ಕಾವ್ಯ ಸಂಗಾತಿ
ಪ್ರಮೋದ ನಾ ಜೋಶಿ
‘ಲೈಫ್ ಇಷ್ಟೆ’
ಬೆಳ್ಳ್ಂ ಬೆಳಿಗ್ಗೆ ನನ್ನವಳು
ತಲೆ ಸವರುತ್ತಾ ಎಬ್ಬಿಸಿದಾಗ
ದೊರೆತ ಆ ಸಂತಸ ಕ್ಷಣಕ್ಕೆ ಉಬ್ಬಿ
ಇಂಗ್ಲೀಷ್ ವಂಶಸ್ಥರಂತೆ
ಹಾಯ್ ಗುಡ್ ಮಾರ್ನಿಂಗ್ ಎಂದೆ
ಅವಳದೋ ನಿತ್ಯ ನಿರಂತರ ದಿಟ್ಟ ಆಜ್ಞೆ
ಏಳಿ ಎದ್ದೇಳಿ ಹಾಲು ತನ್ನಿ ಹೂವಿನವಳಿಗೆ ದುಡ್ಡು ಕೊಡಿ
ಕರಾಗ್ರೆ ವಸತೆ ಲಕ್ಷ್ಮೀ ಎನ್ನುವಾಗಲೇ
ಲಕ್ಷ್ಮೀ ಓಡಲು ಅಣಿಯಾದಳು
ಆಗಾಗ ಹೇಳದೇ ಓಡಿದ್ದಕ್ಕೆ ಲೆಕ್ಕವೇ ಇಲ್ಲಾ
ಆದರೂ ನನ್ನದು ಸುಖಿ ಸಂಸಾರ
ಇಲ್ಲಗಳನೇ ಮೆಟ್ಟಿಲಾಗಿಸಿಕೊಂಡು
ಹತ್ತುತ್ತಿರುವ ಬಡಪಾಯಿ
ಜೇಬಿನಂತೆ ನಡೆವ ಸಿಪಾಯಿ
ಕನಸಿಗೂ ನನ್ನಲ್ಲಿ ಜಿಪುಣತನ
ದೊಡ್ಡ ಕನಸಿಗೆ ಸ್ಥಿತಿಯೇ ಕತ್ತರಿ ಹಾಕುತ್ತೆ
ಕನಸು ಮಾರುವವರ ಬಳಿ
ಖರೀದಿಯೂ ಮಾಡಿದ್ದಾಯ್ತು
ಸಂಪಾದನೆ ಮಾತ್ರ ಶೂನ್ಯಕ್ಕೂ ಕಡಿಮೆ
ಈಗ ಕನಸು ಕಾಣಲು ಹೆದರಿಕೆಯ ಭಯ
ಆರುಮೂರರ ಗಾದೆ ಬದುಕಿನವನು ನಾ
ಚೌಕಟ್ಟಿನೊಳಗೇ ಇದೆ ಜೀವನಾ
ತೆವಳುತನವನ್ನು ರೂಢಿಸಿಕೊಂಡರೂ
ಆಸೆ ಬಿಡದ ಚೇತನಾ
ಜಿಪುಣತನದ ಹಣೆಪಟ್ಟಿ ಪಡೆದರೂ
ಕುಬ್ಜತನ ಅನುಭವಿಸಿ ಹೆಣಗಾಡಿದರೂ
ತಿಂಗಳ ಕೊನೆಗೆ ಕಂಗಾಲು
ಹಾಸಿಗೆ ಚಿಕ್ಕದಾಗುತ್ತಿದೆಯಾದರೂ ಹೊರಗೇ ಕಾಲು
ಮಧ್ಯಮ ವರ್ಗದ ಪಾಡೇ ಇಷ್ಟು
ಕನಸುಗಳು ಆಕಾಶದಷ್ಟು
ನಾವೋ ಬೆಟ್ಟದ ಅಡಿ ಇಲಿ
ಹತ್ತಲಾರದೇ ಸುರಂಗ ತೋಡುವ ಕಿಲಾಡಿಗಳು
ಎಷ್ಟೇ ಗುದ್ದಾಡಿದರೂ ಹೇಗೇ ಬದುಕಿದರೂ
ಲೈಫ್ ಇಷ್ಟೇ ಎಂದುಕೊಂಡು
ಮಾತು ಕೇಳಿದರೂ ಕೇಳದಂತೆ ನಡೆಯುತ
ಬದುಕಿನ ದಿನ ಎಳೆಯುವ ಮಹಾವೀರರು.
ಪ್ರಮೋದ ನಾ ಜೋಶಿ
ಬದುಕು ಬವಣೇ ಕವಿತೆ ಸೂಪರ್ ಸರ್.
ಸೂಪರ್ ಸರ್, ವಾಸ್ತವದ ಪ್ರತೀಕ