ಬಸವಣ್ಣನವರು
ಉಮೇಶ ಮುನವಳ್ಳಿ
ಶಿಕ್ಷಿತರಲ್ಲಿ ಅನೇಕರು ನಾವು ಬಸವಣ್ಣನವರನ್ನು ಕೇವಲ ಸಮಾಜ ಸುಧಾರಕ, ಕ್ರಾಂತಿಕಾರಿ, ದಾರ್ಶನಿಕ ಇದೇ ಪರಿಧಿಗೆ ಸೀಮಿತಗೊಳಿಸಿದ್ದೇವೆ. ಇದರಾಚೆ ಅವನನ್ನು ಕಂಡುಕೊಳ್ಳುವ ಒಳಗಣ್ಣಿನ ಕೊರತೆ ನಮ್ಮಲ್ಲಿ ಎದ್ದುಕಾಣುತ್ತದೆ. ಅದೇ ನಮ್ಮ ಗ್ರಾಮೀಣ ಜನಕ್ಕೆ ಬಸವಣ್ಣ ಒಬ್ಬ ದೇವ, ದೈವ, ಕೇಳಿದ್ದನ್ನು ಕೊಡುವ ಕಲ್ಪವೃಕ್ಷ!
ಕೇವಲ ಶಬ್ದಗಳಲ್ಲಿ ಹಿಡಿದಿಡಲಾಗದ ‘ಅಗಮ್ಯ, ಅಗೋಚರ, ಅಪ್ರತಿಮ’ ವ್ಯಕ್ತಿತ್ವ ಅವನದು. ಅವನ ಆ ಘನ ವ್ಯಕ್ತಿತ್ವವನ್ನು ಒಳಗೊಳ್ಳದಷ್ಟು ಚಿಕ್ಕವಾದವೇ ನಮ್ಮ ಮನಸ್ಸಿನ ಪಾತ್ರೆಗಳು? ದೋಷ ನಮ್ಮ ಪಾತ್ರೆಯಲ್ಲಿದೆ. ಮೇಲಾಗಿ ಅವನನ್ನು ವಿಶ್ಲೇಷಿಸಿ ನಾವು ದೊಡ್ಡವರಾಗಹೊರಟಿದ್ದೇವೆ. ಅವನನ್ನು ಬಂಡವಾಳವಾಗಿಸಿಕೊಂಡು ಬದುಕುತ್ತಿದ್ದೇವೆ. ಯಾವಾಗಲೂ ಯಾವ ಮಹಾಪುರುಷನ ಆಶಯವು ಅದಾಗಿರುವುದಿಲ್ಲವೋ ಅದರ ತದ್ವಿರುದ್ಧದ ಕಾರ್ಯ ಅವನ ಅನುಯಾಯಿಗಳಿಂದ ನಡೆಯುತ್ತದೆ.
ಬಸವಣ್ಣ, ‘ಲಿಂಗವನ್ನು ಪೂಜಿಸಿ ಲಿಂಗವೇ ಆದ’ ಮಹಾಮಹಿಮ. ಆದರೆ ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಕಿಂಕರ ಭಾವ. ದೇಹವೇ ದೇವಾಲವಾದ ಪರಿ: “ಎನ್ನ ಕಾಲೇ ಕಂಬ, ದೇಹವೇ ದೇಗುಲ”. “ಅಂಬುದಿಯೊಳಗೆ ಬಿದ್ದ ಆಲಿಕಲ್ಲಂತೆ” ಜೀವ ಶಿವರಾದ ಪರಿ. “ಭಿನ್ನಭಾವವರಿಯದೇ ‘ಶಿವ ಶಿವಾ’ ಎನುತಿರ್ದೆನಯ್ಯ.” “ಕೂಡಲ ಸಂಗಮದೇವರಲ್ಲಿ ತಾನೇ ಪ್ರಸಾದಿ” “ಬೆಳಗಣೊನಳಗಣ ಬೆಳಗು ಮಹಾಬೆಳಗು” “ಪರಮಾನಂದವನೇನೆಂದುಪಮಿಸುವೆನಯ್ಯ” ಎನ್ನುವ ನುಡಿಯಲ್ಲಿ ಪರಬ್ಬಹ್ಮ ಸ್ಥಿತಿ ತಲುಪಿದ ಭಾಸವಾಗುತ್ತದೆ. ಬಸವಣ್ಣನವರು ವಚನ ಸಾಹಿತ್ಯವನ್ನು ದಾಸೋಹ ಭಾವನೆಯಿಂದ ರಚಿಸಿದ್ದಾರೆ. ಲೋಕೋದ್ಧಾರಕ್ಕೆಂದು ರಚಿಸಿದ್ದಾರೆ ಇಲ್ಲದೇ ಹೋದರೆ ಅವುಗಳನ್ನು ರಚಿಸುವ ಅಗತ್ಯತೆ ಅವರಿಗಿರಲಿಲ್ಲ. ಅವರು ಮೌನಸ್ಥಿತಿಯನ್ನು ಯಾವಾಗಲೋ ಧರಿಸಿದ್ದರು. ಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧಿಸುವ ಅನಿವಾರ್ಯತೆ ಬಂದೊದಗಿದಂತೆ ಅವರಿಗೂ ಲೋಕದ ಜನರ ಉದ್ಧಾರ ಪ್ರಮುಖವೆನಿಸಿತು. ಎಲ್ಲ ಮಹಾತ್ಮರ ವಿಷಯದಲ್ಲೂ ಇದು ಸತ್ಯ. ಬುದ್ಧನಿಗೆ ಕಾಡಿನಿಂದ ಮರಳಿ ಬರುವ ಅವಶ್ಯಕತೆ ಇರಲಿಲ್ಲ, ಆದರೆ ಜನರು ದುಃಖದಲ್ಲಿ ತೊಳಲಾಡುವುದನ್ನು ಅವನಿಂದ ನೋಡಲಾಗಿಲ್ಲ. ಆತ್ಮಮೋಕ್ಷಾರ್ತಂ ಜಗತ್ ಹಿತಾಯಚ ಎಂಬ ಮಾತಿದೆ: ಆತ್ಮ ಸಾಕ್ಷಾತ್ಕಾರಗೊಂಡಮೇಲೆ ಜಗತಿನ ಹಿತಚಿಂತನೆ ಮಾಡುವುದು.
‘ಭಾವದಲ್ಲಿ ವೃತಗೆಟ್ಟುದಾಗಿ, ಆ ಭಾವದಲ್ಲಿ ಜೀವಸಂಹಾರಿ ಕೂಡಲ ಸಂಗಮದೇವ ಸರ್ವನಿವಾಸಿಯಾಗಿ”.” ಸ್ವಯಂ ಲಿಂಗದನುಭಾವ ದೊರಕೊಂಡ ಬಳಿಕ” “ಏನೆಂಬೆ, ಏನೆಂಬೆ ಒಂದೆರಡಾದುದ, ಏನೆಂಬೆ ಏನೆಂಬೆ ಎರಡೊಂದಾದುದ” ಜೀವ-ಶಿವ ಒಂದಾದ ಜೀವನ್ಮುಕ್ತ ಸ್ಥಿತಿ. “ಭಾವ ಭಾವಿಸಲು ನಿರ್ಭಾವ” ಸ್ಥಿತಿ.
ಘನಗಂಭೀರ ಮಹಾಘನದೊಳಗಿನ ಘನಕ್ಕೆ ಘನವಾಗಿದ್ದೆನಯ್ಯಾ.
ಕೂಡಲ ಸಂಗಮದೇವಯ್ಯನೆಂಬ ಮಹಾಬೆಳಗಿನ ಬೆಳಗಿನೊಳಗಿದ್ದೇನೆಂಬ
ಶಬ್ದ ಮುಗ್ಧವಾದುದೇನೆಂಬೆನಯ್ಯ.
” ಆರೂಢದ ಕೂಟದ ಸುಖವ ಕೂಡಲ ಸಂಗಯ್ಯ ತಾನೇ ಬಲ್ಲ ” ಲಿಂಗಾಂಗ ಸಾಮರಸ್ಯವನ್ನು ಸಾಧಿಸಿ, ಜೀವ-ಶಿವನಾದ ಶಿವೈಕ್ಯ ಸ್ಥಿತಿ.
ಬಸವಣ್ಣನು ನಮಗೆ ಮುಕ್ತಿದಾತ, ಶಕ್ತಿದಾತ, ಅವನು ನೆಲೆಸಿದ ಕ್ಷೇತ್ರ, ಅವಿಮುಕ್ತ ಕ್ಷೇತ್ರ. ಕಲ್ಯಾಣ ಕ್ಷೇತ್ರ.”
ಬಸವನ ಆರಾಧಕರೆಷ್ಟೋ ಜನ ದೈವೀ ಪುರುಷರಾದದ್ದನ್ನು ನಾವು ಕಣ್ಣಾರೆ ನೋಡಿದ್ದೇವೆ. ಆದರೆ ಬಸವಣ್ಣನವರ ವಿಶ್ಲೇಷಣೆಯಲ್ಲಿ ನಮಗೆ ಮಿತಿ ಮೀರಲಾಗಲಿಲ್ಲ. ಇದು, ನಮ್ಮ ಇತಿಮಿತಿ. ಹನ್ನೊಂದು ಜನ ಅಂಧರು ಆನೆಯನ್ನು ವಿಶ್ಲೇಷಿಸಿದಂತೆ.
*********