‘ಜೀವದ ಉಗಿಬಂಡಿ.!’ ಎ.ಎನ್.ರಮೇಶ್.ಗುಬ್ಬಿ.

ಕಬ್ಬಿಣದ ಹಳಿಗಳ ಮೇಲೆ
ಚಲಿಸುವ ಉಗಿಬಂಡಿಗೆ
ನಿಖರವಾದ ದಿಕ್ಕುಂಟು
ನಿಗದಿತ ತಂಗುದಾಣಗಳುಂಟು
ನಿಶ್ಚಿತ ನಿಲ್ಧಾಣಗಳುಂಟು.!
ಸಕಲವೂ ಸತ್ಯ ವೇದ್ಯ.!

ಕಾಲದ ಹಳಿಗಳ ಮೇಲೆ
ಸಾಗುವ ಜೀವದ ಬಂಡಿಗೆ
ನಿಖರ ದಿಕ್ಕು ದಾರಿಯೆಲ್ಲುಂಟು?
ನಿಗದಿತ ತಾಣಗಳೆಲ್ಲುಂಟು?
ನಿಶ್ಚಿತ ಗುರಿ-ಗಮ್ಯಗಳೆಲ್ಲುಂಟು?
ಸಮಸ್ತವೂ ನಿತ್ಯ ಅಭೇದ್ಯ.!

ಒಳಗಣ ಆತ್ಮನೇ ಚಾಲಕ
ಭಾವಾನುಭಾವಗಳೆ ಪ್ರಯಾಣಿಕ
ಅಜ್ಞಾತ ವಿಧಿಯೇ ಸೂಚಕ
ಅದೃಶ್ಯ ವಿಧಾತನೇ ಸಂಯೋಜಕ
ಅವನೇ ಕಾಲ ನಿರ್ಧಾರಕ
ಅವನೇ ಬಾಳ ಬೆಳಕ ಸಂಚಾಲಕ.!

ಬರಿಯ ಸದ್ದಷ್ಟೆ ನಮದು
ಹದ್ದು ಸರಹದ್ದುಗಳೆಲ್ಲ ಅವನದು
ಕೇವಲ ಓಟವಷ್ಟೆ ನಮದು
ಗತಿ ವೇಗ ಆಟವೆಲ್ಲವೂ ಅವನದು
ತಾಂತ್ರಿಕ ನಿಯಂತ್ರಕ ನಿರ್ವಾಹಕ
ಸರ್ವವು ಅವನೆ, ಅವನದೇ ಜಾದು.!

ಅವನದೇ ಈ ಜೀವದ ಬಂಡಿ
ಅವನಿಂದಲೇ ಭಾವದಾಂಗುಡಿ
ಅವನಿಟ್ಟ ಉಸಿರಿನ ಉಗಿಬಂಡಿ
ನಿತ್ಯ ಕ್ಷಣ ಕ್ಷಣವೂ ಅಡಿಗಡಿಗೂ
ಏನೆಲ್ಲಾ ಅನೂಹ್ಯಗಳ ಮೋಡಿ
ಎಷ್ಟೆಲ್ಲಾ ಸತ್ಯಾಸತ್ಯಗಳ ಗಾರುಡಿ.!


ಎ.ಎನ್.ರಮೇಶ್.ಗುಬ್ಬಿ.

Leave a Reply

Back To Top