‘ಅಪ್ಪನೆಂಬ ಆಕಾಶ’ ಲೇಖನ-ಡಾ.ಸುಮತಿ ಪಿ.

ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪ……”

 ಚಲನಚಿತ್ರದ ಈ ಹಾಡಿನ ಸಾಲುಗಳು ಕೇಳಿದಾಗಲೆಲ್ಲ ಒಮ್ಮೆ ಅಪ್ಪನನ್ನು ತಬ್ಬಿಕೊಂಡು ಬಿಡಬೇಕು, ಅತ್ತು ಬಿಡಬೇಕು ಅನಿಸುತ್ತದೆ. ಈ ಒಂದೊಂದು ಸಾಲು ಅಪ್ಪನಿಗಾಗಿಯೇ ರಚಿಸಿದಂತಿದೆ.
ಅಪ್ಪ ಅಂದರೆ ಅದ್ಭುತ, ಅಮೋಘ, ಆನಂದ, ಆದರ್ಶ, ಅನಂತ, ಮಕ್ಕಳ ಜಗತ್ತು, ಮಕ್ಕಳ ಮೊದಲ ಸ್ನೇಹಿತ. ಅಪ್ಪ ಎಂದರೆ ಆಕಾಶ. ಕೇಳಿದ್ದನ್ನು ಕೊಡುವವ ಅಪ್ಪ, ಕೈ ಹಿಡಿದು ‘ನಿನ್ನೊಂದಿಗೆ ನಾನಿರುವೆ ‘ಎಂದು ನಡೆಸಿ,ಜೀವನ ನಡೆಯನ್ನು ಕಲಿಸುವವನು ಅಪ್ಪ. ಮಕ್ಕಳನ್ನು ಹೆಗಲ ಮೇಲೆ ಕೂರಿಸಿ ಪ್ರಪಂಚವನ್ನು  ತೋರಿಸುವ ಹೃದಯವಂತನಲ್ಲವೇ ಅಪ್ಪ,ಕಷ್ಟಗಳಲ್ಲೂ ಸದಾ ಕಾಲ ನಗು ಮುಖವ ತೋರು ಎಂದು ತಿಳಿಸುವವನು ಅಪ್ಪ, ಬದುಕಿನ ಉದ್ದಕ್ಕೂ ಭರವಸೆಯ ಬೆಳಕಲ್ಲೇ ಸಾಗುತ್ತಾ, ಜೀವನದ ಅರ್ಥ ತಿಳಿಸಿ, ಛಲದಿಂದ ಮುನ್ನುಗ್ಗುವಂತೆ ಹೇಳಿ ಹಿಂಬಾಲಿಸುವವನು  ಅಪ್ಪ. ಎಷ್ಟೇ ಕಷ್ಟ ಬಂದರೂ, ಛಲ ಬಿಡದೆ ಹೆಜ್ಜೆ ಮುಂದಿಡುವ ಸಾಹುಕಾರ.ಅಪ್ಪ ಬರೀ ಅಪ್ಪ ಮಾತ್ರ ಅಲ್ಲ. ಸ್ನೇಹಿತನಾಗಿ, ಹಿತೈಷಿಯಾಗಿ,ತಪ್ಪು ಹೆಜ್ಜೆ ಇಟ್ಟಾಗ ತಿದ್ದಿ ತಿಳಿ ಹೇಳಿ ಸರಿದಾರಿಯನ್ನು ತೋರಿಸುವವನು ಅಪ್ಪ.
ಎಷ್ಟೋ ಮನೆಗಳಲ್ಲಿ ಅಪ್ಪ ಅಮ್ಮನ ಸ್ಥಾನ ತುಂಬುತ್ತಾನೆ. ಅಮ್ಮ ಇಲ್ಲದ ಕೊರತೆಯನ್ನು ಮಕ್ಕಳ ಅನುಭವಕ್ಕೆ ಬಾರದಂತೆ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ.

“ಅಪ್ಪ” ಎನ್ನುವ ಶಬ್ದದಲ್ಲೇ ಅದೆಂಥಾ ಗತ್ತು,! ಗಾಂಭೀರ್ಯ,ಅಪ್ಪ ಅನ್ನುವ ಪದದಲ್ಲಿ ಅದೆಷ್ಟೋ ಭಾವನೆಗಳು ಬೆಸೆದುಕೊಂಡಿವೆ,ಅದೇ ರೀತಿ ಅಪ್ಪನೆಂದರೆ ಮಕ್ಕಳಿಗೆ ಭಯವೂ ಇರುತ್ತದೆ. ಮಗುವಿಗೆ ಜೀವ ನೀಡುವವಳು ತಾಯಿಯಾದರೆ,ಜೀವನ ನೀಡುವವನು ಅಪ್ಪ. ತನ್ನ ಮಗುವಿಗೆ ಅಥವಾ ಮಕ್ಕಳಿಗೆ ಜೀವನದ ಯಾವುದೇ ಅಗತ್ಯತೆಗಳ ಕೊರತೆ ಆಗದಂತೆ ನೋಡಿಕೊಳ್ಳುವವನು ತಂದೆ. ಆದರೆ ಕೆಲವೊಮ್ಮೆ ಕೆಲವರು ತಾಯಿಯನ್ನು ಹಚ್ಚಿಕೊಂಡಂತೆ ತಂದೆಯನ್ನು ಹಚ್ಚಿಕೊಳ್ಳುವುದಿಲ್ಲ. ಹಾಗಂತ ತಂದೆಯಲ್ಲಿ ಪ್ರೀತಿ ಇಲ್ಲ ಎಂದುಕೊಂಡರೇ ಅದು ತಪ್ಪಾದಿತು. ಆತನಲ್ಲಿ ಅತೀವ ಒಲವಿದೆ. ಆದರೆ ತಾಯಿಯ ಹಾಗೆ ಅದನ್ನು ತೋರಿಸಿಕೊಡಲಾರ. ಅಪ್ಪನ ಪ್ರೀತಿ ಅರ್ಥ ಆಗೋದು ಬಹಳ ಕಷ್ಟ. ಅಪ್ಪ ಎಂದರೆ ನಮ್ಮೆಲ್ಲಾ ಕೋರಿಕೆಗಳನ್ನು ಈಡೇರಿಸುವ ಮ್ಯಾಜಿಕ್ ಬಾಕ್ಸ್ ಇದ್ದ ಹಾಗೆ. ಸಣ್ಣ ಸ್ಲೇಟಿನಿಂದ ಹಿಡಿದು ನಮಗೆ ಬೇಕಾಗುವ ಎಲ್ಲದ್ದನ್ನು ತನ್ನ ಶಕ್ತಿಯನುಸಾರ ತಂದು ಕೊಡುವುದಿಲ್ಲವೇ ಅಪ್ಪ!!?  ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ. ಮಕ್ಕಳ ಮನಸ್ಸಿಗೆ ಜಗತ್ತನ್ನೇ ತೋರಿಸುವವನು ಅಪ್ಪ. ಮಕ್ಕಳ ಸರಿ ತಪ್ಪುಗಳನ್ನು ತಿದ್ದುವ ಮಾರ್ಗದರ್ಶಕ.
ಆದರೆ ಕೆಲವೊಮ್ಮೆ ಅಪ್ಪ ಎಂದರೆ ಕೆಲವು ಮಕ್ಕಳ ಮೊಗದಲ್ಲಿ   ಭಯದ ಭಾವ ಮೂಡಬಹುದು. ಸಣ್ಣಪುಟ್ಟ ಕಾರಣಕ್ಕೂ ಬೈಯುವ ಅಪ್ಪಂದಿರು ಕೂಡ ಇರುತ್ತಿದ್ದರು. ಆತನ ಕೋಪಕ್ಕೆ ಗುರಿಯಾಗಲು ಬಯಸದ ಮಕ್ಕಳ ಬೇಡಿಕೆ ಗಳು ಏನಿದ್ದರೂ ಮೊದಲು ತಾಯಿಯ ಬಳಿಯೇ. ಏನನ್ನೇ ಕೇಳಬೇಕಾದರೂ ಅದಕ್ಕೆ ಅಮ್ಮನ ಮಧ್ಯಸ್ಥಿಕೆ ಬೇಕೆ ಬೇಕು. ಅಪ್ಪನ ಮುಂದೆ ಧೈರ್ಯವಾಗಿ ಹೋಗಿ ಕೇಳುವ ಧೈರ್ಯ ಇಲ್ಲವೇ ಇಲ್ಲ. ಹಾಗಿದ್ದಾಗ ಎದುರು ನಿಂತು ಮಾತನಾಡುವುದೇ ಇಲ್ಲ.ಹಾಗೆಂದು ಅಪ್ಪ ಸರ್ವಾಧಿಕಾರಿಯಲ್ಲ.

 ಹೆಣ್ಣು ಮಕ್ಕಳಿಗೆ ಅಪ್ಪ ಅಂದ್ರೆ ಹೆಚ್ಚು ಪ್ರೀತಿ, ಅವರ ಭವ್ಯವಾದ ಭವಿಷ್ಯಕ್ಕೆ ಶುಭಹಾರೈಸಿ ಮನದಲ್ಲೇ ಸಂತೋಷ ಪಡುವ ಜೀವ ಅಪ್ಪ.ಹೆಣ್ಣು ಮಗಳು ಗಂಡನ ಮನೆಗೆ ಹೊರಟು ನಿಂತಾಗ ತನ್ನೆಲ್ಲ ನೋವನ್ನು ಮನದಲ್ಲೇ ಮುಚ್ಚಿಟ್ಟು, ದುಃಖ ತುಂಬಿದ ಮುಖದಲ್ಲಿ ಮಂದಹಾಸ, ಮುಗುಳು ನಗೆ ತೋರಿಸುವವನು ಅಪ್ಪ

ಆದರೆ ಅಪ್ಪ ತೋರಿಸುವ ಪ್ರೀತಿಗೆ ವ್ಯತಿರಿಕ್ತವಾದ ಬೆಳವಣಿಗೆಗಳನ್ನು ಎಷ್ಟೋ ಕುಟುಂಬಗಳಲ್ಲಿ ಕಾಣುತ್ತಿದ್ದೇವೆ.ಮಕ್ಕಳಿಗೆ ಅಪ್ಪ ತರುವ ವಸ್ತುಗಳು ಬೇಕೇ ವಿನಃ ಅಪ್ಪ ಮಾತ್ರ ಬೇಡ. ಆಟಿಕೆ, ಬಟ್ಟೆ, ಪುಸ್ತಕ, ಮೊಬೈಲ್‌ ಎಲ್ಲದಕ್ಕೂ ಅಮ್ಮನ ಹಿಂದೆ ಸುತ್ತೋ ಮಕ್ಕಳಿಗೆ ಅಪ್ಪ ನಮಗಾಗಿ ಏನು ಮಾಡುತ್ತಾರೆ ಅನ್ನುವುದು ತಿಳಿಯುವುದೇ ಇಲ್ಲ. ಅಪ್ಪನೂ ಅಷ್ಟೇ, ತಾನು ಮಾಡಿದ್ದನ್ನು ಎಂದಿಗೂ ಮನೆಯಲ್ಲಿ ಎಲ್ಲರೆದುರಿಗಾಗಲಿ ಅಥವಾ ಮಕ್ಕಳ ಮುಂದೆ ಆಗಲಿ ಹೇಳುವುದೂ ಇಲ್ಲ. ಜತೆಗೆ ಗಂಭೀರ ಮುಖ ಮುದ್ರೆ, ಸಿಡುಕು ಸ್ವಭಾವ. ಮಕ್ಕಳು ಬೆಳೆದಂತೆಲ್ಲ ಹೆಗಲೇರುವ ಜವಾಬ್ದಾರಿಗಳು ಅಪ್ಪನನ್ನು ತನ್ನವರಿಂದ ಇನ್ನಷ್ಟು ದೂರ ಕೊಂಡೊಯ್ಯುತ್ತವೆ.

ವೇಗವಾಗಿ ಬದಲಾಗುವ ಸಮಾಜದಲ್ಲಿ ಇಂದು ಅಪ್ಪ, ಮಕ್ಕಳ ಬೇಕು-ಬೇಡಗಳೆಲ್ಲವನ್ನು ಈಡೇರಿಸುವುದಕ್ಕೆ ಮಾತ್ರ ಸೀಮಿತವಾಗಿ ಬಿಟ್ಟಿದ್ದಾರೆ. ಅದರಲ್ಲೂ ನಗರದಲ್ಲಿ ಇರುವ ಅಪ್ಪಂದಿರಂತೂ ಒಂದು ಹೆಜ್ಜೆ ಮುಂದೆ ಸಾಗಿ ಮಕ್ಕಳ ಪಾಲಿಗೆ ಬೇಕಾದಾಗ ಹಣ ಸುರಿವ ಎಟಿಎಂ ಆಗಿ ಬಿಟ್ಟಿದ್ದಾರೆ. ಬೇಕಾದುದನ್ನು ಕೊಳ್ಳಲು, ಕೇಳಿದಷ್ಟು ಹಣ ಕೊಡುವ  ಅಪ್ಪನಿಗೆ ಮಕ್ಕಳು ಏನು ಮಾಡುತ್ತಾರೆ, ಓದುತ್ತಾರೆಯೇ ಅಥವಾ ಕೆಟ್ಟವರ ಸಹವಾಸ ಮಾಡಿ ಹಾಳಾಗುತ್ತಿದ್ದಾರೆಯೇ ಅಂತ ತಿಳಿದುಕೊಳ್ಳಲೂ ಪುರುಸೊತ್ತಿಲ್ಲ. ಗಾಣದ ಎತ್ತಿನಂತೆ ದುಡಿಯುವುದು, ಕೈಗೆ ಸಿಕ್ಕ ಸಂಬಳವನ್ನು ತನ್ನ ಕುಟುಂಬಕ್ಕೆ ಖರ್ಚು ಮಾಡುವುದಷ್ಟೇ ಅಪ್ಪನ ಜೀವನ ಆಗಿ ಹೋಗಿದೆ. ಮಕ್ಕಳ ಬಾಲ್ಯ, ಆಟ, ಪಾಠ, ಪ್ರವಾಸದಲ್ಲಿ ಕಾಲ ಕಳೆಯಬೇಕಿದ್ದ ಅಪ್ಪ ಇಂದು ಕೆಲಸದ ಒತ್ತಡದಲ್ಲಿ ಎಲ್ಲೋ ಕಳೆದು ಹೋಗುತ್ತಿದ್ದಾನೆ.
ಮಕ್ಕಳಾಗಿದ್ಧಾಗಲೇ ಅಪ್ಪನ ಪ್ರೀತಿಯನ್ನು ಅರಿಯದವರು ವಯಸ್ಸಾದ ಮೇಲೆ ಭಾವಹೀನ ಜೀವಿಯಾಗುತ್ತಾರೆ. ಮಕ್ಕಳು ಬಾಯ್ತುಂಬ ಅಪ್ಪ ಅಂದಾಗ ಖುಷಿಯಾಗಿ ಬಿಗಿದಪ್ಪುತ್ತಿದ್ದ ಅಪ್ಪ, ಮಕ್ಕಳು ಬೆಳೆಯುತ್ತಾ ಸ್ವಲ್ಪ ದೂರಾನೆ ಉಳಿಯಬೇಕಾದ ಪರಿಸ್ಥಿತಿಯೂ ಬರುವುದು. ಕೆಸರಿನ ಬಟ್ಟೆ ತೊಟ್ಟ ಅಪ್ಪನನ್ನು ಬಾಯ್ತುಂಬ ಅಪ್ಪಾ ಎಂದು ಕರೆಯಲು ಮುಜುಗರಪಡುವ ಮಕ್ಕಳೂ ಇಲ್ಲದ್ದಿಲ್ಲ.
ಆದರೆ ಅಪ್ಪ ಯಾವಾಗಲೂ ಮನೆಯ ಜೋರಿನ, ಬೋರಿನ ವ್ಯಕ್ತಿ ಅನಿಸಿದರೂ,ಆತ ಎಂದಿಗೂ ಅವನ ಮನದ ಭಾವನೆ ತೋರಿಸುವುದಿಲ್ಲ. ಮಕ್ಕಳ ಮುಂದೆ ರೇಗಾಡಿ ಕೆಟ್ಟ ವ್ಯಕ್ತಿ ಎನಿಸಿದರೂ ಬೆನ್ನ ಹಿಂದೆ ಸದಾ ಒಳಿತು ಬಯಸುವ ನಿಸ್ವಾರ್ಥಿ ಜೀವಿ ಅವನು. ತನ್ನ ಮನೆಯಿಂದ, ಮತ್ತೂಂದು ಮನೆ ಬೆಳಗಲು ಹೊರಡುವ ಮಗಳನ್ನು ಕಳುಹಿಸುವಾಗ ಬರುವ ಕಣ್ಣೀರನ್ನು ಅಪ್ಪ ತೋರಿಸುವಂತಿಲ್ಲ.  ತಾಯಿಯ ಕಣ್ಣೀರಿಗೆ ಅರ್ಥವಿದೆ, ಆದರೆ ತಂದೆಯ ಅಳುವಿಗೆ ಬೆಲೆ ಇಲ್ಲ ಅನ್ನುವುದು ಮಾತ್ರ ವಿಪರ್ಯಾಸ.

ಅಪ್ಪನ ಗದರುವ ಮೀಸೆಯ ಹಿಂದಿರುವ ಪ್ರೀತಿಯನ್ನು ಹುಡುಕುವ ಪ್ರಯತ್ನವನ್ನು ಮಕ್ಕಳಾದವರು ಮಾಡಬೇಕು. ಅಪ್ಪನೂ ಅಮ್ಮನಂತೆ ಭಾವಜೀವಿ ಅನ್ನುವುದು ಈ ಜಗಕ್ಕೆ ಗೊತ್ತಾಗಲೇ ಬೇಕು. ಆ ಮೂಲಕವಾದರೂ ಅಪ್ಪನ ಹೃದಯವಂತಿಕೆ, ನಿಸ್ವಾರ್ಥ ಮನೋಭಾವ ಅನಾವರಣ ಗೊಳ್ಳಬೇಕು.
ನಮ್ಮ ಸಮಾಜದಲ್ಲಿ ಅಪ್ಪನೆಂದರೆ ದರ್ಪ, ಅಧಿಕಾರ ತೋರಿ ಮಕ್ಕಳನ್ನು ಹದ್ದು ಬಸ್ತಿನಲ್ಲಿಡುವವ, ಭೌತಿಕ ಅಗತ್ಯತೆಗಳನ್ನು ಪೂರೈಸುವವ ಎಂಬುವುದು ಗಟ್ಟಿಯಾಗುತ್ತಿರುವಾಗ
ಇನ್ನೊಂದು ಸ್ತರದಲ್ಲಿ ಕಾಲ ಬದಲಾದ ಹಾಗೆ ಅಪ್ಪನ ಪಾತ್ರವೂ ಬದಲಾಗುತ್ತಾ ಸಾಗುತ್ತಿದ್ದು, ತನ್ನೆದೆಯ ಒಳಗಡೆ ತಾಯ್ತನವನ್ನು ಜಾಗೃತಗೊಳಿಸಿಕೊಳ್ಳುವ ಹೊರಳು ಹಾದಿಯಲ್ಲಿದ್ದಾನೆ ಇಂದು ಅಪ್ಪ

ಆಧುನಿಕ ಬದುಕಿನ ಪರಿಣಾಮ ,ಹೆಚ್ಚುತ್ತಿರುವ ವಿಭಕ್ತ ಕುಟುಂಬಗಳು, ವಿಸ್ತರಿಸಿದ ಆರ್ಥಿಕ ಚಿಂತನೆಗಳು ಹೆಣ್ಣಿಗೆ ಮನೆಯ ಹೊರಗಿನ ದುಡಿಮೆಯ ಅವಕಾಶವನ್ನು ತೆರೆದಿದೆ. ಗಂಡು ಹೊತ್ತಿದ್ದ ಆರ್ಥಿಕ ಜವಾಬ್ದಾರಿಯನ್ನ ಹೆಣ್ಣೂ ಹೊರುತ್ತಿರುವುದರಿಂದ‌ ಅವನು ಅನಿವಾರ್ಯವಾಗಿ ಕೌಟುಂಬಿಕ ಜವಾಬ್ದಾರಿ ಹೊರಬೇಕಿದೆ. ಗಂಡ ಹೆಂಡತಿ ಇಬ್ಬರ ದುಡಿಮೆಯ ಕಾರಣ ಇಬ್ಬರೂ ಕೂಡಿಯೇ ಮಕ್ಕಳನ್ನು ಸಾಕುವ ಅಗತ್ಯ ಹೆಚ್ಚುತ್ತಿದೆ. ಮಕ್ಕಳ ಲಾಲನೆ, ಪಾಲನೆ ಪೋಷಣೆ ಅವರೊಂದಿಗಿನ ಆಪ್ತ ಸಂಬಂಧ. ಅದು ಅಮ್ಮನಿಂದ ಮಾತ್ರ ಸಾಧ್ಯವೆಂಬ ಸವಕಲು ಆಲೋಚನೆಗಳು ಬದಲಾಗುತ್ತ ಬರಡಾದ ಅಪ್ಪನೆದೆ ಆರ್ದ್ರಗೊಳ್ಳುತ್ತಾ, ಪ್ರೀತಿ ಕಾಳಜಿ ಕರುಣೆ ಮಮತೆ ವಾತ್ಸಲ್ಯ ಚಿಗುರುತ್ತಿದೆ.

ಇಂದು ಅಪ್ಪ ಬರೀ ಅಪ್ಪನಾಗಿಯೇ ಉಳಿದಿಲ್ಲ. ಸ್ನೇಹಿತನಾಗಿ, ಹಿತೈಷಿಯಾಗಿ ಬೆಳೆದಿದ್ದಾನೆ. ಎಷ್ಟೋ ಮನೆಗಳಲ್ಲಿ ಅಪ್ಪ ಅಮ್ಮನ ಸ್ಥಾನ ತುಂಬುತ್ತಾನೆ. ಇಂದಿನ ಬಹುತೇಕ ಮಕ್ಕಳಿಗೆ ಅಪ್ಪನ ಕೈನ ಛಡಿಯೇಟು ತಿಂದ ಅನುಭವವಿಲ್ಲ. ಅಪ್ಪ ಒಬ್ಬ ಗೆಳೆಯ. ಎಲ್ಲಾ ರೀತಿಯ ವಿಷಯಗಳನ್ನು ಹಂಚಿಕೊಳ್ಳಬಲ್ಲ ಆಪ್ತಮಿತ್ರ, ಮಕ್ಕಳಿಗೆ ಅಪ್ಪನ ಬಗ್ಗೆ ಭಯವಿಲ್ಲ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅಪ್ಪ ಕೂಡ ಬದಲಾಗಿದ್ದಾನೆ, ಬದಲಾಗುತ್ತಿದ್ದಾನೆ.
 ಅಂದಿನ ಅಪ್ಪನಲ್ಲಿದ್ದ ದರ್ಪ, ಕೋಪ, ಇಂದಿನ ಅಪ್ಪಂದಿರಲ್ಲಿ ಇಲ್ಲ. ಅಪ್ಪ ಎಂದರೆ ಈಗಿನ ಮಕ್ಕಳಲ್ಲಿ ಭಯದ ಬದಲು ಮಂದಹಾಸ ಮೂಡುತ್ತದೆ.ಅವರ ಬಯಕೆಗಳಿಗೆ ಸಮಸ್ಯೆಗಳಿಗೆ ಕಿವಿಯಾಗುತ್ತಾನೆ. ಅವರ ಕೋರಿಕೆಗಳ ಹಿಂದಿನ ಅವಶ್ಯಕತೆಗಳನ್ನು ಅರಿಯಲು ಮನಸ್ಸು ಮಾಡುತ್ತಿದ್ದಾನೆ. ಹಿಂದೆಲ್ಲಾ ತನ್ನ ಇಚ್ಚೆಗನುಸಾರವಾಗಿ ಮಕ್ಕಳು ಬೆಳೆಯಬೇಕು ಎಂದು ಬಯಸುತ್ತಿದ್ದ ಅಪ್ಪ. ಈಗ ಮಕ್ಕಳ ಓದಿನ, ಆಟದ, ಸ್ನೇಹಿತರ ಅಷ್ಟೆ ಏಕೆ ಸಂಗಾತಿಯ ಆಯ್ಕೆಯ ವಿಷಯದಲ್ಲೂ ಸ್ವಾತಂತ್ರ್ಯ ನೀಡಿದ್ದಾನೆ. ಮಕ್ಕಳ ಮನಸ್ಸನ್ನು ಅರಿತಿದ್ದಾನೆ. ಅಪ್ಪ ಮಕ್ಕಳ ಅಂತರ ಕಡಿಮೆಯಾಗುತ್ತಿದೆ. ಇಂದು ವಿಕೇಂಡ್ ಬಂತು ಅಂದರೆ ಸಾಕು. ಮಾಲ್. ಸಿನಿಮಾ ಅಂತಾ ಮಕ್ಕಳು ಅಪ್ಪನ ಜೊತೆಗೆ ಸುತ್ತುತ್ತಾರೆ.ಪ್ರತಿಯೊಬ್ಬರ ಜೀವನದಲ್ಲಿ, ಒಳ್ಳೆಯದನ್ನು ಕಲಿಸುವ ಮೊದಲ ಶಿಕ್ಷಕ ತಂದೆ.ಪ್ರತಿಯೊಬ್ಬರ ಜೀವನದಲ್ಲಿ ತಂದೆ  ಮಾರ್ಗದರ್ಶನ ನೀಡುತ್ತಾರೆ ಇದರಿಂದ ಮಕ್ಕಳು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ ವಾಗುತ್ತದೆ.  ಅಪ್ಪ ಮಗುವಿನ ಬೆಂಬಲವಾಗಿ ಸದಾ ಯಾವಾಗಲೂ ಜೊತೆಯಾಗಿ ಇರುತ್ತಾನೆ. ಪ್ರತಿಯೊಂದು ರೀತಿಯ ಸಮಸ್ಯೆಗೆ ಪರಿಹಾರದೊಂದಿಗೆ ಸಿದ್ಧನಾಗಿರುತ್ತಾನೆ. ತಂದೆಯು ಕುಟುಂಬದ ಆಧಾರ ಸ್ತಂಭವಾಗಿದ್ದಾನೆ.ತಂದೆ ಮತ್ತು ಮಕ್ಕಳ ಸಂಬಂಧ ಈ ಪ್ರಪಂಚದಲ್ಲೇ ಅತ್ಯಾಪ್ತ .


Leave a Reply

Back To Top