ಹನಮಂತ ಸೋಮನಕಟ್ಟಿ ಕವಿತೆ-ಹೇನು

ಏನು ಕೆಡುಗಾಲವೋ
ಈ ಜುಮ್ಮಿಯ ತಲೆಯಲ್ಲಿ
ಇವನು ನುಶಿಗಳೋ, ಹೇನುಗಳೋ
ಕಣ್ಣಿಟ್ಟು ನೋಡಿ ಲೆಕ್ಕ ಬೇರೆ ಹಾಕಬೇಕೆ

ಕೈ ಇಟ್ಟರೆ
ಪರಾಪರಾ ಎಂದು ಕೆರೆದು
ಕೈ ಕೊಸರಿ ಜಾಡಿಸಿದರೆ
ಬಿರುಸಿನ ಮಳೆ ಉದುರಿದಂತೆ
ರಪಾ ರಪಾ ನೆಲಕ್ಕೆ ಬೀತ್ತವೆ

ಉಗುರು ಸಂದಿನಲಿ ಸಿಕ್ಕ
ಅದೆಷ್ಟೋ
ಹೇನುಗಳು,ಹೇನು ಮರಿಗಳನ್ನು
ಪಿನ್ನಿನಿಂದ ಕೆಬರಿ
ನೆಲಕ್ಕೆ ಬೀಳಿಸಿದ್ದು
ಬಿದ್ದವುಗಳು ನೆಲೆಗಾಗಿ
ಗುಡ್ಡಕ್ಕೆ ಮೇಯಲು ಹೊರಟ
ಎಮ್ಮೆಯಂತೆ ಓಡುತ್ತವೆ

ಆಗೊಂದು ಈಗೊಂದು
ಕೂದಲ ಜೊತೆ
ಬೆಟ್ಟದ ಬೇರಿನಿಂದ ಮಂಗ ಇಳಿದಂತೆ
ಕೆಳಕ್ಕಿಳಿಯುವಂತೆ ಮುಂದೆ ಸಾಗುತ್ತವೆ

ಜಂಪರ್ ಹೊದಿಕೆಯ
ಬೆನ್ನು,ಭುಜ, ಮೇಲಿಂದಿಳಿದು
ಪಾದಯಾತ್ರೆ ಮಾಡಿದಂತೆ ಸಾಗುತ್ತಿರುತ್ತವೆ
ಕೆಲವೊಂದಿಷ್ಟು

ಜಂಪರ್ ಪುಗ್ಗಾ ಮಡಿಕೆಯ
ಮೂಲೆಯಲ್ಲಿಳಿದು ಮಲಗಿಕೊಂಡು
ಉಸಿರು ಉಳಿಸಿಕೊಂಡವುಗಳು ಕಡಿಮೆ ಅಷ್ಟೇ
ಅಂದ್ರೂ ಅವುಗಳ ಸಂತತಿ
ಬಟ್ಟೆ ತೊಳೆದಾಗ ಕೈಗೆ ಸಿಕ್ಕು
ಸಾಬೂನು ತಿಂದು
ಜೀವ ಕಳೆದುಕೊಂಡವುಗಳು
ಕೆಲವು
ಉಳಿದವು ಹೆಚ್ಚು

ಶಿರದ ಹೇರಳ ಮೇಲಿಂದಿಳಿದ
ಕೆಲವು ಸಂಸಾರಗಳು
ಲಂಗದ ಮಡಿಕೆಯಲಿ ಉಳಿದು
ಇಳಿದು
ಬೆಟ್ಟದ ಮೇಲೆ ನಡೆಯುವ
ಮೇವಿಗೆ ಅಲೆಯುವ ಎಮ್ಮೆಗಳ ತರ
ಸಾಲುಗಟ್ಟಿ ನಡೆಯುವುದು ಕಾಣುತ್ತವೆ

ಜುಮ್ಮಿಯ ಹೆಣ್ಣಮ್ಮ
ಒರಸದ ಕನ್ನಡಕ ಹಾಕಿದ
ಕಣ್ಣಿಗೆ ಕಂಡರೂ
ಕೊಲ್ಲಲು ಆಗುತ್ತಿಲ್ಲವೆಂದು
ಚಿಂತೆ ಮಾಡಿ
ತಲೆ ತುಂಬಿದ
ಹೇನಿಗೆ ಬೇನಿನ ಎಣ್ಣಿ ಹಚ್ಚಿ
ಸುಡುವ ನೀರಿನಿಂದ ಜಳಕ ಮಾಡಿಸುತ್ತಿದ್ದಳು

ಸೀರನ್ನೇ ಕೊಲ್ಲಲು
ಸೀರುಣಿಗೆ ಹಿಡಿದು
ಬೆಳಿಗ್ಗೆ ಸಂಜೆ ಸೀರುತ್ತಲೇ ಇದ್ದರೂ
ಸೀರು ಸಾಯದೆ
ಹೇನಾಗಿ ದೊಡ್ಡದಾಗಿ
ದಡ್ಡಿ ಜುಮ್ಮೀಯ ಉಂಡ ಊಟ
ಮೈಗೆ ಹತ್ತದಂತೆ
ತಾವೇ ತಿನ್ನುತ್ತಿದ್ದವು

ಏನು ಮಾಡಿದರೂ
ಹೋಗದ ಹೇನು
ಹತ್ತು ವರುಷದ ಜುಮ್ಮಿಯ ತಲೆಗೆ
ಖಾಯಂ ಆಗಿದ್ದವು

ಕೂದಲು ಕತ್ತರಿಸಿ ಹಾಕುವವರೆಗೂ
ಹೇನು ಸೀರು ಬದುಕಿ
ಕತ್ತರಿಯ ಬಾಯಿಗೆ ಕೂದಲ ಜೊತೆ ಸಿಕ್ಕು
ಬಲಿಯಾಗಿ ಬೇಲಿಗೋದವು

ಜುಮ್ಮಿಗೂ ಹೆಣ್ಣಮ್ಮಗೂ
ಹೇನು ಸೀರುಗೂ
ನಡೆದ ಯುದ್ಧದಲ್ಲಿ
ಜುಮ್ಮಿಗೆ ಜಯವಾಗಿ
ಹೆಣ್ಣಮ್ಮಗೆ ಹೇನಿನ ಚಿಂತೆ ತೊಲಗಿತು


Leave a Reply

Back To Top