ಲೇಖನ ಸಂಗಾತಿ
ಎಸ್ ಎಸ್ ಜಿ ಕೊಪ್ಪಳ
“ಬಣ್ಣದ ವಿಚಾರ ಹೀಗೇ ಸುಮ್ಮನೆ”
ಅಲ್ಲೊಬ್ಬಳು ಹುಡುಗಿ ಮೊಬೈಲ್ನಲ್ಲಿ ಮಾತನಾಡುತ್ತಾ ಹೊರಟಿದ್ದುದನ್ನು ಕಂಡು ಕೊಂಚ ಆಶ್ಚರ್ಯವಾಯಿತು ಅವಳ ಹೇರ್ ಸ್ಟೈಲ್,ಅವಳ ಮೈಬಣ್ಣ ಕೊಂಚ ವಿಶೇಷವಾಗಿ ನನಗೆ ಕಂಡವು. ಅದೇನೋ ಒಂಥರಾ ಕೆಂಚು ಕೂದಲು, ಅವನ್ನು ಸ್ಟೈಲಾಗಿ ಕತ್ತರಿಸಿ ಅದರಲ್ಲಿ ಸ್ವಲ್ಪ ಮುಖದ ಮುಂದೆ ಬರುವ ಹಾಗೆ ಇಳಿಬಿಟ್ಟು, ಉಳಿದ ಕೂದಲನ್ನು ಹಿಂದೆಕ್ಲಿಪ್ಸ್ ಹಾಕಿದ್ದಳು. ಮೈ ಬಣ್ಣ ತುಸು ಹೆಚ್ಚೇ ಕಪ್ಪು.ಬೆಳದಿಂಗಳ ಬೆಳಕಿನಂತೆ ಮಿಂಚುವ ಮೇಲ್ದುಟಿಯ ಮೇಲೆ ಕೂತ ನಾಲ್ಕು ಹಲ್ಲುಗಳು.ಟ್ರಿಮ್ಮಾಡಿ ಹಚ್ಚಿದ ಢಾಳ ಕೆಂಪು ಬಣ್ಣದ ಲಿಪ್ ಸ್ಟಿಕ್, ಪ್ರತಿ ಕ್ಷಣವೂ ಮುಂದೆಲೆಯ ಕೂದಲನ್ನು ನೀವುತ್ತಾ ಬಾರದೆ ಇರುವ ಕೂದಲನ್ನು ಹಿಂದೆ ಸರಿಸುವ ಒಂದು ಕೈ ,ಇನ್ನೊಂದು ಕೈ ಯಲ್ಲಿ ಎಡೆಬಿಡದೆ ಸ್ಥಾನ ಗಿಟ್ಟಿಸಿಕೊಂಡ ಮೊಬೈಲ್.
ಬಣ್ಣ ಕಪ್ಪಾದರೂ ವಯಸ್ಸಿನ ಪ್ರಭಾವ! ಅಷ್ಟೇನೂ ಅಲ್ಲದಿದ್ದರೂ ಸಾಧಾರಣ ಲಕ್ಷಣವಾಗಿ ಕಾಣುವ ಮುಖ ಇದ್ದರೂ ಕೂದಲಿನ ಬಣ್ಣ ಅಂದಗೆಡಿಸಿದೆ ಎಂದೆನಿಸಿದ ನನಗೆ ಈ ದೃಶ್ಯ ವಿಶೇಷವಾಗಿ ಅನಿಸಿತು .ಆದರೂ ಸ್ವಲ್ಪ ಮನಸಿನ ಒಳ ಹೊಕ್ಕು ನೋಡಿದಾಗ ಕೂದಲು ಹಾಗೂ ಮೈ ಬಣ್ಣ ಒಂದೇ ಎನಿಸಿ ಅಸಹ್ಯ ವಾಗುವ ಬದಲು ಮೈ ಬಣ್ಣ ಬದಲಿಸಿದೆ ಕೂದಲಿನ ಬಣ್ಣಬದಲಿಸಿರಬಹುದೇ? ( ಸಾಧ್ಯ ವಾಗಿದ್ರೆ ಮೈ ಬಣ್ಣ ನನ್ನು ಬದಲಿಸಿ ಬಿಡುತ್ತಿದ್ದಳೋ ಏನೋ?) ಎನ್ನುವ ಬೆಳಕು ಮನದಾಳದಿ ಮೂಡಿತು.
ತಾಸಿನ ಹಿಂದೆ ಸಹೋದ್ಯೋಗಿಯೊಬ್ಬರ ಜೊತೆ ನಡೆದ ಸಂಭಾಷಣೆ;— “ಆ ಹೇರ್ ಆಯಿಲ್ ಹೇಗೆನ್ನಿಸಿತು? ಚೆನ್ನಾಗಿದೆಯಾ? ಕೂದಲು ಕೊಂಚವಾದರೂ ಕಪ್ಪು ಬಣ್ಣಕ್ಕೆ ತಿರುಗಿತೆ? ” “ಏನೋ ಸಾಧಾರಣವಾಗಿದೆ. ಆದರೂ ಪರವಾಗಿಲ್ಲ.ನನಗೆ ಇನ್ನೊಂದು ಬಾಟಲ್ ಅದೇ ಕಂಪನೀದು ಹೇಳಿ ಮೇಡಂ.”
ಕೂದಲು ಕಪ್ಪಾಗಿಸಿ ಬಣ್ಣ ಮರೆಸಿ,ಬಾರದೆ ಇರುವ ವಯಸ್ಸನ್ನು ಬಂದೇ ಬಿಡುತ್ತದೆ ಎಂದು ಸಂಭ್ರಮಿಸುವ ತವಕ ಒಂದೆಡೆಯಾದರೆ ,ನೈಜ ಕಪ್ಪು ಕೂದಲನ್ನು ಕೆಂಚು ಬಣ್ಣಕ್ಕೆ ತಿರುಗಿಸಿ ಕಪ್ಪು ಸ್ವಲ್ಪವಾದರೂ ಕೆಂಪಾಯಿತು.ಎಂದು ಜಂಭ ಪಡುವ ಹರೆಯದ ಹುಡುಗಿಯ ಇಗೋ ಇನ್ನೊಂದೆಡೆ. ಅದಕ್ಕೇ ಹೇಳಿರಬೇಕು ಅವರವರ ಚಿಂತೆ ಅವರವರಿಗೆ ಎಂದು.
ಎಸ್ ಎಸ್ ಜಿ ಕೊಪ್ಪಳ
ಇನ್ನೂ ಒಂದಿಷ್ಟು ಬರೆಯಬಹುದಿತ್ತು.
ಹೌದು.ಬರೆಯಬಹುದಾಗಿತ್ತು.