ಧಾರಾವಾಹಿ-ಅಧ್ಯಾಯ –39
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ತಾಯ್ತನದ ಸುಖ
ದಿನಗಳು ಕಳೆದಂತೆ ಹೊಟ್ಟೆ ತೊಳೆಸುವುದು ವಾಕರಿಕೆ ಇದೆಲ್ಲವೂ ಕಡಿಮೆ ಆಯ್ತು. ಲವಲವಿಕೆಯಿಂದ ದೈನಂದಿನ ಕೆಲಸಗಳನ್ನು ಸುಮತಿ ಮಾಡುತ್ತಿದ್ದಳು. ವೇಲಾಯುಧನ್ ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದರು. ಮುಂದೆ ಹುಟ್ಟುವ ಮಗುವಿನ ಬಗ್ಗೆ ಅನೇಕ ಕನಸುಗಳನ್ನು ಇಬ್ಬರೂ ಹೆಣೆಯುತ್ತಿದ್ದರು. ಮೂರು ತಿಂಗಳು ತುಂಬಿ ನಾಲ್ಕು ತಿಂಗಳು ಪ್ರಾರಂಭವಾಯಿತು. ಪತಿಗೆ ತಿಂಡಿ ಮತ್ತು ಮಧ್ಯಾಹ್ನಕ್ಕೆ ಅಡುಗೆಯನ್ನು ಮಾಡಿಕೊಟ್ಟು ಅವರು ಕೆಲಸಕ್ಕೆ ಹೋದ ನಂತರ ತಿಂಡಿ ತಿಂದು ಎಂದಿನಂತೆ ಉಳಿದ ಕೆಲಸಗಳನ್ನು ಮುಗಿಸಿದಳು. ಹಾಗೇ ಸುಮ್ಮನೆ ಸ್ವಲ್ಪ ಹೊತ್ತು ಮಲಗೋಣ ಎಂದುಕೊಂಡು ಬಂದು ಮಂಚದ ಮೇಲೆ ಮಲಗಿದಳು. ಈಗೆಲ್ಲಾ ಅವಳಿಗೆ ಯಾವ ಯೋಚನೆಯೂ ಮನಸ್ಸನ್ನು ಕಾಡುತ್ತಾ ಇರಲಿಲ್ಲ. ಪುಟ್ಟ ಮಗುವಿನ ಮುಖವೊಂದು ಬಿಟ್ಟರೆ ಅವಳ ಕಣ್ಣ ಮುಂದೆ ಏನೂ ಗೋಚರಿಸುತ್ತಾ ಇರಲಿಲ್ಲ. ಆದರೆ ಅಮ್ಮನ ನೆನಪು ಮಾತ್ರ ಸದಾ ಕಾಡುವುದು ಬಿಡಲಿಲ್ಲ. ಹಾಗೇ ಅಮ್ಮನನ್ನು ನೆನೆದು ಮಲಗಿದವಳ ಹೊಟ್ಟೆಯ ಬಲ ಭಾಗದಲ್ಲಿ ಏನೋ ಮಿಸುಕಾಡಿದ ಹಾಗೆ ಅನುಭವವಾಯ್ತು. ಹೊಟ್ಟೆಯನ್ನು ಮುಟ್ಟಿ ನೋಡಿದಳು ಮತ್ತೆ ಮಿಸುಕಾಟದ ಸುಳಿವಿಲ್ಲ. ಓಹ್!! ಇದು ನಾನು ಅಮ್ಮನನ್ನು ನೆನೆಯುತ್ತಾ ಮಲಗಿದ್ದೇನಲ್ಲ ಅದಕ್ಕೆ ಹೀಗೆ ಅನಿಸಿದೆ ಎಂದು ಸುಮ್ಮನಾದಳು. ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ಅದೇ ಅನುಭವವಾಯ್ತು. ಹೊಟ್ಟೆಯ ಬಲಭಾಗದಲ್ಲಿ ಮತ್ತೊಮ್ಮೆ ಕೈ ಇಟ್ಟಳು. ಆಗ ಹೊಟ್ಟೆಯ ಒಳಗಿರುವ ಜೀವವು ತನ್ನ ಕೈಯನ್ನು ಮೆದುವಾಗಿ ಸ್ವರ್ಶಿಸಿದಂತೆ ಅವಳಿಗೆ ಅನಿಸಿತು. ಸುಮತಿಯ ಮುಖ ಅರಳಿತು. ಓಹ್!! ನನ್ನ ಉದರದಲ್ಲಿ ಇರುವ ಪುಟ್ಟ ಜೀವವೊಂದು ತನ್ನಿರುವನ್ನು ತಿಳಿಸುತ್ತಿದೆ ಎಂಬುದು ಈಗ ಅವಳಿಗೆ ಮನವರಿಕೆಯಾಯಿತು.
ಅಕ್ಕ ಹೇಳಿದ್ದ ನೆನಪು ಮೂರು ತಿಂಗಳು ತುಂಬಿದ ನಂತರ ಮಗುವಿನ ಸಣ್ಣ ಮಿಸುಕಾಟದ ಅನುಭವ ಆಗುತ್ತದೆ.
ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ ಎಂದಿದ್ದಳು. ಓಹ್!! ಈಗ ಅಕ್ಕ ಹೇಳಿದ ಅನುಭವ ನನಗೆ ಆಗುತ್ತಿದೆ.
ಮತ್ತೆ ಮತ್ತೆ ಹೊಟ್ಟೆಯ ಮೇಲೆ ಕೈ ಇಟ್ಟು ಆ ಮಿಸುಕಾಟದ
ಅನುಭವ ಪಡೆದು ಪುಳಕಿತಳಾದಳು. ಒಡಲಲ್ಲಿ ಇರುವ ಜೀವದ ಆ ಮಿಸುಕಾಟದ ಸ್ಪರ್ಶಕ್ಕೆ ಅವಳ ತಾಯ್ತನದ ವಾತ್ಸಲ್ಯ ಉಕ್ಕಿತು. ನನಗಾಗಿ ಒಂದು ಜೀವವು ಈಗ ಮಿಡಿಯಲು ಪ್ರಾರಂಭಿಸಿದೆ. ನನ್ನದೇ ಕುಡಿ ನಾನಿದ್ದೇನೆ ನಿನಗೆ ಎಂದು ಹೇಳುತ್ತಿದೆ. ನಾನೆಂತಹಾ ಪುಣ್ಯವಂತೆ ಎಂದುಕೊಳ್ಳುತ್ತಾ ಕಣ್ಣು ಮುಚ್ಚಿದಳು. ಪುಟ್ಟ ಮಗುವಿನ ಮುಖ ಕಣ್ಣ ಮುಂದೆ ಕಂಡು ಸಂತೋಷಗೊಂಡಳು.
ಮಗುವು ಮುದ್ದಾಗಿ ನಕ್ಕಂತೆ ಭಾಸವಾಯಿತು ಅವಳಿಗೆ.
ತಾಯ್ತನ ಇಷ್ಟು ಸುಖವೇ?ಇಷ್ಟು ದಿನ ತನಗಾಗುತ್ತಿದ್ದ ಸಂಕಟ ವಾಕರಿಕೆ ಎಲ್ಲವೂ ತಾಯ್ತನದ ಕುರುಹು ಅಲ್ಲವೇ? ಅಮ್ಮ ಹೇಳುತ್ತಿದ್ದ ಮಾತುಗಳು ನೆನಪಾದವು ತಾಯಿಯಾಗುವುದು ಬಹು ಜನ್ಮದ ಪುಣ್ಯ. ಮಗುವನ್ನು ಅದರ ಮುಗ್ಧ ನಗುವನ್ನು ನೋಡಿದಾಗ ತಾಯಿ ಇಹವನ್ನೇ ಮರೆಯುವಳು. ಅಮ್ಮನ ಮಾತು ಈಗ ಅವಳಿಗೆ ನಿಜ ಅನಿಸಿತು. ಹಾಗಾಗಿ ಅಲ್ಲವೇ ನಮ್ಮನ್ನೆಲ್ಲಾ ಅಮ್ಮ ಅಷ್ಟು ಪ್ರೀತಿಸುತ್ತಾ ಇದ್ದಿದ್ದು. ಅಮ್ಮನ ಪ್ರೀತಿ ವಾತ್ಸಲ್ಯ ಕಾಳಜಿ ಈ ಲೋಕದಲ್ಲಿ ಎಲ್ಲೂ ಸಿಗದು. ಅಪ್ಪ ನಮ್ಮಿಂದ ಅಮ್ಮನನ್ನು ದೂರ ಮಾಡಿದ್ದಾರೆ. ಈಗ ಅಮ್ಮ ನನ್ನ ಜೊತೆ ಇದ್ದಿದ್ದರೆ ಎಷ್ಟು ಚೆಂದವಿತ್ತು ಎಂದು ಯೋಚಿಸುತ್ತಿದ್ದ ಸುಮತಿಯ ಮನದಲ್ಲಿ ಈಗ ಅಮ್ಮನ ಮುದ್ದು ಮುಖ ಮೂಡಿತು. ಅವಳಿಗೆ ಅರಿವಿಲ್ಲದೇ ಕಣ್ಣ ಅಂಚು ಒದ್ದೆಯಾಯಿತು.
ಅಮ್ಮನ ನೆನಪಲ್ಲೇ ಎಷ್ಟು ಹೊತ್ತು ಹಾಗೇ ಮಲಗಿದ್ದಳೋ ತಿಳಿಯದು. ಅಮ್ಮನ ನೆನಪಲ್ಲಿಯೇ ಇದ್ದ ಅವಳಿಗೆ ನಿದ್ರೆ ಆವರಿಸಿತು. ಕನಸಲ್ಲಿ ಅಮ್ಮನ ಕೈ ತನ್ನ ತಲೆಯನ್ನು ಸ್ಪರ್ಶಿಸಿ ನೇವರಿಸಿ “ಸುಮತೀ” ಎಂದು ಕರೆದಂತಾಗಿ ತಟ್ಟನೆ ನಿದ್ರೆಯಿಂದ ಅವಳು ಎಚ್ಚರಗೊಂಡಳು. ಸುತ್ತಲೂ ನೋಡಿದಳು ಅಲ್ಲಿ ಅಮ್ಮ ಇರಲಿಲ್ಲ. ಅವಳ ಮುಖ ಬಾಡಿತು. ಅವಳಿಗೆ ಅಮ್ಮನ ಕೈ ತುತ್ತು ಹಾಗೂ ಅಮ್ಮ ಮಾಡುತ್ತಿದ್ದ ರುಚಿಯಾದ ಅಡುಗೆಯನ್ನು ತಿನ್ನುವ ಬಯಕೆಯಾಯಿತು. ಅಮ್ಮ ಮಾಡುತ್ತಿದ್ದ ಪುಳಿಶ್ಶೇರಿ ಎರಿಶ್ಶೇರಿ ಕಾಳನ್ ಓಲನ್ ತೀಯಲ್ ಎಲ್ಲವೂ ನೆನಪಾಗಿ ಬಾಯಲ್ಲಿ ನೀರೂರಿತು. ತಾನೇ ಇವೆಲ್ಲವನ್ನೂ ಮಾಡಿ ತಿಂದರೂ ಅವಳಿಗೆ ಅಮ್ಮ ಮಾಡಿದಷ್ಟು ರುಚಿಸುತ್ತಾ ಇರಲಿಲ್ಲ. ಅಮ್ಮನ ಕೈ ರುಚಿ ನೆನೆದು ಬಾಯಲ್ಲಿ ನೀರೂರಿತು.
ಏನು ಮಾಡುವುದು ಅಮ್ಮ ಇರುವುದು ನಮ್ಮ ತಾಯ್ನಾಡಲ್ಲಿ
ಅವರು ಹೇಗಿರುವರೋ ಏನೋ? ಈಗ ಅಮ್ಮ ನನ್ನ ಜೊತೆ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು. ಎಂದುಕೊಳ್ಳುತ್ತಾ ಒಲ್ಲದ ಮನಸ್ಸಿನಿಂದ ಹಾಸಿಗೆ ಬಿಟ್ಟು ಎದ್ದಳು. ಪತ್ತನಮ್ ತಿಟ್ಟದಲ್ಲಿ ಇದ್ದಾಗ ಮನೆ ತುಂಬಾ ಅಪ್ಪ ಅಮ್ಮ ಅಕ್ಕ ತಮ್ಮಂದಿರ ಮಾತಿನ ನಗುವಿನ ಧ್ವನಿ ಮಾರ್ಧನಿಸುತ್ತಿತ್ತು. ಈ ರೀತಿಯ ನೀರವ ಮೌನ ತುಂಬಿರುತ್ತಿರಲಿಲ್ಲ. ಮನೆಯ ಹೊರಗೆ ಇಳಿದರೆ ಆಳುಗಳ ಓಡಾಟ ಕಾಣುತ್ತಿತ್ತು. ಇಲ್ಲಿ ಪತಿ ಹಾಗೂ ತನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಅಪ್ಪ ಅಕ್ಕ ತಮ್ಮಂದಿರು ಬಂದಾಗ ಮಾತ್ರ ಮನೆಯಲ್ಲಿ ಮಾತು ನಗುವಿನಿಂದ ತುಂಬಿದ ವಾತಾವರಣ ಸೃಷ್ಟಿಯಾಗುತ್ತಿತ್ತು. ಮಿಕ್ಕ ದಿನವೆಲ್ಲಾ ಮನೆ ತುಂಬಾ ಬರಿದೇ ಮೌನ. ಪತಿ ಇದ್ದರೂ ಅಗತ್ಯ ಇದ್ದಾಗ ಮಾತ್ರ ಮಾತನಾಡುವುದು. ಎಲ್ಲರೊಂದಿಗೂ ಬೆರೆತು ಸಮಯ ಕಳೆಯುತ್ತಿದ್ದ ಸುಮತಿ ಈಗ ಈ ಮೌನಕ್ಕೂ ಒಗ್ಗಿಕೊಂಡಿದ್ದಳು.
ತೀರಾ ಬೇಸರ ಎನಿಸಿದಾಗ ಹಿತ್ತಲಿಗೆ ಹೋಗಿ ತಾನು ನೆಟ್ಟ ತರಕಾರಿ ಮತ್ತು ಹೂವಿನ ಗಿಡಗಳ ಜೊತೆಗೆ ಕಾಲ ಕಳೆಯುತ್ತಾ ಇದ್ದಳು. ಇಂದು ಕೂಡಾ ಹಾಗೆಯೇ ಹಿತ್ತಲ ಕಡೆಗೆ ನಡೆದಳು. ಗಿಡಗಳನ್ನು ನೋಡುತ್ತಾ ತನ್ನ ಕರುಳ ಕುಡಿ ಇಂದು ತನ್ನ ಉದರದಲ್ಲಿ ಮಿಸುಕಾಡಿದ್ದನ್ನು ಅವುಗಳ ಜೊತೆ ಸಂತೋಷದಿಂದ ಹೇಳಿಕೊಂಡಳು. ಕಾಯಿ ಬಿಟ್ಟ ಗಿಡಗಳನ್ನು ನೋಡಿ ನಿಮ್ಮಂತೆಯೇ ನನ್ನಲ್ಲಿ ಕೂಡಾ ಇನ್ನೊಂದು ಪುಟ್ಟ ಜೀವವಿದೆ ಎಂದಳು. ಅವುಗಳು ಗಾಳಿಗೆ ಅತ್ತಿತ್ತ ಆಡಿದಾಗ ತನ್ನ ಮಾತುಗಳನ್ನು ಅವುಗಳು ಕೇಳುತ್ತಾ ಪ್ರತಿಕ್ರಿಯೆ ತೋರಿದಂತೆ ಅನಿಸಿ ಖುಷಿಯಿಂದ ಮುಗುಳ್ನಕ್ಕು
ಅವುಗಳನ್ನು ನೆವರಿಸಿದಳು. ಗಿಡಗಳ ಜೊತೆಗಿನ ಮಾತು ಸಣ್ಣ ವಯಸ್ಸಿನಿಂದಲೂ ಖುಷಿಕೊಡುವ ವಿಚಾರ ಅವಳಿಗೆ. ಈಗಲೂ ಹಾಗೇ ಅವುಗಳ ಜೊತೆ ತನ್ನೆಲ್ಲಾ ಸಂತೋಷ ನೋವುಗಳನ್ನು ಹಂಚಿಕೊಳ್ಳುವಳು. ಅವಳ ಒಂಟಿತನಕ್ಕೆ ಈಗ ಇನ್ನೊಂದು ಜೀವವೂ ತುಡಿಯುತ್ತಿತ್ತು. ಹಿತ್ತಲ ಗಿಡಗಳಿಂದ ಅಡುಗೆಗೆ ಬೇಕಾದ ತರಕಾರಿ ಮತ್ತು ಪೂಜೆಗೆ ಬೇಕಾದ ಹೂವುಗಳನ್ನು ಬಿಡಿಸಿ ಬುಟ್ಟಿಯಲ್ಲಿ ಇಟ್ಟುಕೊಂಡು ಮನೆಯ ಒಳಗೆ ನಡೆದಳು. ಇಂದು ಅವಳಿಗೆ ಬಹಳ ಖುಷಿಯಾಗಿತ್ತು. ಶ್ರೀ ಕೃಷ್ಣನ ವಿಗ್ರಹದ ಬಳಿಗೆ ಬಂದು ಕೃಷ್ಣನನ್ನು ನೋಡಿ ಮುಗುಳ್ನಕ್ಕು ” ನಿನಗೆ ಗೊತ್ತೇ ಕೃಷ್ಣಾ…ಇಂದು ನನ್ನ ಉದರದಲ್ಲಿ ಇರುವ ಪುಟ್ಟ ಜೀವ ಮಿಸುಕಾಡಿದೆ. ಇದೆಲ್ಲವೂ ನಿನ್ನ ಅನುಗ್ರಹ. ನನ್ನ ನೋವು ಒಂಟಿತನ ಎಲ್ಲವನ್ನೂ ಮರೆಸಿ ಖುಷಿ ಕೊಡಲು ನೀನು ಈ ರೀತಿಯಲ್ಲಿ ನನ್ನನ್ನು ಅನುಗ್ರಹಿಸಿರುವೆ. ನಿನ್ನ ಈ ಅನುಗ್ರಹವು ನನ್ನಲ್ಲಿ ಹೊಸ ಹುರುಪು ಚೈತನ್ಯ ಮೂಡಿಸಿದೆ.
ಇಷ್ಟೊಂದು ಸಂತೋಷಗಳನ್ನು ಕರುಣಿಸಿದ ನಿನಗೆ ನನ್ನ ಆದರದ ಆತ್ಮೀಯ ನಮನಗಳು. ಎನ್ನುತ್ತಾ ಕೈ ಮುಗಿದು ನಿಂತಳು. ಪುಟ್ಟ ಜೀವವು ಮತ್ತೊಮ್ಮೆ ಮಿಸುಕಾಡಿ ಅಮ್ಮನ ಜೊತೆ ತಾನೂ ಶ್ರೀ ಕೃಷ್ಣನಿಗೆ ತನ್ನ ನಮನಗಳನ್ನು ಸಲ್ಲಿಸಿತು.
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು.