ಕಾವ್ಯ ಸಂಗಾತಿ
ಕಂಸ
ಅಪರಾಧಿ ನಾನಲ್ಲ
ಕಣ್ತೆರೆದು ನೋಡಿದರೆ ಸುತ್ತಲು ಭಿತ್ತಿ
ಕನಸುಗಳ ದಾಟಿ ಹೋಗಲು ಮರೀಚಿಕೆಯಾದ ಹಾದಿ
ಕಷ್ಟ ಸುಖವ ಹಂಚಿಕೊಳ್ಳಲು
ನನ್ನವರು ಮೊದಲಿಲ್ಲ
ಬಂಧನದಲ್ಲಿ ಬದುಕು ಸವೆಯಿತಲ್ಲ ಖೈದಿಯಾಗಿ
ಅಪರಾಧಿ ನಾನಲ್ಲ
ಕೊಲೆ ಸುಲಿಗೆ ದರೋಡೆ ಮಾಡದೆ
ಧನಿಕರ ಕುತಂತ್ರಕ್ಕೆ ಬಲಿಯಾದ
ಮುಗ್ಧ ಮನಸ್ಸಿನ ಅಮಾಯಕ ಈ ನಾಯಕ
ಆಕ್ರೋಶದ ಧ್ವನಿ ಸೆರೆಮನೆಯಲ್ಲಿ ಅವಿತು
ರೆಕ್ಕೆಗಳಿದ್ದು ಹಾರಲಾರದ ದಯನೀಯ ಸ್ಥಿತಿ ತಲುಪಿದ
ಪುಟ್ಟ ಗುಬ್ಬಿಯಂತಾಗಿದೆ
ಅಪರಾಧಿ ನಾನಲ್ಲ
ನೋಡಲು ವನಬನ ವೃಕ್ಷಗಳಿಲ್ಲ
ಈಜಲು ಹಳ್ಳಕೊಳ್ಳ ನದಿ ಕಡಲಿಲ್ಲ
ಸವಾರಿ ಮಾಡಲು ಬಸ್ಸು ಕಾರು ಕೊನೆಗೆ ಮುರಿದ ಸೈಕಲ್ಲಿಗೂ ಗತಿ ಇಲ್ಲ
ಬಣ್ಣ ಬಣ್ಣದ ಹಕ್ಕಿಗಳ ದರ್ಶನವಿಲ್ಲ
ಇಂಪಾದ ಚಿಲಿಪಿಲಿ ಕಲರವ ಆಲಿಸದ ನತದೃಷ್ಟ ನಾನಾದೆ
ಅಪರಾಧಿ ನಾನಲ್ಲ
ಗೋಳು ಕೇಳುವರಿಲ್ಲ ಗೊಡವೆ ಬಯಸುವರಿಲ್ಲ
ರಂಗು ರಂಗಿನ ಚಿತ್ತಾರದ ಅಂಗಿಗಳಿಲ್ಲ
ಹಬ್ಬ ಹರಿದಿನಗಳಿಲ್ಲ ಔತಣ ಕೂಟಗಳಿಲ್ಲ
ಸಂಗಾತಿ ಜೊತೆಗಿಲ್ಲ ದಾಂಪತ್ಯ ಸುಖವಿಲ್ಲ
ನೆಲವೇ ಹಾಸಿಗೆ ಹೊದಿಯಲು ಅರಿವೆ ಇಲ್ಲದೆ
ಮಾಶಕದ ಕರ್ಕಶ ಶಬ್ದಕ್ಕೆ ಕಣ್ಣುಗಳು ಸೋತು
ಬೆಳಕು ಹರಿದು ಇರುಳು ಸರಿಯುತ್ತಿದೆ
ಅಪರಾಧಿ ನಾನಲ್ಲ
——————————-
ಕಂಸ