ಲಿನ ಕಕ್ಕುಲಾತಿ

ನನಗೆ ಗುರುಪ್ರಸಾದವೆಂದರೆ
ಜಗದ ನಗುವೆಲ್ಲ ಬಳಿದು ತುಂಬಿಕೊಂಡ
ಗೀತಮ್ಮನ ಗುಳಿಗೆನ್ನೆ

ನನಗೆ ಗುರುಪ್ರಸಾದವೆಂದರೆ
ಎಲ್ಲಕ್ಕೆ ಕಲಶವಿಟ್ಟಂತೆ ಉಭಯಕರ ಮಾಸ್ತರ್ರು
ಅವರ ಬಿಗಿದ ತುಟಿಮೀರಿ
ಕನ್ನಡಕದೊಳಗಿನ ಕಣ್ಣೊಳಗೆ ಹರಿವ
ಮಾಯದ ಮಳೆಯಂಥ ನಗೆ
ಮತ್ತಲ್ಲೂ ಕಾಣಸಿಗದ ಇಂಗ್ಲೀಷ್ ಪಾಠ
ಅವರ ಶಬ್ದಕ್ಕೆ ನಿಲುಕದೆತ್ತರದ ವ್ಯಕ್ತಿತ್ವ

ನನಗೆ ಗುರುಪ್ರಸಾದವೆಂದರೆ
ಭಾವದ ಗುಡಿಯಲ್ಲಿ ಬೆಳಗುವ
ಅರಿವ ಹರವಿನ ಜ್ಯೋತಿ
ಕಾರ್ಗತ್ತಲಿನಲ್ಲೂ ಛಕ್ಕನೆ ಹೊಳೆವ
ಒಂದು ಬೆಳಕಿನ ಕಿರಣ


One thought on “ಪ್ರೇಮಾ ಟಿ ಎಂ ಆರ್ ಅವರ ಕವಿತೆ-ನನಗೆ ಗುರುಪ್ರಸಾದವೆಂದರೆ..

Leave a Reply

Back To Top