ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಸಣ್ಣಕಥೆ-ಸ್ವೀಕೃತಿ

ಅರ್ಪಿತ ಇಪ್ಪತ್ತರ ಹರೆಯದ ತರುಣಿ. ದ್ವಿತೀಯ ವರ್ಷದ ಬಿಎಸ್ಸಿಯಲ್ಲಿ ಓದುತ್ತಿದ್ದ ಆಕೆ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೊದಲ ಐದು ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿದ್ದಳು. ಕೇವಲ ಪಠ್ಯವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಕೆ
 ಮೇಲುಗೈ ಸಾಧಿಸಿದ್ದಳು. ನನ್ನ ನೆಚ್ಚಿನ ವಿದ್ಯಾರ್ಥಿನಿಯಾಗಿದ್ದ ಆಕೆ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ. ನನ್ನ ಅತ್ಯಂತ ಆತ್ಮೀಯಳೂ ಆಗಿದ್ದ ಆಕೆ ತನ್ನ ಉತ್ತಮ ನಡೆ-ನುಡಿಗಳಿಂದ ಇಡೀ ಕಾಲೇಜಿನ ವಿದ್ಯಾರ್ಥಿಗಳ, ಶಿಕ್ಷಕರ ಪ್ರೀತಿಯನ್ನು ಗಳಿಸಿದ್ದಳು.

 ಕಾಲೇಜಿನಲ್ಲಿ ನಡೆಯುವ ಎಲ್ಲಾ ಸ್ಪರ್ಧೆಗಳಲ್ಲಿಯೂ ಭಾಗವಹಿಸುತ್ತಿದ್ದ ಆಕೆ ಹೇಳುತ್ತಿದ್ದುದು
” ವಿದ್ಯಾರ್ಥಿ ಜೀವನ ಬದುಕಿನ ಗೋಲ್ಡನ್ ಟೈಮ್. ಸ್ಪರ್ಧೆಗಳಲ್ಲಿ ಗೆಲ್ಲುವುದು ಬಿಡುವುದು ಎರಡನೇ ವಿಷಯ, ಆದರೆ  ಸ್ಪರ್ಧಿಸುವಾಗ ನಮ್ಮಲ್ಲಿ ಹೊಮ್ಮುವ ಉತ್ಸಾಹ, ಗೆಲ್ಲಲೇಬೇಕೆಂಬ ಹುಮ್ಮಸ್ಸು, ಛಲ, ಗೆದ್ದಾಗ ದೊರೆಯುವ ಮಹದಾನಂದ, ಸೋತರೂ ಕೂಡ ಮತ್ತೆ ಮತ್ತೆ ಪ್ರಯತ್ನಿಸಬೇಕೆಂಬ ಹಂಬಲ, ಟೀಂ ಸ್ಪಿರಿಟ್ ಎಲ್ಲವೂ ನಮ್ಮ ಮುಂದಿನ ಬದುಕಿನ ಪಯಣಕ್ಕೆ ಉತ್ತಮ ಮುನ್ನುಡಿ ಹಾಕಿ ಕೊಡಬಲ್ಲವು. ಅಂತೆಯೇ ಮುಂದಿನ ಬಾಳಿಗೆ ಸವಿ ನೆನಪಿನ ಬುತ್ತಿಯಾಗಬಲ್ಲವು. ಈ ನೆನಪಿನ ಬುತ್ತಿಯನ್ನು ಆಗಾಗ ಬಿಚ್ಚಿ ತುಸುವೇ ಸವಿದರೆ ಸವೆಯದಷ್ಟು ನೆನಪುಗಳನ್ನು ಈ ವಿದ್ಯಾರ್ಥಿ ಜೀವನ ಕಟ್ಟಿಕೊಡುತ್ತದೆ” ಎಂಬುದು ಆಕೆಯ ವಾದವಾಗಿತ್ತು.
 ಮೂರನೇ ವರ್ಷದ ಪದವಿ ತರಗತಿಯ ಕೊನೆಯ ದಿನ ಮಾಡಿದ ವಿದಾಯ ಭಾಷಣದಲ್ಲಿ ವೇದಿಕೆಯ ಮೇಲೆ ಆಕೆ ಹೀಗೆಂದು ಎಲ್ಲರಿಗೂ ಹೇಳಿದಾಗ ಪ್ರೇಕ್ಷಕರ ಚಪ್ಪಾಳೆಯ ಕರತಾಡನ ಮುಗಿಲು ಮುಟ್ಟಿತ್ತು. ನನಗಂತೂ ಆನಂದದಿಂದ ಮನಸ್ಸು ತುಂಬಿ ಬಂದಿತ್ತು.

 ಮುಂದಿನ ಒಂದೆರಡು ವರ್ಷಗಳ ಕಾಲ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿದ್ದ ಆಕೆ ನನ್ನ ಸಂಪರ್ಕದಲ್ಲಿದ್ದಳು. ಆದರೆ ಅಚಾನಕ್ಕಾಗಿ ಆಕೆಯ ಸಂಪರ್ಕ ಕಡಿತಗೊಂಡಿತು. ಇತ್ತ ಕಾಲೇಜು, ಪಾಠ ಪ್ರವಚನಗಳು ಮಕ್ಕಳು ಮತ್ತು ಸಂಸಾರದ ಜಂಜಾಟದಲ್ಲಿ ನಾನು ಕೂಡ ಆಕೆಯನ್ನು ಮರೆತೆಬಿಟ್ಟೆ ಎನ್ನುವಂತಾಗಿತ್ತು.

 ಕೆಲವು ವರ್ಷಗಳ ಬಳಿಕ ಮಕ್ಕಳ ಶಾಲಾ ರಜೆಯ ಅವಧಿಯಲ್ಲಿ ಜಗತ್ಪ್ರಸಿದ್ಧ ಹಂಪೆಯನ್ನು ನೋಡಲೆಂದು ಮಕ್ಕಳನ್ನು ಕರೆದುಕೊಂಡು ನಾವಿಬ್ಬರೂ ದಂಪತಿಗಳು ಹಂಪಿಗೆ ತೆರಳಿದೆವು.

 ಹಂಪಿ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ನಿಂತು ಕೈಮುಗಿದು ಕಡ್ಲೆಕಾಳು ಗಣಪ, ಸಾಸಿವೆ ಕಾಳು ಗಣಪ, ತ್ರಿಕೂಟೇಶ್ವರ, ಹಜಾರ ರಾಮನ ಗುಡಿ, ಪುರಂದರ ಮಂಟಪ, ವಿಜಯ ವಿಠಲ ಗುಡಿ ಹೀಗೆ ಎಲ್ಲವನ್ನು ವೀಕ್ಷಿಸಿ ಅಲ್ಲಲ್ಲಿ ಫೋಟೋಗಳನ್ನು ತೆಗೆದುಕೊಂಡು ಮಹಾನವಮಿ ದಿಬ್ಬದ ಬಳಿ ಬಂದು ಸುತ್ತಣ ವಿಹಂಗಮ ದೃಶ್ಯವನ್ನು ನೋಡುತ್ತಿರುವಾಗ ದೂರದಲ್ಲಿ ವೀಲ್ ಚೇರಿನಲ್ಲಿ ಬರುತ್ತಿದ್ದ ಯುವತಿಯೊಬ್ಬಳು ‘ಕ್ಷಮಾ ಮೇಡಂ’ ಎಂದು ಕೂಗಿದ್ದು ಕೇಳಿ ಇಷ್ಟು ದೂರದ ಹಂಪಿಯಲ್ಲಿ ನನ್ನನ್ಯಾರು ಕೂಗುತ್ತಿರುವರು! ಎಂಬ ಅಚ್ಚರಿಯಿಂದ ತಿರುಗಿ ನೋಡಿದೆ.

 ಏನಾಶ್ಚರ್ಯ!! ನನ್ನ ಪ್ರೀತಿಯ ವಿದ್ಯಾರ್ಥಿನಿ  ಅರ್ಪಿತ. ಸ್ವಯಂಚಾಲಿತ ಎಲೆಕ್ಟ್ರಾನಿಕ್ ವೀಲ್ ಚೇರಿನ ಮೇಲೆ ಕುಳಿತು ನನ್ನತ್ತ ಧಾವಿಸಿದ್ದಳು. ಒಂದು ಕ್ಷಣ ಕಕ್ಕಾವಿಕ್ಕಿಯಾದರೂ  ಸಾವರಿಸಿಕೊಂಡು ಆಕೆಯ ಮುಂದೆ ನಿಂತ ನನ್ನನ್ನು ತನ್ನೆರಡೂ ಕೈಗಳಿಂದ ಬಳಸಿ ಬಾಚಿ ತಬ್ಬಿದ್ದಳು ಅರ್ಪಿತ.

 ಕ್ಷೇಮ ಸಮಾಚಾರಗಳೆಲ್ಲ ಮುಗಿದ ನಂತರ ತನ್ನ ಜೊತೆಗೆ ಇರುವವರನ್ನು ತನ್ನ ಸಹೋದ್ಯೋಗಿಗಳು ಎಂದು ಪರಿಚಯಿಸಿದಳು ಅರ್ಪಿತ. ಮುಗುಳ್ನಕು ನಮಸ್ಕರಿಸಿದ ಅವರೆಲ್ಲರೂ ಸುತ್ತ ತಿರುಗಾಡಿ ಬರುತ್ತೇವೆ ಎಂದು ಹೇಳಿ ನಮ್ಮಿಬ್ಬರಿಗೂ ಪ್ರತ್ಯೇಕ ಮಾತನಾಡಲು ಅವಕಾಶ ಕಲ್ಪಿಸಿ ಹೊರಟು ಹೋದರು.ನನ್ನ ಪತಿ ಮತ್ತು ಮಕ್ಕಳಿಗೆ ಈಗಾಗಲೇ ಅರ್ಪಿತಳ ಪರಿಚಯವಿದ್ದು ಆಕೆಯನ್ನು ಮಾತನಾಡಿಸಿ ಐಸ್ ಕ್ರೀಮ್ ತಿನ್ನುವ ನೆವ ಮಾಡಿ ಅಲ್ಲಿಂದ ಹೊರಟು ಹೋದರು.

 ನನ್ನ ಮುಖದಲ್ಲಿನ ಪ್ರಶ್ನಾರ್ಥಕ ಚಿಹ್ನೆಯನ್ನು ಅರಿತ ಅರ್ಪಿತ ಎಂ ಎಸ್ ಸಿ ಯಲ್ಲಿ ಗೋಲ್ಡ್ ಮೆಡಲ್ ಸಂಪಾದಿಸಿದ ನನ್ನನ್ನು ಅಭಿನಂದಿಸಿ ನಮ್ಮ ವಿಶ್ವವಿದ್ಯಾಲಯದವರು ಇಟ್ಟುಕೊಂಡಿದ್ದ ಕಾರ್ಯಕ್ರಮವನ್ನು ಮುಗಿಸಿ, ಎಲ್ಲ ಪ್ರಾಧ್ಯಾಪಕರನ್ನು ಸ್ನೇಹಿತರನ್ನು ಬೀಳ್ಕೊಂಡು ಅಪ್ಪ ಅಮ್ಮನ ಜೊತೆ ಕಾರು ಹತ್ತಿದ್ದೊಂದೆ  ನೆನಪು ಮೇಡಂ. ಇನ್ನೂ ಊರು ದಾಟಿರಲಿಲ್ಲ ಅಷ್ಟೇ… ರಸ್ತೆ ಮಧ್ಯದ ಡಿವೈಡರ್ ಮೇಲೆ ಗಾಡಿಯನ್ನು ಹತ್ತಿಸಿದ್ದ ಡ್ರೈವರ. ಯಾರಿಗೂ ಪ್ರಾಣಾಪಾಯವಾಗದಿದ್ದರೂ ನನ್ನ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದು ಸೊಂಟದ ಕೆಳಭಾಗ ಸಂಪೂರ್ಣವಾಗಿ ನಿಷ್ಕ್ರಿಯವಾಯಿತು.

 ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ಕಣ್ಬಿಟ್ಟು ನೋಡಿದಾಗ ಅತ್ತು ಸೋತು ಎಲ್ಲವನ್ನು ಕಳೆದುಕೊಂಡಂತೆ  ಬಳಲಿದ ಅಪ್ಪ-ಅಮ್ಮ, ನಿರಾಶೆಯೇ ಮೈವೆತ್ತಿದ ತಮ್ಮ ತಂಗಿ ನನಗೆ ಎಚ್ಚರವಾದದ್ದನ್ನು ಕಂಡು ಅಪಾರ ಸಂತಸಪಟ್ಟರು.
 ಅಪ್ಪ ನನ್ನನ್ನು ಕರೆದುಕೊಂಡು ಹಲವಾರು ಆಸ್ಪತ್ರೆಗಳಿಗೆ ಎಡತಾಕಿದರು…. ಆದರೆ ಸೊಂಟಕ್ಕೆ ಬಿದ್ದಿರುವ ಬಲವಾದ ಪೆಟ್ಟಿನಿಂದ ಯಾವುದೇ ರೀತಿಯ ಪ್ರಯತ್ನ ಮಾಡಿದರೂ ನಾನು ನಡೆಯಲು ಅಸಾಧ್ಯ ಎಂಬುದನ್ನು ವೈದ್ಯರು ಖಚಿತಪಡಿಸಿದರು.

 ರಿಸಲ್ಟ್ ಗಾಗಿ ಕಾಯುತ್ತಿರುವಾಗಲೇ ನಾನು ಅರ್ಜಿ ಹಾಕಿದ್ದ ಕೇಂದ್ರ ಸರ್ಕಾರದ ಕೆಮಿಸ್ಟ್ ಹುದ್ದೆಯ ನೇಮಕಾತಿ ಆದೇಶ ಸುಮಾರು ಆರು ತಿಂಗಳ ನಂತರ ನನ್ನ ಕೈ ಸೇರಿದಾಗ ನನಗಾದ ಸಂತಸ ಅಷ್ಟಿಷ್ಟಲ್ಲ. ನನ್ನ ಈ ಕಷ್ಟವನ್ನು ಕಡೆಗಾಣಿಸಲು ದೇವರೇ ನೀಡಿದ ಸದವಕಾಶವೆಂದು ಭಾವಿಸಿ ಕೆಲಸಕ್ಕೆ ಹಾಜರಾದೆ.
 ನಿಮಗೆ ಗೊತ್ತಾ ಮೇಡಂ, ನನ್ನ ಕಚೇರಿಯಲ್ಲಿ ನನ್ನದು ನಾನ್ ಟ್ರಾನ್ಸ್ಪರೆಬಲ್ ಜಾಬ್. ನನಗಾಗಿ ನನ್ನ ಕಚೇರಿಯ ಹತ್ತಿರದಲ್ಲಿಯೇ ಇರುವ ಕ್ವಾಟ್ರಸ್ ನಲ್ಲಿ ಮನೆ ಕೊಟ್ಟಿದ್ದಾರೆ. ಅಪ್ಪ ಅಮ್ಮ ನಾನು ತಮ್ಮ ತಂಗಿ ಈಗ ಅಲ್ಲಿಯೇ ವಾಸವಾಗಿದ್ದೇವೆ.ಅಪ್ಪ ನನಗೆ ಎಲೆಕ್ಟ್ರಾನಿಕ್ ವೀಲ್ ಚೇರ್ ಕೊಡಿಸಿದ್ದಾರೆ..ಮನೆಯಿಂದ ಕೂಗಳತೆ ದೂರದಲ್ಲಿರುವ ಆಫೀಸಿಗೆ ಹೋಗಿ ಬರಲು ವೀಲ್ ಚೇರ್ ತುಂಬಾ ಅನುಕೂಲಕರವಾಗಿದೆ. ಮನೆ ಮತ್ತು ಕಚೇರಿಗಳಲ್ಲಿ ನನಗಾಗಿ ಇಳಿಜಾರು ವ್ಯವಸ್ಥೆ ಅಳವಡಿಸಲಾಗಿದ್ದು, ಯಾರನ್ನೂ ಆಶ್ರಯಿಸದೆ ನಾನೊಬ್ಬಳೇ ನನ್ನ ಕೆಲಸವನ್ನು ಮಾಡಿಕೊಳ್ಳಬಲ್ಲೆ  ಪ್ರಶಾಂತವಾದ ವಾತಾವರಣವಿರುವ ಸುಮಾರು 200 ಎಕರೆ ವಿಸ್ತೀರ್ಣದ ತೋಪು, ಗಿಡ ಮರ, ಉದ್ಯಾನಗಳಿಂದ  ಕೂಡಿದ ಬಹುದೊಡ್ಡ ಔಷಧಿ ತಯಾರಿಕಾ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾನು ಇದೀಗ ಅತ್ಯಂತ ಸಂತಸದಿಂದ ಇದ್ದೇನೆ.

 ಮುಂದೇನು ಎಂಬ ನನ್ನ ಪ್ರಶ್ನೆಗೆ ನಸುನಗುತ್ತಾ ಅರ್ಪಿತ…. ಅಪಘಾತವಾದುದ್ದು ನನ್ನ ಬದುಕಿನ ಡೆಡ್ ಎಂಡ್ ಎಂದು ನಾನು ಭಾವಿಸಿಲ್ಲ ಮೇಡಂ,ಬದುಕು ಸಾಗಿಸಲು ಕೇವಲ ಹೆದ್ದಾರಿಗಳು ಮಾತ್ರ ಬೇಕಾಗಿಲ್ಲ, ಕಾಲುದಾರಿಗಳು ಬಳಸುದಾರಿಗಳು ಸಾಕಷ್ಟು ಇವೆ. ನಾನು ಕೇವಲ ಕಾಲುಗಳನ್ನು ಕಳೆದುಕೊಂಡಿದ್ದೇನೆಯೇ ಹೊರತು ನನ್ನ ಆತ್ಮವಿಶ್ವಾಸವನ್ನಲ್ಲ.
 ಬದುಕಿನ ದಾರಿ ಬಲು ವಿಶಾಲವಾದದ್ದು, ಹಲವಾರು ತಿರುವುಗಳಿಂದಲೂ ಕೂಡಿರಬಹುದು  ಆದರೆ ಯಾವುದಕ್ಕೂ ಅಂಜದೆ ಬೆದರದೆ ಬದುಕಬಲ್ಲೆನೆಂಬ ಆತ್ಮವಿಶ್ವಾಸ ನನ್ನಲ್ಲಿದೆ. ನನಗೆ ಬೇಕಾಗಿರುವುದು ನಿಮ್ಮ ಪ್ರೀತಿಯ  ಆಶೀರ್ವಾದ ಮಾತ್ರ ಎಂದು ಹೇಳಿದಾಗ ನನ್ನ ಮುಂದೆ ಓಡಾಡಿಕೊಂಡಿದ್ದ ಪುಟ್ಟ ಅರ್ಪಿತ ಹಿಮಾಲಯ ಪರ್ವತದಷ್ಟು ಅಗಾಧವಾಗಿ ಬೆಳೆದುಬಿಟ್ಟಳು ಎಂಬ ಭಾವ ಮನದಲ್ಲಿ ಹೊಮ್ಮಿ
ನಿಧಾನವಾಗಿ ಬಾಗಿ ಆಕೆಯನ್ನು ಮೆಲ್ಲನೆ ತಬ್ಬಿ ಹಣೆಗೆ ಮುತ್ತಿಟ್ಟ ಆಕೆಯ ಪ್ರೀತಿಯ ಕ್ಷಮಾ ಟೀಚರ್ ಕಣ್ಣಲ್ಲಿ ಆನಂದ ಭಾಷ್ಪ ಚಿಮ್ಮಿತ್ತು.


One thought on “ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಸಣ್ಣಕಥೆ-ಸ್ವೀಕೃತಿ

Leave a Reply

Back To Top