ಪುಸ್ತಕ ಸಂಗಾತಿ
ವಾಣಿ ಭಂಡಾರಿ
ಶಿವಾನಂದ ಕೆಳಗಿನಮನಿ
ಅವರ ಕೃತಿ ಒಂದು ಅವಲೋಕನ
‘ಸಾಹಿತ್ಯ ಸಿಂಚನ’
ಕೃತಿ:ಸಾಹಿತ್ಯ ಸಿಂಚನ
ಲೇಖಕರು:ಶಿವಾನಂದ ಕೆಳಗಿನಮನಿ
(ಕುವೆಂಪು ವಿ.ವಿ.ಕನ್ನಡ ಭಾರತಿ)
ವರ್ಷ:2024
ಪ್ರಕಾಶನ:ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
ಬೆಲೆ:250
“ಸಾಹಿತ್ಯ ಸಿಂಚನದಲ್ಲೊಂದು ಚಿಂತನ”
ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಬಹುಮುಖ್ಯವಾಗಿ ಗುರುತಿಸಿಬಹುದಾದ ಹಾಗೂ ಎಲೆ ಮರೆಕಾಯಂತಿರುವ ವಿದ್ವಾಂಸರಾದ, ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಯ ನಿರ್ದೇಶಕರಾಗಿರುವ “ಶಿವಾನಂದ ಕೆಳಗಿನಮನಿ” ಯವರು ವಿದ್ವತ್ಪೂರ್ಣ ಪಾಂಡಿತ್ಯ ಹೊಂದಿದ ಬಹುಮುಖ ಪ್ರತಿಭೆ.ಎಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡಿದವರು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳು ಹಾಗೂ ಸಹೃದಯಶೀಲ ಔದಾರ್ಯ ಹೃದಯದ ನಿರ್ಗವಿ. ಬಹುಮುಖ ಪ್ರತಿಭೆ ಎಂದಾಕ್ಷಣ ಸಹಜವಾಗಿ ಕುತೂಹಲ ಕೆರಳುವುದು ಅಸಹಜವೇನಲ್ಲ.ಕವಿಯಾಗಿ ಲೇಖಕರಾಗಿ, ವಿಮರ್ಶಕರು, ಸಂಶೋದಕರು, ಸಂಪಾದನಾ ಕ್ಷೇತ್ರಕ್ಕೂ ತಮ್ಮ ಹರವನ್ನು ಚಾಚಿಕೊಂಡಿರುವ ಕೆಳಗಿನಮನಿಯವರು ವಚನ ಸಾಹಿತ್ಯ ಜನಪದ,ಭಾಷಾಶಾಸ್ತ್ರ,ಮೀಮಾಂಶೆಯಲ್ಲೂ ವಿಶೇಷವಾಗಿ ತಮ್ಮನ್ನು ತೊಡಗಿಸಿಕೊಂಡ ಸೃಜನಶೀಲ ಚಿಂತಕರು. ೨೦೧೧ ರಲ್ಲಿ ಪ್ರಕಟಗೊಂಡ “ಉಮ್ಮಳದ ಕವಿತೆ” ಗಳಿಗೂ ಹಾಗೂ ೨೦೧೪ ರಲ್ಲಿ ಪ್ರಕಟವಾದ “ಮನಸಿಜನ ಮಾಯೆ” ಕವನ ಸಂಕಲನಕ್ಕೂ ಸಾಮ್ಯತೆ ಇಲ್ಲದಿರುವ ಬಗ್ಗೆ ಅವಲೋಕಿಸಿದಾಗ ಪ್ರೀತಿಯನ್ನು ಪ್ರೀತಿಗಾಗಿ ಪ್ರೀತಿಗೊಸ್ಕರ ಪ್ರೇಮಿಸುವ ಪ್ರೀತಿಯನ್ನು ತಾತ್ವಿಕ ನೆಲೆಯಲ್ಲಿ ಫಿಲಾಸಫಿಕಲ್ ಆಗಿ ಪ್ರೀತಿಗೆ ಒಂದು ಭಾಷ್ಯ ಬರೆದಂತೆ ಮನಸಿಜನ ಮಾಯೆ ಸಂಕಲನದಲ್ಲಿ ವ್ಯಕ್ತಗೊಳಿಸುತ್ತಾ ಪ್ರೇಮವನ್ನು ದೈವಿಕ ಮೂಲ ಸ್ವರೂಪದಲ್ಲಿ ಕಾಣುವ ಈ ನೆಲೆಗಟ್ಟಿನಲ್ಲಿ ಅವರು ನೋಡುವ ಕ್ರಮ ನಿಜಕ್ಕೂ ಹೊಸದಾದ ಆಯಾಮವನ್ನು ಓದುಗರಿಗೆ ತೆರೆದಿಡುತ್ತದೆ. ಹಲವಾರು ಪ್ರಶಸ್ತಿಗಳಿಗೂ ಭಾಜನರಾದ ಅವರ, ಬಹುಮುಖ್ಯವಾದ ಹಲವು ಕೃತಿಗಳನ್ನು ಹೆಸರಿಸಲು ಜಾಗದ ಕೊರತೆಯಿಂದ ಕೆಲವಷ್ಟನ್ನೆ ಇಲ್ಲಿ ಸ್ಮರಿಸುವೆ.
“ಮಾದರ ಚೆನ್ನಯ್ಯ ಬಹುಮುಖಿ ಅದ್ಯಯನ”, “ಬೈರರ ಸಂಸ್ಕೃತಿಯಲ್ಲಿ ಮಹಿಳೆ”, “ಮಾದಿಗ ಲಿಂಗಾಯಿತ”, “ ಮಾತಂಗಿ ಸಂಸ್ಕೃತಿ”,” ಬೌದ್ದ ಮಾನವಿಕ ಸಂಪುಟ”, ಶೋಧ ಪರಂಪರೆ “, “ಕನಕದಾಸರ ಕೀರ್ತನೆಗಳಲ್ಲಿ ; ಸಾಂಸ್ಕೃತಿಕ ಅನನ್ಯತೆ “, ಇತ್ಯಾದಿ ಸಂಶೋಧನೆಗಳಿಗೆ ಸಂಬಂಧಿಸಿದರೆ,, “ವಚನ ಸಾಹಿತ್ಯ”, “ಆಶಯ ಅಭಿವ್ಯಕ್ತಿ “, “ಸಾಹಿತ್ಯ ಸಂಸ್ಕೃತಿ ಮುಖಾಮುಖಿ”, “ಸಾಹಿತ್ಯ ಸಮಷ್ಟಿ “, “ವಚನ ಸಮಷ್ಟಿ”, “ ಸಾಹಿತ್ಯ ಸಂವೇದನೆ”, “ಸಾಹಿತ್ಯ ಮತ್ತು ಪ್ರತಿರೂಪ”, ಇಂತಹ ಹಲವು ವಿಮರ್ಶಾ ಕೃತಿಗಳು ಹೊರಬಂದಿವೆ. ಜೊತೆಗೆ ಅಂಬೇಡ್ಕರ್:ಸಂಸ್ಕೃತಿ ಚಿಂತನೆ “, “ ವರ್ತಮಾನ ಶೋಧ”, “ ವಚನ ಸಾಹಿತ್ಯ ಬಹುಸಂಸ್ಕ್ರತಿ”, ಈ ರೀತಿಯಾದ ಭಿನ್ನ ಭಿನ್ನ ಚಿಂತನೆಯುಳ್ಳ ವೈಚಾರಿಕ ಕೃತಿಗಳು ಸಹ ಕನ್ನಡ ಲೋಕಕ್ಕೆ ನೀಡಿರುವುದು ಕನ್ನಡ ಪರಿಚಾರಕರಾದ ನಾವೆಲ್ಲ ಗಮನಿಸಬೇಕಾದ ಅಂಶ. ಇದರ ಜೊತೆಗೆ ಹಲವು ಪಂಥಗಳ ಕುರಿತು ವಿಶೇಷ ಅಧ್ಯಯನ ಮಾಡುತ್ತಾ ಆ ನಿಟ್ಟಿನಲ್ಲಿ ಮತ್ತಷ್ಟು ಪಂಥಗಳ ಮೇಲೆ ಬೆಳಕು ಚೆಲ್ಲುವತ್ತಾ ನಿರಂತರ ಅಧ್ಯಯನಶೀಲರಾಗಿರುವುದು ಅವರ ಸೃಜನಶೀಲ ಧೀಶಕ್ತಿ ಎಂದೆ ಉಲ್ಲೇಖಿಸುತ್ತಾ ಈ ಹಿನ್ನೆಲೆಯಲ್ಲಿ ಅವರ ಜನುಮ ದಿನಕ್ಕೆ ಶುಭಾಶಯಗಳನ್ನು ಸಹ ಕೋರುತ್ತಾ,,,
೨೦೨೪ ರಲ್ಲಿ ಪ್ರಕಟಗೊಂಡ ಇವರ “ಸಾಹಿತ್ಯ ಸಿಂಚನ” ಕೃತಿಯು ಹಲವಾರು ವಸ್ತುವಿಷಯಗಳನ್ನು ಅಡಕವಾಗಿಸಿರಿಕೊಂಡು ಸಹೃದಯರೆದುರಿನಲ್ಲಿ ನಿಂತಿದೆ. ಈ ಕೃತಿಯಲ್ಲಿ ಸುಮಾರು ಹದಿನಾರು ಭಿನ್ನ ಭಿನ್ನ ಚಿಂತನೆಯಲ್ಲಿ ಒಡಮೂಡಿದಂತಹ ಲೇಖನಗಳನ್ನೊಳಗೊಂಡ ವೈಚಾರಿಕ ಪೂರಿತ ಬರಹಗಳು ಕಂಡುಬರುತ್ತವೆ.ನಾನಿಲ್ಲಿ ಅವರ ಪುಸ್ತಕದ ಬಗ್ಗೆ ವಿಮರ್ಶೆಯನ್ನು ಮಾಡುವುದಿಲ್ಲ ಕೇವಲ “ಸಾಹಿತ್ಯ ಸಿಂಚನ” ಪುಸ್ತಕದ ಒಳಗಿರುವ ಅಂಶಗಳತ್ತ ಕಿರುನೋಟವನ್ನಷ್ಟೆ ಬೀರಿ ಇಲ್ಲಿ ದಾಖಲಿಸುವೆ.
ಈ ಪುಸ್ತಕದ ಮೊದಲ ಲೇಖನದಲ್ಲಿ
೧- “ಡಾ. ಎಂ.ಎಂ ಕಲಬುರ್ಗಿಯವರ ಮಾರ್ಗ ನಾಲ್ಕು: ಸಬಾಲ್ಟ್ರನ್ ಗ್ರಹಿಕೆ”.
ಬಹುಶಃ “ಸಬಾಲ್ಟ್ರನ್” ಪರಿಕಲ್ಪನೆ ಬಗ್ಗೆ ಇವರ ಇನ್ನೊಂದು ಪುಸ್ತಕದಲ್ಲಿ “ದಲಿತ ಸಂಸ್ಕೃತಿ ಚಿಂತನೆ” ಯಲ್ಲಿ ಬಹಳ ಆಳವಾಗಿ ನಿರೂಪಿಸಿರುತ್ತಾರೆ. ಸಬಾಲ್ಟ್ರನ್ ಎಂದರೆ “ಕೆಳಸ್ತರ” ಎಂಬಲ್ಲಿಂದಿಡಿದು ಗ್ರಾಮ್ಷಿಯ ಸಾಂಸ್ಕೃತಿಕ ಯಾಜಮಾನ್ಯದ ಸಂಪೂರ್ಣ ಮಾಹಿತಿ ನಮಗೆ ದಲಿತ ಸಂಸ್ಕೃತಿ ಚಿಂತನೆಯಲ್ಲಿ ದಕ್ಕುತ್ತದೆ. ಆದರೆ ಕಲಬುರ್ಗಿಯವರ ಮಾರ್ಗದಲ್ಲಿ ಸಬಾಲ್ಟ್ರನ್ ಗ್ರಹಿಕೆಯನ್ನು ಕಲಬುರ್ಗಿಯವರು ಭಾರತೀಯ ಸಂದರ್ಭದ ಸೈದ್ದಾಂತಿಕತೆಗೆ ಪ್ರಖರತೆಯನ್ನು ನೀಡಿದ ಅದ್ಯಯನಕಾರರ ಒಪ್ಪಿತ ಚರಿತ್ರೆಯಲ್ಲಿ “ಎಲಿಟಿಸಂ” ಹುಟ್ಟುಹಾಕಿದ ಆಶಯ, ಹಾಗೂ ಸಾಹಿತ್ಯ ತತ್ವಕೆ ಸಮಷ್ಟಿಯ ತಿಳಿವಳಿಕೆ ಬೇಕು,ಮತ್ತು ಸಂಸ್ಕೃತ ಯಾಜಮಾನ್ಯ, ದೃಶ್ಯ ಶ್ರವ್ಯ ಸಾಹಿತ್ಯ, ಪ್ರಾಚೀನ ಸಾಹಿತ್ಯ ಕೇವಲ ಸಾಹಿತ್ಯವಾಗಿರದೆ ಸರ್ವತೋಮುಖ ನೆಲೆಯ ಬಗ್ಗೆ,ಉಪೇಕ್ಷಿತ ಸಾಹಿತ್ಯದ ಪರಿಕರ, ಮಾರ್ಗ ಪರಂಪರೆಯ ಚಿತ್ರಣ ಕೆಳವರ್ಗದ ಸಾಂಸ್ಕೃತಿಕ ಚಿತ್ರಣ,ಉದಾಹರಣೆ ಸಹಿತ ಹರಿಶ್ಚಂದ್ರ ಕಾವ್ಯದ ಉಲ್ಲೇಖ,ವಚನಕಾರರ ಜಾತಿ ವಿನಾಶದ ಒಂದು ತತ್ವ ಇಂತಹ ಹಲವು ವಿಚಾರಗಳನ್ನು ಅಡಕವಾಗಿಸಿದ ಕಲಬುರ್ಗಿಯವರ ಚಿಂತನೆಯನ್ನು ಕೆಳಗಿನಮನಿಯವರು ಕೆಳಸ್ತರದ ಅಧ್ಯಯನಕ್ಕೆ ಒಳಗು ಮಾಡಿ ವಿವೇಚನೆಗೊಳಪಡಿಸಿದ್ದಾರೆ.
೨- “ಕರ್ನಾಟಕದಲ್ಲಿ ಧಾರ್ಮಿಕ ಸಂಘರ್ಷ ಕೃತಿ ನೋಟ”
ಎಂಬ ಲೇಖನದಲ್ಲಿ ರಾಥೋಡ ಅವರ ಕೃತಿಯಲ್ಲಿ ಕಾಣುವ ಧಾರ್ಮಿಕ ಸಂಘರ್ಷದ ಒಳನೋಟಗಳನ್ನು ಬಿರುತ್ತಾರೆ. ಬದಲಾಗುತ್ತಿರುವ ಜಾಯಮಾನ ಸಮಾಕಾಲೀನ ಚಿತ್ರಣಕ್ಕೆ ಸನ್ನಿವೇಶಗಳು ಸಮುದಾಯಗಳು ಸಂಘರ್ಷದ ನೆಲೆಯೊಳಗಿನ ಚಿಂತನೆಗಳು ವರ್ತಮಾನಗಳು ಹೇಗೆ ಭಿನ್ನ ಆಯಾಮ ಪಡೆದ ರೀತಿಗಳ ವಸ್ತು ಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ.
೩-”ರಾಮಧಾನ್ಯ ಚರಿತೆ ಕನ್ನಡ ಮನಸಿನ ಒಂದು ಪ್ರಾತಿನಿಧಿಕ ಮಾದರಿ”
ಕನಕದಾಸರ ರಾಮಧಾನ್ಯ ಚರಿತೆ ಸಮಾಕಾಲೀನ ಚಿಂತನೆಯಲ್ಲಿ ನಾವು ಯಾವ ದೃಷ್ಡಿಕೋನದಡಿಯಲ್ಲಿ ಪರಿಭಾವಿಸುತ್ತಿದ್ದೇವೆ ಹಾಗೂ ಜಾತಿ ರಾಜಕಾರಣಕ್ಕೆ ಯಾಜಮಾನ್ಯದ ಪ್ರಭುತ್ವ ನಮ್ಮ ಭಾರತದಲ್ಲಿ ಧಾರ್ಮಿಕ ಯಾಜಮಾನಿಕೆಯು ರಾಜರೊಂದಿಗೆ ಇರಿಸಿಕೊಂಡ ಸಂಬಂಧ,ಭತ್ತ ರಾಗಿಯ ಶ್ರೇಷ್ಡತೆಯು ಸಾಂಕೇತಿಕವಾಗಿ ಜಾತಿಯನ್ನು ಪ್ರತಿನಿಧಿಸಿದ ಬಗೆ ಹಾಗೂ ಕನಕದಾಸರು ಆ ಕಾಲದಲ್ಲಿ ಅನುಭವಿಸಿದ ಸಂಕಟ ಸಂಘರ್ಷಗಳು ಸಮಾಕಾಲೀನ ಸಂದರ್ಭಕ್ಕೆ ತುಲನಾತ್ಮಕವಾಗಿ ವಿವೇಚಿಸಿರುವುದನ್ನು ಕಾಣಬಹುದು.
೪-”ಮಲ್ಲಿಕಾರ್ಜುನ ಬನ್ನಿ ಅವರ ಕನಸುಗಳಿಗೊಂದು ಸವಿಮಾತು”
ಬನ್ನಿಯವರ ಕಾವ್ಯದ ಸೊಗಡು ಹಾಗೂ ಕಾವ್ಯದ ಲಯ, ದಾಟಿ, ಗತ್ತು,ಕವಿತೆಯ ಕೆಲವು ಸಾಲುಗಳ ಒಳಮುಖ ನೋಟವನ್ನು ಬೀರಿರುವುದು ವ್ಯಕ್ತಗೊಳ್ಳು ತ್ತದೆ.
೫-”ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸಂಭ್ರಮ: ಸಂಕೀರ್ಣ “
‘ಕನ್ನಡಿಗರ ರಕ್ತದಲ್ಲಿಯೇ ಹರಿಯುತ್ತಿರುವ ಹೃದಯ ವೈಶಾಲ್ಯ ಹಾಗೂ ಔದಾರ್ಯ ಒಂದು ರೀತಿಯಲ್ಲಿ ಕನ್ನಡತನಕ್ಕೆ ಮೂಲ ವ್ಯಾದಿ’ ಎಂಬಂತಹ ಒಕ್ಕಣಿಕೆ ಕಂಡಾಗ ನಿಜಕ್ಕೂ ಇದು ಅಕ್ಷರಶಃ ಸತ್ಯವಾದ ಮಾತು ಅನಿಸದೆ ಇರದು.ನಮ್ಮ ಈ ಔದಾರ್ಯವೇ ನಮಗೆ ಮೂಲ ಕಂಟಕವಾಗಿರುವುದು ಸತ್ಯ ಸಂಗತಿ.ಈ ನಮ್ಮ ಹೃದಯ ವೈಶಾಲ್ಯತೆಯ ಮಾರಕದ ನೋವು , ಪೂರ್ವಿಕರು ಶ್ರಮವಹಿಸಿ ಕಟ್ಟಿದ ಕನ್ನಡವನ್ನು , ಕನ್ನಡತನವನ್ನು ಉಳಿಸುವ ನಿಟ್ಟಿನ ಒಂದು ಪ್ರಕ್ರಿಯೆಯ ಸೂಕ್ಷ್ಮನೋಟ ವಿವರಿಸಲಾಗಿದೆ.
೬-”ವಿದ್ವತ್ತಿನ ಪ್ರತೀಕ: ಪ್ರೋ.ಮಲ್ಲೇಪುರಂ”
ತಮ್ಮ ನೆಚ್ಚಿನ ಗುರುಗಳ ವ್ಯಕ್ತಿತ್ವದ ವಿಶೇಷತೆಯನ್ನು ಅವರ ಸರಳ ಸಜ್ಜನಿಕೆಯ ಪ್ರತೀಕವನ್ನು ಹಾಗೂ ಸಾಧನೆಗೆ ಯಾವುದೇ ಬಡತನ ಹಸಿವು ಅಪಮಾನಗಳು ಅಡ್ಡಬರಲಾರವು. ಆವುಗಳೆ ಮೆಟ್ಟಿಲಾಗಿ ಯಶಸ್ಸನ್ನು ಪಡೆಯಲು ಸಾಕಾರಗೊಳ್ಳುವ ಮಾರ್ಗದಡಿಯಲ್ಲಿ ಅನನ್ಯತೆಯುಳ್ಳ ಪ್ರೌಡಿಮೆಪೂರ್ಣ ಪುಸ್ತಕಗಳ ಕುರಿತು ಬರಹಗಳ ಒಟ್ಟು ವೈಶಿಷ್ಟತೆಯನ್ನು ವಿವೇಚಿಸಿದ್ದು ಅರ್ಥಪೂರ್ಣ.
೭-”ಪ್ರೋ.ಮಲ್ಲೇಪುರಂ ಅವರ ವಿಮರ್ಶೆ ಕನ್ನಡಿಯ ರೂಪಕದೊಳಗೆ- ಪ್ರತಿನಿಧೀಕರಣದ ಸಾಧ್ಯತೆಗಳು”
ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾದ ಮಲ್ಲೇಪುರಂ ಅವರ ಸಂಸ್ಕೃತಿ ಚಿಂತನೆಯ ಲೇಖನಗಳ ಸುತ್ತ ತಮ್ಮ ಅರಿವಿನ ಹರಿವನ್ನು ಬಿತ್ತರಿಸುವ ಮೂಲಕ ಓದುಗರನ್ನು ಹಿಡಿದಿಡುವ ಬಗೆ ಅನನ್ಯ ಎನಿಸುತ್ತದೆ.ಅವರ ವಿಮರ್ಶೆಯ ಹಲವು ಅಂಶಗಳು ಇವರ ಬರಹದ ಮೂಲಕ ನಮಗೆ ತಲುಪಿಸಿದ್ದು, ವಚನಗಳಲ್ಲಿ ಅಲ್ಲಮಪ್ರಭು, ಬಸವನ ತಾತ್ವಿಕ ನಿಲುವು ಮಲ್ಲೇಪುರಂ ಅವರು ಬಳಸಿದ ಭಾಷಾ ಸೊಗಡು ಬೆರಗು ಮೂಡಿಸುವಂತಹ ಸಂವಾದ ಇತ್ಯಾದಿ ವಿಚಾರಗಳ ಒಳ ಹರಿವು ಗೋಚರಿಸುತ್ತದೆ.
೮-”ಸಣ್ಣರಾಮ ಅವರ ಜೀವನ ಮತ್ತು ಹೋರಾಟಗಳು “
ಪ್ರೋ ಸಣ್ಣರಾಮ ಅವರ ಕುರಿತಾದ ವಿಶೇಷ ವಿಚಾರಗಳ ಸುತ್ತ ಅವರ ಬದುಕಿನ ಒಳ ನೋಟಗಳನ್ನು ತೆರದಿಟ್ಟಿದೆ. ಸಾಧನೆಗೆ ಜಾತಿ,ಶೋಷಿತ ಸಮುದಾಯ, ನೋವು, ಬಡತನ,ತುಳಿತ, ಹಸಿವು, ಇವುಗಳು ಅಡ್ಡಬರಲಾರದ ಬದುಕಿನ ಗತಿ.ಅವರ ತಾಂಡ, ಹಾಗೂ ಅವರು ತೊಡಗಿಸಿಕೊಂಡ ಚಳುವಳಿ ವಿಚಾರಧಾರೆ ವೈಚಾರಿಕತೆ ಇವುಗಳನ್ನೊಳಗೊಂಡ ಉತ್ಕೃಷ್ಟ ಮಾಹಿತಿ ಅಡಕವಾಗಿದೆ.
೯-”ಸ್ನೇಹದ – ಸ್ನೇಹ ಸಿಂಚನ”
ಡಾ:ವಿಜಯಕುಮಾರ ಕಟಗಿಹಳ್ಳಿಮಠ ಇವರ ಸ್ನೇಹಪರತೆ,ನಿಸ್ವಾರ್ಥ ಜೀವ,ಸಾಹಿತ್ಯಿಕ ಚಿಂತಕ,ಅವರ ತಾತ್ವಿಕ ಚಿಂತನೆಗಳು ಮೂಡಿಸಿದ ವಿಸ್ಮಯತೆ,ಸ್ನೇಹ ಎಂದರೆ ಹೂವಿನಲ್ಲಿ ಸುಗುಂಧ ಹರಡಿದಂತೆ ಎಂಬಂತಿರುವ ಕಟಗಿಹಳ್ಳಿಮಠ ಅವರನ್ನು ಆತ್ಮೀಯತೆಯಿಂದ ನೋಡುವ ಮನಸಿನ ಭಾವತರಂಗದ ನೋಟ, ಆಕರ್ಷಕ ವ್ಯಕ್ತಿತ್ವದ ಸವಿಹೂರಣ ತುಂಬಿದೆ.
೧೦-”ನೋವು ನುಂಗಿ ಮಾಗಿದ ಕವಿ ಲಕ್ಷ್ಮಣ”
ಒಂದು ಇಡೀ ದಲಿತ ಸಮುದಾಯದ ವಸ್ತುಸ್ಥಿತಿ ಲಕ್ಷ್ಮಣ ಅವರ ಆತ್ಮಕಥೆಯ ಮೂಲಕ ಹರಡಿಕೊಂಡ ವಿಚಾರವು ಮನಮುಟ್ಟುವಂತಿದೆ. ಜಾತಿ ತಾರತಮ್ಯ, ಶಿಕ್ಷಣ, ಕುಲ ಕಸಬುಗಳಲ್ಲಿ ರಾಜಕೀಯ ಪ್ರಾತಿನಿಧ್ಯ, ನಿರುದ್ಯೋಗ, ಭಿಕ್ಷಾಟನೆ ಸತ್ತ ದನಗಳ ಹೋರುವ ಪರಿಪಾಟಲು,ಬಂಡವಾಳಶಾಹಿ ಚಟುವಟಿಕೆ, ಹೀಗೆ ಹತ್ತಾರು ವಿಚಾರಗಳ ಆಳಕ್ಕಿಳಿಸಿದ ಬರಹ. ಈ ಪುಸ್ತಕ ಓದಲೇ ಬೇಕೆನ್ನುವಷ್ಟು ಮನಸಿಗೆ ಹತ್ತಿರವಾಗುತ್ತದೆ.
೧೧-”ಗುರುಪೀಠ ಮತ್ತು ಸಾಮಾಜಿಕ ಅಭಿವೃದ್ಧಿ “
ಗುರುಪರಂಪರೆ ಎಂಬುದು ಕೇವಲ ಕೆಲವು ಸಮುದಾಯಕ್ಕಷ್ಟೆ ಸೀಮಿತವಲ್ಲ. ಅದರಾಚೆಗಿನ ದಲಿತ- ಹಿಂದುಳಿದ ವರ್ಗದವರಿಗೂ ಮೀಸಲಿದೆ ಎನ್ನುವ ಚಿಂತನರ್ಹ ಸಂಗತಿ ಮುರುಘಾ ಶರಣರಿಂದ ಅಂತರ್ಗತವಾದ ವಿಚಾರವು,,ಹಾಗೂ ಮಾದಿಗರ ಬದುಕಿನ ಶೋಷಣೆ,ಭೂ ಒಡೆತನ ದಕ್ಕದಿರುವಿಕೆ, ಸಾರ್ವಜನಿಕ ನೆಲೆಯಲ್ಲಿ ಅಸ್ಪೃಶ್ಯತೆ,ಅಂದರೆ ಶಿಕ್ಷಣ ಇರದ ಮನುಷ್ಯನ ಬಾಳು ಅರ್ಥಹೀನ ಎಂಬ ಅಂಶವು,, ಒಮ್ಮೊಮ್ಮೆ ಕಾರಂತರ ಚೋಮನದುಡಿಯ ಚೋಮನ ಕನಸು ಅನಾವರಣಗೊಂಡಂತೆ ಭಾಸವಾಗುವ ದಲಿತರ ನೋವು ನರಳಿಕೆಗಳ ತಲ್ಲಣದ ಭಾವ ವ್ಯಕ್ತಗೊಂಡಿದೆ.
೧೨-”ಪ್ರೊ.ಶೇಖರ ಪೂಜಾರ ಅವರ ಆಧುನಿಕ ಲಾವಣಿಗಳ ನಿರ್ವಚನ”
ಶೇಖರ ಪೂಜಾರ ಅವರ ಸೃಜನಶೀಲಾತ್ಮಕ ಲಾವಣಿಗಳು, ನಮಗೆ ಕೇವಲ ಕೆಲವೇ ವಸ್ತುವಿಷಯಕ್ಕೆ ಸಂಬಂಧಿಸಿದಂತೆ ಕಾಣದೆ ಹಳ್ಳಿ ಬದುಕಿನ ಸೊಗಡು,ಸಂಸ್ಕೃತಿ,, ಸಮುದಾಯ ಜೀವನ,ಶಾಲೆ, ಶಿಕ್ಷಣ, ಗಂಡು-ಹೆಣ್ಣಿನ ಪ್ರೀತಿ,ದಾಂಪತ್ಯ,ಶೀಲ, ಹೀಗೆ ಹಲವಾರು ಅಂಶಗಳನ್ನು ಹೊತ್ತು ನಿಂತ ಲಾವಣಿಯ ಅರ್ಥವ್ಯಾಪ್ತಿಯ ಹೊಳಹುಗಳು ಉದಾಹರಣೆ ಸಹಿತ ನಮಗಿಲ್ಲಿ ದಕ್ಕುತ್ತವೆ.
೧೩-”ಜಾನಪದ ಒಗಟುಗಳಲ್ಲಿ ಹಾಸ್ಯ”
ಬಹುಶಃ ಹಾಸ್ಯ ಎನ್ನುವಂತಹದ್ದು ನಮ್ಮ ಗಾದೆ ಒಗಟುಗಳಲ್ಲಿ ಹೇರಳವಾಗಿ ಸಿಗುತ್ತವೆ.ಹಳ್ಳಿಗರ ಪ್ರತಿ ನಡೆನುಡಿಯಲ್ಲಿ ಒಗಟಿನ ಒಕ್ಕಣಿಕೆಯಲ್ಲಿ ಗೌಪ್ಯತೆ ಹೇಗೆ ಅಡಗಿದೆಯೋ ಹಾಗೆ ಹಾಸ್ಯವೂ ಅಡಕವಾಗಿರುವುದನ್ನು, ಮತ್ತು ಒಗಟಿನಲ್ಲಿ ಬಳಸುವ ರೂಪಕಗಳ ಬಗ್ಗೆ ಮಾಹಿತಿ ಹೀಗೆ ಒಂದಷ್ಟು ಪ್ರೌಡಪೂರ್ಣ ಒಗಟಿನ ಹೂರಣವೆ ಅಡಗಿದೆ ಇಲ್ಲಿ.
೧೪-”ಡಾ:ಬಾಬಾಸಾಹೇಬ ಅಂಬೇಡ್ಕರ್ “
ಅಂಬೇಡ್ಕರ್ ಅವರ ಬದುಕಿನ ಎಷ್ಟೋ ನಮಗೆ ತಿಳಿಯದ ವಿಚಾರಗಳು ಇಲ್ಲಿ ಶೇಖರಣೆಗೊಂಡಿದೆ.” ಹಿಂದೂ ಕೋಡ್ ಬಿಲ್ಲ್” ಪಾರ್ಲಿಮೆಂಟ್ ನಲ್ಲಿ ಮಂಡಿಸಿದ ಸಂದರ್ಭದಲ್ಲಿ ಆದ ಚಿತ್ರಣ, ಹಿಂಧು ಧರ್ಮದಿಂದ ಬೌದ್ದಧರ್ಮಕ್ಕೆ ತೆರಳಲು ತೆಗೆದುಕೊಂಡ ಕಾಲಾವಧಿಯ ಸ್ಥಿತಿ ಇಂತಹ ಹಲವಾರು ವಸ್ತು ವಿಷಯಗಳಿರುವುದು ಗಮನಾರ್ಹ.
೧೫-”ನವ್ಯ ಸಾಹಿತ್ಯ ಮತ್ತು ವ್ಯಕ್ತಿ ಪ್ರಜ್ಞೆ “
ನವ್ಯ ಸಾಹಿತ್ಯ ಸಂದರ್ಭದಲ್ಲಿ ಬಹಳ ಮುಖ್ಯವಾಗಿ ಕಾಣವ ವ್ಯಕ್ತಿ ಪ್ರಜ್ಞೆಯನ್ನು ಕವಿಗಳ ಕತೆ ಕಾದಂಬರಿಗಳ ಮೂಲಕ ಉದಾಹರಣೆ ಸಹಿತವಾಗಿ ಸಾಂದರ್ಭಿಕ ಚಿಂತನೆಯನ್ನು, ಸ್ವಾತಂತ್ರ್ತೊತ್ತರ ಸಾಹಿತ್ಯ ಕೃತಿಗಳ ನಾಯಕ ಪಾತ್ರ ಎದುರು ಅವರ ಆಯ್ಕೆ,ಮಿತಿ,ಆಸಕ್ತಿ, ಸವಾಲು, ಇವುಗಳ ವಿರುಧ್ದ ಹೋರಾಡುವ ಪಾತ್ರಗಳನ್ನು
ಮುಖಾಮುಖಿಯಾಗಿಸಿ ನಮ್ಮೆದುರಿಗೆ ತೆರೆದಿಟ್ಟಿರುತ್ತಾರೆ.
೧೬-”ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಬಾಯಿ ಮತ್ತು ಮದ್ರಾಸ್ ಪ್ರಾಂತ್ಯದ ಪಾತ್ರ”
ಈ ಬರಹ ಇನ್ನೊಂದು ಮಗ್ಗಲನ್ನು ನಮಗೆ ಪರಿಚಯಿಸುತ್ತದೆ. ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯ ಸಂದರ್ಭದಿಂದ, ಕರ್ನಾಟಕ ಏಕೀಕರಣದ ಸಂದರ್ಭದ ವ್ಯವಸ್ಥೆ, ವ್ಯಂಗ್ಯ, ಮುಂಬಾಯಿ ಕರ್ನಾಟಕ, ಮದ್ರಾಸ್ ಕರ್ನಾಟಕ, ಪ್ರಾಂತ್ಯವಾರು ಪ್ರದೇಶಗಳು ತಮ್ಮ ತಮ್ಮ ಪ್ರಾಂತ್ಯಕೆ ಸೇರಬೇಕೆಂಬ ಹಠದ ಒಡಂಬಡಿಕೆ ಇಂತಹ ಗಹನವಾದ ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ. ಇದೊಂದು ವಿಶಿಷ್ಟ ವಿಭಿನ್ನ ವಸ್ತು ವಿಷಯವೆಂದೆ ಅನಿಸುತ್ತದೆ.
ನಾನು ಮೊದಲೆ ತಿಳಿಸಿದಂತೆ ಈ ಪುಸ್ತಕದ ಸುತ್ತ ಒಂದು ಒಳನೋಟವನ್ನಷ್ಟೆ ಬೀರಿ ವಿಷಯವನ್ನು ನಿಮ್ಮ ಮುಂದಿಡುವ ಸಾಧ್ಯಾಸಾಧ್ಯತೆಯನ್ನಷ್ಟೆ ಮಾಡಿರುವೆ. ಸದಾ ಮೌನಧ್ಯಾನಿಯಾದ ಕೆಳಗಿನಮನಿಯವರ ಬರಹದ ತಾಕತ್ತೆ ಅಂತಹದ್ದು, ವಿಚಾರಪೂರ್ಣ ವಿದ್ವತ್ಪೂರ್ಣ ಬರಹ. ತನ್ನೊಳಗೆ ತಾನೀಳಿದು ಜ್ಞಾನ ಸಾಗರದಲ್ಲಿ ತನ್ಮಯರಾಗಿ ಈಜುವ ಅವರನ್ನೊಮ್ಮೆ ಹೀಗೆ ಕೇಳಿದಾಗ “ಸರ್ ಇಷ್ಟೆಲ್ಲ ಬರೆಯಲು, ಓದಲು, ಆಳವಾದ ಪಾಂಡಿತ್ಯ ಪಡೆಯಲು ತಮಗೆ ಹೇಗೆ ಸಾಧ್ಯ ಎಂದಾಗ, ಅವರದೆ ಮಾತನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. “ನಮ್ಮ ಓದು ಹೇಗಿರಬೇಕಂದರೆ,,, “ಓದಬೇಕು ಹುಚ್ಚು ಹಿಡಿಯೋ ಹಾಗೆ ಓದಬೇಕು ದೇಹ ಮನಸುಗೊಟ್ಟು ಓದಬೇಕು ಮೈಮೇಲೆ ಪರಿವೆ ಇಲ್ಲದಂಗೆ ಓದಬೇಕು; ದಿನಗಟ್ಟಲೆ ಕೂತವರು ಏಳದಂತೆ ಹಾಗೆ ಓದಬೇಕು ಹಲವು ವಿದ್ವತ್ಪೂರ್ಣ ಜನರ ಜೊತೆಗೆ ಚರ್ಚೆ ಮಾಡಿದರೆ ಆಗ ನಮಗೆ ಒಂದು ತಿಳಿವು ಜ್ಞಾನ ಸಿಗುತ್ತೆ, ಆ ಜ್ಞಾನವನ್ನೆ ಹಿಡಿದುಕೊಂಡು ಸಾಗಿದಾಗ ಮಾತ್ರ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಕಾರ್ಯೊನ್ಮಗ್ನರಾಗಲು ಸಾಧ್ಯ. ಇಂತಹ
ಕಾರ್ಯಕ್ಷೇತ್ರದಲ್ಲಿ ತೊಡಗಿದ್ದೇನೆ ಅಂದರೆ ನನ್ನದು ಮೂವತ್ತು ವರ್ಷಗಳ ಪರಿಶ್ರಮವಿದೆ”. ಎನ್ನುವ ಶಿವಾನಂದ ಅವರು ಹಾಗೂ ಅವರ ವಿಚಾರಧಾರೆಗಳು ಹಾಗೂ ಅವರು ತಮ್ಮ ಗುರು ಪರಂಪರೆಯನ್ನು ಸ್ಮರಿಸಿಕೊಳ್ಳುವ ರೀತಿ, ಅವರ ನಿರಹಂಕಾರತೆ, ವಿನಯಶೀಲತೆ, ಸರಳತೆ ನಮಗೆ ನಿಜಕ್ಕೂ ವಿಸ್ಮಯ ಅಭೂತಪೂರ್ವ ಎನಿಸದೆ ಇರದು. ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೃತಿಗಳು ಇನ್ನಷ್ಟು ಸೇರಲಿ,ಅವರ ವೈಚಾರಿಕತೆ ವಿಭಿನ್ನ ಆಲೋಚನಾಕ್ರಮ ನಮ್ಮಂತಹ ಕಿರಿಯರಿಗೆ ಮಾರ್ಗದರ್ಶಕವಾಗಲಿ, ಮುಂದಿನ ತಲೆಮಾರಿಗಳಿಗೂ ಬೆಳಕಾಗುವಂತಹ ಕೃತಿ ರಚಿಸಿದ ಅವರಿಗೆ ಮತ್ತೊಮ್ಮೆ ತುಂಬುಮನದ ಶುಭ ಹಾರೈಕೆಗಳನ್ನು ಈ ಮೂಲಕ ಸಲ್ಲಿಸುವೆ.
ವಾಣಿ ಭಂಡಾರಿ