ಗುರು ಪೂರ್ಣಿಮಾ, ಲೇಖನ ರಾಧಿಕಾ ಗಣೇಶ್

ಗುರುಬ್ರಹ್ಮಾ ಗುರುವಿಷ್ಣು, ಗುರು ದೇವೋ ಮಹೇಶ್ವರ…
ಗುರುಸಾಕ್ಷಾತ್ ಪರಬ್ರಹ್ಮ ತಸ್ಮಯ್ ಶ್ರೀ ಗುರುವೇ ನಮಃ
ಇದು ನಾವು ಬುದ್ಧಿ ತಿಳಿದಾಗಿನಿಂದ ಕೇಳಿಸಿಕೊಂಡಿರುವ ಶ್ಲೋಕ ಅಮ್ಮನ ಆರೈಕೆಯಲ್ಲಿ ಯಾವುದೇ ಜಂಜಾಟವಿಲ್ಲದೆ ಹಾಡಿ ಕುಣಿದು ಕುಪ್ಪಳಿಸುವ ನಮ್ಮನ್ನು ಶಾಲೆ ಎಂಬ ನಾಲ್ಕುಗೋಡೆಗಳ ಮಧ್ಯೆ ತಂದು ನಿಲ್ಲಿಸಿದಾಗ ನಮ್ಮಲ್ಲಿರುವ
ಅಜ್ಞಾನವನ್ನು ತೊಡೆದು ಹಾಕಿ ನಮ್ಮನ್ನು ತಿದ್ದಿ ತೀಡಿ ಉತ್ತಮ
ನಾಗರಿಕರನ್ನಾಗಿಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು.

“ಗು” ಎಂದರೆ ಕತ್ತಲು
“ರು” ಎಂದರೆ ನಿವಾರಣೆ.
ಅರ್ಥಾತ್ ಗುರು ಎಂದರೆ ಕತ್ತಲೆಯ
ನಿವಾರಕ

ಶಿಕ್ಷಕ ವೃತ್ತಿ ಈ ನಿಟ್ಟಿನಲ್ಲಿ ಸೇವೆ ಸಲ್ಲಿಸುವರಿಗೆ ಒಂದು ವರದಾನ ಇದನ್ನು ಕೇವಲ ನೌಕರಿ ಎಂಬ ದೃಷ್ಟಿಯಲ್ಲಿ ಕಾಣದೆ ಸಾಧ್ಯವಾದಷ್ಟು ಸೇವೆ ಎಂದು ನಿರ್ವಹಿಸಿದರೆ ಸಮಾಜಕ್ಕೆ
ಸಿಗುವ ಫಸಲು ಬಲು ದೊಡ್ಡದು ಆಗ ಗುರುವೆಂಬ ವ್ಯಕ್ತಿಗೆ ಸಿಗುವ ಆಂತರ್ಯದ ಆನಂದ ಇನ್ನೂ ದೊಡ್ಡದು

ಶಿಕ್ಷಕ ಎಂದರೆ
 (ಶಿ) ಕ್ಷೆಯನ್ನು ನೀಡುವವ
(ಕ್ಷ)ಣಚಿತ್ತ ಕ್ಷಣಪಿತ್ತ ಹಾಗೂ ಸದಾ
(ಕ)ತ್ತೆ ಎಂದು ಬೈಯುವವ ಎಂದು ಖಂಡಿತಾ ಭಾವಿಸದಿರಿ

ಶಿಕ್ಷಕ ವೃತ್ತಿ ಎಂದರೆ ಯುವ ಜನಾಂಗದ ಮನಸ್ಸುಗಳನ್ನು
ಪ್ರಭಾವಿತಗೊಳಿಸುವ ಮತ್ತು ಅವರ ವ್ಯಕ್ತಿತ್ವವನ್ನು ರೂಪಿಸುವ
ಮಹಾನ್ ಕಾಯಕ
ಅಧ್ಯಾಪಕರ ನಿರಂತರ
ಒಡನಾಟದಲ್ಲಿರುವುದರ ಪರಿಣಾಮವಾಗಿ ವಿದ್ಯಾರ್ಥಿಗಳ
ಬುದ್ಧಿ-ಭಾವ ಮತ್ತು ವ್ಯಕ್ತಿತ್ವ ಅಕ್ಷರ ವಿದ್ಯೆಯ ಜೊತೆ ಜೊತೆಗೆ
ವಿಕಾಸಗೊಳ್ಳುತ್ತದೆ. ವಿದ್ಯಾರ್ಥಿಗಳ ಜೊತೆಗಿನ ವ್ಯವಹಾರದ
ಫಲ ಸ್ವರೂಪವೇ “ಪರಿವರ್ತನೆ”. ಈ ಪರಿವರ್ತನೆ ಶಿಕ್ಷಕ ಮತ್ತು
ವಿದ್ಯಾರ್ಥಿ ಇಬ್ಬರ ಬಾಳಿನಲ್ಲೂ ಧನಾತ್ಮಕ ಬದಲಾವಣೆ ತರುತ್ತದೆ ಎಂಬುದೇ ಸತ್ಯ.

ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪೋಷಕರು
ಮಹತ್ವದ ಪಾತ್ರ ವಹಿಸುತ್ತಾರೆ ನಿಜ ಆದರೆ ಮಕ್ಕಳು ಶಾಲಾ
ಜೀವನವನ್ನು ಪ್ರವೇಶಿಸಿದ ನಂತರ ಅವರ ಬದುಕಿಗೊಂದು
ಆಕಾರ ನೀಡುವಲ್ಲಿ ಶಿಕ್ಷಕರು ಅಷ್ಟೇ ಪ್ರಮುಖ ಪಾತ್ರ ವಹಿಸುತ್ತಾರೆ.

ಉತ್ತಮ ಶಿಕ್ಷಕರು ಮಾಡುವ ಕೆಲಸವನ್ನು ಯಾವೊತ್ತು ಹಣದಿಂದ ಅಳೆಯಲಾಗದು..ಕೇವಲ
ಸಂಬಳಕ್ಕಾಗಿ ಮಾತ್ರ ನೌಕರಿ ಮಾಡುವ ಶಿಕ್ಷಕರು ನಮ್ಮ ನಡುವೆ
ಇಲ್ಲದಿಲ್ಲ..ಅಂಥವರ ಪ್ರಮಾಣ ಕಡಿಮೆಯಾಗಲಿ ಎಂದು
ಆಶಿಸಲಷ್ಟೇ ನಮ್ಮಿಂದ ಸಾಧ್ಯ

ಸದಾ ಕಲಿಯುತ್ತಾ ಹೋಗುವ ಮನೋಭಾವವಿಲ್ಲದ ಶಿಕ್ಷಕ
ನಿಜವಾಗಿಯೂ ಏನನ್ನೂ ಕಲಿಸಲಾರ. ತನ್ನ ಜ್ಞಾನದಲ್ಲಿ
ಸರಿಯಾದ ಒಳಸಂಚಾರವಿಲ್ಲದೆ ತನ್ನ ಕಲಿಕಾ ಪಾಠವನ್ನು ಸುಮ್ಮನೆ ಪುನರುಚ್ಚರಿಸುವ ಶಿಕ್ಷಕ ವಿದ್ಯಾರ್ಥಿಗಳ ಮೇಲೆ ಸರಕುಗಳನ್ನು ಹೇರಬಲ್ಲನೇ ಹೊರತು ಅವರನ್ನು
ಚುರುಕುಗೊಳಿಸಲಾರ.

ಜ್ಞಾನ ಮನಸಿನ ನಿಧಿ; ವಿವೇಚನೆ ಅದರ ಕೀಲಿ ಕೈ
ವ್ಯಾವಹಾರಿಕ ವಿವೇಕ ಅತೀ ಮುಖ್ಯ ಅದಿಲ್ಲದಿದ್ದರೆ ಜ್ಞಾನ
ವ್ಯರ್ಥ.ಶಿಷ್ಯರಲ್ಲಿ ಪೊಳ್ಳುತನಗಳನ್ನು ತುಂಬದೇ ಉತ್ತಮ ಸಂಕೇತಗಳನ್ನು ಯಾರು ರವಾನಿಸುತ್ತಾರೋ… ಕೇಳುತ್ತಿರುವವ
ಸ್ವಯಂ ಅರ್ಥಮಾಡಿಕೊಳ್ಳುವಂತೆ ಯಾರು ಹುರಿದುಂಬಿಸುತ್ತಾರೋ
ಅವರೇ ಉತ್ತಮ ಶಿಕ್ಷಕರು.

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳ್ಳಬೇಕಾದರೆ ತರಗತಿಗಳಲ್ಲಿ ಶಿಕ್ಷಕರು ಅವರ ಮೇಲೆ ಪ್ರಭಾವ ಬೀರಬೇಕು
ಅಂತಹ ಪ್ರಭಾವ ಬೀರಬೇಕಾದರೆ ಶಿಕ್ಷಕರಲ್ಲಿ ಇರಬೇಕಾದ
ಮುಖ್ಯ ಗುಣಗಳೆಂದರೆ ಕಲಿಸುವ ವಿಷಯದ ಮೇಲೆ ಪ್ರೀತಿ ಮತ್ತು ಆಸಕ್ತಿ,
ಒಳ್ಳೆಯ ಪಾಂಡಿತ್ಯ, ನಿರಂತರ ಸ್ವಆಧ್ಯಾಯ ಪ್ರವೃತ್ತಿ, ಬೋಧನಾ ವಿಧಾನಗಳ ಸಮರ್ಥ ಬಳಕೆ,
ವಿದ್ಯಾರ್ಥಿಗಳ ಮನಸ್ಸನ್ನು ಗ್ರಹಿಸುವ ಶಕ್ತಿ ಜೊತೆಗೆ ಮಕ್ಕಳ
ಮೇಲಿನ ಪ್ರೀತಿ ಮತ್ತು ಮಮತೆ..

ಆದರೆ ಇಂದಿನ ಮಕ್ಕಳಲ್ಲಿ ಶಿಕ್ಷಕರಿಗೆ ಗೌರವ ನೀಡುವ ಭಾವನೆ ಕಾಣುತ್ತಿಲ್ಲ,
ಗುರುಶಿಷ್ಯರ ಸಂಬಂಧ ಕಾಲದಿಂದ ಕಾಲಕ್ಕೆ ಹೇಗೆ ಸಡಿಲವಾಗಿದೆ ಎಂಬುವುದನ್ನು ಅಲ್ಲಮಪ್ರಭುಗಳು ಆ ಕಾಲದಲ್ಲೇ ಹೀಗೆ ವಿವರಿಸಿದ್ದರು

ಕೃತಯುಗದಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯ …

ತ್ರೇತಾಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬೈದು ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ

ದ್ವಾಪರದಲಿ ಶ್ರೀ ಗುರು ಶಿಷ್ಯನಿಗೆ ಝಂಕಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯ
….

ಕಲಿಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸುತಿದ್ದಿರೆ ….
ಗುಹೇಶ್ವರ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು.

ಹೀಗಾಗದಿರಲಿ “ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ ಎಂದು ದಾಸರೇ ಹಾಡಿದ್ದಾರೆ
ಕೊಟ್ಟಷ್ಟು ಬರಿದಾಗದ ಸಂಪತ್ತು ಎಂದರೆ ವಿದ್ಯೆ ಎಂದರು ಬಲ್ಲವರು
ಇಂತಹ ಅನರ್ಥ್ಯ ಸಂಪತ್ತನ್ನು ಕರುಣಿಸುವ ಶಿಕ್ಷಕ ನಮ್ಮ ಪಾಲಿನ ಭಗವಂತನೇ ಸರಿ.
ಅವರ ಆಶೀರ್ವಾದವೇ
ನಮ್ಮ ಬಾಳಿನ ದಾರಿದೀಪ.
ತನ್ನ ವಿದ್ಯಾರ್ಥಿಗಳನ್ನು ಪ್ರೀತಿಸುವ ಶಿಕ್ಷಕನಿಂದ ಮಾತ್ರ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆ ಹೊರತೆಗೆಯಲು ಸಾಧ್ಯ.
ತನ್ನ ವಿದ್ಯಾರ್ಥಿಯ ಯಶಸ್ಸು ಗುರುವಿನ ಆಂತರ್ಯದಲ್ಲಿ ಸಂತೋಷದ ಅಲೆ ಎಬ್ಬಿಸುತ್ತದೆ, ಅದೇ ಶಿಕ್ಷಕನಾದವನಿಗೆ ಸಿಗುವ ಆತ್ಮತೃಪ್ತಿ.

ಒಳ್ಳೆಯ ಗುರು ಸಿಗುವುದು ವಿದ್ಯಾರ್ಥಿಯ ಅದೃಷ್ಟ ಹೇಗೋ, ಒಳ್ಳೆಯ ವಿದ್ಯಾರ್ಥಿ ಸಿಗುವುದು ಗುರುವಿನ ಅದೃಷ್ಟವೂ ಹೌದು.

ಆದರೆ ಇಂದು ಗುರು ಶಿಷ್ಯರ ಸಂಬಂಧ ಹಿಂದಿನ ಆತ್ಮೀಯ ಭಾವದ ಸ್ತರದಿಂದ ಇಳಿದು ಕೇವಲ
ವ್ಯಾವಹಾರಿಕತೆಗಷ್ಟೇ ಸೀಮಿತವಾಗುತ್ತಿರುವುದು ಕಾಲಚಕ್ರದ ಮಹಿಮೆ ಎನ್ನದೇ ವಿಧಿಯಿಲ್ಲ……


Leave a Reply

Back To Top