ಕಾವ್ಯ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ
ಕಾಲನ ಒಡಲ ಹಕ್ಕಿ..
ರೆಕ್ಕೆ ಮುರಿದು ಕಂಠ ಕುಗ್ಗಿದೆ
ಗರಿಗರಿ ನೋಟಗಳೂ…
ಒಟಗುಡುತಿವೆ
ಕಾಲನ ಕೈಯಲ್ಲಿ ಸಿಕ್ಕು.
ಕಂಬನಿಯಿಲ್ಲದ ಕಣ್ಣು ಮಂಜಾಗಿವೆ
ಜಾಜಿ ಮಲ್ಲಿಗೆ ಒಣಗಿ ಮುರುಟಿವೆ
ಹಸಿರಾಗಬೇಕಾದ ಮರವೊಂದು ಸೇಡಿನ ಸಿಡಿಲಿಗೆ ಸುಟ್ಟು ಹೋಗಿದೆ.
ಹೆಣ್ಣು ಗಂಡಾಗುವ ಕಾಲ
ಗಂಡು ಹೆಣ್ಣಾಗುವ ಕಾಲ
ಕಾಲನ ಕೈಯಲ್ಲಿ ಗರ್ತಿಗಮ್ಮತ್ತಿನಾಟ ನೆಡೆದಿದೆ
ಸುಡುವ ದಾರಿಯಲಿ ಕಗ್ಗೊಲೆಗೆ ಕಡಿಮೆಯಿಲ್ಲ
ಹೂಂಕರಿಸುವ ಗೂಳಿಗಳು
ಕೋಡು ಮುರಿಸಿಕೊಂಡರೂ ಬುದ್ಧಿ ಬಂದಿಲ್ಲ
ಭ್ರಮೆಯೊಳಗಿನ ಕುಟುಂಬಗಳು ಕುಂಟುತ್ತಾ ಸಾಗಿವೆ
ಬಾಂಧವ್ಯಗಳು ಬಂಧನದೊಳಗೆ ಗಿರಿಕಿ ಹೊಡೆಯುತಿವೆ
ಕಾಲನ ಕಪಟ ನಾಟಕಕ್ಕೆ ಹಕ್ಕಿಯ ರೆಕ್ಕೆ ಮುರಿದುಹೋಗಿದೆ.
ಕ್ಷಮಿಸು,
ನೋಡುವ ದೃಷ್ಟಿ ; ಹಾರುವ ಮಾತು
ದೂರವಾಗಿದೆ..
ಕಾಲನ ಒಡಲ ಹಕ್ಕಿಯು
ಬಿಕ್ಕುತಿದೆ
ನಿಟ್ಟುಸಿರು ಬಿಟ್ಟು.
ರಮೇಶ ಸಿ ಬನ್ನಿಕೊಪ್ಪ
ಸೂಪರ್