ನಮ್ಮ ಕಡಿ ಈ ಬ್ಯಾಸಗಿ ಧಗಿ ಇನ್ನೂ ಮುಗಿಯೊ ಮಾತೆ ಇಲ್ಲ ಬಿಡ್ರಿ. ಬ್ಯಾಸಗಿ ಧಗಿ ಒಂದ ನಮೂನಿ ತ್ರಾಸ ಮಾಡಿದ್ರ , ಈ ಮಳಿಗಾಲದ ಧಗಿ ಇನ್ನೊಂದು ನಮೂನಿ ತ್ರಾಸ ಮಾಡತದ ನೋಡ್ರಿ. ಅದು ಬೇಕು ಇದು ಬ್ಯಾಡ ಅಂಬಂಗ ಆಗ್ಯಾದ. ಧಗಿ ಬಿಸಲು ಅನಕೊಂತ ಮದಿವಿ  ಮುಂಜಿ ಅಂತ ಕಾರಣಗಳಿಗಿ ಓಡಾಡಕೊಂತ ಈ ವರ್ಷದ ಬ್ಯಾಸಗಿ ಕಾಲ ಮುಗಿಲಕ್ಕ ಬಂತು.  ಆಗೀಟು ಈಗಿಟು ಮಳಿ ಬರಲತದ.ನಾಕ ಹನಿ ಮಳಿ ಬಂದ‌ನಿಂತ  ಮ್ಯಾಲ  ಕಾದ ಹಂಚಿನ ಮ್ಯಾಲ ನೀರು ಹಾಕಿದಂಗಾಗಿ‌ ಭೂಮಿ ಮ್ಯಾಲ ಒಮ್ಮಿಗೆ ಬಿಸಿ ವಾಪ ಬರತದ ನೋಡ್ರೀ.ಮನಿ ಒಳಗೂ ಇರಲಿಕ್ಕ ಆಗಲ್ಲ  , ಮನಿ ಹೊರಗೂ ಕುಂದ್ರಲಿಕ್ಜ ಆಗಲ್ಲ.

ಇವತ್ತ ಸಂಜಿ ಮುಂದ ಒಂದಿಟ ಮಳಿ ಬಂದು ನಿಂತ ಮ್ಯಾಲ ಧಗಿ ಹೆಚ್ಚಾಗಿ ಮನಿ ಹೊರಗರ ಗಾಳಿ ಅದ ಏನ ಅನಕೊಂತ ಹೊರಗ ಬಂದಾಗ , ಬಾಜು ಮನಿ ವಾಣಿನೂ ಹೊರಗೆ ನಿಂತಿಳು. ಮುಖದ ಮ್ಯಾಲಿನ ಬೆವರ ಒರಸಕೋತ , ನನಗ ನೋಡಿ ,  ಬಿಸಲಿಗಿ ಧಗಿಗಿ ಬೈದ ಮ್ಯಾಲ ಮುಂದಿನ ಮಾತು ಸುರು ಮಾಡ್ದಳು.

ಯಾರರ ಸಿಕ್ರ ಮೊದಲ ಆಯಾ ಕಾಲದ ವಾತಾವಣದ ಬಗ್ಗೆ ಮೊದಲ ಮಾತಾಡಿ ಮುಂದಿನ ಮಾತಾಡೋ ಪದ್ದತಿ ನಮಗ. ನಾವ ಏಟ ಬೈದ್ರೆನು , ಸಂತೋಷ ಪಟ್ಟರೆನು , ಪೃಕೃತಿ ಅದರ ಕೆಲಸ ಅದು ಮಾಡತಿರತದ.

 ವಾಣಿ ಇವತ್ತ ಹೋಗಿ ಬಂದ ಮದುವಿ ಬಗ್ಗೆ ಹೇಳತಿದ್ಳು. ಅಕ್ಕೋರೆ , ಇವತ್ತ ಆ ಪಾಟಿಲ್ರು ಎಷ್ಟು ಗ್ರ್ಯಾಂಡ್ ಆಗಿ ಮಗಳ ಮದಿ ಮಾಡಿ ಕೊಟ್ರು ರಿ . ಮದುಮಕ್ಕಳು ಬರಪರಿ ಅವರಿಗಿ ಸ್ವಾಗತ ಮಾಡಲಕ ದೇವ ಲೋಕದ ಅಪ್ಸರೆಯರಂಗ ರೆಡಿ ಆದವ್ರಿಗಿ ವೀಣೆ ಬಾರಸಕೋತ ಆ ಕಡಿ ಈ ಕಡಿ ನಿಂದ್ರಸಿದ್ರು. ಸ್ಟೇಜ್ ಅಲಂಕಾರ ಕೇಳೆಬ್ಯಾಡ್ರಿ , ಬಾಗಿಲದಿಂದ ಮದುಮಕ್ಕಳು ಸ್ಟೇಜ್ ಮ್ಯಾಲ್ ಬರಲಕ್ಕ ಪುಷ್ಪಕ ವಿಮಾನದಂಗ ಹೂವಿನಾಗೆ ಮಾಡಿದ್ದ ಡೋಲಿ ಇತ್ತ. ಮದಮಗಳಿಗಿ ಅದರಾಗ ಕುಂಡ್ರಸಿ ಕರಕೊಂಡು ಬಂದುರ್ರಿ. ಮದುಮಗಳ ಸೀರೀನೆ ದಿಡ್ ಲಾಕ್ ರೂಪೈದ ಅದ ಅಂತ..

ವೀಣಾ ಹೇಳತಾನೆ ಇದ್ಳು. ಅದ್ದೂರಿ ಮದುವೆಗಳು ಟ್ರೇಂಡ್ ಆಗತಾ ಇರೋ ಇಂತ ಸಮಯದಾಗ ವೀಣಾ ಹೇಳೊ ಯಾವ ವಿಷಯಗಳು ಆಸಕ್ತಿ ಕೆರಳಿಸಲಿಲ್ಲ ಅನ್ರಿ. ಒಬ್ಬರದು ನೋಡಿ ಮತ್ತೊಬ್ಬರು ಅನುಕರಿಸತಾನೆ ಹೋಗಲತಾರ. ಸಾಲ ಸೋಲ ಮಾಡಿಯಾದ್ರೂ ಅದ್ದೂರಿ ಮದಿ ಮಾಡಲತಾರ.

ಈ ವಿಷಯದ ಬಗ್ಗೆ ಯಾರಿಗೂ ಉಪದೇಶ ಮಾಡುವಂಗಿಲ್ಲ.ಬರಿ ರೊಕ್ಕ ರೊಕ್ಕ ಅನಕೊಂತ ಇದ್ರ ನಾವು ಮಕ್ಕಳು ಖುಷಿಪಡೋದ್ಯಾವಾಗ , ನಮ್ಮ ಮಕ್ಕಳ ಸಂಭ್ರಮ ನಾವ ಮಾಡ್ದುರೆ ಅವು ಕಾಣತಾವ. ರೊಕ್ಕಕ ಲೆಕ್ಕ ಹಾಕ್ದರ ಮತ್ತ ಮಾಡ್ತಿವಂದ್ರ ಇಂತಹ ಕಾರಣಗಳು ಮಾಡಲಕ್ಕ ಬರತದೇನು , ನಮ್ಮ ಖುಷಿಗಿ ಖರ್ಚ ಮಾಡಬೇಕಪ್ಪ ,  ಅನ್ನುವದು ವಾದ.

ಮದುವೆಗೆ ಕೋಟಿಗಟ್ಟಲೆ ಖರ್ಚು ಮಾಡಲು ಹಿಂಜರಿತಿಲ್ಲ. ಆ ಬಟ್ಟೆಗಳ ಬೆಲೆ ಕೆಳಿದ್ರೆ ಬಾಯಿ ತೆರದು ಕೂಡಬೇಕು. ಮದುಮಗ ಮದಮಗಳ ಬಟ್ಟೆ ಖರ್ಚೆ ಐದು ಲಕ್ಷದ ಸಮೀಪ ಬರತದ. ಉಳ್ಳವ್ರು ತರತಾರ ಬಿಡ್ರಿ ,  ನಾವೇನು ಅಷ್ಟು ಖರ್ಚ ಮಾಡಲ್ಲ ,  ಅನ್ನಕೊಂತನೆ ಉಳ್ಳಲಾರದವ್ರೂ ಸಾಲ ಮಾಡಿಯಾದ್ರೂ ಪೀರೆ ಬಟ್ಟಿ ತಂದು ಮದಿವಿ ಮಾಡಲತಾರ.

ಅಷ್ಟು ತುಟ್ಟಿ ಅರಿವೆಗಳು ಮದಿವಿ  ದಿನ ಮಾತ್ರ ಹಾಕೊಂಡು ಕಪಾಟ ಸೇರಿ ಬಿಡತಾವ.ಇನ್ನ ಆ ಪೋಟೋ , ವಿಡಿಯೋದಂತೂ ಕೇಳೊದೆ ಬ್ಯಾಡ. ಮದಿ ಆದ ಆರು ತಿಂಗಳು ವರ್ಷ ಆದ್ರೂ ಜಲ್ದಿ ಪೋಟೋಗಳು ಕೊಡವಲ್ಲರೂ. ಕೊಟ್ಟ ಮ್ಯಾಕ್  ನೋಡಬೇಕು ಒಂದು ದೊಡ್ಡ ಸೋಟಕೇಸೆ ಹಿಡಕೊಂಡು ಬಂದಂಗ ಬರತಾರ. ಅದರ ದುಡ್ಡು ಲಕ್ಷ ಲಕ್ಷ ಆಗಿರತದ. ಒಂದು ಸಲ ಮನಿ ಮಂದಿ ಎಲ್ಲರೂ ನೋಡ್ದ ಮ್ಯಾಲ ಅಲಮೇರಾದಾಗೋ , ಮತ್ತೆಲ್ಲೋ ಅವಕ್ಕ ಜಾಗ ಮಾಡಕೋಡಬೇಕು.
ಇಷ್ಟೊಂದು ದುಡ್ಡು ಖರ್ಚು ಮಾಡಿ ಪೊಟೋ ಅಲ್ಬಮ್ , ವಿಡಿಯೋ  ಮಾಡಸಿ ಅದನ್ನ ನಾವು ಎಷ್ಟ ಸರಿ ನೋಡರತಿವಿ.. !.ಎಲ್ರೂ ಮಾಡಸತಾರ , ನಾವೂ ಮಾಡಸಬೇಕು ಅಷ್ಟೆ.

ಹಿಂದಕ್ಕ ನಮ್ಮವ್ಬ ಅಜ್ಜಿ ಎಲ್ಲರೂ ನಮ್ಮ ಮದಿ ಐದೈದು  ದಿನ ಮಾಡಿರು ಅಂತ ಹೆಳತಿದ್ರೂ. ಆಗ ಅವರ ಮದುವಿ ಊಟ ಅಂದ್ರ , ಹೋಳಿಗಿ ಮಾನಕಾಯಿ ರಸ , ಜೋಳದ ಬಾನ , ಗೋದಿ ಹುಗ್ಗಿ , ಮದುವಿ ದಿನ ಲಾಡು ಮಾಡಿದ್ರ ಅವರು ಬಾಳ ಶ್ರಿಮಂತರಂತ. ನೆಂಟರಿಷ್ಟರೆಲ್ಲ ತಿಂಗಳಕಾಲ ಒಂದೇ ಮನ್ಯಾಗ ಇದ್ದ ಮಾಡೋ ಆ ಮದವಿಗೂ ,
ರಕ್ತ ಸಂಭಂಧಿಗಳು ಕೂಡ ಅಕ್ಷತೆ ಸಮಯಕ್ಕ ಬಂದು ಹೋಗೋ ಈಗೀನ ಮದಿವಿಗಳಿಗೂ ಎಷ್ಟು ವ್ಯತ್ಯಾಸ ಅದ ಅಲ್ಲ..!

ಸಂಭಂಧಗಳು ದೂರ ಆದಷ್ಟು ತೋರಿಕೆ ವೈಭವ ಹೆಚ್ಚು ಹೆಚ್ಚು ಆಗಲತದ.ಅವರ ಮಾಡಿದಕ್ಕಿಂತ ತುಸು ಹೆಚ್ಚೆ ಮಾಡಬೆಕೆಂಬ ಕಿಚ್ಚಿನ ಹಂಬಲ ಹೆಚ್ಚಾಗಲತದ.

ನನ್ನ ವಿಚಾರ ಎತ್ತೆತೋ ಸಾಗತಿರಬೆರಕಾದ್ರ ವೀಣಾಳ ದನಿ ಎಚ್ಚರಿಸ್ತು. ಅಕ್ಕೋರೆ ಊಟ ಎಷ್ಟ ವೈರೈಟಿ ಮಾಡಸಿರು ಅಂತೀರಿ.. ಆ ಒಜ್ಜಿ ತಾಟ ಕೈಯಾಗ ಹಿಡಕೊಂಡು ನಿಂತ  ಉಂಬದು ಒಂದು ಯುದ್ಧ ಮಾಡದಂಗ ಆಗತದ್ರೀ. ಅದಕ್ಕ ಈ ಮದಿಗಳದಾಗ ಎಟ ವೈರೈಟಿ ಅಡಗಿ ಮಾಡಸಿದ್ರೂ ಹೊಟ್ಟಿನೆ ತುಂಬಲ್ಲ ನೋಡ್ರೀ. ಉಂಬ ಪರಿ ಕೂಡಲಾಕ ಕುರ್ಚಿ ನರಾ ಹಾಕಬೇಕು.ಮಕ್ಕಳು ಮರಿ ಇದ್ದವರೂ ಉಂಬದು ಬಾಳ ಕಷ್ಟ‌ , ಅಂತ ಹೆಳತಾನೆ ಇದ್ಳು.

ಹೌದು ನಮ್ಮ ಕಡಿ ಫಂಕ್ಷನ್ ದಾಗ ಬರಿ ಭಫೆ ಸಿಸ್ಟಮ್ ಇರತದ. ಸಾವಿರಾರು ಜನರಿಗಿ ಕರದು ಫಂಕ್ಷನ್ ಮಾಡಿದ್ರ ನೂಕ ನೂಗ್ಗಲ ಆಗದ ಸಹಜನೆ.
ನಮ್ಮ ಬೀದರ. ಕಲಬುರ್ಗಿ ಕಡಿ ಫಂಕ್ಷನ್ ದಾಗ ಕುಂತು ಊಟಕ್ಕ ಬಡಸೊ  ವ್ಯವಸ್ಥೆ ಇಲ್ಲ ಅಂತಾನೆ ಹೇಳಬೇಕು ಈ ಬಾಳೆ ಎಲೆ ಊಟ ನಾವು ಸೀನೇಮಾದಾಗ ಸೊಸಿಯಲ್ ಮೀಡಿಯಾಗಾಗ ಮಾತ್ರ ನೋಡಿವಿ. ಎಷ್ಟು ದೊಡ್ಡ ಫಂಕ್ಷನ್ ಹಾಲ್ ಗಳಿದ್ರೂ ಕೂಡಿಸಿ ಊಟಕ್ಕ ಬಡಿಸೋ ವ್ಯವಸ್ಥೆ ಯಾವ ಫಂಕ್ಷನ್ ಹಾಲ್ ಗಳಲ್ಲೂ ಇಲ್ಲ. ಅಷ್ಟು ವೈರೈಟಿ ಅಡುಗಿ ಮಾಡಸಿದ್ರೂ ನಿಂತಲ್ಲೆ ಗಪ ಗಪ ತಿಂದು ಒಂದಿಷ್ಟ ಹೊಟ್ಡಿಗಿ ಒಂದಿಷ್ಟ ಮುಸರಿಗಿ ಹಾಕಿ ತಿಂದ ಶಾಸ್ತ್ರ ಮಾಡಿ ಹೋಗತಾರ ನಮ್ಮ ಜನ. ಕುಂತು ಊಟ ಮಾಡಿದ್ರ ಬಂದವರೂ ನೆಮ್ಮದಿಯಾಗಿ ಉಂಡು ಹೋಗತಾರ. ಕರದವರಿಗೂ ಇಷ್ಟು ಖರ್ಚ ಮಾಡಿದ್ದಕ್ಕ ಸಾರ್ಥಕ. ಆದ್ರ ನಮ್ಮ ಕಡಿ ಯಾರೂ ಫಂಕ್ಷನದೊಳಗ ನೆಮ್ಮದಿಯಾಗಿ ಹೊಟ್ಟಿತುಂಬಾ ಉಂಡೆವು ಅಂತ ಹೆಳೋರಿಗಿ ಹುಡಕಬೇಕಾಗತ.

ನನಗಂತೂ ಈ ಸಮಾರಂಭಗಳು ಎಷ್ಟು ಸರಳವಾಗಿ ಇರತಾವೋ ಅಷ್ಟು ಸಮಾಧಾನ ಆಗತದ. ಈಗ ನಾವು ಕರದ ತಕ್ಷಣ ಬರಲಕ್ಕ ಬರೋವ್ರೂ ಲೆಕ್ಕ ಹಾಕತಾರ. ವರ್ಷಕ್ಕ ಇಪ್ಪತ್ತ ಮೂವತ್ತು ಮದಿವಿ ಅಟೆಂಡ್ ಮಾಡೊದಂದ್ರ ಸುಮ್ನ ಅಲ್ಲ. ದೂರದೂರದ ಊರುಗಳಿಗಿ ಹೋಗೋ ಖರ್ಚು , ಅವರಿಗಿ ಅಯೇರಿ ಮಾಡೋ ಖರ್ಚು ಇವೆಲ್ಲ ಆರ್ಥಿಕ ವೆಚ್ಚಗಳೆ. ಈಗೀಗ ಸಮಾರಂಭಗಳಿಗಿ ಆಮಂತ್ರಿಸಿಲ್ಲ ಅನೋದಕ್ಕಿಂತ , ಯಾಕಾರ ಕರಿತಾರಪ್ಪ  ಅನ್ನೊಹಂಗ ಆಗ್ಯಾದ. ಕೆಲವೇ ಆಪ್ತರಿಗಿ ಕರದು ಅವರಿಗಿ ಒಳ್ಳೆ ರೀತಿ ಅಥಿತಿ ಸತ್ಕಾರ ಮಾಡಿ ಕಳಿಸಿದ್ರೆ ಅದಕ್ಕೊಂದು ಮರ್ಯಾದೆ. ಜನಸಂಖ್ಯಾ ಬಲ ತೋರಸಲಿಕ್ಕ ಕರದು ಜನಜಂಗುಳಿದಾಗ ಒಬ್ಬರ ಪತಾ ಒಬ್ಬರಿಗಿ ಇಲ್ಲದಂಗ ಯಾರು ಬಂದ್ರೂ ಯಾರೂ ಹೋದ್ರೂ ಎನ್ ಉಂಡ್ರೂ ಒಂದು ನೋಡಲ್ದಂಗ ಸಮಾರಂಭ ಮಾಡಿ ಮುಗಸಿದ್ರ ಏನ್ ಉಪಯೋಗ. ಹೋಗಿ ಬಂದವರು ವೀಣಾನ ಹಂಗ ಕೆಲವು ಹೊಗಳಿ ಕೆಲವು ತೆಗಳಿ ಒಂದು ದಿನದಾಗೆ ಎಲ್ಲ ಮರತು ಹೋಗಿ ಬಂದದ್ದು ನೆನಪೆ ಇರದಂಗ ಆಗತದ.

ಆದ್ರೂ ಈ ಮದವಿ. ಮತ್ತು ಬ್ಯಾರೆ ಫಂಕ್ಷನ್ ಗಳು ಇತ್ತಿತಲಾಗಿ ಹೆಚ್ಚು ಹೆಚ್ಚು ವೈಭವವಾಗಿ ಅಚರಿಸೊದು ಮಾತ್ರ ಹೆಚ್ಚಾಗ್ಯಾದ. ಕೋವಿಡ್ ಸಮಯದಲ್ಲಿ ಫಂಕ್ಷನಗಳಿಗಿ   ಇಂತಿಷ್ಟೆ ಜನ ಇರಬೇಕು ಅಂಬೊ ನಿಯಮ ಯಾವಾಗಲೂ ಇರಬೆಕಿತ್ತು .  ಆಗ  ಇಂತಹ ಅಡಂಬರಕ್ಕ ತಡೆಯಾದ್ರೂ ಬಿಳತಿತ್ತು. ಇರಲಿ ಅವರವರ ಇಷ್ಟ , ಬ್ಯಾಡ ಅನ್ನಲಕ ನಾವ್ಯಾರು , ಅವರ ದುಡ್ಡು , ಅವರ ಖುಷಿ , ಅಂತ  ಅಂದಕೋತಾ.,

ವೀಣಾ ಮುಂದಿನ ತಿಂಗಳು ನಿನ್ನ ಮಗಳ ಮದಿವಿಗೂ ಡೇಟ್ ಫಿಕ್ಸ ಮಾಡಿರಂತ…ಅನ್ನವಷ್ಟರಲ್ಲೆ ನನ್ನ ಮಾತು ತಡದು..
ಹೂಂಂ ರೀ ಅಕ್ಕೋರೆ , ಒಂದಿನ ಮೇಹಂದಿ ಸಂಗೀತ , ಒಂದಿನ ಮುತೈದಿ ಮಾಡದು  ಒಂದಿನ ಊರ ದೇವರಿಗಿ ನೈವೇದ್ಯ ಕೋಡೋದು  , ಭಾಸುಣಕಿ..
ಐದು ದಿನ ದೂಮ್ ಧಾಮ್ ಅಂತ ಮಾಡಬೇಕ ಅಂತ ಅಲತಿವಿ ನೋಡ್ರೀ , ಮದಿಗಿ ಒಂದೆರಡು ಸಾವ್ರ ಜನರಾದರೂ ಬರತಾರಿ. ಯಾರಿಗೂ ಬಿಡಲಕ್ಕ ಬರಲ್ಲ ನೋಡ್ರೀ , ಅಡಗಿ ಮಾಡಲಕ್ಕ ರಾಜಸ್ಥಾನ ದವ್ರೀಗಿ ಹೇಳಿವಿ , ಎಟ ಚಂದ ಅಡಗಿ ಮಾಡಿದ್ರೂ ನಮ್ಮ ಕಡಿನ ಜನ ಮುಸರಿಗಿ ಹಾಕೋದೆ ಬಾಳ ನೋಡ್ರೀ..

ನಡುವೆ ನಾ‌.. ಮತ್ತ ಅಷ್ಟು ಮಂದಿಗಿ ಕರದು ಅಡಗಿ ಮಾಡ್ಸಿ ಅವರು ಉಣ್ಣಲಾರದೆ ಮುಸರಿಗಿ ಹಾಕೊ ಬದಲು ನಿಮಗ ಬೆದಕಾದವ್ರಿಗಿ , ನೆಂಟರು ಬಿಗರಿಗಿ ಕರದೂ ಸಿಂಪಲ್ಲಾಗಿ ಮದುವಿ ಮಾಡ್ದರ ಬರತದಲ್ಲ. ಅವೇ ದುಡ್ಡ ಉಳದ್ರ ಮಗಳಿಗಿ ಕೋಡ್ರೀ , .

ಐ ರೊಕ್ಕ ಏನು ಯಾರಿಗಿ ಕಮ್ಮಿ ಬಿದ್ದಿಲ್ಲ ಬೀಡ್ರೀ. ಇವೆಲ್ಲ ಮತ್ತ ಮತ್ತ ಮಾಡತಿವಿ ಅಂದ್ರ ಸಿಗತಾವೇನ್ರೀ , ರೊಕ್ಕ ಎನ್ ಬರತಾವ ಹೋಗತಾವ.ಇಂತಹ ಕಾರಣಗಳು ಮತ್ತ ಮತ್ತ ಮಾಡಲಕ್ಕ ಬರತಾವಾ…

ನನ್ನ ಉಪದೇಶಗಳೆಲ್ಲ ಉಪಯೋಗಕ್ಕ ಬರಲ್ಲ ಅಂದುಕೊಂಡು ಅವಳ ಮಗಳ ಮದುವಿಯ ವೈಬೋಗದ ತಯ್ಯಾರಿಗಳೆಲ್ಲ ಕೇಳಕೊಂತ ನಿಂತೆ.


4 thoughts on “

  1. ಮದುವೆ ಸರಳವಾದರೆ ಚೆನ್ನ.
    ಅರ್ಥಪೂರ್ಣ ಲೇಖನ. ಭಾಷಾ ಸೊಗಡು ಚಂದ.

Leave a Reply

Back To Top