ಅನಸೂಯ ಜಹಗೀರದಾರ ಅವರ ಗಜಲ್

ನನಗಾಗದವರು ನಿನಗಾಪ್ತರು ನನ್ನ ತೆಗಳಿಕೆಗೆ ಏಕೋ ಸುಮ್ಮನಿರುವೆ
ಯಾವ ದೌರ್ಬಲ್ಯವೋ ಕಾಣೆ ಗೊತ್ತಿದ್ದೂ ಮತ್ಸರದ ಗುಂಪಿನಲಿರುವೆ

ಪ್ರಣಯ ಮಾರ್ಗದಲಿ ಅವರನ್ನೆಲ್ಲ ಮರೆಮಾಚಿ ಕಳ್ಳ ದಾರಿಯ ಸವೆಸಿ
ನಿಜ ವೇಷ ಮರೆಸಿ ಮತ್ತೊಂದು ಧರಿಸಿ ನನ್ನ ಸಖ್ಯ ಬಯಸಿ ಬರುವೆ

ಅಕ್ಕಿಯ ಮೇಲೂ ನಂಟು ನೆಂಟರ ಮೇಲೂ ಪ್ರೀತಿ ಸತ್ಯವದು ನಿನಗೆ
ಹಾತೊರೆದು ಒಲವ ಗಂಗೆಯಲಿ ಮೀಯಲು ವ್ಯರ್ಥ ಪ್ರಯತ್ನಿಸುತ್ತಿರುವೆ

ನೀ ಬಿಡೆ ನಾ ಕೊಡೆ ಜಿದ್ದಾಜಿದ್ದಿಯ ಪ್ರಯತ್ನ ನಿತ್ಯ ಕಸರತ್ತಿನ ಬದುಕಿದು
ಖುದ್ದು ನೀನೆ ನಿನ್ನ ಸ್ವಭಾವದ ಗೆರೆ ಎಳೆದು ಅದರಲಿ ಬಂಧಿಯಾಗಿರುವೆ

ಲಾವಾರಸದ ಒಡಲು ನನ್ನದು ಮಡಿಲು ಸದಾ ತಂಪಿದೆ ಬಲ್ಲೆವು ಈರ್ವರೂ
ಕನಿಕರವಿದೆ ಇಬ್ಬಂದಿ ಸಂಕಟದಲಿ ಸಿಕ್ಕು ನೀ ವಿಲವಿಲ ಒದ್ದಾಡುತಿರುವೆ

ಪಾರತಂತ್ರವ ಸಮರ್ಥಿಸುವುದಾದಲ್ಲಿ ಬೇಡಬಿಡು ಒಪ್ಪಲಾರಳು ಅನು
ಇರಲಿ ನಿನ್ನ ವ್ಯಾಪ್ತಿ ನಿನಗೆ ನಮ್ಮ ಪ್ರೀತಿಯನೇಕೆ ಬಂಧೀಖಾನೆಗೆ ಎಳೆತರುವೆ


6 thoughts on “ಅನಸೂಯ ಜಹಗೀರದಾರ ಅವರ ಗಜಲ್

  1. ಅರ್ಥಪೂರ್ಣ ಗಜಲ್ ಮೇಡಂ.. ತುಂಬಾ ಚೆನ್ನಾಗಿದೆ.

Leave a Reply

Back To Top