ಡಾ.ಜಿ.ಪಿ.ಕುಸುಮಾ ಅವರ ಹೊಸ ಕವಿತೆ-‘ಖಾಸಗಿ ಆಸ್ಪತ್ರೆಯ ಲಿಫ್ಟ್’

ಆ ಖಾಸಗಿ ಆಸ್ಪತ್ರೆಯ
ಮೆಟ್ಟಲುಗಳೆಷ್ಟು ದುಬಾರಿ ಆಕೆಗೆ.
ಒಂದನ್ನೇರಿ ಇಳಿಯುವ ಹಾಗಿಲ್ಲ.
ಹಗುರವಾದ ಪರ್ಸನ್ನೆತ್ತಿ
ಲಿಫ್ಟ್ ನತ್ತ ಧಾವಿಸುತ್ತಾಳೆ
ಮೌನದಣಿದು
ಹಮ್ಮು ಬಿಮ್ಮುಗಳನೆಸೆದು
ಮಲಗಿದಂತಹ ದೇಹಗಳನ್ನು ಹೊತ್ತ
ಸ್ಟ್ರೆಚರ್ ಗಳು ಲಿಫ್ಟ್ ನಿಂದ ಹೊರಬಂದಾಗ
ಚಂಡಮಾರುತದಬ್ಬರ ಒಳಗೆ
ಸಾಲುಗಟ್ಟಿ ನಿಂತ ಕಾಲುಗಳು ಚಡಪಡಿಸುತ್ತಿದ್ದವು
ಸಾಲ ಮಾಡಿ ಸಾಲಲ್ಲಿ ನಿಂತಾಗ
ಲಿಫ್ಟ್ ಗೂ ಬರ
ಮೆಟ್ಟಲೇರುವ ತಾಕತ್ತು ಎಲ್ಲಿ
ಒಂದಷ್ಟು ಸೇರಿಸಿಟ್ಟ ಪ್ರೀತಿ, ಆಸೆಯನ್ನೂ
ಒತ್ತೆಯಿಟ್ಟು ಬಂದಿರುವಾಕೆಗೆ


ಅಪ್ಪನ ಕಂಗಳು ಕಣ್ಷೆದುರಿಗಿವೆ
ಬದುಕಲು ಅಂಗಲಾಚುತ್ತಿದ್ದ ಅಪ್ಪ.
ವಾರ್ಡ್ ಗೆ ಬರುತ್ತಾಳೆ
ಬೇಗ ಹಣ ತುಂಬಿಸಿ ಅನ್ನುತ್ತಾನೆ ಒಬ್ಬ
ಏನಾಯಿತು ಅಪ್ಪನಿಗೆ, ಅಪ್ಪ ಎಲ್ಲಿ?
ಹಣ ತುಂಬಿಸಲು ಲಿಫ್ಟ್ ನೊಳಗೆ
ಕಾಲಿಟ್ಟಾಗಲೇ ಬಂತಿನ್ನೆರಡು ಸ್ಚ್ರೆಚರ್ ಗಳು
ಗಾಳಿ ಹೋದ ಬಲೂನುಗಳನ್ನು ಹೊತ್ತು
ಹಿಂದೆ ನಾಲ್ಕೈದು ತೇವಗೊಂಡ ಕಣ್ಣುಗಳು
ಅರ್ಧ ಮುಚ್ಚಲಾದ ಅಪ್ಪನ ಮುಖ..
ಘರ್ಜನೆ ನಿಲ್ಲಿಸಿದ ದೇಹ
ಆಕೆಯ ಕೈಗಳು ಪರ್ಸನ್ನು ತಡಕಾಡುತ್ತಿದ್ದವು
ಬಿಲ್ ಲಿಫ್ಟ್ ನಲ್ಲಿ ಅಂಗಾತ ಬಿದ್ದಿತ್ತು.
ಫೋನು ರಿಂಗಾಗುತ್ತಿತ್ತು
ಸ್ಟ್ರೆಚರ್ ಮುಂದಕ್ಕೆ ಹೋಗಿತ್ತು
ಯಾರಿವರ ಮನೆಯವರು?
ನಿಂತ ಸಾಗರವಾಗಿದ್ದಾಕೆ ‘ನಾನು’ ಅಂದಳು
ಆಕೆಯ ನಿರ್ಗತಿಕ ಪರ್ಸ್
ಮತ್ತು ಆಸ್ಪತ್ರೆಯ ಬಿಲ್ ಬಿಟ್ಟರೆ
ಬಳಿ ಯಾರೂ ಇಲ್ಲ
ಪರ್ಸ್ ಮತ್ತು ಅಪ್ಪ
ಖಾಲಿಯಾದ ಚಿತ್ರ ಚಿತ್ತ ತುಂಬಿ
ಖಾಸಗಿ ಆಸ್ಪತ್ರೆಯಲ್ಲಿ
ಅವಳೀಗ ಮುರಿದ ವೀಣೆಯಾದಳು


2 thoughts on “ಡಾ.ಜಿ.ಪಿ.ಕುಸುಮಾ ಅವರ ಹೊಸ ಕವಿತೆ-‘ಖಾಸಗಿ ಆಸ್ಪತ್ರೆಯ ಲಿಫ್ಟ್’

  1. ಆತ್ಮೀಯ ಅನುಭವ ನೀಡಿತು
    ಅಭಿನಂದನೆಗಳು

  2. ಬಡವರ ಪರಿಸ್ಥಿತಿ ಹೀಗೇ,ಅನುಭವ ನನಗೂ ಆಗಿದೆ ,very nice

Leave a Reply

Back To Top