ಸಂಬಂಧಗಳು ಹಳಸದಿರಲಿ!ಲೇಖನ-ನಾಗಪ್ಪ ಸಿ ಬಡ್ಡಿ

ಸಾಮಾನ್ಯವಾಗಿ ಪರಸ್ಪರ ಸಂಬಂಧಗಳು ಚನ್ನಾಗಿರಬೇಕು. ಅಂದರೆ ತಂದೆ ತಾಯಿಯ-ಮಕ್ಕಳ ಸಂಬಂಧ, ಅಣ್ಣ–ತಮ್ಮಂದಿರ, ಅಕ್ಕ–ತಂಗಿಯರ, ಬಂಧು-ಬಳಗದವರ, ಸ್ನೇಹಿತರ, ಮನೆಯ ಅಕ್ಕಪಕ್ಕದವರೊಡನೆ ಸಂಬಂಧಗಳು ಚನ್ನಾಗಿದ್ದರೆ ನಾವು ಸಂತೋಷವಾಗಿದ್ದೇವೆ ಎಂದೇ ಅರ್ಥ.

ಒಂದು ವೇಳೆ ಯಾವುದೊ ವಿಷಯಕ್ಕೆ ಈ ಸಂಬಂಧಗಳ ಮಧ್ಯ ಸ್ವಲ್ಪ ವ್ಯತ್ಯಾಸವಾದಲ್ಲಿ ಪರಸ್ಪರ ಸಂಬಂಧಗಳು ಹಳಸಲಿಕ್ಕೆ ಆರಂಭವಾಗುತ್ತವೆ. ನಾನು ಅಷ್ಟೆ ಒಳ್ಳೆಯವನು/ಳು ಇತರರು ಕೆಟ್ಟವರು ಎಂಬ ಭಾವನೆ ನಮ್ಮಲ್ಲಿದ್ದರೆ, ನಮ್ಮ ತಪ್ಪುಗಳು ಗೊತ್ತಾಗುವುದಿಲ್ಲ. ಆಗ ಪರಸ್ಪರ ಸಂಬಂಧಗಳಲ್ಲಿ ಪ್ರೀತಿ, ವಿಶ್ವಾಸವಿರುವುದಿಲ್ಲ. ಹಾಗಾಗಿ ಯಾರಾದರೂ ನಮ್ಮ ತಪ್ಪುಗಳನ್ನು ಗುರುತಿಸಿ ತಿಳಿಸಿದಾಗ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ತಪ್ಪು ತಿದ್ದಿಕೊಂಡಾಗ ನಮ್ಮ ಸಂಬಂಧಗಳು ಮತ್ತಷ್ಟು ಬೆಳೆಯುತ್ತವೆ. ಹಾಗೆನೆ ಇನ್ನೊಬ್ಬರು ತಪ್ಪು ಮಾಡಿದಾಗ ಆ ತಪ್ಪುಗಳನ್ನು ಮನ್ನಿಸಿ ಅವರ ಒಳ್ಳೆಯ ಗುಣಗಳನ್ನು ನೋಡಿ ಮುನ್ನೆಡೆದಾಗ ಸಂಬಂಧಗಳು ಗಟ್ಟಿಯಾಗುತ್ತವೆ.

ಒಂದು ಊರಲ್ಲಿ ಇಬ್ಬರು ಸ್ನೇಹಿತರಿದ್ದರು. ಒಮ್ಮೆ ಅವರು ಮರಳುಗಾಡಿನಲ್ಲಿ ನಡೆಯುತ್ತಿರುವಾಗ ಪರಸ್ಪರ ವಾದ ಉಂಟಾಗಿ ಒಬ್ಬನು ಇನ್ನೊಬ್ಬನ ಕೆನ್ನೆಗೆ ಹೊಡೆಯುತ್ತಾನೆ. ಆಗ ಹೊಡೆಸಿಕೊಂಡ ಸ್ನೇಹಿತನಿಗೆ ಬಹಳ ದು:ಖವಾಗಿ ಮರಳಿನ ಮೇಲೆ ಹೀಗೆ ಬರೆಯುತ್ತಾನೆ. “ಇಂದು ನನ್ನ ಸ್ನೇಹಿತ ನನ್ನ ಕೆನ್ನೆಗೆ ಹೊಡೆದಿದ್ದಾನೆ. ಇದು ಎಂದಿಗೂ ನನಗೆ ನೆನಪಿಗೆ ಬಾರದಿರಲಿ” ಎಂದು ಬರೆದು ಪ್ರಯಾಣ ಮುಂದುವರೆಸುತ್ತಾರೆ. ಮುಂದೆ ಹೋದಂತೆ ಒಂದು ಓಯಾಸಿಸ್ ಬರುತ್ತೆ, ಅಲ್ಲಿಯೇ ಸ್ನಾನ ಮಾಡಲು ಕೆನ್ನೆಗೆ ಹೊಡೆಸಿಕೊಂಡವನು ನೀರಿಗಿಳಿಯುತ್ತಾನೆ. ಆದರೆ ಆತ ಅಲ್ಲಿಯ ಕೆಸರಿನಲ್ಲಿ ಸಿಕ್ಕಿಕೊಂಡು ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದನು. ಅದನ್ನು ಗಮನಿಸಿದ ಅವನ ಸ್ನೇಹಿತ ಇತನನ್ನು ಪ್ರಾಣಾಪಾಯದಿಂದ ಪಾರು ಮಾಡಿದ. ಆಗ ಪ್ರಾಣ ಉಳಿಸಿಕೊಂಡ ವ್ಯಕ್ತಿ ಇದನ್ನು ಅಲ್ಲಿದ್ದ ಕಲ್ಲಿನ ಮೇಲೆ ಹೀಗೆ ಬರೆದನಂತೆ “ಈ ದಿನ ನನ್ನ ಸ್ನೇಹಿತ ನನ್ನ ಪ್ರಾಣ ಉಳಿಸಿದ ಈ ದಿನ ನನಗೆ ಎಂದೂ ಮರೆಯದೇ ಇರಲಿ”.

ಇದನ್ನೆಲ್ಲ ನೋಡಿದ್ದ ಆತನ ಸ್ನೇಹಿತ “ನಾನು ಸಿಟ್ಟಿನಲ್ಲಿ ನಿನ್ನ ಕೆನ್ನೆಗೆ ಹೊಡೆದಾಗ ಅದನ್ನು ಮರಳಿನ ಮೇಲೆ ಬರೆದೆ, ಆದರೆ ಈಗ ಕಲ್ಲಿನ ಮೇಲೆ ಬರೆಯುತ್ತಿದ್ದುದು ಏಕೆ?” ಎಂದು ಪ್ರಶ್ನೆಸುತ್ತಾನೆ. ಆಗ, ಯಾರಾದರೂ ನಮಗೆ ನೋವುಂಟು ಮಾಡಿದಾಗ ಅದನ್ನು ಮರಳಿನ ಮೇಲೆ ಬರೆಯಬೇಕು. ಅಂದರೆ ಕ್ಷಮೆಯ ಗಾಳಿ ಎಲ್ಲ ನೋವನ್ನು ಅಳಿಸಿ ಬಿಡುತ್ತದೆ. ಹಾಗೆನೇ ಯಾರಾದರೂ ನಮಗೆ ಒಳಿತನ್ನು ಮಾಡಿದಾಗ ಅದನ್ನು ಕಲ್ಲಿನ ಮೇಲೆ ಕೆತ್ತಿದಂತೆ ಮನಸ್ಸಿನ ಮೇಲೆ ಬರೆದುಕೊಳ್ಳಬೇಕು. ಜೀವನದಲ್ಲಿ ಎಂದಿಗೂ ಅದನ್ನು ಮರೆಯಬಾರದು”. ಎನ್ನುತ್ತಾನೆ. ಹೀಗಿದ್ದರೆ ಮಾತ್ರ ಸಂಬಂಧಗಳು ಗಟ್ಟಿಯಾಗುತ್ತವೆ.

ನಮ್ಮ ಜೀವನದಲ್ಲಿಯೂ ಸಹ ಅತ್ಯಂತ ಪ್ರೀತಿ ಪಾತ್ರರು, ಮನೆಯವರು, ಸ್ನೇಹಿತರು ಯಾವುದೋ ಸಿಟ್ಟಿನಲ್ಲಿ ಗೊತ್ತಿಲ್ಲದೆ ನೋವುಂಟು ಮಾಡುತ್ತಾರೆ. ಆದರೆ ಆ ಸಂಬಂಧಕ್ಕೆ ಹೆಚ್ಚು ಮೌಲ್ಯ ನೀಡಿದರೆ ಆ ನೋವನ್ನು ಅಲ್ಲಿಯೇ ಮರೆತು ಮುಂದೆ ಸಾಗಿದಾಗ ಸಂಬಂಧಗಳು ಹಳಸುವುದಿಲ್ಲ. ಸಂಬಂಧಗಳು ನಿಂತಿರುವುದು ಪ್ರೀತಿ-ಕ್ಷೆಮೆಯ ಮೇಲೆಯೇ. ಇಂದು ಕ್ಷಮಿಸಿದರೆ ಮಾತ್ರ ನಾಳೆಯ ಪ್ರೀತಿಯ ಕ್ಷಣಗಳು ನಮ್ಮವಾಗುತ್ತವೆ.

ಸಂಬಂಧಗಳು ಉತ್ತಮವಾಗಿರಲು ಮಾತನಾಡುವಾಗ ಎಚ್ಚರಕೆಯಿಂದ ಮಾತನಾಡಬೇಕು. ಮಾತುಗಳು ಹಿತ-ಮಿತದಲ್ಲಿರಬೇಕು. ಮಾತನಾಡುವಾಗ ನಮ್ಮ ಮಾತುಗಳು ವಯಸ್ಸಿಗಣುಗುಣವಾಗಿರಬೇಕು. ನಮ್ಮ ನಡೆ-ನುಡಿ ಒಂದಾಗಿರಬೇಕು. ನಮ್ಮ ಮಾತುಗಳು ಪರಸ್ಪರ ಸಂಬಂಧಗಳನ್ನು ಬೆಸೆಯುವಂತಿರಬೇಕೆ ಹೊರತು ಮುರಿಯುವಂತಿರಬಾರದು. ನಮಗೆ ಕೆಟ್ಟದ್ದನ್ನು ಬಯಸಿದವರಿಗೂ ಒಳ್ಳೆಯದು ಆಗಲಿ ಎಂದು ಬಯಸಬೇಕು. ಅಂದಾಗ ನಮ್ಮ ಸಂಬಂಧಗಳು ಉತ್ತಮಗೊಳ್ಳುತ್ತವೆ. ಆಗ ಯಾವ ಸಂಬಂಧಗಳು ಹಳಸುವುದಿಲ್ಲ.


ನಾಗಪ್ಪ ಸಿ ಬಡ್ಡಿ


One thought on “ಸಂಬಂಧಗಳು ಹಳಸದಿರಲಿ!ಲೇಖನ-ನಾಗಪ್ಪ ಸಿ ಬಡ್ಡಿ

Leave a Reply

Back To Top