‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ

ಅವಮಾನ ಹೀಗಂದರೇನು? ಒಮ್ಮೊಮ್ಮೆ ಅನಿಸುವುದು ಇದು ಮನುಜನ ಮನಸ್ಥಿತಿಗೆ ಸಂಬಂಧಿಸಿದ್ದು ಎಂದು.  
      ನಮ್ಮ ಅಭಿಮಾನಕ್ಕೆ ಧಕ್ಕೆ ತರುವ ವಿಚಾರವೆಲ್ಲವೂ ನಮಗೆ ಅವಮಾನವಾಗಿ ಗೋಚರಿಸುವುದೂ ಉಂಟು.
     ಆದರೆ ನಿಜದಲ್ಲಿ ನಮ್ಮ ನಂಬಿಕೆಗೆ, ಶುದ್ಧ ಮನಸಿನ ಭಾವನೆಗೆ ಪೆಟ್ಟು ಕೊಡುವ, ಅದಕ್ಕೆ ದ್ರೋಹವೆಸಗುವ ಕಾರ್ಯವನ್ನು ಮಾಡಿದಲ್ಲಿ ಅದು ನಮ್ಮ ಭಾವನೆಗೆ ಮಾಡುವ ಅವಮಾನ ಎಂದೆನ್ನಬಹುದು.
       ಕೆಲವೊಮ್ಮೆ ನಮ್ಮ ನಿರೀಕ್ಷೆಗಳು ಸುಳ್ಳಾಗಿ, ನಮ್ಮವರಿಂದ ಅನಿರೀಕ್ಷಿತ ನಡವಳಿಕೆ, ನಮ್ಮದಲ್ಲದ ಭಾವವ ತಪ್ಪಾಗಿ ಬಿಂಬಿಸುವ ಮಾತಿನ ಇರಿತದ ಅನುಭವ ನಮ್ಮ ಆತ್ಮಕ್ಕಾಗುವ ಅತಿದೊಡ್ಡ ಅವಮಾನವದು.
               ಇದಲ್ಲದೇ ಕೆಲವೊಮ್ಮೆ, ಕೆಲವು ಕಡೆ ನಮ್ಮ ಧೋರಣೆಯನ್ನು ಅಲ್ಲಗಳೆಯುವುದು, ಅಭಿವ್ಯಕ್ತಿಗೆ ಅಡ್ಡಗಾಲು ಹಾಕಿ  ಅಭಿಪ್ರಾಯ ಮಂಡನೆಯ ಅವಕಾಶವನ್ನೂ ನಿಯಂತ್ರಿಸುವುದು ಇವೆಲ್ಲವೂ ನಮ್ಮಗಳ ಮನದಲ್ಲಿ ಅವಮಾನದ ಹಚ್ಚೆಯನ್ನೇ ಮೂಡಿಸುವುದು. ಹೀಗೆ ಬೇರೆ ಬೇರೆ ಆಯಾಮ, ಮುಖಗಳನ್ನು ಅವಮಾನದಲ್ಲಿ ನಾವು ಗುರುತಿಸಬಹುದು.
     ಒಮ್ಮೊಮ್ಮೆ ನಮ್ಮ ಪ್ರಜ್ಞೆಗೆ ಬರುವುದು ನಾವೇ ಸ್ವತಃ ನಮ್ಮನ್ನು ಅವಮಾನಿಸಿಕೊಂಡೆವೇನೋ ಎಂಬ ಭಾವ ಅದೆಲ್ಲಿ ಎಂದರೆ, ನಾವು ನಮ್ಮವರ ಜೊತೆ ಅತಿ ಸಲುಗೆ, ಪ್ರೀತಿ, ಕಾಳಜಿಯಿಂದ ಒಳಿತನ್ನಷ್ಟೇ ಆಶಿಸುತ್ತ ನಡೆಯುತ್ತಿರುವಾಗ, ಅವರು ನಮ್ಮನ್ನ ಸಮಯಕ್ಕೆ ಉಪಯೋಗಿಸಿ ಸ್ವಾರ್ಥದ ಚಿಂತನೆಯಲ್ಲಿ ನಮ್ಮನ್ನು ನಿರ್ಲಕ್ಷಿಸುವ, ಭಾವನೆಗೆ ಬರೆ ಎಳೆಯುವ ಮಾತುಗಳನ್ನಾಡುವ ನಡವಳಿಕೆ ತೋರಿದಾಗ ನಾವಿಟ್ಟ ನಿರೀಕ್ಷೆಯೇ ನಮ್ಮ ನೋವಿಗೆ, ಅವಮಾನಕ್ಕೆ ಕಾರಣ ಎಂಬಂತೆ ಆಗುವುದುoಟು.
       ಅನೇಕ ಬಾರಿ ಕೆಲಸದ ಸ್ಥಳಗಳಲ್ಲೂ ನಂಬಿಕೆಯಿಟ್ಟು ಮಾಡಿದ ನೆರವಿಗೆ ಪ್ರತಿಯಾಗಿ ನಮ್ಮನ್ನೇ ದಾಳವಾಗಿ ಬಳಸಿಕೊಂಡು ಕಾರ್ಯ ಸಾಧನೆಯಾದ ನಂತರ ನಮ್ಮನ್ನೇ ಅವಮಾನಿಸುವವರಿರುತ್ತಾರೆ ಇಂತಹ ಸಂದರ್ಭದಲ್ಲಿಯೂ ನಮ್ಮ ನಂಬಿಕೆಗೆ ಅವರಿಂದಾದ ಅವಮಾನವೇ ಅದು.
      ಈ ಅವಮಾನದ ಇನ್ನೊಂದು ಮುಖ ಎಂದರೆ, ನಮಗೆ ಸಂಬಂಧಿಸಿದವರು  ಮಾಡಿದ ತಪ್ಪನ್ನು ನಮಗೂ ಹೋಲಿಸಿ, ಬಿಂಬಿಸಿ ಹರಿತವಾದ ಮಾತುಗಳಿಂದ ನಮ್ಮತ್ತ ಬೆರಳು ತೋರಿ ಅವಮಾನಿಸುವುದು, ನಮ್ಮನ್ನು ಹೊಣೆಮಾಡುವುದು. ಆದರೆ ನಮ್ಮ ನಡವಳಿಕೆ, ಕಾರ್ಯ ದೈವ ಮೆಚ್ಚುವಂತಿದ್ದರೆ ಸಾಕು ಈ ಕೆಳಮಟ್ಟದ ಮನಸ್ಥಿತಿಯವರ ಸಮಾಧಾನಿಸುವ ಅವಶ್ಯವಿಲ್ಲ.
         ಜೀವನದ ಹಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ಈ ಅವಮಾನವೆಂಬ ಭೂತ ನಮ್ಮ ಬೆನ್ನ ಹಿಂದೆಯೇ ಹಿಂಬಾಲಿಸುತ್ತಿರುತ್ತದೆ. ಆದರೆ ನಾವು ಇದಕ್ಕೆ ಅಂಜದೇ, ಇದರಿಂದ ಹತಾಶರಾಗದೇ ಎದುರಿಸುತ್ತ ಮುನ್ನಡೆಯಬೇಕು. ನಮ್ಮ ಮೌಲ್ಯವನ್ನು ಈ ಅವಮಾನದೊಟ್ಟಿಗಿನ ಕಾಳಗದಲ್ಲಿ ಕಳೆದುಕೊಳ್ಳದೇ, ವಿಚಲಿತರಾಗದೇ ಕಾಯ್ದುಕೊಂಡು ಮುನ್ನಡೆದಲ್ಲಿ ಗುರಿ  ತಲುಪಬಲ್ಲೆವು.

 ಅವಮಾನಿಸಿದವರೇ ಸನ್ಮಾನಿಸುವ ತೆರದಿ ಬದಲಾಗುವಂತಾಗಲಿ.
 ಕೀಳರಿಮೆಯ ಕೂಪದಿಂದ ಹೊರಬಂದು ಜೀವಿಸುವಂತಾಗಲಿ.

  ಅನುಭವಿಸುವ ಅವಮಾನವನ್ನೇ ಯಶಸ್ಸಿನ ಮೊದಲಡಿಯಾಗಿಸಿ ಉನ್ನತ ಧ್ಯೇಯದತ್ತ ಸಾಗೋಣ.


Leave a Reply

Back To Top