ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
‘ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಗಝಲ್’
ಅನ್ನದಾತನಿಗೆ ಹೆಗಲಾಗಿ ನೊಗವನ್ನು ಹೊತ್ತಿಹುದು ವೃಷಭ
ಬೆನ್ನುಬಾಗಿಸಿ ಬೇಸರವಿರದೆ ಹೊಲವ ಉತ್ತಿಹುದು ವೃ಼ಷಭ
ಆಸರೆ ಬಯಸಿ ಬಾಳಯಾನವ ಕಂಡಿತಲ್ಲ ಕಾಮಧೇನು
ಓಸರಿಸಿ ಕಷ್ಟಗಳ ಅವಿರತ ಸುಖವನು ಮೆತ್ತಿಹುದು ವೃಷಭ
ಹಿಡಿಮೇವು ಹಾಕುತ ದರ್ಪವನು ಮೆರೆದಿಹರು ಜನರು
ಕಡುಪು ತೋರದೆ ತಲೆತಗ್ಗಿಸಿ ದುಡಿಯ ಹತ್ತಿಹುದು ವೃಷಭ
ಸಾರಿಸಲು ಸೆಗಣಿಯನು ಕ್ರಿಮಿಕೀಟಗಳ ಬಾಧೆ ತಪ್ಪಿಹುದು
ದೊರೆಯ ಏಳಿಗೆಗಾಗಿ ನಿತ್ಯವೂ ಜೀವವ ತೆತ್ತಿಹುದು ವೃ಼ಷಭ
ಅಭಯವಿತ್ತು ರೈತನನು ಅಹರ್ನಿಶಿ ಸಲಹುತ ನಿಂತಿಹುದಲ್ಲ
ಅಭಿನವನ ನೆನೆದು ಭೂತಾಯಿಯ ಸುತ್ತಿಹುದು ವೃಷಭ
ಶಂಕರಾನಂದ ಹೆಬ್ಬಾಳ