ಪ್ರಮೋದ ಜೋಶಿ ಅವರ ಕವಿತೆ,ಸತ್ತವರ ಮನೆ ಮುಂದೆ

ಸತ್ತವನ ಮನೆ ಮುಂದೆ
ಜೀವ ಭರವಸೆ ಉಳ್ಳವರ ಸಾಲು
ಕ್ಷಣದೊಳಗೆ ಆವರಿಸಿದ
 ಮಾಯೆಯ ಸೆರಗಿನಲಿ
ಕೂಡಿ ಬಂದ ಜೀವಿಗಳು

ಎಲ್ಲ ಬಂಧ ತೊರೆದು ಬಂದ
ಕ್ಷಣ ಹೊತ್ತಿನ ವಿರಾಗಿಗಳು
ಅಂತಿಮ ಘಟ್ಟದ ಹೊತ್ತಿನವರೆಗೆ
ಎಲ್ಲ ಮರೆತ ನಿರ್ಮೋಹಿಗಳು

ದುಃಖದ ಛಾಯೆಯ ಘಳಿಗೆಯೊಳಗೆ
ದುಃಖ ವಿನಿಮಯದ ಸಂಕ್ರಮಣ
ತಮ್ಮ ಘಟನೆಯ ಕತೆಗಳ ತೆಗೆದು
ಮಾಡುವರಿಲ್ಲಿ ಅನಾವರಣ

ಬಡವ ಬಲ್ಲಿದ ಹಿರಿಯ ಕಿರಿಯ
ಭೇದ ಮರೆತು ಬಂದವರು
ಯಾವ ಫಲವನೂ ಬಯಸದೇ ಕೂಡಿದ
ಮಾನವೀಯತೆಯ ಪ್ರತೀಕರು

ಸತ್ತ ದೇಹದ ಸುತ್ತ ಅಳುವವರ ಕೂಟ
ಸರತಿಯಂತೆ ಅತ್ತು ದುಃಖ ಮರೆಸುವ ಆಟ
ಹೊರಗಡೆ ಭಜನೆ ತಮಟೆ ಸದ್ದು
ಮುಗಿಸಿ ಬರುವರು ಒಬ್ಬೊಬ್ಬರೆ
ತಿಂಡಿ ತೀರ್ಥ ಮೆದ್ದು

ದುಃಖ ಛಾಯೆಯೊಳು ಹರಟೆಯ ಭರಾಟೆ
ಬಹುದಿನ ತೊರೆದ ಸಂಬಂಧಿಗಳ ಬೇಟೆ
ಸುಖ ದುಃಖದ ವೈಚಾರಿಕತೆಯಲ್ಲೂ
ಚಿಮ್ಮಿಸುವರು ಆಗಾಗ ನಗುವಿನ ಬೊಗ್ಗೆ

ಸತ್ತ ದೇಹದ ಮೆರವಣಿಗೆ ತಾಕತ್ತಿನಂತೆ
ಹೊತ್ತು ನಡೆವರೆಲ್ಲರೂ ಒಬ್ಬೊಬ್ಬರಂತೆ
ಅಂತಿಮ ಘಟ್ಟದವರೆಗೂ ಏಕೋಭಾವ
ಮುಗಿಸಿಬಂದೊಡೆ ಇವನ್ಯಾರೊ ಅವನ್ಯಾರೊ

ಎಂಥ ವಿಚಿತ್ರ ಭಾವನೆ
ಇದ್ದಾಗ ಬಾರದವರು ಸತ್ತಾಗ ಬರುವರು
ಸತ್ತಾಗ ಬಂದರೆ ಎದ್ದು ಬರುವನೇ
ಇದ್ದಾಗ ಪ್ರೀತಿಸು ಎಲ್ಲರೂ ನಮ್ಮವರೇ


2 thoughts on “ಪ್ರಮೋದ ಜೋಶಿ ಅವರ ಕವಿತೆ,ಸತ್ತವರ ಮನೆ ಮುಂದೆ

  1. ಸತ್ತವರ ಮುಂದೆ ಅತ್ತು ಅತ್ತು
    ಗೊಣ್ಣೆ ಸುರಿಸುತ್ತ ನಾಟಕ ಮಾಡುವವರೆ ಹೆಚ್ಚು.

    ಅವರು ಬದುಕಿದ್ದಾಗ ಮಾಡುವ ಒಂದೊಂದು ಕೆಲಸದ ಮೇಲೂ ಅವರದು ಬರೀ ಹೊಟ್ಟೆ ಕಿಚ್ಚು

    ಬಂದವರ ಮುಂದೆ ಬರೀ
    ಬೊಗಳೇ ಮಾತು.
    ಅಲ್ಲಿ ತೋರಿಸಿದೆ ಇಲ್ಲಿ ತೋರಿಸಿದೆ

    ಆದರೆ….,.

    ಎಲ್ಲಿಯೂ ತೋರಿಸದೇ
    ಸತ್ತಾಗ ಬಂದು ಮಾತು ತೂರುವದೇ
    ಅವರ ಕೆಲಸ

    ಅದಕ್ಕಾಗಿ ಆಗುತ್ತಿದೆ ಇಂಥವರಿಂದ ತುಂಬಾ ಹೊಲಸ

    ಸತ್ತವರ ಬಗ್ಗೆ ಕರುಣೆ ಇರಲಿ ಕಕ್ಕುಲತೆ ಇರಲಿ ಎಂದೂ ನಿಮ್ಮ ಪ್ರತಿಷ್ಟೆಗೆ ಸತ್ತ ಮನೆ ವೇದಿಕೆಯಾಗದಿರಲಿ

  2. ಕನ್ನಡಿ ಹಿಡಿಂದಂತಿದೆ ಇದ್ದುದನ್ನ ಇದಂತೆ……..ತೋರಿಸಿದೆ

Leave a Reply

Back To Top