ಮಳೆಯ ಒಲವಿನಲ್ಲೂ ನಲುಗುವ ಯಾತನೆಯ ಕ್ಷಣಗಳು…ಮಳೆ…! ಮಳೆ…!! ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟ

ಮಳೆ…! ಮಳೆ…!!

ಮಳೆಯೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ…? ಹೊರಗೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೆ, ಮನೆಯೊಳಗೆ ಬೆಚ್ಚಗೆ ಉರಿದ ಕಡಲೇ, ಶೇಂಗಾ… ತಿನ್ನುತ್ತಾ, ಆಕಾಶದಿಂದ ಉದುರುವ ಮಳೆ ಹನಿಗಳನ್ನು ದಿಟ್ಟಿಸಿ ನೋಡುವ ಆ ಸಂಭ್ರಮ ಹೇಳತೀರದು…!!

ಮಳೆ ಬಂತಂದ್ರೆ… ರೈತನಿಗೆ ಎಲ್ಲಿಲ್ಲದ ಖುಷಿಯೋ ಖುಷಿ ಧೋ ಧೋ ಎಂದು ಸುರಿಯುವ ಮಳೆಗೆ ಮೈಯೊಡ್ಡಿದ ಭೂಮಿತಾಯಿ ಸಂಭ್ರಮದಿಂದ ಹಚ್ಚ ಹಸಿರು ಸೀರೆಯನ್ನುಟ್ಟು ಸಂಭ್ರಮಿಸುತ್ತಾಳೆ…!!

ನಮ್ಮೆಲ್ಲರೆದುರು ಆಗೋ ಸುರಿವ ತುಂತುರು ಮಳೆಗೆ ಮುಖವೊಡ್ಡಿ ತನಗಿಷ್ಟವಾದ ಹಾಡನ್ನು ಗುನುಗುನುತ್ತಾ, ತನ್ನ ಪ್ರೇಯಸಿಗೆ ಬಿಸಿಯಪ್ಪುಗೆ, ಬಿಸಿ ಮುತ್ತು ಕೊಡುವ ಪ್ರೇಮಿಗಳ ಪ್ರೇಮದಾಟಕ್ಕೆ ಮಳೆ ಸಾಕ್ಷಿಯಾಗಿ ನಿಲ್ಲುತ್ತದೆ…!!

ನಿಜ ಮಳೆ ಎಂದರೆ ಹಾಗೆ…

ಮಳೆಯು ಇಳೆಯ ಕಳೆಗೆ ಸಂಭ್ರಮ ಸಡಗರವನ್ನು ತಂದುಕೊಡುತ್ತದೆ. ಆದರೆ ಮಳೆ ಇಷ್ಟೆಲ್ಲವನ್ನು ಕೊಟ್ಟರೂ ಕೆಲವು ಸಲ ಎಲ್ಲವನ್ನು ಕಸಿದುಕೊಂಡು ಬರಿಗೈ ಮಾಡಿಬಿಡುತ್ತದೆ..!! ಮಳೆಯೆಂದು ಬರುವುದು ಎಂದು ನಿರೀಕ್ಷಿಸುತ್ತಾ, ಕಾತುರದ ಕಣ್ಣುಗಳಿಂದ ಕಾಯುತ್ತಿರುವ ಮನಸ್ಸುಗಳ ಬಿಸಿ ಬಿಸಿ ಮೈ ಮನಕ್ಕೆ ತಂಪೆರೆಯುವ ತವಕ್ಕಾಗಿ ಕಾಯುತ್ತಿರುತ್ತವೆ. ಹಾಗೆಯೇ ಕಾಯುವ ಮನಸ್ಸುಗಳಿಗೆ ಮಳೆ ತಂಪನ್ನೆರೆದು ಪ್ರೀತಿಯಿಂದ ನೇವರಿಸುತ್ತದೆ. ಭೂಮಿಯ ಆಕಾಶದೊಡಲ ಪ್ರೀತಿಗೆ ಮಳೆಯೇ ಸಾಕ್ಷಿ.

ಪ್ರಕೃತಿ ಸಹಜವಾಗಿ ಬಿರುಬಿಸಿನಲ್ಲಿ ಭೂಮಿ ಕಾದು ಕಾದು ತನ್ನ ಒಡಲಲ್ಲಿ ಕೆಂಡದ ಉಂಡೆಯಂತಹ ನೋವನ್ನು ಉಂಡುಟ್ಟು ಬೆವರನ್ನು ಸುರಿಸುತ್ತಾ ನರಳುವ ಸಮಯದಲ್ಲಿ ವರ್ಷಧಾರೆಯ ಆಗಮನಕ್ಕಾಗಿ ಕಾತರಿಸುತ್ತದೆ. ಸಹಜವಾಗಿ ಮಾನ್ಸೂನ್ ಮಾರುತಗಳಿಗೆ ಸುರಿಯುವ ಮಳೆಯು ಎಲ್ಲರೆದೆಯಲ್ಲಿ ಪ್ರೀತಿಯನ್ನು ತರುತ್ತದೆ. ಮೇ ಕೊನೆಯ ವಾರದಿಂದ ಪ್ರಾರಂಭವಾಗುವ ಮುಂಗಾರು ಮಳೆ ರೈತರ ಬದುಕಿನಲ್ಲಿ ಹೊಸ ಸಂಭ್ರಮದ ಸಡಗರವನ್ನು ತರುತ್ತದೆ. ರೈತರು ಹೊಲವನ್ನು ಹರಗುವುದು. ಭೂಮಿಯನ್ನು ಕಸಕಡ್ಡಿಯಿಂದ ಮುಕ್ತಗೊಳಿಸಿ ಸಿದ್ಧಗೊಳಿಸುವುದು. ನಂತರ ಬಿತ್ತಲು ಪ್ರಾರಂಭಿಸುವುದು. ಈ ಮಳೆರಾಯನನ್ನು ನಂಬಿ ಸಹಜವಾಗಿ ಮಳೆ ಬಂದರೆ ರೈತ ತನ್ನ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾನೆ. ಜಗಕ್ಕೆ ಅನ್ನ ಹಾಕಲು ತವಕಿಸುತ್ತಾನೆ. ಎಲೆಯುದರಿ ಬರಡು ಬರುಡಾದ ಮರಗಳು ಮಳೆಯರಾಯನ ಆಗಮನದಿಂದ ಹಚ್ಚ ಹಸಿರಿನಿಂದ ಕಂಗೊಳ್ಳುತ್ತವೆ. ಮಳೆರಾಯ ಮುಗುಳ್ನಕ್ಕಾಗ ಭೂಮಿ ಹದವಾಗಿ ಮಿಂದು ಹಸಿರುಟ್ಟು ನಳನಳಿಸುತ್ತದೆ. ಅತ್ಯಂತ ರಭಸವಾಗಿ ಸುರಿಯುವ ಮಳೆಗೆ ಅನೇಕ ಹಳ್ಳಕೊಳ್ಳ ತೆರೆಗಳು ತುಂಬಿ ಹರಿಯುತ್ತಾ, ಹೊಸ ಹೊಸ ಜಲಪಾತಗಳು ಸೃಷ್ಟಿಯ ಸೊಬಗನ್ನು ಹೆಚ್ಚಿಸುತ್ತವೆ. ನೋಡುಗರ ಕಣ್ಮನ ಸೆಳೆಯುತ್ತಾ, ಪ್ರಕೃತಿಯು ಸೌಂದರ್ಯದ ಸಿರಿ ಸಂಪತ್ತನ್ನು ಹಿರಿದಾಗಿಸುತ್ತದೆ. ಮನವು ಹದಗೊಂಡು ಪ್ರಕೃತಿಯೊಡನೆ ಮನುಷ್ಯ ಮಗುವಾಗಿ ಬಿಡುತ್ತಾನೆ. ಹೀಗೆ ಮಳೆರಾಯ ತನ್ನ ಇರುವಿಕೆಯನ್ನು ಮನುಷ್ಯನೊಡನೆ ಮುದ್ರೆ ಒತ್ತುತ್ತಾನೆ.

ಆದರೆ…

ಮಳೆರಾಯ ಕೋಪಿಸಿಕೊಂಡರೆ, ಆರ್ಭಟಿಸಿದರೆ ಆತನ ಕೋಪ ತಾಪ ಹೇಳ ತೀರದು..! ಅತ್ಯಂತ ಜೋರಾಗಿ ಗಾಳಿಯ ಅಲೆಗಳಿಗೆ ಒಲಿದ ಮಳೆಯು ಆರ್ಭಟಿಸಿ ಬಂದರೆ ಜೀವ ಜಗತ್ತು ತಲ್ಲಣಗೊಳ್ಳುತ್ತದೆ.

ಬಿಟ್ಟು ಬಿಡದೆ ನಿತ್ಯವೂ ಜೋರು ಜೋರಾಗಿ ಸುರಿಯುವ ಮಳೆ ಹನಿಗಳಿಗೆ ಭೂಮಿತಾಯಿಯು ಕಂಪಿಸಿ ಬಿಡುತ್ತಾಳೆ. ನನ್ನೊಡಲಲ್ಲಿ ಇರುವ ಜೀವಿಗಳೆಲ್ಲ ‘ಅಯ್ಯೋ..’ ಎಂದು ಸಂಕಟಪಡುತ್ತಾರೆ ಎಂದು ಅಂದುಕೊಳ್ಳುತ್ತಾಳೆ.

ಮಳೆಯ ಆರ್ಭಟಕ್ಕೆ ಜನಜೀವವೇ ಅಸ್ತವ್ಯಸ್ತವಾಗಿಬಿಡುತ್ತದೆ. ಆರ್ಭಟಿಸುವ ಮಳೆಗೆ ಗುಡಿಸಲು, ಮನೆಗಳು, ಭವನಗಳು, ಕಲ್ಯಾಣ ಮಂಟಪಗಳು, ರಸ್ತೆಗಳು, ಹೊಲಗದ್ದೆಗಳು… ಎಲ್ಲವೂ ಅಯೋಮಯವಾಗಿ ಸರ್ವನಾಶದತ್ತ ಹೆಜ್ಜೆ ಹಾಕುತ್ತವೆ. ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ಇನ್ನೂ ಬದುಕಿ ಬಾಳಬೇಕಾದ ಹಸುಗೂಸು ನೀರಿನ ಒಡಲಲ್ಲಿ ಉಸಿರು ನಿಲ್ಲಿಸುತ್ತವೆ. ಇನ್ನೊಂದಿಷ್ಟು ದಿನವಾದರೂ “ಈ ಭೂಮಿಯ ಪ್ರೀತಿಯನ್ನು ಉಂಡೆ ಉಣ್ಣುತ್ತೇನೆ” ಎನ್ನುವ ಭರವಸೆಯಿಂದ ಬದುಕುತ್ತಿರುವ ವೃದ್ಧರು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಾರೆ. ಅಷ್ಟೇ ಏಕೆ “ಜೀವನದಲ್ಲಿ ಏನಾದರೂ ಸಾಧಿಸಿ ಸಾಧಿಸುತ್ತೇನೆ” ಎನ್ನುವ ಯುವಕರು. ನೀರಿನ ಪಾಲಾಗುವುದನ್ನು ಕಣ್ಣಾರೆ ಕಾಣುತ್ತೇವೆ. ವರ್ಷಾನುಗಟ್ಟಲೆ ಬೆವರ ಹರಿಸಿ ದುಡಿದ ರೈತರ ಬೆಳೆಯು ಅವರ ಕೈಗೆ ದಕ್ಕದೆ ನೀರು ಪಾಲಾಗಿ ಹೋಗುತ್ತದೆ. ಎಷ್ಟೋ ಅಮಾಯಕ ಜೀವಿಗಳ ಮೇಲೆ ವಿದ್ಯುತ್ ಕಂಬಗಳ ತಂತಿಗಳು ಹರಿದು ಪ್ರಾಣವನ್ನು ತೆಗೆಯುತ್ತವೆ. ಕಾಲುವೆಗಳು ಕೊರೆದು ಕೊಚ್ಚಿ ಹೋಗುತ್ತವೆ. ಮನುಷ್ಯ ಗಳಿಸಿದ ವಸ್ತು ಒಡವೆಗಳು ನೀರು ಪಾಲಾಗುತ್ತವೆ. ಕೆಲವು ಸಲ ಡ್ಯಾಮ್ ಗಳಿಗೆ ರಂದ್ರ ಬಿದ್ದು ಬೀಳುತ್ತವೆ.

ಹೀಗೆ ಮಳೆ ನವಿರಾಗಿ ವರ್ತಿಸದೆ ಹೋದರೆ… ಇಂತಹ ಅನಾಹುತಗಳಿಗೇನು ಕಡಿಮೆಯಿಲ್ಲ. ಮಳೆ ಒಲವಿನ ಸಂಕೇತವಾದರೂ, ಒಲವಿನಲ್ಲಿಯೂ ನಲುಗುವ ಅನೇಕ ಯಾತನೆಗಳನ್ನು ನಮಗೆ ಕೊಟ್ಟೆ ಕೊಡುತ್ತದೆ. ಒಲವಿದ್ದಲ್ಲಿ ನೋವು…! ಒಲವಿನಲ್ಲಿ ನಲಿವನ್ನು ಸ್ವೀಕರಿಸಿದಷ್ಟೇ ; ನೋವನ್ನೂ ಸ್ವೀಕರಿಸುವ ದೊಡ್ಡತನ ನಮಗಿರಬೇಕು. ನಾವೇಷ್ಟೇ ಸಾಧಿಸಿದರೂ ಪ್ರಕೃತಿಯ ಮುಂದೆ ಚಿಕ್ಕವರೇ..! ಹಾಗಾಗಿ ನಿಸರ್ಗದ ಮಡಿಲಲ್ಲಿ ಮಳೆಯ ಒಲವನ್ನು ಸ್ವೀಕರಿಸುತ್ತಾ. ಯಾತನೆಯ ಕ್ಷಣಗಳನ್ನು ಮರೆಯೋಣ.

One thought on “ಮಳೆಯ ಒಲವಿನಲ್ಲೂ ನಲುಗುವ ಯಾತನೆಯ ಕ್ಷಣಗಳು…ಮಳೆ…! ಮಳೆ…!! ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟ

  1. ಮಳೆಯ ಹಲವಾರು ಮುಖಗಳನ್ನು ಬಹು ಸೊಗಸಾಗಿ ಚಿತ್ರಿಸಿದ್ದೀರಿ. ಮಳೆ ಎಂದರೆ ಬಹುತೇಕ ಖುಷಿಯೇ. ಆದರೆ ಅತಿವೃಷ್ಟಿಯಾದಾಗ ಮಾತ್ರ ಮಳೆ ಅವಾಂತರ ಸೃಷ್ಟಿಸುತ್ತದೆ. ಬಹಳಷ್ಟು ಅವಾಂತರಗಳು ಮನುಷ್ಯನ ಸ್ವಯಂಕೃತ ಅಪರಾಧಗಳಿಂದಲೇ ಎಂಬುದನ್ನು ಮನುಷ್ಯ ಮರೆಯಬಾರದು.
    ಅಭಿನಂದನೆಗಳು.

Leave a Reply

Back To Top