ಯತೀಶ್ ಕಾಮಾಜೆ ಅವರ ಕವಿತೆ-ಬದುಕು

ಮಾನವನೊಬ್ಬನೇ
ಇರಬೇಕು
ಭೂಮಿ ಸೃಷ್ಟಿಯಾದಲ್ಲಿಂದ
ಸ್ವಾರ್ಥಕ್ಕಾಗಿ ಬದುಕು ಕಟ್ಟಿಕೊಂಡದ್ದು..
ಅಷ್ಟಕ್ಕು ಈ ಬದುಕು ಅಂದರೇನು..!

ನೆಲ ಅಗೆದು ಕೃಷಿ
ನೆಲ ಬಗೆದು ಆಸ್ತಿ
ಜೊತೆಯಾಗಿ ಸಂಸಾರ
ಜೊತೆಯಾಗಿ ಸಂಹಾರ
ಇದು ನಂದು
ಅದು ನಿಂದು
ಇವತ್ತು ದುಃಖ
ನಾಳೆ ಖುಷಿ
ಒಮ್ಮೆ ಸಿಹಿ
ಇನ್ನೊಮ್ಮೆ ಕಹಿ
ಹಣ,ಹೆಸರಿಗಾಗಿ ಹೋರಾಟ
ಎಲ್ಲ ನಂದೇ ಎಂದು ಹಾರಾಟ
ಇದೇ ಬದುಕೇ..!?

ಹುಟ್ಟಿನಿಂದ
ಸಾಯುವ ವರೆಗಿನ
ನಡುವಿನ ಜೀವನವೇ
ಬದುಕು ಎಂದಾದರೆ
ಭೂಮಿಯಲ್ಲಿ ಪ್ರತಿಯೊಂದು
ಬದುಕು ಸಾಗಿಸಿದಂತೆಯಲ್ಲವೇ..!

ಆ ಬೀದಿನಾಯಿ
ಹಸಿವಿಗಾಗಿ ಹೋರಾಡಿ
ಅನ್ನ ಬಿಸಾಕಿದವನಿಗೆ ಋಣಿಯಾಗಿ..
ತನ್ನದೆ ಬಳಗ ಕಟ್ಟಿ
ಒಂದು ಸಂಸಾರ ಮಾಡಿ
ಬದುಕು ಕಟ್ಟಿದೆ.
ಅದು ಬಯಲಲ್ಲಿ ಬಯಲಾಗಿ
ಜೀವಿಸಿದೆ..
ಅದು ಬದುಕಲ್ಲವೇ..
ಬಯಲಾಗಿ ಜೀವಿಸಿದರೆ ಅದು ನಾಯಿ ಬದುಕೇ..?

ಮನದೊಳಗೆ ದ್ವೇಷ ಇಟ್ಟು
ನಗೆ ಮೊಗ ತೋರಿದರೆ,
ಎದೆಯಲ್ಲಿ ಆಸೆ ಇಟ್ಟು
ತೃಪ್ತನಂತೆ ನಟಿಸಿದರೆ,
ಮೈಯಲ್ಲಿ ಕಾಮ ತುಂಬಿ
ಸಾಚನಂತೆ ವರ್ತಿಸಿದರೆ,
ಮಾತಿನಲ್ಲಿ ನಿಮ್ಮವನೆಂದು
ಮನಸ್ಸಲ್ಲಿ ಅಂತರ ಕಾಯ್ದರೆ,
ಒಟ್ಟಾರೆ ಮುಖವಾಡ
ಧರಿಸಿ ಬದುಕುವುದೇ ಬದುಕೇ..!?

ಮುಕ್ತವಾಗಿ
ಬದುಕಲಾಗದವನಿಗೆ
ನಿಜವಾಗಿ ಬದುಕೆಂದರೇನು
ತಿಳಿದಿದೆಯೇ..!?


One thought on “ಯತೀಶ್ ಕಾಮಾಜೆ ಅವರ ಕವಿತೆ-ಬದುಕು

Leave a Reply

Back To Top