‘ಕಥೆ ಹಳೆಯದಾದರೂ ಬಣ್ಣ ಹೊಸದು’ವಿಶೇಷ ಲೇಖನ-ಲೋಹಿತೇಶ್ವರಿ ಎಸ್ ಪಿ

ಇತ್ತೀಚಿಗೆ ನಾನು ನೋಡಿದ ಕನ್ನಡ ಚಲನಚಿತ್ರಗಳಲ್ಲಿ ಡಾಲಿ ಧನಂಜಯ ಅವರು ವಿಜಯ್ ಅವರ ನಿರ್ದೇಶನದಲ್ಲಿ ಅಭಿನಯಿಸಿರುವ ಗುರುದೇವ್ ಹೊಯ್ಸಳ ಎಂಬ ಚಲನಚಿತ್ರ ಕಣ್ಮನ ಸೆಳೆಯುವ ಹಾಗೂ ಚಿಂತನೆಗೆ ಒಳಗಾಗಿಸುವಂತಿದೆ. ಈ ಚಿತ್ರ ಬಿಡುಗಡೆಯಾಗಿ ವರುಷಗಳೇ  ಕಳೆದರೂ ನಾನು ನೋಡಿದ್ದು ಇತ್ತೀಚಿಗೆ. ಇಷ್ಟವಿಲ್ಲವೆಂದಲ್ಲ. ಮಾಹಿತಿ ಇಲ್ಲದೆ.

ಕಾಲಾಂತರದಿಂದಲೂ ಸಮಸ್ಯೆಯ ಬಗೆಯನ್ನು ಬದಲಿಸಿಕೊಂಡಾದರೂ ಸಮಸ್ಯೆಗಳನ್ನು ಹುಟ್ಟುಹಾಕುತ್ತಿರುವ ಜಾತಿವ್ಯವಸ್ಥೆ ಮಾನಪ್ರಾಣಹಾನಿ
ಉಂಟುಮಾಡುತ್ತಲೇ ಇದೆ. ಮರ್ಯಾದೆ ಹತ್ಯೆ ಎಂಬ ಪದದ ಪರಿಚಯ ಎಲ್ಲರಿಗೂ ಇದೆ ಎಂದು ಭಾವಿಸಿದ್ದೇನೆ. ಭಾವಿಸುವುದೇನು ತಿಳಿದೇ ಇರಬೇಕು ಅಲ್ಲವೇ?. ಮರ್ಯಾದೆ ಹತ್ಯೆ ಎಂದ ಕೂಡಲೇ ಎಲ್ಲರಿಗೂ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಮೂಡುವುದು ಸಹಜ. ಕೆಲವರು ಪರವಾಗಿಯೂ ಕೆಲವರು ವಿರೋಧವಾಗಿಯೂ ಪ್ರತಿಕ್ರಿಯಿಸುತ್ತಾರೆ.

ಡಾಲಿಯವರ ಚಿತ್ರದ ಬಗ್ಗೆ ಮಾತನಾಡುತ್ತಾ, ಒಮ್ಮೆಲೆ ಮರ್ಯಾದೆ ಹತ್ಯೆಯ ಬಗ್ಗೆ ಮಾತನಾಡುತ್ತಿದ್ದಾರಲ್ಲಾ ಎಂದು ಅನಿಸಿರಬಹುದು. ಜಾತಿವ್ಯವಸ್ಥೆಯ ಪರಿಣಾಮ ಅಂತರ್ಜಾತಿ ವಿವಾಹಗಳ ಮೇಲೆ ಹೇಗೆಲ್ಲಾ ಪರಿಣಮಿಸುತ್ತದೆ ಎಂಬ ವಿಚಾರವನ್ನು ಹೊಯ್ಸಳ ಚಿತ್ರದಲ್ಲಿ ಅವಿಸ್ಮರಣೀಯವಾಗಿ ಚಿತ್ರೀಕರಿಸಿದ್ದಾರೆ. ಆ ಕಾರಣದಿಂದ ಈ ಚಿತ್ರಕಥೆ ಹೊಂದಿರುವ ಸಾಮಾಜಿಕ ವಿಚಾರಗಳ ಬಗೆಗೆ ಮಾತನಾಡುವ ಅಗತ್ಯವಿರುವ ಕಾರಣ ಇಲ್ಲಿ ಈ ಚಿತ್ರದ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದೇನೆ.

ಗುರುದೇವ್ ಹೊಯ್ಸಳ ಚಿತ್ರದಲ್ಲಿ ಕಥೆಯ ಮುಖ್ಯಪಾತ್ರ ರವಿ. ರವಿ ಕೆಳವರ್ಗದ ಹುಡುಗ ಅವನು ಮೇಲ್ವರ್ಗದ ಮುಖಂಡನೊಬ್ಬನ ಮಗಳಾದ ಭೂಮಿಕ ಎಂಬ ಹುಡುಗಿಯನ್ನು ಪ್ರೀತಿಸುತ್ತಾನೆ. ಮೊದಮೊದಲು ಅವನು ಪ್ರೀತಿಯ ನಾಟಕವಾಡುತ್ತಾನೆ. ಕಾರಣ ಸಹಪಂಕ್ತಿ ಭೋಜನದಲ್ಲಿ ಮೇಲ್ವವರ್ಗದವರ ಎದುರುಗಡೆ(ಕೆಳಗೆ) ಕೂತು ಸಹ ಊಟ ಮಾಡುವ ಅರ್ಹತೆ ಕೆಳವರ್ಗದವರಿಗೆ ಇಲ್ಲ ಎಂದು ಭೂಮಿಕಾಳ ತಂದೆ ಅವಮಾನಿಸುವಾಗ ಅಕ್ಷರಸ್ಥನಾದ ರವಿ ಅದರ ವಿರುದ್ಧ ಪ್ರತಿಭಟಿಸುತ್ತಾನೆ. ಆ ಪ್ರತಿಭಟನೆಯಿಂದ ಈ ಕಥೆ ಮುಖ್ಯತಿರುವು ಪಡೆಯುತ್ತದೆ. ಮೇಲ್ವರ್ಗದ ಮುಖಂಡ ಹಾಗೂ ಆ ವ್ಯವಸ್ಥೆಗೆ ಬುದ್ದಿ ಕಲಿಸುವ ಸಲುವಾಗಿ ಪ್ರೀತಿಯ ನಾಟಕವಾಡಿದ ರವಿ ಭೂಮಿಕಾಳ ನಿಜವಾದ ಪ್ರೀತಿಗೆ ಸೋಲುತ್ತಾನೆ.

ಮದುವೆಯಾಗಿ ಸಹಜೀವನ ನಡೆಸುತ್ತಿದ್ದ ರವಿ ಮತ್ತು ಭೂಮಿಕಾರನ್ನು ಪೋಲಿಸರು ಹಿಡಿದುತಂದು ಒಪ್ಪಿಸುತ್ತಾರೆ. ಅಲ್ಲಿಯವರೆಗೆ ಮಗಳ ಮೇಲೆ ಪ್ರೀತಿ ಇದೆ ಎಂಬಂತೆ ನಟಿಸುತ್ತಿದ್ದ ಭೂಮಿಕಾಳ ತಂದೆ ರವಿಯನ್ನು ಹೊಡೆದು ಸಾಯಿಸಲು ಹೇಳಿ, ಹೆತ್ತಮಗಳೆಂಬ ಕನಿಕರವೂ ಇಲ್ಲದೆ ಸಾಯುವ ಹಾಗೆ ತಂದೆ, ತಾಯಿ ಹಾಗೂ ಸಹೋದರರೆಲ್ಲರೂ ಸೇರಿ ಹೊಡೆಯುತ್ತಾರೆ. ಸಾವು ಬದುಕಿನ ನಡುವೆ ಹೊರಾಡುತ್ತಿದ್ದ ಭೂಮಿಕಾಳನ್ನು ಕಮಿಷನರ್ ಸಿಕ್ರೇಟ್ ಆಗಿ ಹಾಸ್ಪಿಟಲ್ ಗೆ ಸೇರಿಸುತ್ತಾರೆ. ಆಗ ಅವಳು ಗರ್ಭೀಣಿ ಎಂಬ ವಿಚಾರ ತಿಳಿಯುತ್ತದೆ. ರವಿಯ ಸಾವಿನ ವಿಚಾರಣೆಯ ನಂತರ ಅಪರಾಧಿ ನಿರಾಪರಾಧಿಯಾಗಿ ಬಿಡುಗಡೆಯಾಗುತ್ತಾನೆ. ನಂತರ ಕೋರ್ಟ್ ಮುಂದೆಯೇ ಗಲಾಟೆ ನಡೆಯುತ್ತದೆ. ಆ ಗಲಾಟೆಯ ವೇಳೆ ಭೂಮಿಕಾಳ ಸಹೋದರ ಹಾಗೂ ಅವರ ಕಡೆಯವರನ್ನು ಗುರದೇವ್ ಹೊಡೆದು ಹಾಕುತ್ತಾನೆ. ಹಾಗೆ ಭೂಮಿಕಾಳ ತಂದೆಯನ್ನು ಹೊಡೆಯುತ್ತಾನೆ. ಕೊನೆಯಲ್ಲಿ ಭೂಮಿಕ ಅವಳ ತಂದೆಯನ್ನು ಸಾಯಿಸುತ್ತಾಳೆ.

ಇಲ್ಲಿ ಭೂಮಿಕಾಳ ತಂದೆಯ ಸಾವು ಒಂದು ವ್ಯವಸ್ಥೆಯನ್ನೇ ಕೊನೆಗಾಣಿಸುವ ಉದ್ದೇಶದ ನೆಲೆಯಲ್ಲಿ ಚಿತ್ರಿತಗೊಂಡಿದೆ. ಈ ದೃಶ್ಯವೇ ಈ ಚಿತ್ರಕಥೆಗೆ ಹೊಸ ಮೆರುಗನ್ನು ನೀಡಿರುವ ಪ್ರಮುಖ ಅಂಶವಾಗಿ ನನಗೆ ಕಂಡದ್ದು. ಯಾಕೆಂದರೆ ಮರಾಠಿಯಲ್ಲಿ ಸೈರಾಟ್ ಎನ್ನುವ ಚಿತ್ರವನ್ನು ಕೆಲವು ವರುಷಗಳ ಹಿಂದೆ ನೋಡಿದ್ದೆ. ಅದು ಸಹ ಜಾತಿವ್ಯವಸ್ಥೆಯ ದುಷ್ಪರಿಣಾಮ, ಮರ್ಯಾದೆ ಹತ್ಯೆ ಕುರಿತೇ ಇದೆ. ಚಿತ್ರದ ಕೊನೆಯಲ್ಲಿ ಕಥೆಯ ನಾಯಕ ನಾಯಕಿಯ ಸಾವಾಗುತ್ತದೆ. ಅದು ತುಂಬಾ ರೋಚಕವಾದ ಕೊನೆಯಾಗಿದೆ. ಆದರೆ ಹೊಯ್ಸಳ ಚಿತ್ರದಲ್ಲಿ ವ್ಯವಸ್ಥೆಯನ್ನೇ ಕೊನೆಗಾಣಿಸುವ, ನಾಯಕಿಗೆ ರಕ್ಷಣೆಯ ಭರವಸೆ ನೀಡುವ ಥೀಮ್ ಇದೆ. ಇದು ಹೊಸತರಹದ ಆರಂಭಕ್ಕೆ, ಬದಲಾವಣೆಗೆ, ಗೆಲುವಿಗೆ ದಾರಿಯಾಗಿ ಕಂಡಿದೆ.

ನೀರಿನ ಮೇಲಿನ ಗುಳ್ಳೆಯಂತಹ ಜೀವನದಲ್ಲಿ ತೃಣಮಾತ್ರರಾದ ಮಾನವರು ಜಾತಿ ಎಂಬ ಮಸಿ ಬಳೆದುಕೊಂಡು ಅದೇ ಸೊಬಗು ಎಂಬಂತೆ ಪಿಶಾಚಿಗಳಾಗಿ ವರ್ತಿಸುತ್ತಾರೆ. ಮೇಲು-ಕೀಳು ಎಂಬ ಭೇದ-ಭಾವವೆಣಿಸುತ್ತಾ, ಮಾನ-ಪ್ರಾಣ ಹಾನಿ ಮಾಡುವ ಕ್ರೂರ ಮೃಗಗಳಂತೆ ವರ್ತಿಸುತ್ತಾರೆ. ಆದರೂ ಅಕ್ಷರಕ್ರಾಂತಿಯ ಪ್ರಭಾವದಿಂದಾಗಿ ಅಂತರ್ಜಾತಿಯ ವಿವಾಹಗಳು ನೆರವೇರುತ್ತಿವೆ. ಅಂತಹ ವೇಳೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರುತ್ತವೆ. ಸಮಸ್ಯೆಗಳಿಗೆ ಕೆಲವೊಮ್ಮೆ ಅಕ್ಷರಸ್ಥರೂ ಕಾರಣರಾಗಿರುತ್ತಾರೆ. ಇದೆಲ್ಲವನ್ನು ಗಮನಿಸಿದಾಗ ಅಕ್ಷರಕ್ರಾಂತಿಯಿಂದಾಗಿ ಜಾತಿ ಸಮಸ್ಯೆ ಕ್ಷಿಣಿಸಿದೆಯೋ, ವೃದ್ಧಿಸಿದೆಯೋ ಎಂಬ ವಿಚಾರದಲ್ಲಿ ನಿಲುವು ತಳೆಯುವುದು ಕಷ್ಟಸಾಧ್ಯ. ಆದಾಗ್ಯೂ ಜಾತಿ-ಜಾತಿಗಳ ನಡುವಿನ ಭೇದವೆಣಿಸದೆ ಒಲವಿನ ಮೂಲಕ ಒಂದಾಗಿ ಬಾಳಬಂಡಿ ಹೂಡುವ ಜೀವಗಳಿಗೆ ನನ್ನ ನಮನ. ಆದರೆ ಮರ್ಯಾದೆ ಹತ್ಯೆ ಎಂಬ ಸಂಗತಿ ಇಂತಹ ಅನೇಕ ಮನಸುಗಳ ಮುಂದುವರಿಕೆಗೆ ತಡೆಯಾಗಿದೆ.

ನಶ್ವರತೆಗೆ ಕಾರಣವಾಗುವ, ಅನಗತ್ಯವಾದ, ಅರ್ಥಹೀನವಾದ, ಮಾನ-ಪ್ರಾಣ ಹಾನಿಮಾಡುವ, ಮಾನವರನ್ನು ಮೃಗವಾಗಿಸುವ ಈ ಜಾತಿವ್ಯವಸ್ಥೆಯ ಪಾಲನೆಯ ಅಗತ್ಯ ಇಲ್ಲಿ ಯಾರಿಗೂ ಇಲ್ಲ. ಮಾನವರನ್ನು ಮಾನವೇತರ ಪ್ರಾಣಿಗಳಂತಾಗಿಸುವ ಈ ಜಾತಿವ್ಯವಸ್ಥೆ ನಿಜವಾಗಿಯೂ ಮಾರಕವಾದುದು. ಸಮಾಜದ ಹಿತಕ್ಕಾಗಿ ಅದನ್ನು ಇಲ್ಲವಾಗಿಸಿದಾಗಲೇ ಸಮಾಜದಲ್ಲಿ ಬದುಕಿಗೆ ಪೂಕರವಾದ ಪರಿಸ್ಥಿತಿ ನಿರ್ಮಾಣವಾಗಲು ಸಾಧ್ಯವಿದೆ. ಇಂತಹ ಚಲನಚಿತ್ರ, ಬರೆಹಗಳ ಮೂಲಕ ಮಾನವರಲ್ಲಿನ ಜಾತಿವ್ಯವಸ್ಥೆಯೆಂಬ ಕೊಳೆಯನ್ನು ತೊಳೆಯುವ ಪ್ರಯತ್ನ ಆಗಿಂದಾಗ್ಗೆ ನಡೆಯುತ್ತಲೇ ಇದೆ. ಅದು ತೊಳೆದಾಗಲೇ ಸ್ವಚ್ಛಂದ ಸಮಾಜ ನಿರ್ಮಾಣವಾಗುತ್ತದೆ. ಇದು ನನ್ನಂತಹ ಅನೇಕ ಮನಗಳ ಆಸೆಯೂ ಹೌದು.


One thought on “‘ಕಥೆ ಹಳೆಯದಾದರೂ ಬಣ್ಣ ಹೊಸದು’ವಿಶೇಷ ಲೇಖನ-ಲೋಹಿತೇಶ್ವರಿ ಎಸ್ ಪಿ

  1. ಇದು ಹೊಯ್ಸಳ ಚಿತ್ರದ ಎಳೆಯಲ್ಲಿ ಮರ್ಯಾದೆ ಹತ್ಯೆ ಸ್ವರೂಪ, ಜಾತಿ ವ್ಯವಸ್ಥೆಯ ಅಪಾಯ ಕುರಿತು ಸರಳವಾಗಿ ವಿಶ್ಲೇಷಣೆ ಮಾಡಿದ ಬರಹ. ಜಾತಿ ‌ವ್ಯವಸ್ಥೆ ವಿರೋಧಿಸುವ ಕೆಲವರಲ್ಲಿ ನೀವು ಸಹ ಇದ್ದೀರಿ ಎಂಬುದು ‌ಅಭಿನಂದನೀಯ.
    ಲೇಖನದ ಆಶಯವನ್ನು ಅತ್ಯಂತ ನವಿರಾಗಿ‌, ಬಿಡಿಸಿಟ್ಟಿದ್ದೀರಿ.‌

    12 ನೇ‌ ಶತಮಾನದಲ್ಲಿ ಕನ್ನಡದ‌ ನೆಲದಲ್ಲಿ ಕ್ರಾಂತಿ ಆದುದು ಸಹ ಒಂದು ಅಂತರ್ಜಾತಿ ‌ವಿವಾಹ ಕಾರಣದಿಂದ .‌ಹರಳಯ್ಯ ಮಗ,ಮಧುವರಸನ ಮಗಳ ಪ್ರೇಮ‌ ಕಾರಣ‌ವಾಗಿ , ಆ ಪ್ರೇಮಕ್ಕೆ ವಿವಾಹದ ‌ಚೌಕಟ್ಟು ನೀಡಿ, ‌ಜಾತಿ ವ್ಯವಸ್ಥೆ ಭಂಗುರ ಮಾಡಲು ಹೊರಟಾಗ‌,‌ಬಸವಣ್ಣ – ಬಿಜ್ಜಳನ ನಡುವೆ ಪುರೋಹಿತಶಾಹಿ ವಿಷ ಬೀಜ ಬಿತ್ತಿದರು. ವರ್ಣ ಸಂಕರ‌ ಎಂದು ಬೊಬ್ಬೆ ಹೊಡೆದು, ‌ಶರಣರನ್ನು ಆನೆ ಕಾಲಿಗೆ ಕಟ್ಟಿ ಎಳೆಸಿದರು. ಅದು ಸಹ ರಾಜಶಾಹಿ ಕೃಪಾಪೋಷಿತ ಮರ್ಯಾದೆ ಹತ್ಯೆ ಯಾಗಿತ್ತು.

    ಜಾತಿ ವ್ಯವಸ್ಥೆ ವಿರುದ್ಧ ನಿಮ್ಮಂಥ ಯುವ ಮನಸುಗಳು ಪ್ರತಿರೋಧ ಒಡ್ಡುವುದು ಹೆಚ್ಚಲಿ‌ ಎಂದು ಹಾರೈಸುವೆ.

    – ನಾಗರಾಜ್ ಹರಪನಹಳ್ಳಿ

Leave a Reply

Back To Top