ವೈ.ಎಂ.ಯಾಕೊಳ್ಳಿ ಅವರ ಕವಿತೆ-‘ಸಂಜೆಯಾದ ಮೇಲೆ ಸೂರ್ಯನದೂ ಮರೆವು’

ಹಳೆಯ ವಸ್ತುಗಳನು
ಯಾರು ಜನ ಬರುವ ಜಾಗದಲ್ಲಿ ಇಡುತ್ತಾರೆ
ಅವು ತಮ್ಮ ಕಾರ್ಯ ಮತ್ತು ಅವಧಿ
ಎರಡೂ ಮುಗಿಸಿರುತ್ತವೆ.
ಮತ್ತು ಮನೆಯ ಮೂಲೆ ಸೇರಿರುತ್ತವೆ.

ಯಾರು‌ ನೆನಪಿಡುತ್ತಾರೆ ನಮ್ಮ‌ಕಾಲಿಗೆ
ಒಂದಿನಿತೂ ಮುಳ್ಳು ಚುಚ್ಚದಂತೆ
ಕಲ್ಲೂ ಒತ್ತದಂತೆ ಕಾಪಾಡಿದ
ಪಾದರಕ್ಷೆಗಳ
ಕಿತ್ತಿತೆಂದೋ, ಉಂಗುಟ ಹರಿಯಿತೆಂದೊ
ಸವೆಯಿತೆಂದೋ ಎಸೆಯುತ್ತಾರೆ
ಕಸದ ಬುಟ್ಟಿಗೆ

ಇರುವಷ್ಟು ದಿನ ನಿಮ್ಮ ಮ ನೆಯ
ಅಂದಗೊಳಿಸಿ
ಬಂದವರ ಮುಂದೆ ಚಂದಾಗಾಣಿಸಿ .
ಕೈ ಹಾಕಿದಾಗೆಲ್ಲ ಕೈಗೆ ಸಿಕ್ಕಿ
ಒಗೆದರೂ ತುಳಿದರೂ ಏನೆನ್ನದೆ
ಉಳಿದ ಕಸಬರಿಗೆ
ಮೊಂಡಾದ ಮೇಲೆ ಮನೆಯಲಿ
ಯಾರು ಇರಿಸಿಕೊಳ್ಳುತ್ತಾರೆ
ಹೇಳಿ?

ಹರಿದ ಅರಿವೆಗೋ, ಹಳೆಯ ಚಾದರಕೊ
ಅಷ್ಟೇ ಗೌರವ!
ಅವು ಹಳೆಯದಾದ ಮೇಲೆ!!
ಮನೆಯ ಒರೆಸಲೊ.
ಒಲೆಯ ಮುಂದೆ ಮಸಿ ಅರಿವೆಯಾಗಿಯೋ
ಮೂಲೆ ಸೇರುವದೆ ಕೆಲಸ

ವಸ್ತುಗಳ ಮಾತು ಇರಲಿ,
ಈಗಿಗ ಮನುಷ್ಯರಿಗೂ ಸಂಬಂಧಗಳಿಗೂ
ಅದೇ ಪಾಳಿ!
ತಮ್ಮ ಅವಧಿ‌ ಮುಗಿದ‌ ಮೇಲೆ!!


3 thoughts on “ವೈ.ಎಂ.ಯಾಕೊಳ್ಳಿ ಅವರ ಕವಿತೆ-‘ಸಂಜೆಯಾದ ಮೇಲೆ ಸೂರ್ಯನದೂ ಮರೆವು’

  1. ಅರ್ಥಪೂರ್ಣ ಕವಿತೆ ಸರ್

    ಶುಭಲಕ್ಷ್ಮಿ ನಾಯಕ್

Leave a Reply

Back To Top