ಗಜಲ್ ಜುಗಲ್ ಬಂದಿ-ನಯನ. ಜಿ. ಎಸ್. ಮತ್ತು ವಿಜಯಪ್ರಕಾಶ್ ಕಣಕ್ಕೂರು.


ಕಂಡ ಸೋಲುಗಳನು ಬದಿಗಿಟ್ಟುಬಿಡು ಬದುಕುವುದು ಇನ್ನೂ ಇದೆ
ಅನುಭವಗಳ ಸತ್ವವ ಅರಿತುಬಿಡು ಅನುಭಾವಿಸುವುದು ಇನ್ನೂ ಇದೆ

ಗಿರಿ ಕಂದರಗಳ ಮೇರೆಗಳ ದಾಟಿದರಷ್ಟೇ ನದಿ ಸಾಗರಗಳ ಮಿಲನ
ಎಡರು ತೊಡರುಗಳ ಕಹಿಯ ಸರಿಸಿಬಿಡು ಎದುರಿಸುವುದು ಇನ್ನೂ ಇದೆ

ಇತಿಹಾಸ ಸೃಜಿಸುವ ಶಾಹಿಗೂ ಗೊತ್ತಿದೆ ಸವೆದ ಪಥಗಳ ಪಾಡೇನೆಂದು
ಹೆಜ್ಜೆಗಳ ಕಹಿ ಗುರುತುಗಳನು ಒರೆಸಿಬಿಡು ಹಸನಾಗುವುದು ಇನ್ನೂ ಇದೆ

ಬಿಸಿಲ ಝಳದಿ ಬೆಂದರಷ್ಟೇ ಅರಿವಾಗುವುದು ಜೀವನದ ಒಳ ತತ್ವಗಳು
ಕಂಬನಿ ಇತ್ತ ತುಮುಲಗಳ ಜಾಡಿಸಿಬಿಡು ಸಾರ್ಥಕ್ಯವಾಗುವುದು ಇನ್ನೂ ಇದೆ

ಭರವಸೆಯ ನಯನಗಳಲಿ ಚೊಕ್ಕವಾದ ಕನಸುಗಳಲಿದೆ ಬಾಳ್ವೆಯ ವಿಜಯ
ನಿರಾಸೆ ಕಲ್ಪಿಸಿದ ಹತಾಶೆಯ ತೊರೆದುಬಿಡು ಪಕ್ವವಾಗುವುದು ಇನ್ನೂ ಇದೆ.



ದಿಟ್ಟ ನಿಲುವುಗಳನು ತೆಗೆದುಕೊಂಡುಬಿಡು ಸಾಧಿಸುವುದು ಇನ್ನೂ ಇದೆ
ಆರ್ಜಿಸಿದುದು ಅಲ್ಪವೆಂದು ತಿಳಿದುಬಿಡು ಶೋಧಿಸುವುದು ಇನ್ನೂ ಇದೆ

ತಮದಲಿ ತಾಳ್ಮೆಗೆಡದಿರು ಕಾಯಬೇಕು ಉದಿಸಲು ಭರವಸೆಯ ಬೆಳಕು
ಶ್ರಮದ ಗೆಲುವು ಶಾಶ್ವತ ಅರ್ಥೈಸಿಬಿಡು ಸಾಕ್ಷಿಯಾಗುವುದು ಇನ್ನೂ ಇದೆ

ಮಾಡಲೇನಿದೆ ಕೆಲಸ ಅನಗತ್ಯ ಗತದ ನೆನಪಿಗೆ ಬಿಡುವಿರದ ಇಂದಿನಲಿ
ಮರೆತು ಮುಂದಡಿಯಿಡಲು ಕಲಿತುಬಿಡು ಮೆರೆಯುವುದು ಇನ್ನೂ ಇದೆ

ಅಭೀಪ್ಸೆಯ ಬೆನ್ನೇರಿ ಅವಿರತ ಯತ್ನಿಸಲು ಕೈಗೂಡದ ಕನಸುಗಳುಂಟೇ
ಮನದ ನೋವಿಗೆ ಬಾಗಿದ ಬೆನ್ನನು ತಟ್ಟಿಬಿಡು ಗೆಲ್ಲುವುದು ಇನ್ನೂ ಇದೆ

ಛಲದಿಂದ ಪಡೆದ ವಿಜಯದ ಹರುಷಕೆ ನಯನಗಳ ಕಾಂತಿ ಹೆಚ್ಚುವುದು
ಹುಚ್ಚು ಆಸೆಗೆ ತುಸು ಬಣ್ಣ ಹಚ್ಚಿಬಿಡು ಸಾಕಾರಗೊಳಿಸುವುದು ಇನ್ನೂ ಇದೆ.

———————–

Leave a Reply

Back To Top