ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ ನಾನು

ನನ್ನೊಳಗಿನ ನಾನು
ಬೇಡವೆಂದರು ಆಗಾಗ
ಕೆರಳುತ್ತಲೇ ಇರುತ್ತಾನೆ!
ಪ್ರತಿ ಹೆಜ್ಜೆಗೂ
ನನ್ನನ್ನು ಕೆದಕುತ್ತಲೇ ಇದ್ದಾನೆ!

ಪ್ರತಿ ಮಾತಿನಲ್ಲೂ ನಾನೇ
ಮೊದಲಿಗ ನನ್ನ ನಂತರವೇ
ಉಳಿದವರು ನಾನೇ ಶ್ರೇಷ್ಠ
ನಾನೇ ಏಕೆ ಸೋಲಬೇಕು?
ನಾನೇ ಏಕೆ ಹೊಂದಿಕೊಳ್ಳಬೇಕು?
ಎಂದು ನನ್ನ ಅಂತರಂಗದಲ್ಲಿ
ಕಾಡುತ್ತಿರುತ್ತದೆ!

ನನ್ನೊಳಗೆ ಅಡಗಿರುವ
ನನ್ನತನಕ್ಕೆ
ಅಹಂಕಾರ ದರ್ಪ ಸೊಕ್ಕು
ಎಂದು ಹೆಸರಿಟ್ಟಾಗಲೆಲ್ಲಾ
ನನಗೂ ಸ್ವಾಭಿಮಾನವಿಲ್ಲವೇ
ಎಂಬ ಭೀತಿ ಎದುರಾಗುತ್ತದೆ!

ನಾನು ಮಾತ್ರ ಹೀಗೆ ಎಂದು
ನನಗೆ ಯಾವತ್ತೂ ಅನ್ನಿಸಲಿಲ್ಲ
ಹಾಗಾದರೆ ಅವರೇ ಸೋಲಬಹುದಿತ್ತು!
ಹೊಂದಿಕೊಳ್ಳಬಹುದಿತ್ತು! ಪ್ರೀತಿಸಿ
ಆರಾಧಿಸಬಹುದಿತ್ತು!
ಆಗಲಿಲ್ಲ ಅಲ್ಲವೇ
ಅವರಲ್ಲೂ ನಾನು ನಾನೇ
ನನ್ನ ಹೊರತು ಇನ್ನಾರು
ಇರಲಾರರು ಎಂಬ
ಭಾವನೆ ಇದೆಯಲ್ಲವೇ?

ನಾನೇನು ಜಗದ
ಜೀವರಾಶಿಗಳಿಗೆ ಹೊರತಾಗಿಲ್ಲ
ಎಲ್ಲರಂತಲ್ಲವೇ ಈ ನಾನು!

—————————————

Leave a Reply

Back To Top