ಪ್ರಮೀಳಾ ಚುಳ್ಳಿಕ್ಕಾನ ಕವಿತೆ-ಹೋಲಿಕೆ

ಎಲ್ಲಿಯ ಗಗನ ಎಲ್ಲಿಯ ಧರಣಿ
ಮುಟ್ಟುವೆನೆಂಬುದು ಬರಿ ಕನಸು,
ಕಣ್ಣಿಗೆ ಕಾಣದು ಕೈಗೂ ಸಿಗದು;
ಅಂತರವರಿತರೆ ದೃಢ ಮನಸು..!!

ಒಳ್ಳೆಯ ಚಿಂತನೆ ಮನದೊಳಗಿದ್ದರೆ,
ನೀನಿಹ ನೆಲವೇ ಸ್ವರ್ಗ ಸುಖ;
ಪರರನು ನೋಡಿ ಹಲುಬುತಲಿದ್ದರೆ
ಬಾಳಲಿ ನಷ್ಟವು ಬರಿ ನರಕ..!!

ಆ ರವಿ ಮೇಲಿರೆ ಬೆಳಕನ್ನೀಯುವ,
ತನ್ನನೆ ತಾನು ಉರಿಸುತಲಿ;
ಉರ್ವಿಗೆ ಸಂತಸ ಮಡಿಲೊಳು ಅರಳಿದ,
ಸುಂದರ ಚಿಗುರನು ನೋಡುತಲಿ …!!

ಗುರಿಯೆಡೆ ಧ್ಯಾನವು ನಿರತವು ಇದ್ದರೆ,
ತಲಪುವೆಯಲ್ಲಿಗೆ ಬಲು ಬೇಗ;
ಶ್ರದ್ಧೆಯು ಇರದೆಯೆ ಅಲಸಿಕೆ ಜತೆಯಿರೆ,
ನಡೆಯುವ ದಾರಿಯೆ ಇಬ್ಭಾಗ..!!

ಇತರರ ಖುಷಿಯನು ಸಂಭ್ರಮಿಸುತಿದ್ದರೆ,
ನಿನಗೂ ಬರುವುದು ನಲಿವ ದಿನ;
ಹೋಲಿಕೆಯಲ್ಲಿಯೆ ಜೀವನ ಕಳೆದರೆ,
ನಿಂತಿಹ ನೆಲದಲೆ ಅಧಃಪತನ !!

ಜಗದೆಡೆ ನೋಡುತ ಮಚ್ಚರ ಪಡುತಿರೆ,
ಹೃದಯಕೆ ಮಾರಕ ಕಳೆಕೊಳೆಯೂ;
ಒಳಿತಿಗೆ ಎಂದಿಗು ಕೆಸರೆರೆಚದಿದ್ದರೆ,
ಕಾಲಕ್ಕನುಗುಣ ಮಳೆ ಬೆಳೆಯು..!!

—————————-

One thought on “ಪ್ರಮೀಳಾ ಚುಳ್ಳಿಕ್ಕಾನ ಕವಿತೆ-ಹೋಲಿಕೆ

Leave a Reply

Back To Top