ಕಾವ್ಯ ಸಂಗಾತಿ
ರಾಜು ನಾಯ್ಕ
ಬಾಳ ಗೀತೆ ಎದೆಯ ಕೌಸ್ತುಭ
ತುಸುವೆ ಉಳಿದ ಭಾವವೆಲ್ಲ
ಬಸಿದು ಕುದಿಸಿ ಭಟ್ಟಿ ಇಳಿಸಿ
ಬಸಿದ ಒಲವ ಸುಧೆಯ ಬೆಸೆದು
ಹೊಸತು ಕವಿತೆ ಬರೆದೆ ಹಾಡಲು
ಮಾಸಿ ಹೋದ ಕನಸು ಚಿಗುರಿ
ಘಾಸಿಗೊಂಡ ಹೃದಯ ಅರಳಿ
ಹಾಸಿ ಸುಮದ ಮಧುರ ಕಂಪು
ಸೂಸಿ ಬಂತು ಚೆಲುವ ಸಾರಲು
ನಗುವ ಹೂವು ಮೊಗದ ಸೊಬಗು
ಗಗನ ಇಳಿದ ಕಿರಣ ಮೆರುಗು
ಬಿಗುವ ಮರೆತ ಒಡಲ ಮೊರೆತ
ಬಾಳಗೀತೆ ಎದೆಯ ಕೌಸ್ತುಭ
ಮುಗಿಲ ಮೆಟ್ಟಿಲೇರಿ ತಾರೆ
ಹಗಲ ಮುಟ್ಟೊ ಬಯಕೆ ಮೇರೆ
ಜಗದ ಪರಿಧಿ ನೀಲ ಬಯಲು
ಸೊಗದ ಬಾಳಿನಾಟ ಸೌರಭ
ಕಡೆದ ಭಾವ ಮುಡಿದ ಜೀವ
ಪಡೆದ ತೃಪ್ತಿ ಬಾಳು ದೀಪ್ತಿ
ನಡೆದ ಗತದ ನೆನಪು ತೊಲಗಿ
ಹಡೆಯಿತೊಂದು ಒಲವ ಚೇತನ
ಕಾಲ ಚಕ್ರ ಗತಿಸಿ ಮರಳಿ
ಸೋಲು ಗೆಲುವು ಅಳೆದು ತೂಗಿ
ಶೂಲ ತಾಪ ಕಳೆದು ಬೆಳೆದು
ನಾಳೆ ಬಾಳು ನಿತ್ಯ ಕೀರ್ತನ.
ರಾಜು ನಾಯ್ಕ