ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್

ಓ ಮನಸ್ಸೇ ನಿನ್ನೊಳಗೆ ಕಾಪಿಟ್ಟು ಕೊಂಡಿರುವ ಯಾತನೆಗಳೇನು ಹೇಳಿ ಬಿಡು ಇನ್ನೇನಿದೆ
ಹುತ್ತವಾಗಿ ಬಚ್ಚಿಟ್ಟುಕೊಂಡಿರುವ ಬಯಕೆಗಳೇನೆಂದು ಬಿಚ್ಚಿಟ್ಟು ಬಿಡು ಇನ್ನೇನಿದೆ

ಎದೆಗಪ್ಪಿದ ನಿನ್ನಯ ಪ್ರೀತಿಯ ನಿವೇದನೆಯನು ಸಾರಿಬಿಡು ಕೋಗಿಲೆಯಂತೆ
ಸೆಳೆಯುವ ಸೌಂದರ್ಯಗಳೆಲ್ಲವೂ ಕಣ್ಣಿನ ರೆಪ್ಪೆಗಳೊಳಗೆ ಕೂಡಿಟ್ಟು ಬಿಡು ಇನ್ನೇನಿದೆ

ಓಡು ಮೋಡಗಳೊಳಗಿರುವ ನೀರಿನ ಕಣಕಣಗಳು ಮಳೆಯಾಗಿ ಸುರಿಯುವಂತೆ
ಒಡಲೊಳಗಿನ ವಿರಹದ ಬಿಸಿಯನ್ನು ಉರಿಯದಂತೆ ತಣ್ಣಗಾಗಿಸಿ ಬಿಡು ಇನ್ನೇನಿದೆ

ಕುಣಿ ಕುಣಿದು ಮುಂಗಾರಿನ ತನ್ನೆಲ್ಲ ವೇದನೆಯನು ನೀಗಿಸಿಕೊಳ್ಳುವ ನವಿಲಿನಂತೆ
ಕುಸುಮದಲಿನ ಮಕರಂದವನ್ನು ಹೀರಿ ಹೀರಿ ಕುಡಿಯವ ಜೇನ್ನೊಣದಂತಾಗಿ ಬಿಡು ಇನ್ನೇನಿದೆ

ಧುಮ್ಮಿಕ್ಕಿ ಓಡುವ ತೊರೆ ತೊರೆಗಳು ಸಮುದ್ರವನು ಸೇರಿ ಸಂತಸ ಪಡುವಂತೆ
ತಡವೇಕೆ ಸಖಿ ನಿನ್ನ ಸೇರಲು ತವಕಿಸುತಿದೆ ಮನವೇಕೋ, ಒಮ್ಮೆ ಸಿಕ್ಕಿ ಬಿಡು ಇನ್ನೇನಿದೆ


Leave a Reply

Back To Top