ಕಾವ್ಯಸಂಗಾತಿ
ಡಾ. ಸುಮತಿ ಪಿ
ಮರೆತು ಬಿಡು ಸಾಕು*
ರೆಕ್ಕೆ ಬಲಿತ ಹಕ್ಕಿಗಳು ನಾವು
ಆಗಸದೆತ್ತರಕ್ಕೆ ಹಾರೋಣ ಬಾ
ರೆಕ್ಕೆ ಮುರಿದ ಮೇಲೆ
ಹಾರುವ ಚಿಂತೆ ಈಗೇಕಂತೆ
ಸುಗಂಧ ಬೀರುವ ಹೂವಿನಂತೆ
ಅರಳಿ ಬದುಕೋಣ ಬಾ
ದೇವರ ಶಿರಕೊ,ನಾರಿಯ ಮುಡಿಗೊ
ಸೇರುವ ಚಿಂತೆ ಈಗೇಕಂತೆ
ಚಿಂತೆಗಳಿಲ್ಲದ ಜೀವನ ಇದಲ್ಲ
ಕಂತೆ ಕನಸುಗಳಿವೆಯಲ್ಲ!
ಮತ್ತೆ ಕಾಡುವ ಸಾಲು ಸಾಲು
ಸವಾಲುಗಳಿವೆಯಲ್ಲ!
ಬಿರಿದು ನಿಂತಿಹೆನು ನಾನು
ದುಂಬಿಯಾಗಿ ಬರುವೆಯ ನೀನು
ಮಕರಂದವನು ಹೀರುತ್ತಿರು
ಸಮರಸದಿ ಸರಸವಾಡೋಣ ಬಾ
ಮುಂದಿನ ಬದುಕಿನ ಭರವಸೆಗೆ
ಭಯದ ನೆರಳಿದೆಯಲ್ಲ
ಚಿಂತಿಸದಿರು,ಮರೆತು ಬಿಡು ಸಾಕು
ಬದುಕಲಿ ಇಂದು ನೆಮ್ಮದಿಯಿರಬೇಕು.
ಡಾ. ಸುಮತಿ ಪಿ.