ಅರ್ಚನಾ ಯಳಬೇರು ಅವರ ಹೊಸ ಗಜಲ್

ಅಳಿಯುವ ಕಾಯಕೆ ಕಾಯಕದಲಿ ಕೈಲಾಸ ಕಂಡರಷ್ಟೆ ಸಾರ್ಥಕತೆ
ಉತ್ತು ಬಿತ್ತಿದ ಬೀಜವು ಫಸಲಿನಿಂದ ತೆನೆ ಬಾಗಿದರಷ್ಟೆ ಸಾರ್ಥಕತೆ

ವಾದ ವಿವಾದಗಳ ಬಾಳಿನಲಿ ಆಶಾವಾದವೆ ದಾರಿದೀಪ ಬದುಕಲು
ವಾತ್ಸಲ್ಯದ ಬೇರು ಎದೆಯ ತುಂಬಾ ಹರಡಿ ಹಬ್ಬಿದರಷ್ಟೆ ಸಾರ್ಥಕತೆ

ಮನದ ಮರ್ಜಿಗೆ ಮುಳುವಾಗದಿರಲಿ ಒಲವು ಚೆಲುವಿನ ಮೋಹವು
ಹೃದಯ ಮಂದಿರದಲಿ ಜ್ಞಾನದ ಪ್ರಣತಿಯ ಹಚ್ಚಿದರಷ್ಟೆ ಸಾರ್ಥಕತೆ

ಚಿತ್ತದೊಳಗಿನ ಚೇತನದ ಚೀತ್ಕಾರಕೆ ಹೇತುವಾಗದೆ ಕೇತನವಾಗು
ಅರಿವಿನ ಸೊಡರು ಅಜ್ಞಾನದ ಅಂಧಕಾರ ನೀಗಿದರಷ್ಟೆ ಸಾರ್ಥಕತೆ

ಅತೃಪ್ತ ಭಾವಕೆ ಸವೆದ ಪಥಗಳ ಸಂತೃಪ್ತಿಯೆ ಸಾಂತ್ವನದ ಮಡಿಲು
ಕಳೆದ ನಿನ್ನೆಯ ಕುಹಕಕೆ ತೆರದ ಕರ್ಣಗಳ ಮುಚ್ಚಿದರಷ್ಟೆ ಸಾರ್ಥಕತೆ

ಸೆಟೆದು ನಿಂತಿ‌ಹ ಆತ್ಮಸ್ಥೈರ್ಯವೆ ಸ್ನಿಗ್ಧ ಮನದ ಸುಪ್ತ ಸೌಂದರ್ಯ
ಹತಾಶೆಯ ಗೆದ್ದಲು ಸುಕನಸಿನ ಹುತ್ತವನು ಕಟ್ಟಿದರಷ್ಟೆ ಸಾರ್ಥಕತೆ

ಶ್ವೇತ ವರ್ಣದ ಶುಭ್ರತೆಗೆ ಸಿಡಿದ ಕೆಸರಿನ ಕಿಡಿಯಾಗದಿರಲಿ ಪ್ರೀತಿ
ಅರ್ಚನಾ ನೀನು ರಾಜ ಗಾಂಭೀರ್ಯದಲಿ ನಡೆದರಷ್ಟೆ ಸಾರ್ಥಕತೆ

————–

Leave a Reply

Back To Top