ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಮಾತು

ಮಾತೇ ಬೇಕಿಲ್ಲ ಮನಸ್ಸಿಗೆ
ನೋಟ ಒಂದೇ ಸಾಕು ಕನಸಿಗೆ
ಬದುಕು ಅರಳುವ ಸವಿಗಳಿಗೆ
ಒಳಗೊಳಗೆ ಮುಗುಳು ನಗೆ
ಬದುಕಿನೊಳಗೆ ಏನೋ ಹೊಸಬಗೆ
ಮನಸ್ಸು ಮೂಕವಾಗುವುದು
ಪ್ರೀತಿ ಆತ್ಮೀಯತೆಯ ಮಾತಿಗೆ
ಸವಿನುಡಿಯು ಕಾಡುವುದು ಪ್ರತಿಗಳಿಗೆ
ನಗುವೇ ದಿವ್ಯ ಔಷಧಿ ಈ ಬದುಕಿಗೆ
ಅರ್ಥವಿಲ್ಲದ ನೂರು ಮಾತುಗಳು
ಸುಮ್ಮನೆ ಏತಕೆ ಬೇಕು
ಭಾವದೊಳಗಿನ ಪ್ರೀತಿಯ ಬೆಸುಗೆಗೆ
ಒಂದೇ ಒಂದು ಒಲವ ನುಡಿ ಸಾಕು
ಒಂದು ಸ್ಪರ್ಶ ಸಾಕು ನಲಿವ ಮೀಟಿ ನೋವುಗಳ ಹೊರ ದೂಕಲು
ಹಿತವಾದ ಮಾತು ಬೇಕು ಮನದೊಳಗಿನ ಕಡು ಕತ್ತಲೆಯನ್ನು ಕಳೆಯಲು
ಮಾತಿನ ಕಿಡಿ ಸುಡದಿರಲಿ
ಮನದೊಳಗಿನ ಭಾವನೆಯ
ಮಾತಿನ ಹೊಳಪು ಭರವಸೆಯ
ಬೆಳಕಾಗಿ ಮೂಡಿಬರಲಿ
ಕುಹಕ ಮಾತುಗಳು ಬೇಡ
ಹಿಂದೊಂದು ಮುಂದೊಂದು
ಮಾತನಾಡುವವರ ನಂಬಬೇಡ
ನಯವಂಚಕರ ಮಾತಿಗೆ ಬಲಿಯಾಗಬೇಡ
ಮಾತಿನಲ್ಲಿರದಿರಲಿ ಅಹಂಕಾರ
ಮಾತಾಗಿರಲಿ ಬದುಕಿಗೆ ಅಲಂಕಾರ
ಮಾತಲ್ಲಿರಲಿ ನಯವಿನಯ ಸಂಸ್ಕಾರ ಹಿತಮಿತ ಮಾತುಗಳಿಗೆ ಎಲ್ಲೆಡೆ ಪುರಸ್ಕಾರ
ನಾಗರಾಜ ಜಿ. ಎನ್. ಬಾಡ