ಮಹಾನುಭಾವ ( ಸಣ್ಣ ಕಥೆ )ಎಸ್.ವಿ.ಹೆಗಡೆ

ಮಳೆ ಜಿನುಗುತ್ತಿದೆ. ಮನೆಯ ಹತ್ತಿರವೇ ಬಸ್ ಸ್ಟಾಪ್ ಇರುವುದರಿಂದ  ಸ್ವಂತ ವಾಹನದ ಬದಲು  ಬೆಳಿಗ್ಗೆ ೧೦ರ ಬಸ್ಸು ಸಮಯಕ್ಕೆ ಬಂದರೆ ಅದರಲ್ಲಿ ಪೇಟೆಗೆ ಹೋಗಿಬರುವುದು ಒಳ್ಳೆಯದು. ಮಳೆಗಾಲ ಅಷ್ಟೊಂದು ನೂಕು ನುಗ್ಗುಲು  ಇರಲಿಕ್ಕಿಲ್ಲ.  ಈ ನಗರ ಮೊದಲಿನಂತಲ್ಲ.  ಜನಜಂಗುಳಿ ಹೆಚ್ಚಾಗಿದೆ  ಎಲ್ಲಾ ಕಡೆಯಿಂದಲೂ ಎಲ್ಲಾ ತರದ ಜನರು  ಬಂದು ಸೇರುತ್ತಿದ್ದಾರೆ. ಜಾಗವಿದ್ದಲೆಲ್ಲ  ಬಹು ಮಳಿಗೆಯ   ಮನೆಗಳು.
ಇನ್ನೂ ಬೆಳೆಯುತ್ತಲೇ ಇದೆ.  ದಿನನಿತ್ಯ ಕಂಡರೂ ಪರಿಚಯ  ಇಲ್ಲದ ಸಾವಿರಾರು  ಮುಖಗಳು  ವಿಧವಿಧ  ಜೀವನದ ಕಥೆಯ ನಾಯಕ/ ಖಳನಾಯಕರು. ಹಲವು ಆಸೆಗಳ ಬೆನ್ನತ್ತಿ ಬಂದವರು.

 ಬಸ್ಸಿನಿಂದ ಇಳಿಯುವರಲ್ಲಿ ನಾನೇ ಕೊನೆಯವನಾಗಿದ್ದು ತಟ್ಟನೆ ನನ್ನ ಕಣ್ಣಿಗೆ ಬಿದ್ದ ಸೀಟಿನಡಿಗೆ ಬಿದ್ದ ಪರ್ಸ್ ಒಂದನ್ನು ನನ್ನ ಕಿಸೆಗೆ ಸೇರಿಸಿ ಒಳಗೇನಿರಬಹುದೆಂಬ  ಕುತೂಹಲದೊಡನೆ  ಇಳಿದೆ. ಬದಿಯಲ್ಲಿದ್ದ  ಚಾ ಅಂಗಡಿ ಒಳಗೆ ಹೋಗಿ ಒಂದು ಚಹಾ ಆರ್ಡರ್ ಮಾಡಿ ಮೂಲೆಯಲ್ಲಿದ್ದ ಟೇಬಲ್ ಪಕ್ಕ ಕುಳಿತು
 ಯಾರು ನೋಡುತ್ತಿಲ್ಲ ಎಂಬುದನ್ನು ಖಾತ್ರಿ ಮಾಡಿ ಪರ್ಸ್ ಬಿಚ್ಚಿ ನೋಡಿದೆ.

 20,000 ರುಪಾಯಿ ನಗದು, ಒಂದು ಚಿನ್ನದ ಸರ,
 ಡೆಬಿಟ್ ಕಾರ್ಡ್  ಮತ್ತು ಮುರಳಿದರ  ಎಂಬ ಹೆಸರು ಬರೆದ ಪ್ಲಾಟಿನಮ್ ಕ್ರೆಡಿಟ್ ಕಾರ್ಡ್. ಬದಿಯ ಅಂಕಣದಲ್ಲಿ ಯಾವುದೋ ಡಾಕ್ಟರ ಬರೆದ ಓದಲಾಗದ ಅಕ್ಷರದಲ್ಲಿ ಬರೆದ ಚೀಟಿ.
ಆಶ್ಚರ್ಯ. ಹೊಟ್ಟೆಯಲ್ಲಿ ತಲಮಳ. ಏನೇನೋ ಯೋಚನೆ. ಮುಂದೇನು ಮಾಡಲೆಂಬ ಹೊಂಚಿಕೆ.
 ದ್ವಂದ್ವ. ದುಗುಡ. ಬಾಲ್ಯದಿಂದ ಇಲ್ಲಿವರೆಗೆ ನಡೆದು ಹೋದ ಎಷ್ಟೋ ಘಟನೆಗಳ ಪುನರಾವರ್ತನೆ ಮನಸ್ಸಿನಲ್ಲಿ. ಓದುವಾಗಿನ ಬಡತನ. ನೌಕರಿಗಾಗಿ ಪರದಾಟ. ಗೆಳೆಯರ  ವಾತ್ಸಲ್ಯ ಒಡನಾಟ. ಮೊದಲು ಕೊಂಡ ಕಾರು. ಮದುವೆ, ಮಡದಿ, ಮಕ್ಕಳು. ಮುಪ್ಪಾದ  ತಂದೆ ತಾಯಿಯರು. ದೇವರ ಪೀಠ. ದೇವಸ್ಥಾನಗಳು. ಜಾತ್ರೆ.  ಬೇಕಷ್ಟು ಕೂಡಿಡಲಾಗದ  ಹಣ. ನಿವೃತ್ತ ಜೀವನದ ವಾಸ್ತವ. ಅಂತರಂಗದಲ್ಲಿ ನೋಡಿ ಆನಂದಿಸಿದ  ಕಾಡು,ನದಿ,ಹಿಮ, ತಂಗಾಳಿ, ವಿಮಾನದಿಂದ ನೋಡಿದ ವಿಶಾಲ ಆಕಾಶ. ಅನಂತ ಯೋಚನೆಯಲ್ಲಿ ಕಳೆದು ಹೋದೆ.

 20 ರೂಪಾಯಿ  ಚಹಾದ ಬಿಲ್ಲು  ತಂದಿಟ್ಟ ಶಬ್ದಕ್ಕೆ
 ಎಚ್ಚರಾಗಿ  ದುಡ್ಡು ಕೊಟ್ಟು ಹೊರಬಂದವನೇ
 ಹೆಚ್‍ಡಿಎಫ್‌ಸಿ ಎಟಿಎಂ ಎಲ್ಲಿದೆ ಎಂದು ನೋಡುತ್ತಾ  ರಸ್ತೆಯಲ್ಲಿ ನಡೆದೆ. ತಾನಾಗಿ ಬಂದ ಲಕ್ಷ್ಮಿಯನ್ನು ಬೇಡವೆನ್ನ ಬೇಕೆ. ಇದು ಸತ್ಯ ಹರಿಶ್ಚಂದ್ರನ ಕಾಲವೇನು ಅಲ್ಲವಲ್ಲ. ವೈನ್ ಶಾಪ್, ಸ್ವೀಟ್ ಅಂಗಡಿ ಕಳೆದು  ಮೆಡಿಕಲ್ ಶಾಪ್ ಕಂಡಾಗ  ಚೀಟಿಯಲ್ಲಿ ಬರೆದ ಡಾಕ್ಟರ್  ಯಾವ  ಜಾಗದಲ್ಲಿ ಇರುವರೆಂಬ ಮಾಹಿತಿ ಕೇಳಲೇ ಅನಿಸಿದರೂ ಕೇಳಲಿಲ್ಲ. ಅವರ ಹತ್ತಿರ  ಪರ್ಸ್ ಕಳೆದುಕೊಂಡವರ  ಮಾಹಿತಿ ಸಿಕ್ಕರೆ?
 ಸ್ವಲ್ಪ ಮುಂದೆ ಹೋದರೆ ಕೊನೆಗೂ ಭಾಗ್ಯದ ಎ ಟಿ ಎಂ ಸಿಕ್ಕಿತ್ತು. ಮನಸ್ಸು ಕೇಳಿದಷ್ಟು  ಕ್ಯಾಶ್  ಪಡೆಯೋಣ ಎಂದು ಕಾರ್ಡು ಹಾಕಿ ಪರ್ಸಿನಲ್ಲಿ  ಸಣ್ಣ ಕಾಗದದಲ್ಲಿ ಬರೆದಿಟ್ಟ ಪಿನ್ ಹಾಕಲು ಹೊರಟಾಗ  ಕೈ ನಡುಗಿತು.   ಸಂಸ್ಕಾರ ಹೊಂದಿದ ಒಳ ಮನಸ್ಸು  ಮೇಲುಗೈ ಮಾಡಿತ್ತು . ಯಾರಿದೋ ಸ್ವತ್ತನ್ನು  ಕಬಳಿಸುವ ಆಸೆ ಬೇಡ. ಸಿಕ್ಕರೂ ದಕ್ಕದು.

 ಸ್ವಲ್ಪವೇ ದೂರದಲ್ಲಿ  ಜ್ಯುವೆಲ್ಲರಿ  ಮಳಿಗೆ ಶೋಭಿಸುತ್ತಿತ್ತು. ಎಟಿಎಂ  ನಿಂದ  ಹೊರ ಬಂದು  ಒಳ್ಳೆಯವರು ದಡ್ಡರೆಂಬುದಕ್ಕೆ ನಾನೇ ಉದಾಹರಣೆಯಾದೆ.  ಪ್ರಾಪಂಚಿಕ ಜಗತ್ತು
 ಅವಕಾಶ ಸಿಕ್ಕಾಗ  ಉಪಯೋಗ ಪಡೆದುಕೊಳ್ಳುವರನ್ನು ಜಾಣರೆಂದು  ಹೇಳಿದ್ದರಲ್ಲಿ ತಪ್ಪೇನಿಲ್ಲ. ಈಗಲೂ ಅವಕಾಶವಿದೆಯಲ್ಲ  ಕ್ರೆಡಿಟ್ ಕಾರ್ಡ್ ಉಪಯೋಗಿಸಿ  ಬಂಗಾರ ತೆಗೆದುಕೊಂಡಷ್ಟು  ಲಾಭ ಮತ್ತೆ ಯಾವುದರ ಖರೀದಿಯಲ್ಲಿ ಇಲ್ಲ. ಈಗ ನಾನು ಬುದ್ಧಿವಂತನಾದೆ.  ಪ್ಲಾಟಿನಂ ಕಾರ್ಡ್ ಇದ್ದುದರಿಂದ  24 ಕೆರೆಟ್ ಕಾಯಿನ್  ಮತ್ತು ಭಾರವಾದ ಸರವಂದನ್ನು ಖರೀದಿಸಿದೆ. ಹಣ ಕೊಡುವಾಗ  ಈ ಕಾರ್ಡು ಬ್ಲಾಕ್ ಆಗಿದೆ ಎಂದರು.
ಸಂಸ್ಕಾರ ಹೊಂದಿದ ಒಳ ಮನಸ್ಸು ನೆನಪಿಸಿತು. ಹಿರಿಯರ ಪುಣ್ಯದಿಂದ  ಮಹಾ ಪಾಪ ಎಸಗುವದು ದೂರವಾಯಿತು.  

 ಈಗ ಮನಸ್ಸು ನಿರ್ಧಾರ ಮಾಡಿ ಆಗಿತ್ತು. ಯಾವುದೇ ದ್ವಂದ್ವ ಇಲ್ಲದೆ  ಡಾಕ್ಟರ್ ಚೀಟಿಯಲ್ಲಿ  ಇದ್ದ ಮೊಬೈಲ್  ನಂಬರ್ ಸಂಪರ್ಕಿಸಿ ಮುರಳಿದರ ಇದ್ದ ಮನೆಯ ಮುಂದೆ ನಿಂತು ಕರೆಗಂಟೆಯನ್ನು ಒತ್ತಿದೆ.  ಒಳಗಿನಿಂದ ಮಾತುಕತೆ ಕೇಳುತ್ತಿತ್ತು.  ಸದ್ಯ ಕಾರ್ಡು ಬ್ಲಾಕ್ ಮಾಡಾಯಿತು. ಡೆಬಿಟ್ ಕಾರ್ಡ್ ಪಿನ್ನು ಸಹ ಬದಲು ಮಾಡಿದ್ದೇನೆ. ಅದಕ್ಕೂ ಮೊದಲೇ ಯಾರಾದರೂ ಏನು ಮಾಡಿದರೆ  ಏನು ಮಾಡಲಾಗುವುದಿಲ್ಲ  ದುಡ್ಡು ಮತ್ತು ಸರವಂತೂ  ಸಿಗಲಿಕ್ಕಿಲ್ಲ.  ನಾಳೆ ಆಸ್ಪತ್ರೆಯಲ್ಲಿ ನಿನ್ನ ಕ್ಯಾನ್ಸರ್ ಟ್ರೀಟ್ಮೆಂಟ್ ಅಡ್ಮಿಶನ್  ಹೇಗಾದರೂ ಮಾಡುತ್ತೇನೆ. ಮುಂದೆ ಆ ದೇವರೇ ಗತಿ. ನಾನು ಪರ್ಸು  ಇದ್ದಂತೆಯೇ   ಹಿಂತಿರುಗಿಸಿದಾಗ ಅವರಿಬ್ಬರ ಕಣ್ಣಲ್ಲು ಸಂತೋಷದ ಕಣ್ಣೀರ ಧಾರೆ . ಮುರುಳಿಧರ  ನನ್ನನ್ನು ತಬ್ಬಿ ನಿಮ್ಮಂತ ಮಹಾನುಭಾವರು  ಯಾರು ಸಿಗಲಿಕ್ಕಿಲ್ಲ. ಸಾಮಾನ್ಯರಾದರೆ  ಇಷ್ಟೊತ್ತಿಗೆ  ಎಟಿಎಂ ಅಥವಾ ಜ್ಯುವೆಲರಿ ಅಂಗಡಿಗೆ ಹೋಗಿ ಎಲ್ಲಾ ಖಾಲಿ ಮಾಡಿಬಿಡುತಿದ್ದರು.  ದೇವರು ನಿಮಗೆ ಸದಾ ಒಳ್ಳೆಯದನ್ನೇ ಮಾಡಲೆಂದು ಆಶಿಸುತ್ತೇವೆ ಅಂದರು.

ಮಾತಿನಲ್ಲಿ ತಿಳಿಸಲಾಗದ ನೆಮ್ಮದಿಯಿಂದ ಮನೆಗೆ ಬಂದು  ನಾನು ಮಹಾನುಭಾವನಾದ  ಸಂಗತಿ ತಿಳಿಸಿದಾಗ ಎಲ್ಲರೂ ಇದು ಸರಿಯಾದ ನಿರ್ಧಾರ
 ಎಂದು ಸಂತೋಷಪಟ್ಟರು. ( ಎಟಿಎಂ ಮತ್ತು ಜಿವೆಲ್ಲರಿ ಶಾಪ್ ವಿಷಯ ಯಾರಿಗೂ ಹೇಳಲಿಲ್ಲ)


2 thoughts on “ಮಹಾನುಭಾವ ( ಸಣ್ಣ ಕಥೆ )ಎಸ್.ವಿ.ಹೆಗಡೆ

Leave a Reply

Back To Top