None selected

Skip to content
Using Gmail with screen readers
Conversations
(no subject)
Inbox

Rukmini Sridhar rukminisridhar72@gmail.com
10:02 AM (39 minutes ago)
to me

ಅಧ್ಯಾಯ -38

ಸುಮತಿಯ ಮುಗ್ಧತೆಯಿಂದ ಕೂಡಿದ ಮಾತುಗಳನ್ನು ಕೇಳಿ

ಅವಳ ಅಕ್ಕ ನಕ್ಕು…”ಸುಮತಿ ನಿನಗೆ ಬಂದಿರುವ ಈ ಸಂಕಟ ಕಡಿಮೆ ಆಗಲು ಇನ್ನೂ ಮೂರು ತಿಂಗಳಾದರೂ ಬೇಕು”…. ಎಂದಳು. ಇದನ್ನು ಕೇಳಿದ ಸುಮತಿಯ ಮುಖ ಬಾಡಿತು. ಅಯ್ಯೋ ಅಷ್ಟು ದಿನ ನಾನು ಸಹಿಸಿ ಕೊಳ್ಳಬೇಕೇ? ಸತಾಯಿಸದೇ ಹೇಳಕ್ಕಾ ನನಗೆ ಏನಾಗಿದೆ. ಈ ಸಂಕಟ ಕಡಿಮೆ ಆಗಲು ಇನ್ನೂ ಮೂರು ತಿಂಗಳು ಆಗುತ್ತದೆ ಎಂದು ನಿನಗೆ ಹೇಗೆ ಗೊತ್ತು? ಎಂದು ಆತಂಕದ ಧ್ವನಿಯಲ್ಲಿ ಪ್ರಶ್ನಿಸಿದ ತಂಗಿಯ ಕೆನ್ನೆಯನ್ನು ಸವರಿ “ಸುಮತಿ ನೀನು ಮತ್ತು ವೇಲಾಯುಧನ್ ಅಪ್ಪ ಅಮ್ಮ ಆಗುತ್ತಿರುವಿರಿ….ಇನ್ನು ಒಂಭತ್ತು ತಿಂಗಳಲ್ಲಿ ಪುಟ್ಟ ಕಂದನಿಗೆ ಲಾಲಿ ಹಾಡುವೆ ನೀನು….ಎಂದಾಗ ಬಳಲಿದ ಸುಮತಿಯ ಮುಖದಲ್ಲಿ ಸುಂದರ ನಗುವೊಂದು ಮೂಡಿತು. ಇದಕ್ಕೇ ಇರಬೇಕು ಕಣ್ಣು ಮುಚ್ಚಿದಾಗ ಸುಂದರವಾದ ಪುಟ್ಟ ಮಗುವಿನ ಮುಖವೊಂದು ಗೋಚರವಾಗುವುದು ಎಂದುಕೊಳ್ಳುತ್ತಾ… “ಇನ್ನೇನು ಇವರು ಬರುವ ಹೊತ್ತಾಯ್ತು

ಕಾಫಿ ಮಾಡಲು ಹಾಲು ಕಾಯಿಸಬೇಕು…ಏನಾದರೂ ತಿಂಡಿ ಮಾಡಬೇಕು ಜೊತೆಗೆ”…ಎನ್ನುತ್ತಾ ಸೀಳಿದ ಸೌದೆಯನ್ನು ಸೇರಿಸಿ ಒಲೆ ಹೊತ್ತಿಸಿ ಹಾಲು ಇಟ್ಟಳು… “ಅಕ್ಕಾ ಇವರು ಬಂದಾಗ ಈ ವಿಷಯವನ್ನು ಹೇಗೆ ಹೇಳುವುದು? ಎಂದು ಸುಮತಿ ಪ್ರಶ್ನೆ ಮಾಡಿದಾಗ ಅವಳ ಅಕ್ಕ ನಗುತ್ತಾ ಹೇಳಿದಳು

“ನಾವು ಈಗ ಏಕೆ ಬಂದಿರುವೆವೆಂದುಕೊಂಡಿರುವೆ? ವೇಲಾಯುಧನ್ ಬೆಳಗ್ಗೆ ಮನೆಗೆ ಬಂದು ನೀನು ಬಳಲಿರುವ ಹಾಗೂ ವಾಂತಿ ಮಾಡಿಕೊಂಡ ವಿಷಯವನ್ನು ಹೇಳಿ ನೀನು ಮೊದಲಬಾರಿಗೆ ತಾಯಿ ಆಗುತ್ತಿರುವ ಬಗ್ಗೆ ಬಹಳ ಖುಷಿಯಿಂದ ಹೇಳಿದ….”ಹಾಗಾಗಿ ನಾನು ಮತ್ತು ಅಪ್ಪ ನಿನ್ನನ್ನು ನೋಡಲು ಬಂದಿರುವೆವು”…

ಎಂದು ಹೇಳುತ್ತಾ ಅಪ್ಪ ತಂದಿದ್ದ ಕೈ ಚೀಲವನ್ನು ಎತ್ತಿಕೊಂಡು ಬಂದಳು.

ಅದರ ತುಂಬಾ ಹಣ್ಣು ಹಾಗೂ ಅವಳಿಗಿಷ್ಟವಾದ ತಿಂಡಿಗಳು ಇದ್ದವು. ಅದನ್ನೆಲ್ಲಾ ಕಂಡೊಡನೆ ಸುಮತಿಯ ಮುಖ ಅರಳಿತು. ಖುಷಿಯಿಂದ ಅಕ್ಕನನ್ನು ಅಪ್ಪಿಕೊಂಡಳು. ಅಡುಗೆ ಮನೆಯ ಬಾಗಿಲ ಬಳಿಗೆ ಬಂದು ಕುರ್ಚಿಯಲ್ಲಿ ಕುಳಿತಿದ್ದ ಅಪ್ಪನನ್ನು ಕೃತಜ್ಞತಾ ಭಾವದಿಂದ ನೋಡಿ ಮುಗುಳ್ನಕ್ಕಳು. ಇವರಿಬ್ಬರ ಮಾತನ್ನು ಆಲಿಸುತ್ತಾ ಕುಳಿತಿದ್ದ ನಾರಾಯಣನ್ ಮಗಳ ಕಡೆಗೆ ನೋಡಿ ತಲೆ ಅಲ್ಲಾಡಿಸುತ್ತಾ ಮಗಳನ್ನು ಅಕ್ಕರೆಯಿಂದ ನೋಡಿ ಮುಗುಳ್ನಕ್ಕರು. ಆಯಾಸವಿದ್ದರೂ ಚುರುಕಾಗಿ ಕಾಫಿ ಹಾಗೂ ಬಾಳೆಕಾಯಿಯ ಬಜ್ಜಿ ಮಾಡಿಟ್ಟಳು. ಅಷ್ಟು ಹೊತ್ತಿಗೆ ವೇಲಾಯುಧನ್ ಕೂಡಾ ಬಂದರು. ಬರುವಾಗ ಕೈ ಚೀಲದ ತುಂಬಾ ಹಣ್ಣುಗಳನ್ನು ತಂದಿದ್ದರು. ಅವರ ಕೈಯಲ್ಲಿ ಮುತ್ತುಗದ ಎಲೆಯಲ್ಲಿ ಸುತ್ತಿದ ಮಲ್ಲಿಗೆಯ ದಂಡೆ ಇತ್ತು. ಹೊರಬಾಗಿಲಿನಿಂದಲೇ ಸುಮತಿಯನ್ನು ಕರೆದು ಕೈ ಚೀಲವನ್ನು ಕೊಟ್ಟು ಸುಮತಿಯ ಮುಖವನ್ನೊಮ್ಮೆ ನೋಡಿ ಮಲ್ಲಿಗೆಯ ಹೂ ದಂಡೆಯನ್ನು ಕೊಟ್ಟರು. ಇಬ್ಬರ ನೋಟವೂ ಕೂಡಿದಾಗ ಸುಮತಿ ನಾಚಿ ತಲೆ ತಗ್ಗಿಸಿದಳು. ಕೈ ಚೀಲ ಮತ್ತು ಮಲ್ಲಿಗೆ ಹೂವನ್ನು ಹಿಡಿದು ಒಳಗೆ ನಡೆದಳು. ವೇಲಾಯುಧನ್ ಜಗುಲಿಯ ಮೇಲೆ ಇಟ್ಟಿದ್ದ ಪಾತ್ರೆಯಿಂದ ನೀರನ್ನು ಮೊಗೆದು ಕಾಲು ತೊಳೆದು ಒಳಗೆ ಬಂದರು.

ಮಾವನನ್ನು ನೋಡಿ ನಮಸ್ಕರಿಸಿದರು. ಅಷ್ಟು ಹೊತ್ತಿಗೆ ಹೊರಗೆ ಆಡುತ್ತಿದ್ದ ತಮ್ಮಂದಿರು ಒಳಗೆ ಓಡಿ ಬಂದರು. ವೇಲಾಯುಧನ್ ಬಟ್ಟೆ ಬದಲಿಸಿ ನೇರವಾಗಿ ಅಡುಗೆ ಮನೆಗೆ ಬಂದರು. ಚೀಲದಲ್ಲಿ ಇದ್ದ ಅವಲಕ್ಕಿಯನ್ನು ತೆಗೆದುಕೊಂಡು ತೆಂಗಿನಕಾಯಿಯನ್ನು ತುರಿಯಲು ಸುಮತಿಗೆ ಹೇಳಿ ಅಚ್ಚು ಬೆಲ್ಲವನ್ನು ಪುಡಿ ಮಾಡಿ ಏಲಕ್ಕಿಯನ್ನು ಕುಟ್ಟಿ ಸುಮತಿ ತುರಿದಿಟ್ಟ ತೆಂಗಿನಕಾಯಿಯನ್ನು ಸೇರಿಸಿ ಪುಟ್ಟಬಾಳೆಯ(ಏಲಕ್ಕಿ ಬಾಳೆ )ಹಣ್ಣನ್ನು ಕಿವುಚಿ ಅವಲಕ್ಕಿಯನ್ನು ಕಲಸಿ ಇಟ್ಟರು.

ಪತಿ ಕಲಸಿ ಕೊಡುವ ಅವಲಕ್ಕಿ ಎಂದರೆ ಸುಮತಿಗೆ ಬಹಳ ಇಷ್ಟ. ಅವರಿಗೆ ಹೆಚ್ಚು ಖುಷಿ ಎನಿಸಿದಾಗ ಅವಲಕ್ಕಿಯ ಈ ಮಿಶ್ರಣವನ್ನು ಮಾಡಿಕೊಡುವುದು ವಾಡಿಕೆಯಾಗಿತ್ತು. ಹಾಗಾಗಿ ಪತಿಯು ಬಹಳ ಖುಷಿಯಲ್ಲಿರುವರು ಎಂಬುದು ಸುಮತಿಗೆ ಅರ್ಥವಾಗಿ ಹೋಗುತ್ತಿತ್ತು. ಇಂದು ಕೂಡಾ ಪತಿಯು ಬಹಳ ಖುಷಿಯಲ್ಲಿ ಇರುವರೆಂದು ಅವರ ಈ ನಡವಳಿಕೆಯಿಂದ ಅವಳಿಗೆ ತಿಳಿಯಿತು. ಹಾಗಾದರೆ ಪತಿಗೆ ಈ ಸಂತಸದ ವಿಷಯದ ಅರಿವು ಆಗಿದೆ. ಹಾಗಾಗಿ ಅಲ್ಲವೇ ತಾನು ಅಸ್ವಸ್ಥವಾಗಿರುವುದನ್ನು ಕಂಡರೂ ಬೆಳಗ್ಗೆ ನಗುತ್ತಾ ಇದ್ದಿದ್ದು ಎಂಬುದು ನೆನಪಾದಾಗ ಅವಳ ಮುಖ ಅರಳಿತು ಜೊತೆಗೆ ತುಸು ನಾಚಿಕೆಯೂ ಆಯಿತು. ಬಾಳೆಯ ಎಲೆಯಲ್ಲಿ ಅವಲಕ್ಕಿ ಹಾಕಿ ತನ್ನ ಮುಂದೆ ಹಿಡಿದಾಗ ಅವರ ಸಂತಸ ಹಾಗೂ ಪ್ರೀತಿಯ ಅರಿವಾಯ್ತು. ನನ್ನ ಮೇಲಿನ ಪ್ರೀತಿಯಿಂದ ಅಲ್ಲವೇ ಇವರು ಅಕ್ಕನಿಗೆ ವಿಷಯ ತಿಳಿಸಿ ಅಪ್ಪ ಹಾಗೂ ತಮ್ಮಂದಿರನ್ನು ಕೂಡಾ ಇಲ್ಲಿಗೆ ಬರುವಂತೆ ಮಾಡಿದ್ದು. ನಾನು ಬೆಳಗ್ಗೆ ಈ ಎಲ್ಲವನ್ನೂ ಬಯಸಿದ್ದೆ. ಅದನ್ನು ಈ ರೀತಿಯಲ್ಲಿ ಪತಿಯು ಸಾಕಾರಗೊಳಿಸಿದ್ದಾರೆ. ಎಂಬುದು ಅವಳಿಗೆ ಅತ್ಯಂತ ಸಂತೋಷದಾಯಕ ವಿಷಯವಾಗಿತ್ತು. ಧನ್ಯತೆಯ ಭಾವದಿಂದ ಪತಿಯೆಡೆಗೆ ಓರೆನೋಟ ಬೀರಿದಳು. ಇದು ವೇಲಾಯುಧನ್ ಗಮನಕ್ಕೆ ಬಂತು. ಅವಳ ನೋಟದ ಅರ್ಥ ತಿಳಿದ ಅವರು ಕಂಡೂ ಕಾಣದಂತೆ ಮುಗುಳ್ನಕ್ಕು ಎಲ್ಲರಿಗೂ ಕಾಫಿ ಅವಲಕ್ಕಿ ಹಾಗೂ ತಿಂಡಿಗಳನ್ನು ಕೊಡಲು ಹೇಳಿದರು. ಎಲ್ಲರೂ ನಗುತ್ತಾ ಖುಷಿಯಾಗಿ ಫಲಾಹಾರವನ್ನು ತಿಂದು ಕಾಫಿ ಕುಡಿದರು. ಸ್ವಲ್ಪ ಹೊತ್ತಿಗೆಲ್ಲ ಬಾವ ಕೂಡಾ ಬಂದರು. ಅವರಿಗೂ ಕಾಫಿ ತಿಂಡಿಯನ್ನು ಕೊಟ್ಟಳು. ಪಡಸಾಲೆಯಲ್ಲಿ ಅಪ್ಪ, ಪತಿ ಹಾಗೂ ಬಾವ ಕುಳಿತು ನಗುತ್ತಾ ಹರಟೆ ಹೊಡೆಯುತ್ತಾ ಇದ್ದರೆ ತಮ್ಮಂದಿರು ದೊಡ್ಡ ಅಕ್ಕನ ಮಗುವನ್ನು ಆಡಿಸುತ್ತಾ ನಗುತ್ತಿದ್ದರು. ಅಡುಗೆ ಮನೆಯಲ್ಲಿ ಅಕ್ಕ ತಂಗಿ ಇಬ್ಬರೂ ರಾತ್ರಿಗೆ ಅಡುಗೆ ಮಾಡುವ ತಯಾರಿಯಲ್ಲಿ ತೊಡಗಿಕೊಂಡರು.

ಅಡುಗೆ ಆದ ನಂತರ ಎಲ್ಲರಿಗೂ ಊಟ ಬಡಿಸಿ ಅಕ್ಕ ತಂಗಿ ಇಬ್ಬರೂ ಅಡುಗೆ ಮನೆಯಲ್ಲಿ ಕುಳಿತು ಊಟ ಮಾಡಿದರು. ತಂಗಿಗೆ ಇನ್ನು ಮೇಲೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ತಿಳಿ ಹೇಳಿದಳು. ಎಲ್ಲವನ್ನೂ ಗಮನವಿಟ್ಟು ಕೇಳಿಸಿಕೊಂಡಳು. ಸುಮತಿಗೆ ಊಟ ಸೇರುತ್ತಿರಲಿಲ್ಲ. ಹಾಗೂ ಹೀಗೂ ಏನೋ ಸ್ವಲ್ಪ ತಿಂದು ಊಟದ ಶಾಸ್ತ್ರ ಮುಗಿಸಿದಳು. ಊಟದ ನಂತರ ಎಲ್ಲರೂ ಹೊರಡಲು ಅನುವಾದರು. ವೇಲಾಯುಧನ್ ಹಾಗೂ ಸುಮತಿ ಎಲ್ಲರನ್ನೂ ಬೀಳ್ಕೊಟ್ಟು ಮನೆಯ ಒಳಗೆ ನಡೆದರು. ಪತಿಗೆ ಊಟದ ನಂತರ ತಾಂಬೂಲ ಮೆಲ್ಲುವ ಅಭ್ಯಾಸವಿತ್ತು. ಹಾಗಾಗಿ ಸುಮತಿ ಎಲೆ ಅಡಿಕೆ ಸುಣ್ಣವನ್ನು ಅಡುಗೆ ಮನೆಯಿಂದ ತೆಗೆದುಕೊಂಡು ಮಲಗುವ ಕೋಣೆಗೆ ಬಂದಳು. ಪತಿಯು ಸುಮ್ಮನೇ ಕಣ್ಣು ಮುಚ್ಚಿ ಮಲಗಿದ್ದನ್ನು ಕಂಡು ಅಡುಗೆ ಮನೆ ಕಡೆ ಹೊರಟಳು. ಬಾಗಿಲು ದಾಟಿ ಹೋಗಲು ಹೊರಟ ಪತ್ನಿಯನ್ನು ತಡೆದು ಕೈ ಹಿಡಿದು ಹತ್ತಿರ ಬರುವಂತೆ ಸನ್ನೆ ಮಾಡಿದರು. ಸುಮತಿ ನಾಚುತ್ತಾ ಪತಿಯ ಬಳಿ ಬಂದು ನಿಂತಳು….”ಎಲೆ ಅಡಿಕೆ ಕೊಡು ಸುಮತೀ…ಇಲ್ಲೇ ಕುಳಿತುಕೋ”….ಎಂದು ಮಲಗಿದ್ದಲ್ಲಿಂದ ಸ್ವಲ್ಪ ಪಕ್ಕಕ್ಕೆ ಸರಿದು ಸುಮತಿ ಕುಳಿತುಕೊಳ್ಳಲು ಜಾಗ ಮಾಡಿಕೊಟ್ಟರು. ಮಂಚದ ತುದಿಯಲ್ಲಿ ಕುಳಿತ ಸುಮತಿಯನ್ನು….”ಹಾಗೆ ತುದಿಯಲ್ಲಿ ಕುಳಿತು ಕೊಳ್ಳಬಾರದು ಹುಟ್ಟುವ ಮಗುವಿಗೆ ತೊಂದರೆ ಆಗುತ್ತದೆ”…ಎಂದು ಹೇಳಿ ಇನ್ನೂ ಸ್ವಲ್ಪ ಅತ್ತ ಸರಿದು ಮಲಗಿದರು. ಸುಮತಿ ವೀಳ್ಯದ ಎಲೆಯನ್ನು ತೆಗೆದುಕೊಂಡು ಎರಡೂ ಕಡೆ ತನ್ನ ಸೀರೆಯ ಸೆರಗಿನಿಂದ ಒರೆಸಿ, ಎಲೆಯ ಮೇಲೆ ಸ್ವಲ್ಪ ಸುಣ್ಣ ಸವರಿ ಅಡಿಕೆಯನ್ನು ಇಟ್ಟಳು. ವೇಲಾಯುಧನ್ ರವರಿಗೆ ವೀಳ್ಯದ ಎಲೆಯ ಜೊತೆಗೆ ಸ್ವಲ್ಪ ತಂಬಾಕು ಸೇರಿಸಿ ತಿನ್ನುವ ಅಭ್ಯಾಸವಿತ್ತು ಹಾಗಾಗಿ ನಡುವೆ ಸ್ವಲ್ಪ ತಂಬಾಕನ್ನು ಇಡಲು ಪತ್ನಿಗೆ ಹೇಳಿದರು. ಎಲೆ ಅಡಿಕೆ ಸುಣ್ಣ ಹಾಗೂ ತಂಬಾಕನ್ನು ಇಟ್ಟು ಮಡಚಿ ಕೊಟ್ಟ ಎಲೆಯನ್ನು ಬಾಯಿಗೆ ಹಾಕಿಕೊಳ್ಳುತ್ತಾ ಪತ್ನಿಯನ್ನು ತನ್ನೆಡೆಗೆ ಸೆಳೆದುಕೊಂಡರು.


Leave a Reply

Back To Top