ಕಥಾ ಸಂಗಾತಿ
ಅಶ್ವಿನಿ ಕುಲಾಲ್ ಕಡ್ತಲ
‘ಕುಗ್ಗದಿರು ಮನವೇ’
ಕೆಲಸ ಮುಗಿಸಿ ರೂಮಿಗೆ ಹೋಗುತ್ತಿರುವಾಗ ರಾತ್ರಿ 10 ಗಂಟೆ ದಾಟಿತ್ತು. ಪ್ರತಿದಿನದಂತೆ ದಾರಿ ಮಧ್ಯೆ ಸಿಗುವ ಒಂದು ದೊಡ್ಡ ಸೇತುವೆಯನ್ನು ದಾಟಬೇಕಿತ್ತು. ಹಾಗೆ ಬರುತ್ತಿರುವಾಗ ಒಂದು ಬೈಕ್ ಇಳಿದು ಬಂದ ಸಾಧಾರಣ ವ್ಯಕ್ತಿಯೊಬ್ಬರು ಬೈಕನ್ನು ಸೈಡಲ್ಲಿ ನಿಲ್ಲಿಸಿ ಸೇತುವೆಯ ದಂಡೆ ಹತ್ರ ಓಡಿದರು. ನಾನು ವೇಗವಾಗಿ ಓಡುತ್ತಿದ್ದ ಬೈಕನ್ನು ನಿಧಾನವಾಗಿಸಿ ಈ ವ್ಯಕ್ತಿ ಈ ರಾತ್ರಿಯಲ್ಲಿ ಹೀಗೆಕೆ ಓಡುತ್ತಿದ್ದಾರೆ ಅಂತನಿಸಿ ಬೈಕನ್ನು ನಿಲ್ಲಿಸಿದೆ. ಒಂದು ಕ್ಷಣ ಆ ವ್ಯಕ್ತಿ ಆತ್ಮಹತ್ಯೆ ಮಾಡಲು ಬಂದಿದ್ದಾರೆ ಅನ್ನುವುದನ್ನು ಅರಿತ ಕೂಡಲೇ ಅವರನ್ನು ರಕ್ಷಿಸಲೆಂದು ಅವರತ್ತ ಧಾವಿಸಿದೆ. ಅವರು ಹಾರಬೇಕು ಅನ್ನೋ ಕ್ಷಣದಲ್ಲಿ ಅವರ ಕೈ ಹಿಡಿದು ಎಳೆದೆ. ಸುಮಾರು 45ರ ಆಸು ಪಾಸಿನ ವ್ಯಕ್ತಿ. “ಏನಾಯ್ತು ಸರ್” ಎಂದು ಪ್ರಶ್ನಿಸಿದೆ. “ಬಿಡಿ ಸರ್ ನನ್ನ ನಾನು ಸಾಯಬೇಕು” ಅಂತ ಗೋಗರೆದರು. ನಾನು ಸ್ವಲ್ಪ ರೇಗುತ್ತಾ ನಿಮಗೇನು ಹುಚ್ಚು ಹಿಡಿದೆಯಾ ಅಂತ ಹೇಳಿ ಅವರನ್ನು ಎಳೆದು ಅಲ್ಲೇ ಹತ್ತಿರದಲ್ಲಿ ಕೂರಿಸಿದೆ ಅವರು ತನ್ನ ಎರಡು ಕೈಗಳಲ್ಲಿ ಮುಖವನ್ನು ಮುಚ್ಚಿ ಗಟ್ಟಿಯಾಗಿ ಅಳತೊಡಗಿದರು. ನಾನು ಸುಮ್ಮನಾದೆ, ಅಳುವಷ್ಟು ಅತ್ತು ಬಿಡಲಿ ಎಂದು.
ಕೆಲ ಸಮಯದ ನಂತರ ಅವರು ಸ್ವಲ್ಪ ಸುಧಾರಿಸಿಕೊಂಡಾಗ, ಅವರ ಹೆಸರು, ಮನೆ ಬಗ್ಗೆ ವಿಚಾರಿಸಿದೆ. ಅವರ ಮನೆ ಸುಮಾರು 20 ಕಿಲೋಮೀಟರ್ ದೂರ ಇದ್ದಿದ್ದರಿಂದ ಅವರನ್ನು ನನ್ನೊಂದಿಗೆ ಅಲ್ಲೇ ಐದು ನಿಮಿಷದ ದಾರಿಯಾದ ಕಾರಣ ರೂಮಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದೆ ಒಂದು ಕಡೆ ಸಣ್ಣ ಅನುಮಾನ ಮೂಡಿತು. ಸಾಯಬೇಕು ಅಂತ ದೃಢ ನಿರ್ಧಾರ ಮಾಡಿಕೊಂಡು 20 ಕಿಲೋಮೀಟರ್ ದೂರ ಬಂದಂತಹ ವ್ಯಕ್ತಿಯನ್ನು ರೂಮಿಗೆ ಕರೆದುಕೊಂಡು ಹೋದರೆ ಅವರು ಅಲ್ಲಿ ಏನಾದರೂ ಅನಾಹುತ ಮಾಡದಿದ್ದರೆ ಸಾಕಪ್ಪ ಎಂದುಕೊಂಡೆ. ಮನೆಗೆ ಹೋಗುವಾಗ ಸುಮಾರು 11:40 ದಾಟಿತ್ತು ಹೋದ ತಕ್ಷಣ ಜೀರಿಗೆ ಕಷಾಯ ಮಾಡಿ ಕೊಟ್ಟೆ. ರಾತ್ರಿ ಚಳಿಗೆ ಸ್ವಲ್ಪ ಬೆಚ್ಚಗೆ ಇರಲಿ ಎಂದು. ಊರಿಂದ ಬರುವಾಗ ಅಮ್ಮ ಜೀರಿಗೆ ಹುಡಿ ಮಾಡಿ ಕೊಟ್ಟಿದ್ದರು. “ಸಾಯಲು ಇದ್ದ ಧೈರ್ಯ ಬದುಕಿದ್ದಾಗ ಏಕಿಲ್ಲ” ಎಂದು ಕೇಳಿಬಿಟ್ಟೆ. ಕೇಳಿದ ನಂತರ ಹಾಗೆ ನೇರವಾಗಿ ಕೇಳಬಾರದಿತ್ತು ಅಂತ ಅನ್ನಿಸಿತೊಡಗಿತು. ಒಂದೆರಡು ನಿಮಿಷ ಆ ವ್ಯಕ್ತಿ ಏನು ಮಾತಾಡದೆ ಹಾಗೆ ಇದ್ದರು. ನಾನು ಸುಮ್ಮನಿದ್ದುಬಿಟ್ಟೆ ಕಾರಣ ತಿಳಿಯದಿದ್ದರೂ ಪರವಾಗಿಲ್ಲ ಇನ್ನು ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸದಿದ್ದರೆ ಸಾಕು ಎಂದುಕೊಂಡೆ . ಕಷಾಯ ಕುಡಿದ ಲೋಟ ತೆಗೆದುಕೊಳ್ಳುತ್ತಾ ಎದ್ದು ನಿಂತಾಗ, ಅವರು ಸರ್ ಅಂತ ಒಂದು ನಿಮಿಷ ಎನ್ನುತ್ತಾ ಮಾತನಾಡಲು ಶುರು ಮಾಡಿದರು.
ನಾನು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಥವಾ ಮೂರ್ಖ ಅಲ್ಲ ಸರ್, ಆ ಹೊತ್ತಲ್ಲಿ ನನಗೆ ಏನಾಯ್ತು ಗೊತ್ತಿಲ್ಲ ಸರ್ ಎನ್ನುತ್ತಾ ಅತ್ತು ಬಿಟ್ಟರು. ನಾನು ಗಾಳಿ, ಮಳೆ , ಗುಡುಗು ಅಂತ ನೋಡದೆ ದಿನಕ್ಕೆ 15 ಗಂಟೆ ಕೆಲಸ ಮಾಡಿ ಮನೆ ನೋಡಿಕೊಳ್ಳುತ್ತಿದ್ದೆ ಸರ್. ನನಗೆ ಮೂವರು ಮಕ್ಕಳು. ಈಗ ಮದುವೆ ವಯಸ್ಸಿಗೆ ಬಂದಿದ್ದಾರೆ. ಕಷ್ಟಪಟ್ಟು ಮೂರು ಜನರಿಗೆ ಪದವಿ ಶಿಕ್ಷಣವನ್ನು ಕೊಟ್ಟಿದ್ದೇನೆ ನನ್ನ ಹೆಂಡತಿ ನಮ್ಮನ್ನೆಲ್ಲ ಅಗಲಿ 2 ವರ್ಷ ಆಯಿತು ಸರ್. ಅವಳು ಹೋದಾಗಿನಿಂದ ತುಂಬಾ ಒಂಟಿತನ ಕಾಡ್ತಾ ಇದೆ. ಮನೆಯಲ್ಲಿ ಅಡುಗೆ ಕೆಲಸ ಎಲ್ಲ ನನ್ನ ಮೂವರು ಮಕ್ಕಳು ತಯಾರು ಮಾಡುತ್ತಾರೆ . ನನ್ನಾಕೆ ಅವರಿಗೆಲ್ಲ ಒಳ್ಳೆಯ ಸಂಸ್ಕಾರ ಮತ್ತು ಅಡುಗೆ ಕೆಲಸವನ್ನೆಲ್ಲ ಕಲಿಸಿ ಕೊಟ್ಟಿದ್ದಾಳೆ. ಮೊದಲ ಮಗಳಿಗೆ ಒಂದು ಒಳ್ಳೆ ಕಡೆ ಸಂಬಂಧ ಹುಡುಕಿದೆ. ನಮ್ಮ ಅಂತಸ್ತಿಗಿಂತ ಒಂದೆರಡು ಪಟ್ಟು ಮೇಲೆ ಇದ್ದವರು. ಎಲ್ಲರಿಗೂ ಒಪ್ಪಿಗೆಯಾಗಿ ಮಗಳು ಕೂಡ ಓಕೆ ಎಂದಾಗ ಮಾತುಕತೆ ಮುಂದುವರೆಸಿ ನಿಶ್ಚಿತಾರ್ಥಕ್ಕೆ ದಿನ ಮಾಡಿದೆ, ಆದರೆ ನಿಶ್ಚಿತಾರ್ಥದ ದಿನ ಆತನಿಗೆ ಬೇರೆ ಹುಡುಗಿಯ ಜೊತೆ ಪ್ರೀತಿ ಇದ್ದು ಆತನು ಮನೆಯವರ ಒತ್ತಾಯದ ಮೇರೆಗೆ ಹುಡುಗಿ ನೋಡಲು ಬಂದು ನಿಶ್ಚಿತಾರ್ಥಕ್ಕೆ ಒಪ್ಪಿದ್ದು ಎಂದು ಗೊತ್ತಾಯ್ತು. ಮೊದಲ ಮಗಳ ನಿಶ್ಚಿತಾರ್ಥಕ್ಕೆ ವಿಜೃಂಭಣೆಯಿಂದ ಸಿದ್ಧಪಡಿಸಿದೆ . ಆದರೆ ಇವತ್ತು ನಡೆಯಬೇಕಿದ್ದ ಕಾರ್ಯಕ್ರಮ ನಿಂತಿದ್ದನು ನೋಡಿ ಬಹಳ ಬೇಸರವಾಗುತ್ತದೆ. ಈ ಪರಿಸ್ಥಿತಿಯಲ್ಲಿ ಆಕೆ ನನಗೆ ಬುದ್ಧಿ ಹೇಳುತ್ತ ನನ್ನ ತಾಯಿಯಾದವಳು ಅವಳು. ಇವತ್ತು ನಾನು ನನ್ನ ತಂಗಿಯ ಮನೆಗೆ ಹೋಗಿ ಬರ್ತಾನೆ ಅಂತ ಸುಳ್ಳು ಹೇಳಿ ಬಂದಿದ್ದೆ. ನನಗೆ ನನ್ನ ಬಗ್ಗೆ ಬೇಸರವಾಗುತ್ತಿದೆ ಒಂದು ವೇಳೆ ನನ್ನ ಹೆಂಡತಿ ಇದ್ದಿದ್ರೆ ಯಾವ ರೀತಿಯ ಹುಡುಗನನ್ನು ನೋಡಬೇಕು, ಯಾರು ಒಳ್ಳೆಯವರು, ಯಾರು ಕೆಟ್ಟವರು ಅಂತ ಹೇಳ್ತಾ ಇದ್ದಳು . ನಾನು ಅವರ ಅಂತಸ್ತು ಕಂಡು ಮಗಳು ಚೆನ್ನಾಗಿರ್ತಾಳೆ ಅಂತ ಇಂದು ಯೋಚಿಸಿ ಎಡವಿದೆನಲ್ಲ ಅಂತ ನನ್ನ ತುಂಬಾ ಕಾಡ್ತಾ ಇದೆ ಸರ್ ಅನ್ನುತ್ತಾ ತುಂಬಾ ಅತ್ತು ಬಿಟ್ಟರು. ಮತ್ತೆ ಮಾತು ಮುಂದುವರಿಸುತ್ತಾ ನಾನು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ ಸರ್. ನನ್ ಮಗಳು ನನ್ನೆದುರು ಅವಳ ದುಃಖವನ್ನು ತೋಡಿಕೊಂಡವಳಲ್ಲ ಆದರೆ ಅವಳಿಗೂ ಕೆಲವು ಕನಸುಗಳಿರುತ್ತದೆ. ಅದೆಷ್ಟು ಆಸೆ ಕನಸುಗಳನ್ನು ಹೊತ್ತಿದ್ದಳೋ ಏನೋ, ನನ್ನ ಒಂದು ಬೇಜವಾಬ್ದಾರಿತನದಿಂದ ಆಕೆ ಅದೆಷ್ಟು ಮನಸೊಳಗೆ ನೋವು ಅನುಭವಿಸುತ್ತಿದ್ದಳೋ ಏನು ಗೊತ್ತಿಲ್ಲ ಸರ್ ಎಂದರು
ಮನಸ್ಸು ಹಗುರವಾಗುವಷ್ಟು ಅತ್ತು ಬಿಡಲಿ ಎಂದು ಸುಮ್ಮನಾದೆ. ಸ್ವಲ್ಪ ಸಮಯದ ನಂತರ ನಾನೇ ಮಾತನ್ನು ಮುಂದುವರೆಸಿದೆ. ಸರ್ ನಿಮಗಿಂತ ವಯಸ್ಸಿನಲ್ಲಿ ಚಿಕ್ಕವನಾದರೂ ,ಒಂದು ಮಾತು ಹೇಳುತ್ತೇನೆ. ” ನೀವಿದ್ರೆ ಮಾತ್ರ ಈ ಪ್ರಪಂಚ , ಇಲ್ಲ ಅಂದ್ರೆ ಎಲ್ಲ ಶೂನ್ಯ. ಅದಕ್ಕೋಸ್ಕರ ಹೇಳ್ತಾ ಇದ್ದೇನೆ ನಾವು ಇರಲಿ ಇಲ್ಲದೆ ಇರಲಿ ಪ್ರಪಂಚ ನಡೆಯುತ್ತದೆ. ಹಾಗಿರುವಾಗ ನಾಲ್ಕು ದಿನ ಬದುಕುವ ನಾವ್ಯಾಕೆ, ಇನ್ಯಾರೋ ಏನೋ ಹೇಳಿದ್ರು ಅಂತ ಆಕಾಶನೇ ತಲೆ ಮೇಲೆ ಬಿದ್ದಷ್ಟು ಚಿಂತೆ ತಗೋಬೇಕು. ನೀವು ಸತ್ತರೆ ಈ ಪ್ರಪಂಚಕ್ಕೆ ಏನು ನಷ್ಟ ಇಲ್ಲ ಸರ್. ಆದರೆ ನಿಮ್ಮನ್ನೇ ಪ್ರಪಂಚ ಅಂತ ಬದುಕುತ್ತಿರುವ ನಿಮ್ಮ ಮಕ್ಕಳ ಬದುಕನ್ನು ಅಂಧಕಾರ ಮಾಡಬೇಡಿ ಸರ್. ಆತನಿಗೆ ಬೇರೆ ಪ್ರೇಮ ಇತ್ತು ಅಂತ ಮದುವೆಯ ಮುಂಚೆನೇ ಗೊತ್ತಾದದ್ದು ಒಳ್ಳೇದಾಯ್ತು ಇಲ್ಲ ಅಂದ್ರೆ ಮದುವೆ ಆದ ನಂತರ ಗೊತ್ತಾದರೆ ಏನು ಮಾಡುತ್ತಿದ್ದೀರಿ. ನಿಮ್ಮ ಜೊತೆ ಮಗಳನ್ನು ಕರೆದು ಆತ್ಮಹತ್ಯೆ ಗೆ ಪ್ರೇರಣೆ ಕೊಡ್ತಾ ಇದ್ರ ಎಂದು ಕೇಳಿದ ತಕ್ಷಣ ….ಇಲ್ಲ ಸರ್ ಇಲ್ಲ….ಎಂದರು. ನಾನು ಮಾತು ಮುಂದುವರಿಸುತ್ತಾ. ನೀವು ಯಾರಿಗೂ ಕೆಟ್ಟದ್ದು ಮಾಡಿಲ್ಲ ಅದಕ್ಕೆ ನಿಮಗೆ ಆ ದೇವರು ಕೈ ಹಿಡಿದಿದ್ದಾನೆ ಸರ್ ಅಂದಾಗ ಅವರ ಕಂಗಳು ತೇವಗೊಂಡವು. ಆನಂದ ಭಾಷ್ಪದೊಂದಿಗೆ ಹೌದಪ್ಪ ನೀನ್ ಹೇಳ್ತಾ ಇರೋದು ನೂರಕ್ಕೆ ನೂರು ಪ್ರತಿಶತ ನಿಜ. ಇನ್ನು ಮುಂದೆ ನಾನ್ಯಾವತ್ತು ಈ ಪ್ರಪಂಚಕ್ಕೆ ಹೆದರಿ ಬದುಕಲ್ಲ ಮಕ್ಕಳಿಗಾಗಿ ಅವರ ಸಂತೋಷಕ್ಕಾಗಿ ದೇವರಿಗೆ ಸರಿಯಾಗಿ ಬದುಕಿ ಬಿಡುವೆ ಎಂದರು. ಅವರ ಮಾತಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ ಎದ್ದು ಕಾಣ್ತಾ ಇತ್ತು.
——————————
ಅಶ್ವಿನಿ ಕುಲಾಲ್ ಕಡ್ತಲ
Very nice aswini