ಧಾರಾವಾಹಿ-41
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಇಷ್ಟು ಹೊತ್ತೂ ಸಹಿಸಲಾರದ ನೋವನ್ನು ಅನುಭವಿಸಿ ಬಳಲಿದರೂ ಕೂಡಾ ಕಂದನ ಮುಖ ಕಂಡೊಡನೆ ಅವಳಿಗೆ ಅಪರಿಮಿತ ಸಂತೋಷವಾಯಿತು. ಮಮತೆಯ ಮಹಾಪೂರವೇ ಅವಳ ಹೃದಯದಲ್ಲಿ ಉಕ್ಕಿ ಹರಿಯಿತು. ಅವಳ ಸಂತೋಷದ ಮುಗುಳ್ನಗುವನ್ನು ಕಂಡ ಪ್ರಸೂತಿ ತಜ್ಞೆ “ಯಾವ ಮಗು ಎಂದು ತಿಳಿಯುವ ಬಯಕೆ ನಿನಗೆ ಇಲ್ಲವೇ?” ಎಂದಾಗ ಕುತೂಹಲದಿಂದ ಕೂಡಿದ ನೋಟ ಅವರೆಡೆಗೆ ಹರಿಸಿದಳು. ಅದನ್ನು ಅರಿತ ವೈದ್ಯೆ ” ನಿನಗೆ ಮುದ್ದಾದ ಗಂಡು ಮಗು ಹುಟ್ಟಿದ್ದಾನೆ ಎಂದು ಹೇಳಿ ಮಗುವನ್ನು ಮುಖ್ಯ ದಾದಿಯ ಕೈಗೆ ಕೊಟ್ಟು ಅದರ ಮೈಯನ್ನು ತೆಳುವಾದ ಹತ್ತಿಯಿಂದ ಒರೆಸಿ ಬೆಚ್ಚಗೆ ಹತ್ತಿಯ ಬಟ್ಟೆಯಲ್ಲಿ ಸುತ್ತಿ ತೊಟ್ಟಿಲಲ್ಲಿ ಮಲಗಿಸಲು ಹೇಳಿ, ಸ್ವಲ್ಪ ಹೊತ್ತಿನ ಬಳಿಕ ಸುಮತಿಯನ್ನು ವಾರ್ಡ್ ಗೆ ಸ್ಥಳಾಂತರಿಸಲು ಸೂಚಿಸಿ ಸುಮತಿಯ ತಲೆಯನ್ನು ನೇವರಿಸಿ ಮುಗುಳ್ನಕ್ಕು ಕೊಠಡಿಯಿಂದ ವೈದ್ಯರು ಹೊರ ನಡೆದರು. ಮಗು ಜೋರಾಗಿ ಅಳುತ್ತಲೇ ಇತ್ತು. ಅದರ ಅಳುವನ್ನು ಕೇಳಿ ಸುಮತಿ ಮುಗುಳ್ನಕ್ಕು ಮನದಲ್ಲೇ ಅಂದಳು….” ಕಂದಾ ಅಳಬೇಡ ಸ್ವಲ್ಪ ಹೊತ್ತು ಅಷ್ಟೇ…ನೀನು ಈಗ ನನ್ನ ಮಡಿಲನ್ನು ಸೇರುವೆ”… ಎಂದುಕೊಳ್ಳುತ್ತಾ ಆಯಾಸವಾಗಿದ್ದ ಕಾರಣ ಹಾಗೇ ಕಣ್ಣುಮುಚ್ಚಿ ಮಲಗಿದಳು. ಹೊರಗೆ ಕಾತುರದಿಂದ ಕಾಯುತ್ತಿದ್ದ ವೇಲಾಯುಧನ್ ವೈದ್ಯರನ್ನು ಕಂಡು ಕೂಡಲೇ ಎದ್ದು ನಿಂತು ನಮಸ್ಕರಿಸಿದರು. ವೈದ್ಯರು ಪ್ರತಿಯಾಗಿ ನಮಸ್ಕರಿಸಿ ” ವೇಲಾಯುಧನ್ ಸುಮತಿಗೆ ಸುಖ ಪ್ರಸವವಾಗಿದೆ…ನಿಮ್ಮ ವಂಶೋದ್ಧಾರಕನಿಗೆ ಜನ್ಮ ಕೊಟ್ಟಿದ್ದಾಳೆ…. ಮಗ ಮುದ್ದಾಗಿದ್ದಾನೆ…ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ….ಸ್ವಲ್ಪ ಸಮಯದ ಬಳಿಕ ವಾರ್ಡ್ಗೆ ತರುತ್ತಾರೆ…ಆಗ ನೀವು ಹೋಗಿ ನೋಡಬಹುದು” ಎಂದು ಹೇಳಿದಾಗ ವೇಲಾಯುಧನ್ ಎರಡೂ ಕೈಗಳನ್ನು ಜೋಡಿಸಿ ಕೃತಜ್ಞಾಭಾವದಿಂದ ನಮಸ್ಕರಿಸಿದರು. ಸಂತೋಷದಿಂದ ಅವರಿಗೆ ಮಾತೇ ಬಾರದಾಗಿತ್ತು. ಪತ್ನಿಯನ್ನು ಹಾಗೂ ಮಗನನ್ನು ನೋಡುವ ತವಕದಿಂದ ಬಾಗಿಲೆಡೆಗೆ ನೋಡುತ್ತಾ ನಿಂತರು.
ವೈದ್ಯರು ತಮ್ಮ ಕೊಠಡಿಯ ಕಡೆ ನಡೆದರು. ಕ್ಷಣಗಳು ಯುಗಗಳಂತೆ ಅನಿಸಿತು ವೇಲಾಯುಧನ್ ರವರಿಗೆ. ಸ್ವಲ್ಪ ಹೊತ್ತಿಗೆಲ್ಲ ಒಳಗಿಂದ ದಾದಿ ಬಂದು ವೇಲಾಯುಧನ್ ರನ್ನು ಕರೆದು. ನಗುತ್ತಾ “ಇದೋ ನೋಡಿ ನಿಮ್ಮ ಕುಲಪುತ್ರ” ಎಂದರು.. ಅವರ ಕೈಯಲ್ಲಿ ಹತ್ತಿಯ ಬಟ್ಟೆಯಲ್ಲಿ ಬೆಚ್ಚಗೆ ಮಲಗಿರುವ ಕೆಂದಾವರೆ ಹೂವಂತೆ ಕಂಗೊಳಿಸುತ್ತಾ ಇದ್ದ ತನ್ನ ಮಗನನ್ನು ನೋಡಿದರು. ಅವರ ಮುಖ ಅರಳಿತು. ತನಗೆ ಮಗ ಹುಟ್ಟಿದ್ದಾನೆ ಎಂದು ಅತೀವ ಸಂತೋಷವಾಯಿತು. ಮೆಲ್ಲಗೆ ಮಗುವಿನ ಕೆನ್ನೆಯನ್ನು ಮುಟ್ಟಿದರು. ಕೂಡಲೇ ಆ ಹಸುಗೂಸು ಜೋರಾಗಿ ಅಳಲು ಪ್ರಾರಂಭಿಸಿತು. ಇದನ್ನು ಕಂಡ ದಾದಿ… “ಇಷ್ಟೂ ದಿನ ಅಮ್ಮನ ಹೊಟ್ಟೆಯಲ್ಲಿ ಅಮ್ಮನ ಸ್ಪರ್ಶವನ್ನು ಅನುಭವಿಸಿದ್ದ ನಿಮ್ಮ ಮಗನಿಗೆ ನಿಮ್ಮ ಒರಟು ಸ್ಪರ್ಶ ಹೊಸದೆನಿಸಿದೆ ಹಾಗಾಗಿ ಅಳುತ್ತಿದ್ದಾನೆ”….ಎಂದರು. ಸ್ವಲ್ಪ ಹೊತ್ತಿಗೆಲ್ಲ ಸುಮತಿಯನ್ನು ವಾರ್ಡ್ಗೆ ಕಡೆದುಕೊಂಡು ಬಂದರು. ದಾರಿಯ ಜೊತೆ ಪತಿಯು ತನ್ನ ಕಡೆಗೆ ಬರುತ್ತಿರುವುದನ್ನು ಕಂಡು ಸಣ್ಣ ನಗುವೊಂದು ಸುಮತಿಯ ಮುಖದಲ್ಲಿ ಮೂಡಿ ಮಾಯವಾಯ್ತು. ಮಂಚದ ಬಳಿ ಬಂದ ವೇಲಾಯುಧನ್
“ಹೇಗಿದ್ದೀಯಾ ಸುಮತಿ ಎಂದು ಕೇಳಿದರು”…ಅದಕ್ಕವಳು ಚೆನ್ನಾಗಿದ್ದೇನೆ ಎನ್ನುವಂತೆ ತಲೆ ಅಲ್ಲಾಡಿಸಿದಳು. ಅತ್ಯಂತ ಆಯಾಸ ಆಗಿದ್ದ ಕಾರಣ ಬಾಯಿಂದ ಮಾತೇ ಹೊರಡದಾಗಿತ್ತು ಅವಳಿಗೆ. ಅಲ್ಲಿಯೇ ಸ್ವಲ್ಪ ಹೊತ್ತು ಇದ್ದು ಕೈಯಲ್ಲಿದ್ದ ಕೈಚೀಲವನ್ನು ಅಲ್ಲಿಯೇ ಇದ್ದ ಸಣ್ಣ ಮೇಜಿನ ಮೇಲೆ ಇಟ್ಟು ಮತ್ತೆ ಬರುವೆ ಎಂದು ಹೇಳಿ ವೇಲಾಯುಧನ್ ಮನೆ ಕಡೆಗೆ ಹೊರಟರು. ದಾದಿಯು ಇನ್ನೈದು ದಿನಗಳಲ್ಲಿ ತಾಯಿ ಮತ್ತು ಮಗುವನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸುವುದಾಗಿ ವೇಲಾಯುಧನ್ ಗೆ ತಿಳಿಸಿದರು. ಸುಮತಿ ತನ್ನ ಪಕ್ಕದಲ್ಲಿ ಮಲಗಿದ್ದ ಪುಟ್ಟ ಮಗುವನ್ನು ಕಣ್ಣೆವೆ ಇಕ್ಕದೇ ನೋಡಿದಳು.
ಮುದ್ದಾದ ಕಮಲದಂತೆ ಇದ್ದ ಅವನ ಮುಖವನ್ನು ದಿಟ್ಟಿಸಿ ನೋಡಿದಳು. ತನ್ನ ಅಮ್ಮನ ಛಾಯೆಯನ್ನು ಆ ಕಂದನ ಮುಖಾರವಿಂದದಲ್ಲಿ ಕಂಡು ಹಿಗ್ಗಿದಳು. ಮನದಲ್ಲೇ ಅಮ್ಮನನ್ನು ನೆನೆದಳು. ತನಗೆ ಈ ಮುದ್ದು ಕಂದನನ್ನು ವರವಾಗಿ ಕೊಟ್ಟಿದ್ದಾಕಾಗಿ ಶತಕೋಟಿ ನಮನವನ್ನು ತನ್ನ ಪ್ರಿಯ ದೈವ ಶ್ರೀಕೃಷ್ಣನಿಗೆ ಅರ್ಪಿಸಿದಳು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಸುಮತಿ ಮತ್ತು ಮಗುವನ್ನು ವೇಲಾಯುಧನ್ ನೇರವಾಗಿ ಅಕ್ಕನ ಮನೆಗೆ ಕರೆದುಕೊಂಡು ಬಂದಿದ್ದರು. ಅಕ್ಕ ಆರತಿ ಎತ್ತಿ ಮೂವರನ್ನೂ ಒಳಗೆ ಬರಮಾಡಿಕೊಂಡರು. ಅಕ್ಕನ ಮನೆಯಲ್ಲಿ ಅಮ್ಮನ ಅನುಪಸ್ಥಿತಿಯಲ್ಲಿಯೇ ಸುಮತಿಯ ಬಾಣಂತನ ನಡೆಯಿತು. ಒಂದು ಶುಭ ಮುಹೂರ್ತದಲ್ಲಿ ಅಪ್ಪ ಅಕ್ಕ ಬಾವ ಅವರ ಮಗ, ತಮ್ಮಂದಿರು ಹಾಗೂ ಕೆಲವು ಪರಿಚಿತರ ಸಮ್ಮುಖದಲ್ಲಿ ತೊಟ್ಟಿಲಿಗೆ ಹಾಕುವ ಶಾಸ್ತ್ರ ಸರಳವಾಗಿ ನಡೆಯಿತು. ಮೂರು ತಿಂಗಳು ಕಳೆದ ನಂತರ ವೇಲಾಯುಧನ್ ಪತ್ನಿ ಹಾಗೂ ತಮ್ಮ ವಂಶೋದ್ಧಾರಕನನ್ನು ಮನೆ ತುಂಬಿಸಿಕೊಂಡರು. ಸುಮತಿಗಂತೂ ಈಗ ದಿನ ಹೇಗೆ ಉರುಳುತ್ತಿದೆಯೋ ತಿಳಿಯದಾಯಿತು. ಗಂಡನ ಸೇವೆಯಲ್ಲಿ ಮಗನ ಲಾಲನೆ ಪಾಲನೆಯಲ್ಲಿ ಸಂತೋಷದಿಂದ ದಿನ ಕಳೆಯುತ್ತಾ ಇದ್ದಳು. ಮಗನಿಗೆ ನಾಮಕರಣದ ಶಾಸ್ತ್ರ ಮುಗಿಸಬೇಕಿತ್ತು. ಸರಳವಾಗಿ ಸಕಲೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮಗನಿಗೆ ಹೆಸರಿಡುವ ಶಾಸ್ತ್ರವೂ ಮುಗಿಯಿತು. ಅಮ್ಮನ ಕೊರತೆ ಎಲ್ಲರ ಜೀವನದಲ್ಲೂ ಎದ್ದು ಕಾಣುತ್ತಿತ್ತು. ಅಮ್ಮನ ಆರೈಕೆ ಇಲ್ಲದೆಯೇ ತಮ್ಮಂದಿರು ಕೂಡಾ ಬೆಳೆದು ದೊಡ್ಡವರಾದರು.