ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಭೃಂಗದೊಲವಿನ ಮಧುರ ಗಾನ ಕೇಳುತ ಅರಳಿದೆ ಈ ಜೀವ ಕುಸುಮ
ನವಿಲಿನ ಮೋಹಕ ಗರಿಗೆದರಿದ ನಾಟ್ಯಕ್ಕೆ ಕುಣಿದಿದೆ ಈ ಜೀವ ಕುಸುಮ

ತಂಪು ತಂಗಾಳಿಯು ಸೋಕುತಿಹ ತಂಬೆಲರಿನ ಹಸಿರು ಹಾಸದು ಕೆಣಕುತಿದೆ
ಕಾಮನ ಮೋಹಕತೆಗೆ ತಾಳದೆ ಹುಚ್ಚೆದ್ದು ನಲಿದಿದೆ ಈ ಜೀವ ಕುಸುಮ

ಬೀದಿ ದೀಪಗಳು ಕರೆ ಕರೆದು ಪ್ರೀತಿ ಮಾತುಗಳ ಪಿಸುಗುಟ್ಟು ಸೆಳೆಯುತಿವೆ
ಮಾಮರದ ಕೋಗಿಲೆಯ ಮಾಧುರ್ಯಕೆ ಮರುಳಾಗಿದೆ ಈ ಜೀವ ಕುಸುಮ

ಚುಕ್ಕಿ ತಾರೆಗಳು ಹೊಳೆ ಹೊಳೆದು ಆಸೆ ಕಂಗಳ ಕುಕ್ಕಿ ಕೆಣಕುತ ಮಿರುಗುತಿವೆ
ಹುಣ್ಣಿಮೆ ಚಂದ್ರನ ತಂಪ ಬೆಳಕಿನ ಮೋಹಕತೆಗೆ ಮಂಕಾಗಿದೆ ಈ ಜೀವ ಕಸುಮ

ಹೂ ದಳಗಳ ಕೋಮಲ ಕುಸುರಿನ ಮೆತ್ತನೆಯ ಹಾಸಿಗೆಯದು ಕರೆಯುತಿದೆ
ಮೋಹಕತೆಯ ಝರಿ ತೊರೆಗಳ ಸೆಳೆತಕೆ ಕಂಗಾಲಾಗಿದೆ ಈ ಜೀವ ಕುಸುಮ

ನಡು ರಾತ್ರಿಯಲಿ ಉರಿಯುತಿಹ ಕಿರು ದೀಪಗಳ ಸಾಲು ಬೆಳಕು ಮಂಪರಿಸುತಿದೆ
ದೇವ ಮಂದಿರದೆ ಬಾರಿಸುವ ಗಂಟನಾದಕೆ ಮೂಕವಾಗಿದೆ ಈ ಜೀವ ಕುಸುಮ

ಅನುಳ ತನುವಿನ ತಲ್ಲನದೊಳಗಿನ  ವೇದನೆಯ ನೋವು ಸಂಕಟ ತಾಳದಂತಿದೆ
ಅಂತರಾಳದ ಅಮರ ಪ್ರೇಮ ಮೇಳಕೆ ದನಿಗೂಡಿದೆ ಈ ಜೀವ ಕುಸುಮ


Leave a Reply

Back To Top