ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಒಲವು

ಮಣ್ಣುಗೂಡಿದ ಒಲವೇ
ಬಣ್ಣ ಮಾಸಿ ಮಸಣ ಸೇರಿದ ಒಲವೇ
ಸುಳಿ ಸುಳಿದು ಮನವ ಕದಡಿ
ಆಸೆ ಒಳದೂಡಿ ಮತ್ತೆೇಕೆ ಬಂದು ಕೆಣಕುವೆ//

ಪಾಳು ಬಿದ್ದಿಹ ಎದೆ ನೆಲವು
ಹಾಳು ಭೂಮಿಯಂತಾಗಿದೆ
ಹದಮಾಡಿ ಮತ್ತೆ ಈ ಇಳೆಯ
ಬಿತ್ತಬಲ್ಲೆಯ ಅದೇ ಒಲವ
ಬತ್ತಿಹೋದ ಅದೇ ಪ್ರೀತಿಯಾ//

ನೋವಿನಬ್ಬವೆನ್ನ ಆಸೆಗಳ
ಕೊಚ್ಚಿಕೊಂಡು ಹೋಗಿದೆ ಪ್ರವಾಹದಂತ
ಕಷ್ಟಗಳೇ ಹರಿಹರಿದು
ಇಷ್ಟಗಳ ಕೊರೆದು ಹೋದ ಮೇಲೆ
ಹೊಳೆಯುತ ಕಣ್ಮುಂದೆ ನೀನೇಕೆ ಕಾಣುವೆ //

ನವಿರಾದ ನಲುಮೆ ಕದಡಿ ಬಾಡಿಸಿ
ದುಃಖ ದುಮ್ಮಾನವನೇ ನೀಡಿ
ಭೂತ ಪ್ರೇತದಂತೆ ಮತ್ತೇಕೆ
ಕಾಡುತಿರುವೆ ಬೆನ್ನತ್ತಿದ ಬೇತಾಳನಂತೇಕೆ
ಭಯ ಆತಂಕ ನೀಡಿ ಬೆಚ್ಚಿ ಬೀಳಿಸುತ //

ನನ್ನೊಲವ ಶವ ಯಾತ್ರೆಯಲಿ
ಕುಣಿದು ಕುಪ್ಪಳಿಸಿದ ವಿಧಿಯೇ
ಹುಸಿನಗೆಯ ಇಂದೆಕೆ ಮತ್ತೆ ಬೀರಿ
ನನ್ನ ನೆಮ್ಮದಿಯ ನಿದಿರೆ ಕದಿವೆಯೇಕೇ//

ಪ್ರೇಮದೂವಿನ ದಳಗಳನು
ಕರುಣೆ ಇಲ್ಲದೆ ಕಿತ್ತು ಬಿಸಾಡಿ
ಪರಿಮಳವ ಬತ್ತಿಸಿ ಒಣಗಿಸಿದ ಮೇಲೆ
ನೀರೆರೆಯುವ ತವಕವೇಕಿಂದು
ಭಾವ ತಲ್ಲಣಗೊಳಿಸುವ ವಿರಹ ಸುರಿದು//

ಭವ್ಯ ಭವಿಷ್ಯದ ಕಡೆಗೆ
ಸೆಳೆಯುತ್ತಿರಲು ಮನವಿಂದು ನನ್ನ
ನಿನ್ನ ನೆನಪಿನ ಕಿಡಿ ಗುಂಡಿನಂತೆ
ಬೆನ್ನಿಗೊಡೆದೆಕೇ ಓಡುವೆ ಮುಖ ತೋರದೆ
ನಿನ್ನೆ ಮೊನ್ನೆಗಳ ಹಳೆಯದೆಲ್ಲ ಕಟ್ಟಿ ಬಿಗಿದಿಟ್ಟಿರುವೆ
ಹರಿಯದಿರು ನಸಿದ ಹೃದಯದೊಳು ಕೈ ಹಾಕಿ//


Leave a Reply

Back To Top