ಟಿಕೆಟ್ ನ ಮಹತ್ವ-ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ

ಸಾಮಾನ್ಯವಾಗಿ ಯಾವುದೇ ಸಾರ್ವಜನಿಕ ಪ್ರೇಕ್ಷಣೀಯ ಸ್ಥಳಗಳು, ಸಿನಿಮಾ ಮಂದಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಕಾರ್ಯಕ್ರಮಗಳು, (ಕ್ರಿಕೆಟ್ ಮ್ಯಾಚ್) ಪ್ರಯಾಣಮಾಡುವ ಬಸ್ಸು, ರೈಲು, ವಿಮಾನ, ಹಡಗು ,ಪ್ರಯಾಣದಲ್ಲಿ,ಹಾಗೂ ಪ್ರಾಣಿ , ವಸ್ತು ಸಂಗ್ರಹಾಲಯದಂತ ಸ್ಥಳಗಳು ಇಲ್ಲೆಲ್ಲಾ ನಾವು ಟಿಕೆಟ್ ಪಡೆದು ಹೋಗಬೇಕಾದುದು ಸರ್ವೇ ಸಾಮಾನ್ಯ, ಅವಶ್ಯಕ, ಹಾಗೂ ಕರ್ತವ್ಯ ಕೂಡ. ಹಾಗಾಗಿ ಈ ಟಿಕೆಟ್ ಎಂಬುದು ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಚಿರಪರಿಚಿತ. ಈ ಟಿಕೆಟ್ ಎಂಬುವುದೊಂದು ಅನುಮತಿಗೆ ಸಾಧನ ಎನ್ನಬಹುದು.
ಇದು ಅಗತ್ಯವೆಂದು ಗೊತ್ತಿದ್ದರೂ ಕೆಲವರು ಟಿಕೆಟ್ ನ್ನು ಬೇಕೆಂತಲೇ ತೆಗೆದುಕೊಳ್ಳದಿರುವುದನ್ನು ಕಾಣುತ್ತೇವೆಯಾದರೂ ನಮಗೇಕೆ ಉಸಾಬರಿ? ಎಂದು ಸುಮ್ಮನಾಗುವುದುಉಂಟು.  ಅದರ ಮಹತ್ವವನ್ನು ಅರಿಯದ ಜನ ಅದನ್ನು ಪಡೆಯದಿರುವುದು, ಪಡೆದರೂ ಅದಕ್ಕೆ ಮಹತ್ವ ನೀಡದೆ ಬೀಸಾಡಿಬಿಡುವುದು, ಅದನ್ನು ಹಾಳುಮಾಡುವುದನ್ನು ಕಾಣುತ್ತೇವೆ.
ಸಾಮಾನ್ಯವಾಗಿ ಬಸ್ಸುಗಳ ಪ್ರಯಾಣದ ಸಂದರ್ಭಗಳಲ್ಲಿ ಈ ಬೇಜವಾಬ್ದಾರಿತನವನ್ನು ಸಾಕಷ್ಟು ಕಾಣುತ್ತೇವೆ.
ಬಸ್ಸುಗಳಲ್ಲಿ “ಟಿಕೇಟನ್ನು ಕೇಳಿ ಪಡೆಯಿರಿ” ಎಂಬ ಫಲಕವಿದ್ದರೂ ಪಡೆಯದೇ ಹಣವನ್ನು ಉಳಿಸಲು ಹೋಗಿ ನಂತರ ಬಯ್ಸಿಕೊಂಡು ದಂಡ ಹಾಕಿಸಿಕೊಂಡವರಿಗೇನು ಕಡಿಮೆಯಿಲ್ಲ.
ಇನ್ನು ಕೆಲವರು ಪ್ರಾಮಾಣಿಕವಾಗಿ ಟಿಕೇಟನ್ನೇನೋ ಮಾಡುತ್ತಾರೆ ಆದರೆ ಅದೊಂದು ಭಾರದಂತೆ,  ನಿರ್ಲಕ್ಷ್ಯತನದಿಂದ  ಎಲ್ಲೋ ಇಟ್ಡುಬಿಡುವುದು, ಅಥವಾ ಅಲ್ಲೇ ಕೈಯಲ್ಲಿ ಮುದ್ದೆ ಮಾಡಿಬಿಡುವುದನ್ನು ಮಾಡುತ್ತಾರೆ.
ಇದಕ್ಕೆ ಸುಶಿಕ್ಷಿತರು, ಆಶಿಕ್ಷಿತರು ಎಂಬ ಅಂತರವಿಲ್ಲ.” ಒಮ್ಮೆ ಹೀಗೇ ಸರಕಾರಿ ಬಸ್ಸಿನಲ್ಲಿ ನಿರ್ವಾಹಕರು ಕೊಟ್ಟ ಟಿಕೇಟನ್ನು ಸುಶಿಕ್ಷಿತರೊಬ್ಬರು ಚಿಂದಿ ಮಾಡಿದ್ದನ್ನು ನೋಡಿದ ಅದೇ ನಿರ್ವಾಹಕ  ನಿಮಗೆ ” ಟಿಕೇಟ್ ಮಹತ್ವ ಗೊತ್ತಿಲ್ಲ, ಚೆಕಿಂಗ್ ಬಂದಾಗ ಗೊತ್ತಾಗುತ್ತೆ” ಎಂದು  ಸರಿಯಾಗಿ ಬಯ್ದಾಗಲೇ ಆವ್ಯಕ್ತಿಗೆ ಟಿಕೆಟ್ ನ ಮಹತ್ವದ ಅರಿವಾಗಿರಬೇಕು.
ಹೀಗೆ ನಾವು ಜೀವನದಲ್ಲಿ ತೀರ ಚಿಕ್ಕ ಎಂದು ತಿಳಿದ ವಿಷಯಗಳು ಒಹಳ ಪ್ರಮುಖವಾಗಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಅದಕ್ಕಾಗಿ ಟಿಕೆಟ್ ಕೇಳಿ ಪಡೆದು, ಸರಿಯಾಗಿ ಆಕೆಲಸ ಮುಗಿಯುವ ವರೆಗೆ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ.
 ಬಸ್ಸುಗಳಲ್ಲಿ ಪ್ರಯಾಣಿಸುವಾಗ ಪ್ರಯಾಣ ಮುಗಿದ ಮೇಲಷ್ಟೇ ಅದರ ವಿಲೇವಾರಿಯಾಗಬೇಕು. ಕಾರ್ಯಕ್ರಮಗಳಲ್ಲಿ ಕೂಡ ಇದೇ ತತ್ವವನ್ನು ಅನುಸರಿಸಬೇಕು.
ನಿರ್ವಾಹಕರು ಅಥವಾ ಅಧಿಕಾರಿಗಳು ನೀಡುವ ಟಿಕೆಟ್ ನ ಮೊತ್ತ ಕಡಿಮೆಯಾದರೂ ಅವುಗಳನ್ನು ಸರಿಯಾಗಿ ಮುಂಜಾಗ್ರತೆಯಿಂದ ಇಡಬೇಕಾದದ್ದು ಹಾಗೂ ಟಿಕೇಟ್ ಪಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ.


Leave a Reply

Back To Top