ಕಾವ್ಯ ಸಂಗಾತಿ
ಸುಧಾ ಹಡಿನಬಾಳ
ಆ ನಾಲ್ಕು ದಿನಗಳು!
ಇದು ಎರಡು ಮೂರು
ದಶಕಗಳ ಹಿಂದಿನ ಕಥೆ
ಅಲ್ಲಲ್ಲ ನಮ್ಮ ತಾಯಂದಿರ
ಬಾಳಿನ ತಿಂಗಳ ವ್ಯಥೆ !
ಇಪ್ಪತ್ತು ದಿನ ದಾಟುವುದೆ
ತಡ ಬೇಡದ ಅತಿಥಿಯಂತೆ
ಬಂದೇ ಬಿಡುತ್ತವೆ ಒಮ್ಮೆಲೆ
‘ಆ ನಾಲ್ಕು ದಿನಗಳು’!
ಹೊಸಿಲು ತುಳಿಯುವಂತಿಲ್ಲ
ಮಕ್ಕಳ ಮುಟ್ಟುವಂತಿಲ್ಲ
ಗೋಣಿ ಚಂಪೆ ಕಂಬಳಿ ಪಾಟು
ಹಕ್ಕೆ ಜಗುಲೀನೇ ಗತಿ
ಹಾಳೆ ಹುಂಬಾಳೆ ಬಾಳೆ
ಇದರಲ್ಲೆ ಹಾಕಿದರೆ ಊಟ!
ಮೇಲಾಗಿ ಮಾಡಬೇಕು
ಹೊರಗಿನ ಕತ್ತೆ ಚಾಕರಿ!
ಮೂರು ದಿನ ಸ್ನಾನವಿಲ್ಲ
ಬಟ್ಟೆ ಬದಲಿಸುವಂತಿಲ್ಲ
ಶೌಚಾಲಯ ಇಲ್ವೇ ಇಲ್ಲ
ಈಗಲೂ ಇಲ್ಲವೆಂದಲ್ಲ
‘ಚೊಂಬು’ ಹಿಡಿದು
ಊರಾಚೆ ಹೋಗಬೇಕು!
ಬುಳು ಬುಳು ಇಳಿವ
ರಕುತವ ನಿಲಿಸಲು
ಹರಕು ಹಳೆ ಸೀರೆ, ಲುಂಗಿ
ಲಂಗದ ತುಂಡೇ ಗತಿ!
ಸ್ಯಾನಿಟರಿ ಪ್ಯಾಡ್ ಗೊತ್ತಿಲ್ಲ
ಮುಟ್ಟಿನ ಬಟ್ಟಲು ಬಂದಿರಲಿಲ್ಲ
ಇನ್ನು ಮಳೆಗಾಲ ಬಂತಂದರೆ
ಮಹಾ ಯಮ ಯಾತನೆ!
ತೊಳೆದ ಮುಟ್ಟಿನ ಬಟ್ಟೆ
ಒಣಗಿಸುವುದೆಲ್ಲಿ ??
ಗರಿಗರಿ ಒಣಗಲು ಬಿಸಿಲಿಗೆ
ಹಾಕುವಂತಿಲ್ಲ, ಬೆಚ್ಚನೆಯ
ಬಾತ್ರೂಮ್ ಇಲ್ಲ ಆಗೆಲ್ಲ
ಇದ್ದುದು ಅಲ್ಲಲ್ಲಿ ಸೋರುವ
ಸೋಗೆ ಹೊದಿಕೆಯ
ಬಚ್ಚಲು ಕೊಟ್ಟಿಗೆ !!
ಹಂಡೆ ಮುಟ್ಟುವಂತಿಲ್ಲ
ಕೆರೆಗೆ ಇಳಿಯುವಂತಿಲ್ಲ
ಗಬ್ಬುನಾರುವ ಅದೇ ಬಟ್ಟೆ
ಮರ್ಯಾದೆ ಕಾಪಾಡಲು!!
ಹೀಗೆಂದು ಅವರೆಂದೂ
ಕೊರಗಿದ್ದಿಲ್ಲ; ನಗುವುದ
ಮರೆತಿದ್ದಿಲ್ಲ. ಒಂದೆಡೆ
ದೇವಸ್ಥಾನ, ಮಡಿ, ಮೈಲಿಗೆ
ನಿದ್ದೆಗಣ್ಣಲ್ಲಿ ಕಾಡುವ
ನಾಗರ ಹಾವಿನ ಕಾಟ
ಇಷ್ಟಾದರೂ ಮೂರು
ದಶಕಗಳ ಕೆಳಗೆ ನಮಗೆ
‘ಕೂರು’ ಎಂದಿಲ್ಲವಲ್ಲ
ನಮ್ಮ ಅಮ್ಮಂದಿರೆ ಗ್ರೇಟ್ !
‘ ಕೂರು’ ಎಂದರೆ
ಕೂರುತ್ತಿರಲಿಲ್ಲ ಬಿಡಿ!
ಆದರೂ ನಾಲ್ಕಕ್ಷರ
ಕಲಿತು ‘ ಹೈಫೈ’
ಶತಮಾನದಲ್ಲಿದ್ದೂ
ಕನ್ನಡ ಶಾಲೆಯಲ್ಲೇ
‘ಮೈ ನೆರೆಯುವ’ ಚಳ್ಳೆ ಪಿಳ್ಳೆ
ಮಕ್ಕಳನ್ನು ಹೊರಗೆ
ಕೂರಿಸುವ ಮಾಡರ್ನ್
ತಾಯಂದಿರಿಗಿಂತ ನಮ್ಮ
ಅಮ್ಮಂದಿರೆ ಗ್ರೇಟ್!!
ಸುಧಾ ಹಡಿನಬಾಳ