ಕಥಾಸಂಗಾತಿ
ಜಿ.ಎಸ್ ಹೆಗಡೆ
‘ಗಾಳಿಪಟ’
ಚಂದನ್ ಈಗ 5 ನೇ ತರಗತಿ ಉತ್ತೀರ್ಣನಾಗಿ 6 ನೇ ತರಗತಿಗೆ ಹೋಗುತ್ತಿದ್ದಾನೆ.5 ನೇ ತರಗತಿಯವರೆಗೆ ಓದಿದ್ದು ಮನೆಯ ಸಮೀಪದ ಚಿಕ್ಕದಾದ ಶಾಲೆಯಲ್ಲಿ. ಆ ಶಾಲೆಯಲ್ಲೋ ಇಬ್ಬರು ಶಿಕ್ಷಕರು ಕೆಲವೇ ವಿದ್ಯಾರ್ಥಿಗಳು. ತಂದೆ ತಾಯಿಯರ ಪ್ರೀತಿ ನೀಡಿ ಮಕ್ಕಳನ್ನು ಬೆಳೆಸಿದ ಘನವಂತರು. ಇಂತಹ ಮನೆಯ ವಾತಾವರಣದ ಶಾಲೆಯಲ್ಲಿ ಕಲಿತ ಚಂದನ್ ತುಸು ಭಾರವಾದ ಹೃದಯದೊಂದಿಗೆ ಹೊಸ ಶಾಲೆಗೆ ತಂದೆ ತಾಯಿಗಳೊಂದಿಗೆ ಹೊರಟ. ಚಂದನ್ ನನ್ನು ತರಗತಿಗೆ ಬಿಟ್ಟು ಮುಖ್ಯಶಿಕ್ಷರಲ್ಲಿ ಪ್ರವೇಶಾತಿಯ ಪ್ರಕ್ರಿಯೆ ಮುಗಿಸಿ ಅವರು ಮರಳಿದರು.
ಇತ್ತ ಚಂದನ್ ನಿಗೆ ಹೊಸ ಪ್ರಪಂಚಕ್ಕೆ ಬಂದ ಅನುಭವ.ನಾಲ್ವರು ಶಿಕ್ಷಕರು. ‘ಮುಖ್ಯ ಶಿಕ್ಷಕರು ಬಹಳ ಸ್ಟ್ರಿಕ್ಟ್ ಅಂತೆ’ ಎನ್ನುವ ಮಾತನ್ನು ಕೇಳಿಸಿಕೊಂಡಿದ್ದ. ‘ಶಾಲೆಗೆ ರಜೆ ಮಾಡಿದರೆ ಮನೆಗೇ ಬರುವರಂತೆ’. ‘ದಿನನಿತ್ಯದ ಕೆಲಸವನ್ನು ಅಂದೇ ಒಪ್ಪಿಸಬೇಕಂತೆ….’ ಹೀಗೆ ಹತ್ತು ಹಲವು ವಿಷಯಗಳು. ಆದರೆ ಚಂದನ್ ನಿಗೆ ಅದಕ್ಕೆ ಅಂಜುವ ಪ್ರಮೇಯವಿಲ್ಲ. ಓದಿನಲ್ಲೂ ಜಾಣ. ಶಾಲೆ ತಪ್ಪಿಸುವ ಜಾಯಮಾನದವನಲ್ಲ.ಆದರೆ ಎಲ್ಲವೂ ಹೊಸ ಮುಖ. ಎಲ್ಲರನ್ನೂ ತನ್ನ ಗೆಳಯರನ್ನಾಗಿ ಮಾಡಿಕೊಳ್ಳಬೇಕು. ಹೇಗೆ? ಒಂದೆರಡು ದಿನ ಎಲ್ಲರ ಪರಸ್ಪರ ಒಡನಾಟ ನೋಡಿದ. ಮುಖ್ಯ ಶಿಕ್ಷಕರು ಪ್ರಾರ್ಥನಾ ವೇಳೆಯಲ್ಲಿ ಉಳಿದ ವಿದ್ಯಾರ್ಥಿಗಳಿಗೆ ‘ಹೊಸ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಅಷ್ಟಾಗಿ ತಿಳಿಯುವುದಿಲ್ಲ ಅವರನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಕರೆದುಕೊಂಡು ಬನ್ನಿ’ ಇತ್ಯಾದಿ ಸಲಹೆ ನೀಡಿದರು.ಇದನ್ನು ಕೇಳಿದ ಚಂದನ್ ನಿಗೆ ತುಸು ಧೈರ್ಯ ಬಂದಿತು.
ಊಟಕ್ಕೆ ಬಿಟ್ಟ ಸಂದರ್ಭ ತಟ್ಟೆಯನ್ನು ತೊಳೆಯುವಾಗ ಏಳನೇ ತರಗತಿ ಗಿರಿ ಬಂದು ‘ ಏಯ್ ಸರ್ ಮೂರು ಗಂಟೆಗೆ ಆಟಕ್ಕೆ ಬಿಡ್ತೇನೆ ಹೇಳಿದಾರೆ, ಸರ್ರೂ ಬರ್ತಂತೆ’ ಅಂದಾಗ ಉಳಿದ ಮಕ್ಕಳು ‘ಹೌದಾ’ ಚಲೋ ಆಯ್ತು. ನಾನು ಸರ್ ಪಾರ್ಟಿಗೆ’ ಎಂದೆಲ್ಲಾ ಮಾತನಾಡಿಕೊಂಡರು. ಇದನ್ನು ಕೇಳಿದ ಚಂದನ್ ನಿಗೆ ಮುಖ್ಯ ಶಿಕ್ಷಕರ ಬಗ್ಗೆ ಇರುವ ಆತಂಕ ಇನ್ನೂ ಸ್ವಲ್ಪ ಕಡಿಮೆಯಾಯ್ತು.
ಮುಖ್ಯ ಶಿಕ್ಷಕರಿಗೆ ಪ್ರವೇಶಾತಿ, ಅದೂ ಇದು ಎಂದು ಕೆಲಸದ ಒತ್ತಡ. ಅವರ ಅವಧಿಯನ್ನು ಉಳಿದ ಶಿಕ್ಷಕರು ಸಮತೂಗಿಸುತ್ತಿದ್ದರು. ಹಾಗಾಗಿ ಅವರಿಗೆ ಆರನೇ ತರಗತಿ ಪ್ರವೇಶ ಮಾಡಲಾಗಿರಲಿಲ್ಲ. ಚಂದನ್ ನಿಗೆ ಮುಖ್ಯ ಶಿಕ್ಷಕರ ಮಾತು ಕೇಳಬೇಕೆನ್ನುವ ತವಕ. ‘ಬಹಳ ಸ್ಟ್ರಿಕ್ಟಂತೆ ‘ ಎನ್ನುವ ಮಾತು ತಲೆಯಲ್ಲಿ ‘ಗುಂಯ್’ ಗುಡುತ್ತಿತ್ತು. ನಾಲ್ಕಾರು ದಿನಗಳು ಕಳೆದವು ಇದೇ ಶಾಲೆಯಲ್ಲಿ ಮೊದಲಿನಿಂದಲೂ ಓದುತ್ತಿದ್ದ ಹರೀಶ ತನ್ನ ಗೆಳೆಯ ರಘುವಿನ ಹತ್ತಿರ ‘ ಬಾರ, ಹೆಡ್ ಮಾಸ್ಟರ್ ಹತ್ರ ಹೋಗಿ ಬರ್ವನ. ಸರ್ ಕ್ಲಾಸ್ ತಕೊಳುದಿಲ್ಲವಾ ಕೇಳಿ ಬರ್ವ’ ಅಂದ.
ಅದಕ್ಕೆ ರಾಘು ‘ ಬಾ ಹೋಗ್ವ ಎಂದಾಗ ಚಂದನ್, ನಿಲ್ಲ ನಾನೂ ಬರ್ತೆ” ಎಂದು ಆತನೂ ಮುಖ್ಯ ಶಿಕ್ಷಕರ ಬಳಿ ಬಂದ. ಆಗ ಮುಖ್ಯ ಶಿಕ್ಷಕರು ಏನೋ ಬರೆಯುತ್ತಿದ್ದರು. ಹರೀಶ ‘ ಸರ್, ನಮಗೆ ಕ್ಲಾಸ್ ತಕೊಳ್ಳುದಿಲ್ವಾ? ‘ ಎಂದು ಕೇಳಿದಾಗ,’ ತಗೊಳ್ತೆ ನಾಳೆ ಬರ್ತೆ, ಇವತ್ತು ಒಂಚೂರು ಕೆಲ್ಸ ಉಂಟು, ಅರ್ಜೆಂಟ್ ಇದೆ. ನಾಳೆ ಬರ್ತೆ” ಎಂದು ಪ್ರಿತಿಯಿಂದ ಮಾತಾಡಿ ಮೈದಡವಿ ಕಳುಹಿಸಿದರು. ಆಗ ಚಂದನ್ ನಿಗೆ ಇರುವ ಆತಂಕ ನಿಧಾನವಾಗಿ ಕರಗುತ್ತಾ ಬಂತು.
ಮರುದಿನ ಮುಖ್ಯ ಶಿಕ್ಷಕರು ಆರನೇ ತರಗತಿ ಪ್ರವೇಶಿಸಿದರು. ವಿದ್ಯಾರ್ಥಿಗಳೊಂದಿಗೆ ಬಲು ಸಲುಗೆಯಿಂದ ವರ್ತಿಸಿ ಕತೆ, ಜೋಕ್ ಗಳನ್ನು ಹೇಳಿ ಮಕ್ಕಳನ್ನು ನಗಿಸಿದರು. ಈಗ ಚಂದನ್ ನಿಗೆ ಆತಂಕ ಕರಗಿ ಹೋಗಿತ್ತು.
ಮುಖ್ಯ ಶಿಕ್ಷಕರ ಅವಧಿಯೆಂದರೆ ವಿದ್ಯಾರ್ಥಿಗಳಿಗೆ ಬಲು ಅಚ್ಚುಮೆಚ್ಚು. ಕತೆ ಹೇಳುವರು, ಹಾಸ್ಯ ಮಾಡುವರು. ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಅರಿವಿಲ್ಲದಂತೆ ಸ್ಪರ್ಧೆಗೆ ನೂಕುವರು.ಹೀಗೆ ದಿನಗಳು ಕಳೆದವು.
ಒಂದು ದಿನ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ‘ಗಾಳಿಪಟ ಹಾರಿಸುವ ಸ್ಪರ್ಧೆ ಏರ್ಪಡಿಸೋಣ’ ಎಂದೊಡನೇ ವಿದ್ಯಾರ್ಥಿಗಳ ಮನಸ್ಸು ಗಾಳಿಪಟದಂತೆ ಹಾರಿತು.’ ಸರ್ ಮಾಡಿ, ನಾಳೆಯೇ ಮಾಡಿ’ ಎಂದು ಒಕ್ಕೊರಲಿನಿಂದ ಕೂಗಿದರು. ಆಗ ಮುಖ್ಯ ಶಿಕ್ಷಕರು ‘ ಅವಸರ ಮಾಡದಿರಿ. ಅದಕ್ಕೆ ಒಂದಿಷ್ಟು ಸಮಯ ಕೊಡುವೆ. ನೀವೇನಾದರೂ ಒಂದು ಕೆಲಸ ಮಾಡಿಕೊಂಡು ಬನ್ನಿ ಎಂದರೆ ಮನೆಗೆ ಹೋಗಿ ಅದೇ ಕೆಲಸದಲ್ಲಿ ಮುಳುಗಿಬಿಡುತ್ತೀರಿ. ಇಂದು ಬುಧವಾರ ಬರುವ ಸೋಮವಾರ ಏರ್ಪಡಿಸುವ. ಬಹುಮಾನವೂ ಉಂಟು. ಯಾರಿಗಾದರೂ ಬಣ್ಣದ ಪೇಪರ್ ಬೇಕಾದರೆ ಹೇಳಿ ತಂದು ಕೊಡುವೆ” ಎಂದರು. ಆಗ ವಿದ್ಯಾರ್ಥಿಗಳು ‘ಬೇಡ ಸರ್ ನಾವೇ ತಂದುಕೊಳ್ಳುತ್ತೇವೆ’ ಎಂದರು ಒಕ್ಕೊರಲಿನಿಂದ.
ಹರೀಶನೆಂದ ‘ ನಾನು ಕೆಂಪು ಬಣ್ಣದ ಗಾಳಿಪಟ ಮಾಡುವೆ, ಗಿರಿ “ತಾನು ನೀಲಿ ಬಣ್ಣದ್ದನ್ನು ಮಾಡುವೆ”, ತನುಜಾ “ನಾನು ಹಳದಿ ಬಣ್ಣದ್ದನ್ನು ಮಾಡುವೆ” ಎಂದು ಪರಸ್ಪರ ಹೇಳಿಕೊಂಡರು. ಅಂತೂ ಆ ದಿನದ ಶಾಲೆ ಮುಗಿಯಿತು. ಚಂದನ್ ದಾರಿಯಲ್ಲಿ ಬರುವಾಗ ಯೋಚಿಸುತ್ತಿದ್ದ. ‘ನಾನು ಯಾವ ಬಣ್ಣದ್ದು ಮಾಡಲಿ? ಹೇಗೆ ಮಾಡಲಿ?’ ಎಂದು ಯೋಚಿಸುತ್ತಾ ಮನೆ ಕಡೆ ಹೊರಟ. ಮನೆಗೆ ಹೋದವನೇ ಲಗುಬಗೆಯಿಂದ ತಿಂಡಿ ತಿಂದು ಗಾಳಿಪಟ ತಯಾರಿಸಬೇಕೆಂದು ಸಿದ್ದನಾದ. ಕಡ್ಡಿಗಳನ್ನು ತಂದ, ದಾರ ದೊರಕಿತು. ಅಂಟೂ ಸಹ ದೊರಕಿತು. ಆದರೆ ಬಣ್ಣದ ಕಾಗದ ಬೇಕಲ್ಲ. ಅಪ್ಪನಿಗೆ ಒತ್ತಾಯಿಸಿ ಅಂತೂ ನಾಲ್ಕಾರು ಗಾಳಿಪಟ ತಯಾರಿಸುವಷ್ಟು ಬಣ್ಣದ ಕಾಗದಗಳನ್ನು ತರಿಸಿಕೊಂಡ.
ಕತ್ತಲಾಗುತ್ತಾ ಬಂತು. ಚಂದನ್ ಗಾಳಿಪಟ ಮಾಡಲು ಸಿದ್ಧತೆ ನಡೆಸಿದ್ದಾನೆ. ಅಷ್ಟೊತ್ತಿಗೆ ಅಮ್ಮ ಬಂದು ವಿಚಾರಿಸಿದಳು.’ ಏನು ಚಂದನ್, ಹೋಂ ವರ್ಕ್ ಏನೂ ಕೊಟ್ಟಿಲ್ವಾ? ಓದುವುದು ಬರೆಯುವುದು ಏನೂ ಇಲ್ಲವಾ? ‘ ಎಂದು ಕೇಳಿದಾಗ ಚಂದನ್ ‘ ಹೋಂ ವರ್ಕ ಇದೆ. ಸರ್ ಗಾಳಿಪಟ ತಯಾರಿಸಲು ಹೇಳಿದ್ದಾರೆ ಸ್ಪರ್ಧೆಯಿದೆಯಂತೆ, ಬಹುಮಾನವೂ ಇದೆಯಂತೆ” ಎಂದ. ‘ಆಂ, ಸರ್ ಗಾಳಿಪಟ ತಯಾರಿಸಲು ಹೇಳಿದ್ದಾರಾ? ಯಾವಾಗಂತೆ ಸ್ಪರ್ಧೆ?’ ಎಂದು ಪ್ರಶ್ನಿಸಿದಳು. ಆಗ ಚಂದನ್ ‘ ಅದು ಸೋಮವಾರವಂತೆ’ ಎಂದ.ಆಗ ಅಮ್ಮ ‘ಇವತ್ತು ಗಾಳಿಪಟ ಮಾಡಿ ಸಮಯ ಹಾಳು ಮಾಡುವುದು ಬೇಡ. ಹೋಮ್ ವರ್ಕ ಮೊದಲು ಮಾಡು, ಸೋಮವಾರ ಸ್ಪರ್ಧೆಯಿದೆಯೆಂದರೆ ಭಾನುವಾರ ಮಾಡಿದರಾಯ್ತು’ ಎಂದು ಗದರಿದಾಗ ಚಂದನ್ ನಿಗೆ ಬಲು ನಿರಾಸೆಯಾಯ್ತು. ಒಲ್ಲದ ಮನಸ್ಸಿನಿಂದ ಗಾಳಿಪಟದ ಸಾಮಗ್ರಿಗಳನ್ನು ಒಂದೆಡೆ ಇಟ್ಟು ಹೋಂ ವರ್ಕ ಮಾಡಿ ಮುಗಿಸಿದ. ಆಗ ಅಮ್ಮ ‘ಚಂದನ್ ಊಟಕ್ಕೆ ಬಾ’ ಎಂದು ಕರೆದಳು. ಊಟಕ್ಕೆ ಹೋದ.
ಚಂದನ್ ಊಟ ಮಾಡುವಾಗಲೂ ಅಪ್ಪನ ಜೊತೆ ಗಾಳಿಪಟದ ಕುರಿತಾಗಿಯೇ ಮಾತನಾಡುತ್ತಿದ್ದ. ಆಗ ಅಮ್ಮ ‘ ಮೊದಲು ಊಟ ಮಾಡು, ಗಾಳಿಪಟ ಅದೂ ಇದು ಎಂದು ಸಮಯ ಹಾಳು ಮಾಡಬೇಡ” ಅಂದಾಗ ಅಪ್ಪ ‘ ಇರ್ಲಿ ಬಿಡೆ , ಗಾಳಿಪಟ ಮಾಡಿ ಹಾರಿಸಬೇಕು. ತಾನೂ ಬಾಲ್ಯದಲ್ಲಿ ಗಾಳಿಪಟ ಹಾರಿಸುತ್ತಿದ್ದೆ” ಎಂದು ಅಮ್ಮನ ಗದರಿಕೆಯನ್ನು ನಿಲ್ಲಿಸಿದ.
ಚಂದನ್ ಈಗ ಬೇಗ ಊಟ ಮುಗಿಸಿ ಗಾಳಿಪಟಕ್ಕೆ ಸಿದ್ದಪಡಿಸಿಕೊಂಡ ಸಾಮಗ್ರಿಗಳನ್ನು ಅಪ್ಪ ಅಮ್ಮ ಊಟ ಮಾಡುತ್ತಿರುವ ಸಂದರ್ಭದಲ್ಲೇ ಎಲ್ಲವನ್ನೂ ನಿಧಾನವಾಗಿ ಮಾಳಿಗೆಯಲ್ಲಿರುವ ಕೋಣೆಗೆ ತೆಗೆದುಕೊಂಡು ಹೋಗಿ ಇಟ್ಟ. ಅಪ್ಪ ಅಮ್ಮ ಊಟ ಮುಗಿಸಿದರು. ಅಮ್ಮ ಒಳಗಡೆ ಕೆಲಸದಲ್ಲಿ ಮಗ್ನಳಾಗಿದ್ದಾಳೆ, ಅಪ್ಪ ಟಿ.ವಿ ಆನ್ ಮಾಡಿ ನ್ಯೂಸ್ ನೋಡುತ್ತಿದ್ದ. ಚಂದನ್ ಗೆ ತಣಿಯದ ಕುತೂಹಲ ಒಮ್ಮೆ ಗಾಳಿಪಟ ಮಾಡಿಯೇ ಮುಗಿಸಬೇಕು.ನಾಳೆ ಶಾಲೆಯಲ್ಲಿ ಎಲ್ಲರೆದುರು ತೆಗೆದುಕೊಂಡು ಹೋಗಿ ತೋರಿಸಬೇಕು, ಎನ್ನುವ ಹುಮ್ಮಸ್ಸಿನಲ್ಲಿದ್ದಾನೆ. ಆದರೆ ಅಮ್ಮ ಗದರುತ್ತಾಳೆ. ಚಂದನ್ ಈಗ ನಿಧಾನವಾಗಿ ಸಿದ್ಧಪಡಿಸಬೇಕೆಂದಿರುವ ಗಾಳಿಪಟವನ್ನು ಅವಸರದಿಂದ ಮಾಡಿ ಮುಗಿಸಿದ. ಈಗ ಚಂದನ್ ಗಿರುವ ಕುತೂಹಲ ಅದನ್ನು ಹಾರಿಸಿ ನೋಡಬೇಕು. ಅಂಟು ಒಣಗಿಲ್ಲ. ಅಂಟು ಒಣಗುವುದರೊಳಗೆ ಅಪ್ಪ ಅಮ್ಮ ಮೇಲೆ ನಿದ್ದೆ ಮಾಡಲೆಂದು ಬಂದರೆ? ಅಂತೂ ಅಂಟು ಒಣಗಿತು. ಈಗ ದಾರ ಕಟ್ಟಿ ಗಾಳಿಪಟ ಹಾರುತ್ತದೆಯೇ ಎಂದು ದಾರ ಹಿಡಿದು ಮಾಳಿಗೆಯ ಮೇಲೆ ಓಡುತ್ತಿದ್ದಾನೆ.ಗಾಳಿ ಬೇಕಲ್ಲ! ಗಾಳಿಪಟ ಹಾರಲು. ಎಷ್ಟೇ ಹಾರಿಸಿದರೂ ಅದು ತಲೆ ಅಡಿಯಾಗಿ ನೆಲಕ್ಕೆ ಹೊಸೆಯುತ್ತಿತ್ತು. ಈತನ ಓಡುವ ಸಪ್ಪಳ ಕೇಳಿ ಅಮ್ಮ ಕೆಳಗಿನಿಂದಲೇ ಗದರಿದಳು. ಅಪ್ಪ ಅಮ್ಮ ಮಾಳಿಗೆ ಏರಿ ಬರುತ್ತಿರುವದನ್ನು ಗಮನಿಸಿದ ಚಂದನ್ ಬೇಗ ಬೇಗ ಹೋಗಿ ಗಾಳಿಪಟವನ್ನು ಅಡಗಿಸಿಟ್ಟ.
ಲೈಟ್ ಆರಿಸಿ ಎಲ್ಲರೂ ನಿದ್ದಗೆ ಜಾರಿದರು.ಆದರೆ ಚಂದನ್ ನಿಗೆ ನಿದ್ದೆ ಬರುತ್ತಿಲ್ಲ.ಗಾಳಿಪಟವೇನೋ ಸಿದ್ಧವಾಯಿತು. ಆದರೆ ಹಾರುತ್ತಿಲ್ಲ. ಏನು ಮಾಡಲಿ? ಎಂದು ಚಡಪಡಿಸಿದ. ನಾಳೆ ಬೆಳಿಗ್ಗೆ ಆದ ಕೂಡಲೇ ಮನೆಯ ಹಿಂದೆ ಮೇಲಿರುವ ರಸ್ತೆಯಲ್ಲಿ ಹಾರಿಸಬೇಕು. ಎಂದೆಲ್ಲಾ ಯೋಚಿಸುತ್ತಾ ಹಾಸಿಗೆಯಲ್ಲೇ ಹೊರಳಾಡಿ ಅಂತೂ ಕೆಲ ಸಮಯದ ನಂತರ ನಿದ್ದೆಗೆ ಜಾರಿದ.
ಬೆಳಗಾಯಿತು. ಚಂದನ್ ಬೇಗನೆ ಎದ್ದ. ತನ್ನೆಲ್ಲಾ ಕೆಲಸಗಳನ್ನು ಬೇಗ ಮುಗಿಸಿಕೊಂಡ. ಆಗ ಅಮ್ಮ “ಏನು ಚಂದನ್, ಇಂದು ಶಾಲೆಗೆ ಹೋಗಲು ಅಷ್ಟೊಂದು ಅವಸರ’ ಎಂದಾಗ ‘ ಏನಿಲ್ಲ, ಏನಿಲ್ಲ’ ಎಂದು ಸಾಗ ಹಾಕಿ ಅಪ್ಪ ತೋಟಕ್ಕೆ ಹೋದ ಸಂದರ್ಭ ಅಮ್ಮ ಒಳಗಡೆ ಕೆಲಸದಲ್ಲಿರುವ ಸಂದರ್ಭ ನೋಡಿ ಅಡಗಿಸಿಟ್ಟ ಗಾಳಿಪಟವನ್ನು ತೆಗೆದುಕೊಂಡು ನೇರವಾಗಿ ಮನೆಯ ಹಿಂದಿನ ರಸ್ತೆಗೆ ಗಾಳಿಪಟ ಹಿಡಿದು ಓಡಿದ.
ಚಂದನ್ ಈಗ ಗಾಳಿಪಟದ ದಾರ ಹಿಡಿದು ಓಡಿದ. ಆದರೆ ಗಾಳಿಪಟ ಮಾತ್ರ ಮೇಲಕ್ಕೆ ಹಾರುತ್ತಿಲ್ಲ. ತಲೆ ಅಡಿಯಾಗಿ ನೆಲಕ್ಕೆ ಕುಕ್ಕುತ್ತಿದೆ. ಗಾಳಿಪಟ ಮಾತ್ರ ಏರುತ್ತಿಲ್ಲ. ಹೀಗೆ ನಾಲ್ಕಾರು ಬಾರಿ ಪ್ರಯತ್ನ ಮಾಡಿದಾಗ ಗಾಳಿಪಟ ನೆಲಕ್ಕೆ ಬಿದ್ದು ಬಿದ್ದು ಹರಿದು ಹೋಯಿತು. ಚಂದನ್ ನಿಗೆ ಈಗ ಎರಡು ರೀತಿಯಲ್ಲಿ ನಿರಾಸೆಯಾಯಿತು. ತಾನು ಮಾಡಿದ ಗಾಳಿಪಟ ಸರಿಯಾಗಲಿಲ್ಲ. ಅದನ್ನು ಸರಿ ಮಾಡೋಣವೆಂದರೆ ಹರಿದೇ ಹೋಯಿತು. ಬಲು ಬೇಸರದಿಂದ ಶಾಲೆಗೆ ಹೋದ.
ಇತ್ತ ಶಾಲೆಯಲ್ಲಿ ಉಳಿದ ವಿದ್ಯಾರ್ಥಿಗಳು ತಮ್ಮ ತಮ್ಮ ತಯಾರಿಯನ್ನು ಹೇಳಿಕೊಳ್ಳುತ್ತಿದ್ದರು. ಚಂದನ್ ನೂ ಹೇಳಿಕೊಂಡ. ಆದರೆ ಮನಸ್ಸಿಗೆ ಸಮಾಧಾನವಾಗಲಿಲ್ಲ. ಅಂತೂ ಎರಡು ಮೂರು ದಿನ ಕಳೆದು ಭಾನುವಾರ ಬಂದೇ ಹೋಯಿತು.
ಈಗ ಚಂದನ್ ನಿಗೆ ಅಂಜಿಕೆಯಿಲ್ಲ. ಹೇಗೂ ಅಮ್ಮ ‘ಭಾನುವಾರ ಮಾಡೋಣವಂತೆ’ ಹೇಳಿದ್ದಾಳೆ.ಅಪ್ಪನ ಸಮಯಾವಕಾಶ ನೋಡಿ ಮಾರ್ಗದರ್ಶನ ಪಡೆದು ಸುಂದರವಾದ ಗಾಳಿಪಟ ಸಿದ್ಧಪಡಿಸಿದ. ತಾನು ಹಿಂದೆ ಓದುತ್ತಿದ್ದ ಶಾಲೆಯ ಹಳೆಯ ಮಿತ್ರರಾದ ಗಾಯತ್ರಿ, ಅರಣ,ಆನಂದ ಇವರೆಲ್ಲರನ್ನು ಕರೆದು ‘ ಏ! ಬರ್ರೋ ನಾನು ಗಾಳಿಪಟ ಮಾಡಿದಿನಿ.ಅದನ್ನ ಈಗ ಹಾರಿಸುವ’ ಎಂದಾಗ ಎಲ್ಲಿ ಹಾರಿಸೋದು? ಇಲ್ಲೆಲ್ಲ ಮರಗಳೇ ಜಾಸ್ತಿ’ ಎಂದು ಶ್ರೀಧರ ಹೇಳಿದಾಗ ಗಾಯತ್ರಿ “ನಮ್ಮ ಶಾಲೆಯ ಅಂಗಳ ಇದೆಯಲ್ಲ. ಅಲ್ಲಿಗೆ ಹೋಗೋಣ’ ಎಂದು ಎಲ್ಲರನ್ನೂ ಕರೆದು ಶಾಲೆಯ ಅಂಗಳಕ್ಕೆ ಓಡಿದರು. ಈಗ ಚಂದನ್ ಗಾಳಿಪಟ ಹಾರಿಸುತ್ತಿದ್ದಾನೆ. ಗಾಯತ್ರಿ, ಅರುಣ, ಆನಂದ ‘ಹೋ’ ಎಂದು ಕೂಗುತ್ತಿದ್ದಾರೆ. ಅರುಣ ಹೇಳಿದ ‘ ಸಾಕೋ ಮಾರಾಯ ಹಾರಿಸಿದ್ದು. ನಾಳೆ ಸ್ಪರ್ಧೆ ಅಂತೀಯಾ, ಹಾಳಾದ್ರೆ ಹಾರೋದಿಲ್ಲ’ ಎಂದ. ‘ಇರ್ಲ ಬಿಡ, ಹಾಳಾದ್ರೆ ಮತ್ತೊಂದ ಮಾಡ್ತೆ, ಮಾಡುದು ಸುಲಭನ’ ಅಂದ. ಗಾಯತ್ರಿ ‘ನಂಗೂ ಒಂದು ಮಾಡ್ಕೊಡ ಅಂದಾಗ, ಆಯ್ತು ಯಾವ್ದೂ ಸ್ಪರ್ಧೆ ಮುಗಿಲಿ, ಎಲ್ರಿಗೂ ಮಾಡ್ಕೊಡ್ತೆ, ಮನೇಲಿ ಬಹಳಷ್ಟು ಬಣ್ಣದ ಪೇಪರ್ ಇದೆ’ ಅಂದ. ಈಗ ಚಂದನ್ ನಿಗೆ ಸ್ಪರ್ಧೆಯಲ್ಲಿ ಗೆದ್ದಷ್ಟೇ ಖುಷಿ. ಅಂತೂ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ಬಹಳ ಖುಷಿಯಿಂದ ಅಮ್ಮನ ಹತ್ತಿರ ಬಂದು ‘ ನಾ ಮಾಡಿದ ಗಾಳಿಪಟ ಚಲೋ ಹಾರ್ತದೆ’ ಎಂದ. ಆಗ ಅಮ್ಮ ‘ ಆಯ್ತು ನಾಳೆ ಶಾಲೇಲೂ ಹಾಗೆ ಹಾರಿಸು, ಹಾಳು ಮಾಡ್ಕೋ ಬೇಡ, ಈಗ ಒಂದು ಕಡೆ ಹಾಗೆ ಇಡು’ ಎಂದು ಸಮಾಧಾನದಿಂದಲೇ ಹೇಳಿದಳು.
ಈಗ ಚಂದನ್ ನಿಗೆ ಸೋಮವಾರ ಎಷ್ಟೊತ್ತಿಗೆ ಬರುವುದು ಎಂದು ತವಕದಲ್ಲೇ ಇದ್ದ. ಅಂತೂ ರಾತ್ರಿಯಾಗಿ ಬೆಳಗಾಯಿತು. ಚಂದನ್ ನ ಗುಲಾಬಿ ಬಣ್ಣದ ಗಾಳಿಪಟದೊಂದಿಗೆ ‘ಸ್ಪರ್ಧೆಯಲ್ಲಿ ಗೆದ್ದು ಬರುವೆ’ ಎನ್ನುವ ರಣೋತ್ಸಹದೊಂದಿಗೆ ಶಾಲೆಗೆ ಹೋದ. ಎಲ್ಲಾ ವಿದ್ಯಾರ್ಥಿಗಳೂ ತಮ್ಮ ತಮ್ಮ ಗಾಳಿಪಟದೊಂದಿಗೆ ಬಂದಿದ್ದರು. ಎಲ್ಲರ ಗಾಳಿಪಟವೂ ಸುಂದರವಾಗಿಯೇ ಇತ್ತು.
ವಿವೇಕ ಶಾಲೆಯ ಬೆಲ್ ಹೊಡೆದ.ಪ್ರಾರ್ಥನೆಯೂ ಮುಗಿಯಿತು. ಮಕ್ಕಳ ನಡುವೆಯೇ ಚಂದನ್ ‘ ಸರ್ ಗಾಳಿಪಟ ಹಾರಿಸುವುದು ಎಷ್ಟೊತ್ತಿಗೆ’? ಎಂದು ಸಣ್ಣ ಉಸಿರಿನೊಂದಿಗೆ ಕೇಳಿದೊಡನೆಯೇ ಎಲ್ಲಾ ವಿದ್ಯಾರ್ಥಿಗಳು’ ಸರ್ ಈಗಲೇ ಹಾರಿಸುವ ಪ್ಲೀಸ್ ಪ್ಲೀಸ್’ ಎಂದರು. ಆಗ ಮುಖ್ಯ ಶಿಕ್ಷಕರು ‘ ನಾನೂ ಅದನ್ನೇ ಹೇಳಲು ಹೊರಟಿದ್ದು, ಈಗ ಹಾರಿಸೋಣವೆಂದರೆ ಗಾಳಿ ಅಷ್ಟೊಂದಿಲ್ಲ, ಊಟದ ನಂತರ ಹಾರಿಸೋಣ’ ಎಂದಾಗ ನಿರಾಸೆಯ ಧ್ವನಿಯಲ್ಲಿ ‘ಸ…ರ್’ ಎಂದರು. ಆಗ ಉಳಿದ ಶಿಕ್ಷಕರೂ :ಹಾಗೆಯೇ ಮಾಡೋಣ ,ಊಟದ ನಂತರ ಬಿಸಿಲೇರಿರುತ್ತದೆ. ಭೂಮಿಯ ತಾಪಕ್ಕೆ ಗಾಳಿಯೂ ಜೋರಾಗಿ ಬೀಸುತ್ತದೆ’ ಎಂದು ವೈಜ್ಞಾನಿಕ ಕಾರಣವನ್ನೂ ನೀಡಿ ಮಕ್ಕಳನ್ನು ಸುಮ್ಮನಾಗಿರಿಸಿದರು. ನಂತರ ಮುಖ್ಯ ಶಿಕ್ಷಕರು ‘ ಮಕ್ಕಳೇ, ನೀವೆಲ್ಲ ಬಹಳ ಖುಷಿಯಿಂದ ಗಾಳಿಪಟ ಮಾಡಿ ತಂದಿರುತ್ತೀರಿ. ಮಧ್ಯಾಹ್ನದ ಹೊತ್ತಿಗೆ ಒಬ್ಬರಿಗೊಬ್ಬರು ಆ ಕಡೆ ಈ ಕಡೆ ಹಾರಿಸುವ ಪ್ರಯತ್ನ ಅದೂ ಇದೂ ಮಾಡಿ ಹರಿದುಕೊಂಡರೆ ಸ್ಪರ್ಧೆ ಯಶಸ್ವಿಯಾಗಲಾರದು. ಅದಕ್ಕಾಗಿ ಆ ಖಾಲಿ ಇರುವ ಕ್ಲಾಸ್ ರೂಮಿನಲ್ಲಿ ಇಟ್ಟು ಬನ್ನಿ’ ಎಂದಾಗ ವಿದ್ಯಾರ್ಥಿಗಳು ಹಾಗೆಯೇ ಮಾಡಿದರು.
ಈಗ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಸಮಯ ಎಷ್ಟೊತ್ತಿಗೆ ಬರುವುದೋ ಎನ್ನುವ ತವಕ. ಮೂರು ತಾಸು ಎನ್ನುವುದು ಮೂರು ದಿನಕಳೆದಂತೆ ಭಾಸವಾಗುತ್ತಿತ್ತು. ಅಂತೂ ವಿವೇಕ ಊಟದ ಬೆಲ್ ಬಾರಿಸಿದ. ಊಟವೂ ಅವಸರದಲ್ಲೇ ಆಯಿತು. ಈಗ ಶಿಕ್ಷಕರ ಅಣತಿಗೆ ಕೇಳುವವರಾರು? ಎಲ್ಲರೂ ಗಾಳಿಪಟ ಹಿಡಿದು ಬಯಲಿಗೆ ಓಡಿದರು. ಶಿಕ್ಷಕರೂ ಸಹ
ಬೇಗನೆ ಊಟ ಮುಗಿಸಿ ಬಯಲಿನೆಡೆ ನಡೆದರು. ಈಗ ಗಾಳಿಪಟ ಸ್ಪರ್ಧೆ ಪ್ರಾರಂಭವಾಯಿತು.
ವಿದ್ಯಾರ್ಥಿಗಳು ಅತ್ತಿಂದಿತ್ತ ಓಡುತ್ತಾ ಹಾರುತ್ತಾ, ಗಾಳಿ ಬೀಸುವುದನ್ನು ಕಾಯುತ್ತಾ ಗಾಳಿಪಟ ಹಾರಿಸುವ ಸ್ಪರ್ಧಗೆ ತಮ್ಮನ್ನು ಒಡ್ಡಿಕೊಂಡಿದ್ದರು. ರಾಘುವಿನ ಪಟ, ಹರೀಶನ ಪಟ, ಸವಿತಾಳ ಗಾಳಿಪಟ ಎಲ್ಲವೂ ಹಾರುತ್ತಿದೆ. ಚಂದನ್ ನ ಪಟವೂ ಹಾರುತ್ತಿದೆ. ಎಲ್ಲ ವಿದ್ಯಾರ್ಥಿಗಳೂ ‘ಹೋ’ ಎಂದು ಕೂಗುತ್ತಿದ್ದಾರೆ. ಶಿಕ್ಷಕಿ ಸುಮನ ರವರು ‘ . ಇದು ಹಕ್ಕಿಯಲ್ಲ, ಆದ್ರೆ ಹಾರ್ತೈತಲ್ಲ, ಇದು ಗೂಳಿಯಲ್ಲ ಆದ್ರೆ ಕೊಂಬೈತಲ್ಲ, ಬಾಲ ಇದ್ರೂನೂ ಕೋತಿಯಲ್ಲ’ ಎಂದು ಹಾಡು ಶುರು ಮಾಡಿದ್ದೇ ತಡ, ವಿದ್ಯಾರ್ಥಿಗಳು’ ಪಟ ಪಟಾ, ಗಾಳಿಪಟ’ ಎಂದು ಹಾಡನ್ನು ಮುಂದುವರಿಸಿದ್ದರು. ಮುಖ್ಯಶಿಕ್ಷಕರಾದಿಯಾಗಿ ಎಲ್ಲರೂ ಮಕ್ಕಳಂತೆ ಕುಣಿಯುತ್ತಿದ್ದರು. ಕೆಲವರ ಗಾಳಿಪಟ ಸ್ವಲ್ಪ ಎತ್ತರ ಹಾರಿ ನೆಲಕ್ಕುರುಳುತ್ತಿತ್ತು. ಕೆಲವರಿಗೆ ದಾರ ಕಮ್ಮಿಯಾಗಿ ಹಾಳಾಗಿ ಸ್ಪರ್ಧೆಯಿಂದ ನಿರ್ಗಮಿಸಿದ ಮಕ್ಕಳ ದಾರ ಕಟ್ಟಿ ಹಾರಿಸುತ್ತಿದ್ದರು. ಈಗ ಚಂದನ್ ನ ಗಾಳಿಪಟ ಮೇಲೇರಲು ಪ್ರಾರಂಭಿಸಿದೆ. ದಾರ ಕಮ್ಮಿಯಾಗುತ್ತಿದೆ. ಈತನೂ ಸಹ ಹಾಳಾದ ಗಾಳಿಪಟದ ದಾರ ಕಟ್ಟಿ ಕಟ್ಟಿ ಬಿಡುತ್ತಿದ್ದಾನೆ. ಇದುವರೆಗೆ ಹಾರಲು ತಿಣುಕಾಡುತ್ತಿದ್ದ ರಾಘುವಿನ ಗಾಳಿಪಟ ಚಂದನ್ ಗಾಳಿಪಟಕ್ಕೆ ಸಮನಾಗಿ ಹಾರುತ್ತಿದೆ. ಕುಮುದಾ ಕೇಳಿದಳು,’ ಸರ್ ಈಗ ಇಬ್ಬರ ಪಟವೂ ಎತ್ತರಕ್ಕೆ ಹಾರುತ್ತಿದೆ ಯಾರಿಗೆ ಫಸ್ಟ್ ಕೊಡುತ್ತೀರಿ? ಎಂದಾಗ ಶಿಕ್ಷಕರಿಗೂ ‘ ಹೌದಲ್ಲ, ಯಾರಿಗೆ ಕೊಡೋಣ? ಎಂದ ಮರುಪ್ರಶ್ನಿಸಿದರು. ಆಗ ಥಟ್ಟನೆ ‘ ದಾರ ಅಳೆದರಾಯ್ತು ‘ ಎಂದು ಹರೀಶ ಹೇಳಿದ. ಆಗ ಶಿಕ್ಷಕರು ‘ಹಂ’ ಅದೇ ಸರಿ ಎಂದರು. ನೋಡ ನೋಡುತ್ತಿದ್ದಂತೆಯೇ ಹದ್ದೊಂದು ಚಂದನ್ ನ ಗಾಳಿಪಟದೆಡೆ ಹಾರಿ ಬರುತ್ತಿದೆ. ಮಕ್ಕಳು ‘ ಚಂದನ ,ಕೆಳಗೆ ಎಳೆದುಕೊಳ್ಳೋ ಹದ್ದು ಕುಕ್ಕುತ್ತದೆ. ಅದ್ಕೆ ಯಾವುದೋ ಹೊಸ ಪಕ್ಷಿ ಕಂಡಾಗೆ ಕಾಣುತ್ತಿರಬಹುದು.ಅದನ್ನು ತಿನ್ನಲು ಬರುತ್ತಿರಬಹುದೆಂದು ಹೇಳಿಕೊಳ್ಳುತ್ತಿದ್ದಂತೆ ಅದು ಬಂದು ಚಂದನ್ ನ ಗಾಳಿಪಟವನ್ನು ಕುಕ್ಕಿ ಹರಿದೇ ಬಿಟ್ಟಿತು.ಅದು ಈಗ ನೆಲದೆಡೆ ಬರುತ್ತಿತ್ತು. ಇತ್ತ ರಾಘುವಿನ ಪಟ ಎತ್ತರದ ಗಾಳಿಮರದ ಟೊಂಗೆಗೆ ಸಿಕ್ಕಿಕೊಂಡಿತು. ಮತ್ತೆ ಮೇಲೇರದಾಯಿತು. ಆಗ ಧನ್ಯ ಬಂದು ‘ ಸರ್ ಈಗ ಯಾರಿಗೆ ಫಸ್ಟ್ ಕೊಡುತ್ತೀರಿ? ಎಂದು ಕೇಳಿದಾಗ ಶಿಕ್ಷಕರು ‘ ನೀವೇ ಹೇಳಿ ಯಾರಿಗೆ ಕೊಡೋಣ’ ಎಂದು ಕೇಳಿದರು. ಕೆಲವರು ‘ಚಂದನ್, ಚಂದನ್’ ಎಂದು ಕೂಗಿದರೆ ಇನ್ನು ಕೆಲವರು ‘ರಾಘು,ರಾಘು’ ಎಂದರು. ಚಂದನ್ ಮತ್ತು ರಾಘು ಬೇಸರದಿಂದ ಒಂದೆಡೆ ನಿಂತಿದ್ದರು. ಆಗ ಗುರುಗಳು ಹೇಳಿದರು. ‘ ಮಕ್ಕಳೇ ಎಲ್ಲರೂ ಚೆನ್ನಾಗಿ ಗಾಳಿಪಟ ಹಾರಿಸಿದ್ದೀರಿ. ಚಂದನ್ ಮತ್ತು ರಾಘುವಿನ ಗಾಳಿಪಟ ಉಳಿದ ನಿಮ್ಮೆಲ್ಲರಿಗಿಂತ ಎತ್ತರಕ್ಕೆ ಹಾರಿದೆ. ಆದರೆ ಅವರದಲ್ಲದ ಕಾರಣಕ್ಕೆ ಇನ್ನೂ ಎತ್ತರಕ್ಕೆ ಹಾರಿಲ್ಲ. ಅದಕ್ಕಾಗಿ ಇಬ್ಬರಿಗೂ ಪ್ರಥಮ ಸ್ಥಾನ ನೀಡಿದರೆ ಹೇಗೆ? ‘ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಪ್ರಶ್ನಿಸಿದರು. ಆಗ ವಿದ್ಯಾರ್ಥಿಗಳು’ ಹಾಗೇ ಮಾಡಿ ಸರ್’ಎಂದು ಕೂಗಿದರು. ಹಾಗೆಯೇ ಮಾಡೋಣ ಎಂದಾಗ ಚಂದನ್ ಮತ್ತು ರಾಘು ಕುಣಿದು ಕುಪ್ಪಳಿಸಿದರು.
ಅಂತೂ ಚಂದನ್ ಹೊಸ ಶಾಲೆಯಲ್ಲಿ ಅದರಲ್ಲೂ ಪ್ರಥಮ ಸ್ಪರ್ಧೆಯಲ್ಲಿ ಗೆದ್ದು ಬೀಗಿದ. ಶಾಲೆಯೆಂದರೆ ಈಗ ಚಂದನ್ ನಿಗೆ ಅಚ್ಚುಮೆಚ್ಚಿನ ತಾಣವಾಗಿತ್ತು. ಓದಿನಲ್ಲಿ, ಎಲ್ಲಾ ಸ್ಪರ್ಧೆಯಲ್ಲೂ ಚಂದನ್ ಭಾಗವಹಿಸುತ್ತಿದ್ದ. ಶಿಕ್ಷಕರಿಗೆ ಮಕ್ಕಳ ಮುಖದಲ್ಲಿಯ ಸಂತಸ ಕಂಡು ಬಹಳ ಸಂತಸವಾಗಿತ್ತು.
ಜಿ.ಎಸ್.ಹೆಗಡೆ
ತುಂಬಾ ಸುಂದರವಾದ ಕಥೆ. ಧನ್ಯವಾದಗಳು!
ತುಂಬಾ ಚೆನ್ನಾಗಿದೆ ಸರ್
ಧನ್ಯವಾದಗಳು ಸರ್
ಧನ್ಯವಾದಗಳು