ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಪ್ರೀತಿಯ ಮಹಿಮೆ
ಬರುವಾಗ ತುಟಿಗಳಿಗೆ ನಗುವು
ಹೋಗುವಾಗ ಕಂಗಳಿಗೆ ಕಣ್ಣೀರು
ಬಂದಾಗ ಮನಕೆ ಮುದವು
ಹೋದಾಗ ಎದೆಗೆ ಗಾಯವು
ಇದು ಪ್ರೀತಿಯ ಮಹಿಮೆ
ಮೊದಲು ಬಿಕ್ಕಳಿಕೆಗಳಿಗೆಲ್ಲ
ನಿನ್ಹೆಸರೇ ಇಡುತಿದ್ದೆ
ತುಸುವೂ ನೀರು ಕುಡಿಯದೇ
ಒಲವಿನ ನೆನಪ ಹೀರುತಿದ್ದೆ
ಈಗ ಬಿಕ್ಕುವ ಮೊದಲೇ ನೀರು ಕುಡಿವೆ
ಬರುವ ದಾರಿಯಲೇ ನೆನಪುಗಳ ಕತ್ತು ಹಿಸುಕುವೆ
ಇದು ಪ್ರೀತಿಯ ಮಹಿಮೆ
ಮೊದಲೆಲ್ಲ ಹುಣ್ಣಿಮೆಯ ಬೆಳಕು
ಚಂದ್ರ ಚುಕ್ಕಿಗಳ ಹೊಳಪು
ಬೆಳದಿಂಗಳ ಇರುಳು, ತಂಗಾಳಿಯ ತರುವು
ನಾಚುವ ನಿದ್ದೆ , ಬಡಬಡಿಸುವ ಕನಸು
ಈಗೀಗ ಎದೆಯಲಿ ಅಮವಾಸೆಯ ಕತ್ತಲು
ಬಿಸಿಲಿಗೆ ಬತ್ತಿದಂತೆ ಒಲವಿನ ಒಡಲು
ಇದು ಪ್ರೀತಿಯ ಮಹಿಮೆ
ಎದೆಯ ಕದವ ಬಡಿಯದೇ ಒಳನುಗ್ಗಿ
ಎಲ್ಲೆಂದರಲ್ಲಿ ಇರಿದು ಥಳಿಸಿ
ಹಾಡುಹಗಲೇ ಒಲವಿನ ಹತ್ಯಗೈದು
ನೇಹವನು ಅಳಿಸಿ ನರಳಿಸಿ
ನಂಬಿಕೆಗೆ ಗೋರಿ ಕಟ್ಟಿ ಮರೆಯಾದೆ
ಇದು ನೀ ಗೆದ್ದ ಪರಿಯು, ನಾ ಸೋತ ಪರಿಯು
ಇದು ಪ್ರೀತಿಯ ಮಹಿಮೆ
—————————–
ವಾಣಿ ಯಡಹಳ್ಳಿಮಠ
Nice mam
Thank you so much