ಪ್ರಮೋದ ಜೋಶಿಯವರ ಕವಿತೆ-ಕಾಯುತಿಹರು

ಗೌತಮನಲ್ಲದ ಗೌತಮನಿಗೆ
ಬಲಿಯಾದ ಅಹಲ್ಯೆ
ಗೌತಮನ ಶಾಪಕೆ ಗುರಿಯಾಗಿ
ಶಿಲೆಯಾದಳು

ದಟ್ಟದಡವಿ ಮಧ್ಯ ಕಲ್ಲಾದರೂ
ಯಾರ ಸುಳಿವೂ ಇಲ್ಲಾ ಹತ್ತಿರ
ಏಕಾಂಗಿತನದ ಏಕಾಂತ ಸೃಷ್ಠಿಸಿದ
ಆ ಕಾಲ ಅದೆಷ್ಟು ಕ್ರೂರ

ಬಂದ ವಸಂತಗಳೆಲ್ಲಾ ಸಂತವಾದವು
ಆ ಕಾರ್ಗಲ್ಲ ರೂಪಕೆ
ಕಾರಿರುಳ ಕಾನನದಲ್ಲಿ ಒಂಟಿ ಇವಳು
ರಾಮ ಬರುವ ತನಕ

ತಪ್ಪಿಲ್ಲದ ತಪ್ಪಿನಲ್ಲಿ ಸಂದಿದ ಕ್ಷಣಕೆ
ಘೋರವಾದ ಧೀರ್ಘ ದೂರ
ವಿರಹಾಗ್ನಿ ಕುಂಡದಲ್ಲಿ ಬಂಡೆ ರೂಪದಲ್ಲಿ
ಒಂದೇ ನಿರಮ್ಮಳತೆ ಕೆಣಕುವರಿಲ್ಲಾ ಯಾರು

ಮಳೆಗಾಳಿ ಸಹಿಸುತ ಒಂದೇ ಚಿತ್ತ
ಧ್ಯಾನ ರಾಮನಾಮ
ನಿರ್ವಿಕಾರದೊಳ ಆಕಾರಕ್ಕೊಂದೇ ಧೈರ್ಯ
ನಿರ್ಲಕ್ಷದೊಳಗೂ ತಾನು ರಕ್ಷಿತ

ಹಸಿವು ದಾಹಗಳಿಲ್ಲದ ದೇಹ
ಒಳ ಒಳಗೆ ಕಸಿವಿಸಿಗೊಂಡರೂ
ಅಂದದ ಹೆಣ್ಣಿನ ಜನ್ಮಕ್ಕೆ
ಈ ರೂಪ ಪಡೆದಿದೆ

ಹೆಣ್ಣಾದ ಜನ್ಮ ಹಣ್ಣಾಗಿ ಹೋಗಿದೆ
ಪ್ರಶ್ನೆಗಳ ಪ್ರಶ್ನೆಗಳೂ ಮೌನವಾಗಿದೆ
ಘನ ತನಕ್ಕೆ ಕಾಮವೇ ಕಾರಣವಾದರೂ
ದೌರ್ಜ್ಯನ್ನಿಕೆಗೆ ಶಿಕ್ಷೆ ಮಾನ್ಯವೆ ?

ಪುರಾಣ ಇತಿಹಾಸಗಳಿಂದಲೂ ಇದೇ ಆಗಿದೆ
ಹೆಣ್ಣು ಭೋಗದ ವಸ್ತುವಾಗಿದೆ
ಬಾಯೊಳ ಮಾತು ನಡತೆಯಲಿಲ್ಲದೆ
ದೌರ್ಜ್ಯನ್ಯದ ಮೇಲೆ ದೌರ್ಜ್ಯನ್ಯವಾಗುತಿದೆ

ಇಂದಿಗೂ ಅದೆಷ್ಟೋ ಅಹಲ್ಯೆಯರು
ಮಾಡದ ತಪ್ಪಿಗೆ ಶಿಲೆಯಲ್ಲದ ಶಿಲೆಯಾಗಿ
ಜೀವ ಬದುಕಿನ ಮುಕ್ತಿಗಾಗಿ
ಬಾರದ ರಾಮನ ಕಾಯುತಿಹರು
ಕೆಲವರು ಮಣ್ಣಾಗಿಹರು……


Leave a Reply

Back To Top