ಸುಧಾ ಹಡಿನಬಾಳ ಅವರಕವಿತೆ-‘ಮಳೆಯ ಹಾಡು-ಪಾಡು’

ನಮ್ಮೂರು ಕರಾವಳಿಯಲ್ಲಿ
ಮಳೆಯದು ಬಹುರೂಪಿ ನರ್ತನ!

ಒಮ್ಮೊಮ್ಮೆ ಪರಶಿವನ ರುದ್ರ ನರ್ತನ
ಸಾಥ್ ನೀಡುವ ಗುಡುಗಿನ ಡಮರುಗ
ಅಬ್ಬರಿಸುವ ಕಡಲಲೆಗಳ ಭೋರ್ಗರೆತ
ಚಕ್ಕನೆ ಹೊಳೆವ ಕೋಲ್ಮಿಂಚಿನ ಸೆಳೆತ
ಉಕ್ಕಿ ಸೊಕ್ಕುವ ಹಳ್ಳ ಕೊಳ್ಳಗಳ ಮೆರೆತ

ಮಗುದೊಮ್ಮೆ ಬಳುಕುವ ನೀರೆಯ
ವೈಯಾರದ ಜಿಟಿಜಿಟಿ ನರ್ತನ
ಜೊತೆಗೆ ಜುಳು ಜುಳು ನಿನಾದದ
ಝರಿ ತೊರೆಗಳ ಓಟ
ಜಿನುಗುವ ಅಂತರ್ಜಲದ ಸೊಬಗಿನ ನೋಟ

ಒಮ್ಮೊಮ್ಮೆ ವೇಷ ತೊಟ್ಟು ಮುನಿಸಿಕೊಂಡ ಲತಾಂಗಿಯ
ಹಾಗೆ ದಟ್ಟನೆ ಕವಿದ ಕಾರ್ಮೋಡ
ದಿನವಿಡೀ ಕಾಡುವ ವಿರಹ ಏಕಾಂತ
ರಮಿಸಿದ ಗಾಳಿಗೆ ಕರಗಿ ಧರೆಗಿಳಿವ ಜಲಕನ್ಯೆ!

ಹೀಗೆ ಸೆಳೆವ ಮಳೆಯ ಹಾಡು ಒಂದೆಡೆ
ಕುಸಿವ ಧರೆ , ಕೊಚ್ಚಿ ಹೋಗುವ ಕಾಲ್ಸಂಕ
ಸುತ್ತಮುತ್ತೆಲ್ಲ ಜಲಪ್ರಳಯ ಸೃಷ್ಟಿಸಿ
ಮನೆ ಹೊಕ್ಕು ಅವಾಂತರ ಮಾಡುವ
ಮಳೆರಾಯನ ಆರ್ಭಟಕೆ ಹೆದರಿ

ಜೀವ ಕೈಯಲ್ಲಿ ಹಿಡಿದು ಮಕ್ಕಳು
ಮುದುಕರೊಡಗೂಡಿ ತುರ್ತು
ನೆಲೆಗಾಗಿ ಸಿದ್ಧಗೊಳ್ಳುವ ‘
ಕಾಳಜಿ ಕೇಂದ್ರ ಸೇರಿ ಸಿಗುವ
ಚೂರುಪಾರು ಸೌಲಭ್ಯಕಾಗಿ ಕಿತ್ತಾಟ

ಜನರ ಪಾಡು ಇಂತಾದರೆ ಧರೆಗೆ
ಒರಗುವ ಕಂಗು ತೆಂಗು ಬಾಳೆ
ಮರ ಮಟ್ಟು ಲೆಕ್ಕವಿಲ್ಲ ಮೇಯಲು
ಹೋದ ಜಾನುವಾರುಗಳಿಗೆ ಜೀವ
ಸಂಕಷ್ಟ ಎಲ್ಲೆಲ್ಲೂ ಅಸ್ತವ್ಯಸ್ತ

ಈ ನಡುವೆ ಮೈದುಂಬಿ ಹರಿವ ಹೊಳೆಗಳು
ತುಂಬು ಜವ್ವನೆ ತೆರದಿ ಮೈದುಂಬಿ
ಧುಮ್ಮಿಕ್ಕುವ ಹಾಲ್ನೊರೆಯ ಜಲಪಾತಗಳು
ಎಲ್ಲೆಡೆ ಚೈತನ್ಯ ತುಂಬಿದ ಹಸಿರು
ಆಷಾಢದೊಂದಿಗೆ ಬರುವ ಹಬ್ಬಗಳ ಸಾಲು

ಹೊರಗೆ ಜಡಿ ಮಳೆ ಒಳಗೆ ಬೆಚ್ಚನೆಯ
ಕುರುಕಲು ತಿಂಡಿ ಮೆಲ್ಲಲು
ಗರಿಗೆದರುವ ಕೃಷಿ ಚಟುವಟಿಕೆ
ಹೀಗೆ ಎಲ್ಲೆಲ್ಲೂ ಜೀವಕಳೆ ಯಾಂತ್ರಿಕತೆಯಲೂ ಸಹಜ ಇಳೆ

ನೀವು ಬನ್ನಿ ಒಮ್ಮೆ ನೋಡ ಬನ್ನಿ ನಮ್ಮ ಕರಾವಳಿಗರ ಮಳೆಯ ಹಾಡು ಪಾಡು…


Leave a Reply

Back To Top