“ಪಿತ್ತಕೋಶದ ಕಲ್ಲುಗಳು”ವೈದ್ಯಕೀಯ ಲೇಖನ- ಡಾ. ಅರಕಲಗೂಡು ನೀಲಕಂಠ ಮೂರ್ತಿ

ವೈರಲ್ ಜ್ವರದ ಸಮಯ ಆರಂಭವಾಗಿ ಕ್ಲಿನಿಕ್ಕುಗಳೆಲ್ಲ ತುಂಬಿರುತ್ತಿದ್ದ ಕಾಲ. ಅಂತಹ ಒಂದು ದಿನ, ನನ್ನಲ್ಲಿಗೆ ಯಾವಾಗಲು ಸಲಹೆಗೆ ಬರುವ ರೋಗಿಯೊಬ್ಬರು ಕಾಲ್ ಮಾಡಿ, ಅವರ ಕಡೆಯ ಮಹಿಳೆಯೊಬ್ಬರಿಗೆ ಗ್ಯಾಸ್ಟ್ರಿಕ್ ಆಗಿದೆಯೆಂದೂ, ಎರಡು ಮೂರು ಡಾಕ್ಟರರಿಗೆ ತೋರಿಸಿದ್ದರೂ ಏನೂ ಪ್ರಯೋಜನವಾಗಿಲ್ಲವೆಂದೂ, ನೀವು ಒಂದು ಸಲ ನೋಡಲಾದೀತೆ ಎಂದು ಕೇಳಿದರು. ಬೇರೆ ಊರಿಂದ ಕರೆಸಬೇಕು ಎಂದೂ ಹೇಳಿದರು. ನಾನು, ಬೇರೆ ಊರಿಂದ ಕರೆಸುವ ಬದಲು, ಅದೂ ಅಷ್ಟು ಜನ ವೈದ್ಯರು ನೋಡಿ ಸಹ ಪ್ರಯೋಜನವಾಗಿಲ್ಲ ಎಂದಮೇಲೆ, ಸ್ಪೆಷಲಿಸ್ಟ್ ಒಬ್ಬರಿಗೆ ತೋರಿಸಿದರೆ ಒಳ್ಳೆಯದು ಮತ್ತು ಅವರು ಗ್ಯಾಸ್ಟ್ರೊಸ್ಕೋಪಿ ಕೂಡ ಮಾಡಬಹುದು ಎಂದೆ. ಅದಕ್ಕೆ ಅವರು, “ಆದರೂ ನೀವು ಒಂದ್ಸಲ ನೋಡಿ ಹೇಳಿದರೆ, ನನಗೆ ಸಮಾಧಾನ” ಎಂದರು. ನನ್ನ ಒಪ್ಪಿಗೆಯ ಮೇರೆಗೆ, ಊರಿಂದ ಕರೆಸಿ ಮಾರನೆ ದಿನವೆ ಕ್ಲಿನಿಕ್ಕಿಗೆ ಬಂದರು. ನಾನು ಮತ್ತೊಮ್ಮೆ ಆ ಮಹಿಳೆಗೆ ಆಗುವ ಎಲ್ಲ ತೊಂದರೆಗಳನ್ನು ವಿವರವಾಗಿ ತಿಳಿದುಕೊಂಡು, ಪರೀಕ್ಷೆ ಮಾಡಿದಾಗ, ಇದು ಖಂಡಿತ ಗ್ಯಾಸ್ಟ್ರಿಕ್ ಸಮಸ್ಯೆ ಅಲ್ಲ ಎಂದು ಹೇಳಿ, ಉದರದ ಸ್ಕ್ಯಾನ್ ಮಾಡಿಸಲು ಬರೆದುಕೊಟ್ಟೆ. ರಿಪೋರ್ಟ್ ಬಂದಾಗ, ಆ ಮಹಿಳೆ ಪಿತ್ತಕೋಶದ ಕಲ್ಲುಗಳ ತೊಂದರೆಯಿಂದ ಬಳಲುತ್ತಿದ್ದ ವಿಷಯ ತಿಳಿಸಿ, ಶಸ್ತ್ರಚಿಕಿತ್ಸೆಗೆ ಬರೆದು ಕಳಿಸಿದೆ.

ಪಿತ್ತಕೋಶದ ಕಲ್ಲುಗಳು ಜೀರ್ಣಕ್ರಿಯಾ ರಸದ ಗಡುಸಾದ ಶೇಖರಣೆಗಳು (hardened deposits of digestivefluid). ಪಿತ್ತಕೋಶವು ನಮ್ಮ ಉದರದ ಬಲಭಾಗದಲ್ಲಿರುವ ಯಕೃತ್ತಿನ  ಕೆಳಗೆ, ಮರ ಸೇಬಿನ ಕಾಯಿಯ ಆಕಾರದ ಸಣ್ಣ ಅಂಗ. ಪಿತ್ತಕೋಶದಿಂದ ನಮ್ಮ ಸಣ್ಣ ಕರುಳಿಗೆ ಜೀರ್ಣಕ್ರಿಯೆಯ ದ್ರವವಾದ ಪಿತ್ತರಸ ಬೀಡುಗಡೆಯಾಗುತ್ತದೆ.

ಪಿತ್ತಕೋಶದ ಕಲ್ಲುಗಳು — ಪಿತ್ತರಸದ ಗಡುಸಾದ ಶೇಖರಣೆಗಳು ಪಿತ್ತಕೋಶದ ಕಲ್ಲುಗಳಾಗಿ ಮಾರ್ಪಾಡಾಗಬಹುದು. ಪಿತ್ತರಸವು ಯಕೃತ್ತಿನಲ್ಲಿ ಉತ್ಪತ್ತಿಯಾಗಿ, ಪಿತ್ತಕೋಶದಲ್ಲಿ ಶೇಖರಿಸಲ್ಪಡುತ್ತದೆ. ಆಹಾರವನ್ನು ಸೇವಿಸಿದಾಗ, ಪಿತ್ತಕೋಶವು ಸಂಕುಚಿತಗೊಂಡು (contracts) ಪಿತ್ತರಸವನ್ನು ಸಣ್ಣ ಕರುಳಿನತ್ತ (duodenum) ಹರಿಸುತ್ತದೆ. ಕೆಲವರಲ್ಲಿ ಒಂದೇ ಒಂದು ಕಲ್ಲು ಕಂಡುಬಂದರೆ, ಇನ್ನಿತರರಲ್ಲಿ ಹಲವಾರು ಕಲ್ಲುಗಳು ಕಾಣಿಸಬಹುದು. ಮತ್ತು ಕಲ್ಲುಗಳು ಮರಳಿನ ಕಾಳಿನಷ್ಟು ಸಣ್ಣ ಗಾತ್ರದಿಂದ, ಒಂದು ಗಾಲ್ಫ್ ಚೆಂಡಿನಷ್ಟು ದಪ್ಪ ಇರುವವರೆಗೂ ಇರಬಹುದು. ಸಾಮಾನ್ಯವಾಗಿ ಯಾವ ಥರದ ರೋಗ ಲಕ್ಷಣಗಳೂ ಇಲ್ಲದವರಿಗೆ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ.  ಆದರೆ, ತೊಂದರೆ ಪಡುವವರಿಗೆ, ಶಸ್ತ್ರಚಿಕಿತ್ಸೆ ಮಾಡಲೇಬೇಕು.

ರೋಗಲಕ್ಷಣಗಳು:
ಪಿತ್ತಕೋಶದ ಕಲ್ಲುಗಳು ಯಾವುದೆ ಲಕ್ಷಣಗಳಿಲ್ಲದೆ ಇರಬಹುದು. ಆದರೆ, ಕಲ್ಲು ಪಿತ್ತರಸ ನಾಳದಲ್ಲಿ ತಂಗಿದಾಗ, ಪಿತ್ತರಸದ ಹರಿವಿಗೆ ಅಡಚಣೆಯಾಗಿ, ಉಂಟಾಗುವ ಲಕ್ಷಣಗಳು —

… ಉದರದ ಮೇಲಿನ ಬಲಭಾಗದಲ್ಲಿ ಹಠಾತ್ತಾದ ಮತ್ತು ತೀವ್ರತೆಯಲ್ಲಿ ಬಹುಬೇಗ ಏರುತ್ತಿರುವ ನೋವು.

… ಅದೇ ರೀತಿ ಏರುಗತಿಯ ತೀವ್ರ ನೋವು ಎದೆಮೂಳೆಯ ಕೆಳಗಿನ ಉದರದ ಮಧ್ಯದಲ್ಲಿ.

… ಬೆನ್ನಿನ ಮೇಲಿರುವ ಎರಡೂ ಮೂಳೆಗಳ ನಡುವೆ ನೋವು.

… ಬಲ ಭುಜದಮೇಲಿನ ನೋವು.

… ಓಕರಿಕೆ ಮತ್ತು ವಾಂತಿ.

ಪಿತ್ತಕೋಶದ ಕಲ್ಲುಗಳ ನೋವು ಅನೇಕ ನಿಮಿಷಗಳಿಂದ ಕೆಲವಾರು ಘಂಟೆಗಳ ತನಕ ತೊಂದರೆ ನೀಡಬಹುದು.

ವೈದ್ಯರನ್ನು ತುರ್ತಾಗಿ ಕಾಣಬೇಕು:

… ಹೊಟ್ಟೆ ನೋವು ಪ್ರಬಲವಾಗಿ, ಕೂರಲು ಬಿಡದೆ, ನೆಮ್ಮದಿಯ ಸ್ಥಿತಿಯಲ್ಲಿ ಇರುವುದು ಅಸಾಧ್ಯವಾದಾಗ.

… ಚರ್ಮ ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗಿದಾಗ.

… ಅಧಿಕ ಜ್ವರ ಮತ್ತು ಚಳಿ ಇದ್ದ ಸಂದರ್ಭದಲ್ಲಿ.

ಕಾರಣಗಳು:
ಪಿತ್ತಕೋಶದ ಕಲ್ಲುಗಳಿಗೆ ಸರಿಯಾದ ಕಾರಣ ತಿಳಿದಿಲ್ಲ. ಆದರೆ, ವೈದ್ಯರುಗಳ ಪ್ರಕಾರ ಈ ಕೆಳಗಿನ ಕಾರಣಗಳಿಂದ ಕಲ್ಲುಗಳು ಉಂಟಾಗಬಹುದು —

… ಪಿತ್ತರಸದಲ್ಲಿ ಹೆಚ್ಚು ಕೊಲೆಸ್ಟಿರಾಲ್ ಇದ್ದಾಗ – ಸಾಮಾನ್ಯವಾಗಿ, ಯಕೃತ್ತು ಹೊರಹಾಕಿದ ಕೊಲೆಸ್ಟಿರಾಲನ್ನು ಕರಗಿಸುವಷ್ಟು ರಾಸಾಯನಿಕಗಳು ಪಿತ್ತರಸದಲ್ಲಿರುತ್ತವೆ. ಆದರೆ, ಪಿತ್ತರಸ ಕರಗಿಸುವ ಶಕ್ತಿಗಿಂತ ಅಧಿಕವಾಗಿ ಯಕೃತ್ತು ಕೊಲೆಸ್ಟಿರಾಲನ್ನು ಹೊರಹಾಕಿದಾಗ, ಆ ಹೆಚ್ಚಿನ ಕೊಬ್ಬು ಹರಳುಗಳಾಗಿ ಮಾರ್ಪಟ್ಟು, ಪಿತ್ತಕೋಶದ ಕಲ್ಲುಗಳಾಗುತ್ತವೆ.

… ಪಿತ್ತರಸದಲ್ಲಿ ಅಧಿಕ ಬಿಲಿರೂಬಿನ್ ಇದ್ದಾಗ – ರಕ್ತದ ಕೆಂಪುರಕ್ತ ಕಣಗಳು ಛೇದನಗೊಂಡಾಗ ಉಂಟಾಗುವ ರಾಸಾಯನಿಕಕ್ಕೆ ಬಿಲಿರೂಬಿನ್ ಎಂದು ಹೆಸರು. ಯಕೃತ್ತಿನ ಸಿರೋಸಿಸ್, ಪಿತ್ತಕೋಶದ ವ್ಯವಸ್ಥೆಯ ಸೋಂಕು, ಕೆಲ ರಕ್ತದ ಕಾಯಿಲೆಗಳು ಮುಂತಾದ ಕಾರಣಗಳಿಂದ ಯಕೃತ್ತು ಅಧಿಕ ಬಿಲಿರೂಬಿನ್ ಉತ್ಪತ್ತಿಸುತ್ತದೆ. ಈ ಹೆಚ್ಚಿನ ಬಿಲಿರೂಬಿನ್ ಪಿತ್ತಕೋಶದ ಕಲ್ಲುಗಳಾಗಲು ಸಹಾಯವಾಗುತ್ತದೆ.

… ಪಿತ್ತಕೋಶವು ಸರಿಯಾಗಿ ಖಾಲಿ ಆಗದಿದ್ದರೆ – ಪಿತ್ತಕೋಶದಿಂದ ಪಿತ್ತರಸ ಸಂಪೂರ್ಣ ಖಾಲಿಯಾಗದಿದ್ದಾಗ, ಆ ಪಿತ್ತರಸವು ಸಾರವರ್ಧಿತವಾಗಿ (concentrate), ಕಲ್ಲುಗಳಾಲು ಸಹಕರಿಸುತ್ತದೆ.

ಪಿತ್ತಕೋಶದ ಕಲ್ಲುಗಳ ವಿಧಗಳು:
ಪಿತ್ತಕೋಶದಲ್ಲಿ ಉಂಟಾಗುವ ಕಲ್ಲುಗಳ ವಿಧಗಳೆಂದರೆ —

… ಕೊಲೆಸ್ಟಿರಾಲಿನ ಕಲ್ಲುಗಳು – ಅತ್ಯಂತ ಸಾಮಾನ್ಯವಾದ ಪಿತ್ತಕೋಶದ ಕಲ್ಲುಗಳು ಕೊಲೆಸ್ಟಿರಾಲ್ ಕಲ್ಲುಗಳು. ಇವು ಹೆಚ್ಚಾಗಿ ಹಳದಿ ಬಣ್ಣದವು. ಹೆಚ್ಚಿನ ಸಮಯ ಇವುಗಳಲ್ಲಿ ಕರಗದಿರುವ ಕೊಲೆಸ್ಟಿರಾಲಿನಿಂದ ಉಂಟಾಗಿರುತ್ತವೆ; ಆದರೆ. ಬೇರೆ ಅಂಶಗಳೂ ಇರಬಹುದು.

… ಪಿಗ್ಮೆಂಟ್ (ವರ್ಣದ್ರವ್ಯ) ಕಲ್ಲುಗಳು –
ಪಿತ್ತರಸದಲ್ಲಿ ಅಧಿಕ ಬಿಲಿರೂಬಿನ್ ಇದ್ದಾಗ ಆಗುವಂತಹ ಈ ಕಲ್ಲುಗಳು, ಗಾಢ ಕಂದು ಅಥವ ಕಪ್ಪು ಬಣ್ಣ ಹೊಂದಿರುತ್ತವೆ.

ಅಪಾಯಕರ ಅಂಶಗಳು:
ಯಾವ ಯಾವ ಅಂಶಗಳಿಂದ ಪಿತ್ತಕೋಶದ ಕಲ್ಲುಗಳಾಗುವ ಸಮಸ್ಯೆ ಹೆಚ್ಚುವುದೆಂದರೆ  —
… ಮಹಿಳೆಯರು
… ನಲವತ್ತು ಅಥವ ಹೆಚ್ಚಿನ ವಯಸ್ಸು
… ಬೊಜ್ಜು ಅಥವ ಅಧಿಕ ತೂಕ
… ಹೆಚ್ಚು ಓಡಾಡದ ಜಡ ಜೀವನ
… ಗರ್ಭಿಣಿಯರು
… ಅಧಿಕ ಕೊಬ್ಬಿನ ಆಹಾರ ಸೇವನೆ
… ನಾರಿನಂಶ ಕಡಿಮೆ ಇರುವ ಆಹಾರ ಸೇವನೆ
… ಪಿತ್ತಕೋಶದ ಕಲ್ಲು ಈಗಾಗಲೆ ಆಗಿದ್ದ ಇತಿಹಾಸ
… ಮಧುಮೇಹ
… ಲುಕೀಮಿಯ, ಸಿಕಲ್ ಸೆಲ್ ಅನೀಮಿಯ ಮುಂತಾದ ಕಾಯಿಲೆಗಳು
… ತ್ವರಿತವಾಗಿ ತೂಕ ಕಡಿಮೆಯಾಗುವುದು
… ಯಕೃತ್ತಿನ ಕಾಯಿಲೆ
… ಈಸ್ಟ್ರೊಜನ್ ಇರುವಂತಹ ಔಷಧ ಸೇವನೆ; ಉದಾಹರಣೆಗೆ ಗರ್ಭನಿರೋಧಕ ಮಾತ್ರೆ ಮತ್ತು ಹಾರ್ಮೋನ್ ಚಿಕಿತ್ಸೆ.

ತೊಡಕುಗಳು:
ಪಿತ್ತಕೋಶದ ಕಲ್ಲುಗಳಿಂದ ಕೆಲವು ಇನ್ನಿತರ ತೊಡಕುಗಳೆಂದರೆ —

… ಪಿತ್ತಕೋಶದ ಕತ್ತಿನಲ್ಲಿ ಸಿಕ್ಕಿಹಾಕಿಕೊಂಡ ಕಲ್ಲಿನಿಂದ ಪಿತ್ತಕೋಶದ ಉರಿಯೂತ (cholecystitis) ಆಗಬಹುದು. ಈ ತೊಂದರೆಯಿಂದ ಅತೀವ್ರ ನೋವು ಮತ್ತು ಜ್ವರ ಉಂಟಾಗಬಹುದು.

… ಪಿತ್ತಕೋಶ ಮತ್ತು ಯಕೃತ್ತಿನಿಂದ ಪಿತ್ತರಸ ಸಣ್ಣ ಕರುಳಿಗೆ ಹರಿವ ಕೊಳವೆಗಳನ್ನು ಕಲ್ಲು ತಡೆಗಟ್ಟಬಹುದು. ಆ ಸಂದರ್ಭ ಅತಿಯಾದ ನೋವು, ಜ್ವರ ಮತ್ತು ಕಾಮಾಲೆ (jaundice) ಕೂಡ ಉಂಟಾಗಬಹುದು.

… ಮೇದೋಜ್ಜೀರಕ ಗ್ರಂಥಿಯ ನಾಳವು (pancreatic duct) ಮೇದೋಜ್ಜೀರಕ ಗ್ರಂಥಿಯಿಂದ ಹೊರಟು ಸಾಮಾನ್ಯ ಪಿತ್ತರಸ ನಾಳ (common bile duct),
ಸಣ್ಣ ಕರುಳಿಗೆ ಸೇರುವ ಮುನ್ನ ಅದನ್ನು ಕೂಡಿಕೊಳ್ಳುತ್ತದೆ. ಜೀರ್ಣಕ್ರಿಯೆಗೆ ಸಹಕರಿಸುವ ಮೇದೋಜ್ಜೀರಕ ಗ್ರಂಥಿಯ ರಸಗಳು ಮೇದೋಜ್ಜೀರಕ ಗ್ರಂಥಿಯ ನಾಳದ ಮೂಲಕ ಹರಿಯುತ್ತದೆ.
ಹಾಗಾಗಿ, ಪಿತ್ತಕೋಶದ ಕಲ್ಲು ಮೇದೋಜ್ಜೀರಕ ಗ್ರಂಥಿಯ ನಾಳದಲ್ಲಿ ತಡೆಯೊಡ್ಡಿದಾಗ, ಮೇದೋಜ್ಜೀರಕ ಗ್ರಂಥಿಯ ಉರಿಯೂತವಾಗಿ, ತೀವ್ರ ಮತ್ತು ನಿರಂತರ ಹೊಟ್ಟೆ ನೋವಾಗಿ, ಆಸ್ಪತ್ರೆಯ ಚಿಕಿತ್ಸೆಯ ಅವಶ್ಯ ಬರುತ್ತದೆ.

… ಪಿತ್ತಕೋಶದ ಅರ್ಬುದ – ಪಿತ್ತಕೋಶದ ಕಲ್ಲಿನ ಇತಿಹಾಸ ಇರುವ ಜನರಲ್ಲಿ ಪಿತ್ತಕೋಶದ ಅರ್ಬುದ (gallbladder cancer) ಉಂಟಾಗುವ ಸಂಭವ ಹೆಚ್ಚು. ಆದರೆ, ಪಿತ್ತಕೋಶದ ಕ್ಯಾನ್ಸರ್ ಅತ್ಯಂತ ವಿರಳ.      

ತಡೆಗಟ್ಟುವ ವಿಧಾನಗಳು:
ಪಿತ್ತಕೋಶದ ಕಲ್ಲುಗಳು ಆಗದ ಹಾಗೆ ತಡೆಯಬಹುದಾದ ವಿಧಾನಗಳೆಂದರೆ —

… ಊಟ ತೊರೆಯದಿರುವುದು – ಊಟ ಸಮಯಕ್ಕೆ ಸರಿಯಾಗಿ ಪ್ರತಿದಿನ ಮತ್ತು ಪ್ರತಿ ಊಟದ ಹೊತ್ತಿನಲ್ಲಿ ಮಾಡುವುದು. ಊಟವನ್ನು ತೊರೆಯುವುದು ಅಥವ ಉಪವಾಸ ಮಾಡುವುದರಿಂದ ಪಿತ್ತಕೋಶದ ಕಲ್ಲುಗಳಾಗುವ ಅಪಾಯ ಹೆಚ್ಚು.

… ತೂಕ ಕಳೆಯುವುದು – ತೂಕವನ್ನು ನಿಧಾನವಾಗಿ ಇಳಿಸಬೇಕು. ತ್ವರಿತವಾಗಿ ತೂಕ ಕಡಿಮೆ ಮಾಡುವುದರಿಂದ ಪಿತ್ತಕೋಶದ ಕಲ್ಲುಗಳಾಗುವ ಸಂಭವ ಹೆಚ್ಚು. ಒಂದು ವಾರದಲ್ಲಿ ಅರ್ಧದಿಂದ ಒಂದು ಕೆ.ಜಿ. ಯಷ್ಟು ತೂಕ ಇಳಿಸುವ ಗುರಿ ಇರಬೇಕು.

… ನಾರಿನ ಆಹಾರ ಹೆಚ್ಚಿರಬೇಕು – ನಾರಿನ ಅಂಶ ಹೆಚ್ಚಿರುವ ತರಕಾರಿ, ಹಣ್ಣು ಮತ್ತು ಕಾಳುಗಳನ್ನು ಆಹಾರದಲ್ಲಿ ಹೆಚ್ಚು ಹೆಚ್ಚು ಬಳಸಬೇಕು.

… ಬೊಜ್ಜು ಮತ್ತು ಅಧಿಕ ತೂಕವಿರುವ ವ್ಯಕ್ತಿಗಳಲ್ಲಿ ಪಿತ್ತಕೋಶದ ಕಲ್ಲುಗಳ ಅಪಾಯ ಹೆಚ್ಚು. ಆಹಾರದಲ್ಲಿ ಸೇವಿಸುವ ಒಟ್ಟು ಕ್ಯಾಲೋರಿಗಳನ್ನು ಕಡಿಮೆ ಮಾಡುವ ಮತ್ತು ದೈಹಿಕ ಚಟುವಟಿಕೆ ಹೆಚ್ಚಿಸುವತ್ತ ಪ್ರಯತ್ನ ಮಾಡಬೇಕು. ಒಮ್ಮೆ ಆರೋಗ್ಯಕರ ತೂಕ ಸಾಧಿಸಿದಾಗ, ಅಷ್ಟೇ ತೂಕ ಕಾಪಾಡಿಕೊಳ್ಳವ ಹಾಗೆ, ಆರೋಗ್ಯಕರ ಆಹಾರದ ಸೇವನೆಯ ಜೊತೆಗೆ, ದೈಹಿಕ ವ್ಯಾಯಾಮ ಸಹ ಮುಂದುವರೆಸಬೇಕು.

ರೋಗನಿರ್ಣಯ:
ಪಿತ್ತಕೋಶದ ಕಲ್ಲುಗಳು ಹಾಗು ಅವುಗಳಿಂದ ಆಗುವ ತೊಡಕುಗಳನ್ನು ನಿರ್ಣಯ ಮಾಡಲು ಉಪಯೋಗಿಸುವ ಪರೀಕ್ಷೆಗಳು ಮತ್ತು ವಿಧಾನಗಳು —

… ಉದರದ ಅಲ್ಟ್ರಾಸೌಂಡ್ – ಪಿತ್ತಕೋಶದ ಕಲ್ಲುಗಳ ಲಕ್ಷಣಗಳನ್ನು ತಿಳಿಯಲು ಉಪಯೋಗಿಸುವ ಅತ್ಯಂತ ಸಾಮಾನ್ಯ ಪರೀಕ್ಷೆ ಇದು. ಸಂಜ್ಞಾಪರಿವರ್ತಕ (Transducer) ಎಂಬ ಸಾಧನವನ್ನು ಉದರದ ಮೇಲೆ, ಹಿಂದೆ ಮುಂದೆ ಓಡಾಡಿಸುವ ಮೂಲಕ, ಕಂಪ್ಯೂಟರ್ ಒಂದಕ್ಕೆ ಸಂಕೇತಗಳನ್ನು ರವಾನಿಸಿ, ಅದರಿಂದ ಉದರದ ಒಳಗಿನ ಅಂಗಗಳ ಚಿತ್ರಣವನ್ನು ಮೂಡಿಸುತ್ತದೆ.

… ಉದರದ ಅಲ್ಟ್ರಾಸೌಂಡ್ ಅತಿ ಚಿಕ್ಕ ಚಿಕ್ಕ ಕಲ್ಲುಗಳನ್ನು ಚಿತ್ರಿಸಲು ವಿಫಲವಾದಾಗ ವೈದ್ಯರು, ರೋಗಿಯ ಬಾಯಿಯ ಮೂಲಕ ಬಾಗಿಸಬಹುದಾದ ಕೊಳವೆಯನ್ನು ಜೀರ್ಣಕ್ರಿಯಾಂಗದೊಳಗೆ ಇಳಿಸುವರು – ಇದಕ್ಕೆ ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ (Endoscopic ultrasound) ಎಂದು ಹೆಸರು. ಇದರಲ್ಲಿ ಇರುವ ಸಂಜ್ಞಾಪರಿವರ್ತಕವು ಶಬ್ದ ತರಂಗಗಳ ಮೂಲಕ ಒಳಗಿನ ಅಂಗಗಳ ನಿಖರವಾದ ಚಿತ್ರಣವನ್ನು ಸೃಷ್ಟಿಸುತ್ತದೆ.

… ರಕ್ತ ಪರೀಕ್ಷೆಗಳು:
ಪಿತ್ತಕೋಶದ ಕಲ್ಲುಗಳಿಂದ ಆಗಿರಬಹುದಾದ ತೊಂದರೆಗಳಾದ, ಸೋಂಕು, ಕಾಮಾಲೆ, ಪಿತ್ತಕೋಶದ ಉರಿಯೂತ ಮುಂತಾದವುಗಳನ್ನು ಕಂಡುಹಿಡಿಯಲು ರಕ್ತ ಪರೀಕ್ಷೆಗಳನ್ನು ಮಾಡಿಸುವರು.

ಚಿಕಿತ್ಸೆ:
ಪಿತ್ತಕೋಶದ ಕಲ್ಲುಗಳ ತೊಂದರೆಗೆ ತುತ್ತಾದ ಅನೇಕ ರೋಗಿಗಳಿಗೆ ಯಾವ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ; ಕಾರಣ ಅವು ತೊಂದರೆ ಕೊಡುವುದಿಲ್ಲ. ವೈದ್ಯರು ರೋಗಲಕ್ಷಣಗಳಿಂದ ಮತ್ತು ಪರೀಕ್ಷೆಯ ಫಲಿತಾಂಶಗಳಿಂದ ಯಾವ ರೋಗಿಗೆ ಚಿಕಿತ್ಸೆ ಬೇಕಾಗುತ್ತದೆ ಎಂಬ ನಿರ್ಧಾರ ಮಾಡುವರು. ಹಾಗಾಗಿ ವೈದ್ಯರು ಒಬ್ಬ ರೋಗಿಗೆ ಮುಂದೊಮ್ಮೆ ಉದರದ ಬಲ ಭಾಗದಲ್ಲಿ ತಡೆಯಲಾರದ ತೀವ್ರತರ ನೋವು ಕಾಣಿಸಿಕೊಂಡಲ್ಲಿ ಚಿಕಿತ್ಸೆಗೆ ಬರುವಂತೆ ತಿಳಿಸಬಹುದು.

ಸಾಮಾನ್ಯವಾಗಿ ಪಿತ್ತಕೋಶದ ಕಲ್ಲುಗಳ ಚಿಕಿತ್ಸೆ ಎಂದರೆ ಕಲ್ಲುಗಳನ್ನು ತೆಗೆಯಲು ಶಸ್ತ್ರಚಿಕಿತ್ಸೆ ಅವಶ್ಯಕ. ಶಸ್ತ್ರಚಿಕಿತ್ಸೆಯಲ್ಲಿ ಪಿತ್ತಕೋಶವನ್ನು ತೆಗೆದುಹಾಕುವರು. ಹಾಗೆ ಪಿತ್ತಕೋಶವನ್ನು ತೆಗೆದುಹಾಕಿದ ನಂತರ, ಪಿತ್ತರಸವು ಯಕೃತ್ತಿನಿಂದ ನೇರವಾಗಿ ಸಣ್ಣ ಕರುಳಿಗೆ ಹರಿಯುತ್ತದೆ. ಪಿತ್ತಕೋಶವು ಜೀವಿಸಲು ಅವಶ್ಯಕವಲ್ಲ ಮತ್ತು ಅದನ್ನು ತೆಗೆದ ನಂತರ ಜೀರ್ಣಕ್ರಿಯೆಗೆ ತೊಂದರೆ ಆಗುವುದಿಲ್ಲ. ಆದರೆ ಅದರಿಂದ ಭೇದಿ ಆಗಬಹುದು ಮತ್ತು ಅದು ಕೂಡ ತಾತ್ಕಾಲಿಕ.

ಪಿತ್ತಕೋಶದ ಕಲ್ಲುಗಳನ್ನು ಕರಗಿಸುವ ಔಷಧಗಳನ್ನು ತಿಂಗಳಿಂದ ವರ್ಷಗಳಷ್ಟು ಕಾಲ ಉಪಯೋಗಿಸಿದರೆ ಕಲ್ಲುಗಳು ಕರಗಬಹುದು. ಮೇಲಾಗಿ, ಔಷಧ ಸೇವನೆ ನಿಲ್ಲಿಸಿದ ನಂತರ ಮತ್ತೆ ಕಲ್ಲುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಕೆಲವುಸಲ ಔಷಧ ಕೆಲಸ ಮಾಡದಿರಲಹುದು. ಆದ್ದರಿಂದ, ಪಿತ್ತಕೋಶದ ಕಲ್ಲುಗಳಿಗಾಗಿ ಹೆಚ್ಚಿನ ವೈದ್ಯರು ಔಷಧಗಳ ಉಪಯೋಗವನ್ನು, ಯಾರಿಗೆ ಶಸ್ತ್ರಚಿಕಿತ್ಸೆ ಅಸಾಧ್ಯವೊ ಅಂತಹವರಿಗೆ ಶಿಫಾರಸ್ತು ಮಾಡುವರು.


Leave a Reply

Back To Top