ಧಾರಾವಾಹಿ-ಅಧ್ಯಾಯ –35
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಸುಮತಿಯ ಅನಾರೋಗ್ಯ
ಸುಮತಿಯ ಬಾಡಿದ ಮುಖ ಕಂಡ ವೇಲಾಯುಧನ್ಹಣೆ ಮುಟ್ಟಿ ನೋಡಿದರು ಬಿಸಿಯಾಗಿದೆ ಎನಿಸಿತು. ಪತಿ ಹಣೆ ಮುಟ್ಟಿದಾಗ ಹೆದರಿ ಪಕ್ಕಕ್ಕೆ ಸರಿದಳು. ಮಲಗುವ ಕೋಣೆಗೆ ಹೋದ ವೇಲಾಯುಧನ್ ಜ್ವರದ ಮಾತ್ರೆಯನ್ನು ತಂದು ಸುಮತಿಯ ಕೈಗೆ ಇಟ್ಟರು. ” ಈ ಮಾತ್ರೆಯನ್ನು ತೆಗೆದುಕೋ….ಜ್ವರ ಕಡಿಮೆಯಾಗುತ್ತದೆ” ….ಎಂದು ಹೇಳಿ ಪತ್ನಿ ಮಾಡಿಟ್ಟ ದೋಸೆ ತಿಂದು ಮಧ್ಯಾಹ್ನದ ಊಟಕ್ಕೆ ಕಟ್ಟಿಟ್ಟಿದ್ದ ಬುತ್ತಿಯನ್ನು ತೆಗೆದುಕೊಂಡು ಕೆಲಸದ ಕಡೆಗೆ ಹೊರಟರು. ಪತಿಯು ಹೋದ ಬಳಿಕ ಸುಮತಿ ತಿಂಡಿ ತಿನ್ನಲು ಕುಳಿತಳು. ಆದರೆ ತಿನ್ನಲು ಅವಳಿಂದ ಸಾಧ್ಯವಾಗಲಿಲ್ಲ. ಸ್ವಲ್ಪ ಸೇರಿದಷ್ಟು ತಿಂದು ಜ್ವರದ ಮಾತ್ರೆ ತೆಗೆದುಕೊಂಡಳು. ಜ್ವರದ ತಾಪಕ್ಕೆ ಹಾಗೂ ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದ ಕಾರಣ ಆಯಾಸವಾಗಿತ್ತು.
ಕೋಣೆಗೆ ಹೋಗಿ ಸ್ವಲ್ಪ ಹೊತ್ತು ಮಲಗಿದಳು. ಆದರೆ ಕಣ್ಣು ಮುಚ್ಚಿದ ಕೂಡಲೇ ರಾತ್ರಿಯ ಘಟನೆ ನೆನಪಿಗೆ ಬಂದು ಮನಸ್ಸಿಗೆ ಬಹಳ ನೋವಾಯಿತು. ಕೆಲಸಕ್ಕೆ ಹೋಗಬೇಡ ಸುಮತಿ ಎಂದಿದ್ದರೆ ಸಾಕಿತ್ತು. ಅಷ್ಟೊಂದು ಕೋಪ ಮಾಡಿಕೊಂಡು ಹೀಗೆ ನನ್ನನ್ನು ಏಕೆ ಹೊಡೆದರು? ಎಷ್ಟು ಯೋಚಿಸಿದರೂ ಉತ್ತರ ಸಿಗದಂತಹ ಪ್ರಶ್ನೆಯಾಗಿತ್ತು ಅವಳಿಗೆ. ಹೀಗೆಯೇ ಯೋಚಿಸುತ್ತಾ ಮಲಗಿದ ಅವಳಿಗೆ ಮಾತ್ರೆಯ ಪ್ರಭಾವಕ್ಕೇನೂ ನಿದ್ರೆ ಆವರಿಸಿತು. ಸ್ವಲ್ಪ ಹೊತ್ತಿಗೆಲ್ಲ ಮೈ ಬೆವರಿ ಜ್ವರ ಬಿಟ್ಟಿತು. ಮೈ ಕೈ ನೋವು ಸ್ವಲ್ಪ ಕಡಿಮೆ ಆದಂತೆ ಅನಿಸಿತು. ನಿಧಾನವಾಗಿ ಎದ್ದಳು. ಮನೆಯ ಮಿಕ್ಕ ಕೆಲಸವೆನ್ನೆಲ್ಲಾ ಹಾಗೇ ಬಿಟ್ಟು ಮಲಗಿದ್ದಳು. ಲಗುಬಗೆಯಿಂದ ಎಲ್ಲಾ ಕೆಲಸವನ್ನು ಮುಗಿಸಿದಳು. ತನ್ನ ಕೈತೋಟದ ಕಡೆಗೆ ನಡೆದಳು. ಗಿಡಗಳು ಎಂದರೆ ಅವಳಿಗೆ ಎಲ್ಲಿಲ್ಲದ ಪ್ರೀತಿ ಹಾಗಾಗಿ ಮನೆಯ ಅಂಗಳದಲ್ಲಿ ಸ್ವಲ್ಪ ಜಾಗ ಬಿಟ್ಟು ಉಳಿದೆಡೆ ಹೂ ಗಿಡಗಳನ್ನು ನೆಟ್ಟಿದ್ದಳು. ಸುತ್ತಲೂ ಇರುವ ಸ್ವಲ್ಪ ಜಾಗದಲ್ಲಿ ಹಾಗೂ ಹಿತ್ತಲಲ್ಲಿ ಮನೆಗೆ ಅತ್ಯವಶ್ಯಕ ಎನಿಸುವ ತರಕಾರಿಗಳನ್ನು ಬೆಳೆಸಿದ್ದಳು. ತನ್ನ ಬಿಡುವಿನ ವೇಳೆಯಲ್ಲಿ ಇವುಗಳ ಆರೈಕೆ ಹಾಗು ಇವುಗಳೊಂದಿಗೆ ಮಾತುಗಳನ್ನು ಕೂಡಾ ಆಡುತ್ತಾ ಹೊತ್ತು ಕಳೆಯುವಳು.
ಸಂಜೆಯಾಯಿತು ಇನ್ನು ಪತಿ ಬರುವ ಸಮಯ ಎಂದು ಒಳ ನಡೆದಳು. ಕಾಫಿ ಮಾಡಲು ಹಾಲನ್ನು ಒಲೆಯ ಮೇಲೆ ಇಟ್ಟಳು. ಅಷ್ಟು ಹೊತ್ತಿಗಾಗಲೇ ಕೆಲಸಕ್ಕೆ ಹೋಗಿದ್ದ ವೇಲಾಯುಧನ್ ಮನೆಗೆ ಬಂದರು. ಬಂದ ಕೂಡಲೇ ಪತ್ನಿಯನ್ನು ಉದ್ದೇಶಿಸಿ….” ರಾತ್ರಿಗೆ ಬೇಗ ಅಡುಗೆ ಮಾಡಿ ಬಿಡು….ಒಂದು ಒಳ್ಳೆಯ ಚಲನಚಿತ್ರ ಬಂದಿದೆ….ಬಾ ಹೋಗಿ ನೋಡಿ ಬರೋಣ ತಯಾರಾಗು”… ಎಂದು ಹೇಳಿ ಸ್ನಾನ ಮಾಡಲು ಹೋದರು. ಪತಿಯು ಸಂತೋಷದಿಂದ ಮಾತನಾಡಿದ್ದು ಕಂಡು ನಿನ್ನೆ ರಾತ್ರಿ ಆದ ಎಲ್ಲಾ ನೋವನ್ನು ಸುಮತಿ ಮರೆತಳು. ಖುಷಿಯಿಂದ ಪತಿಗೆ ಪ್ರಿಯವಾದ ಅಡುಗೆಯನ್ನು ಮಾಡಿದಳು. ನಂತರ ಸರಳವಾಗಿ ಲಕ್ಷಣವಾಗಿ ಅಲಂಕರಿಸಿಕೊಂಡು ತಯಾರಾದಳು. ಇಬ್ಬರೂ ಊಟ ಮುಗಿಸಿ ಚಲನ ಚಿತ್ರ ನೋಡಲು ಹೊರಟರು. ಇಬ್ಬರಿಗೂ ಚಲನಚಿತ್ರ ಬಹಳವಾಗಿ ಹಿಡಿಸಿತು. ಅದೇ ಖುಷಿಯಲ್ಲಿ ಮನೆಗೆ ಹಿಂದಿರುಗಿದರು. ತನ್ನಿಂದ ಪತ್ನಿಗೆ ನೋವಾದರೆ ಬೇಸರವಾದರೆ ವೇಲಾಯುಧನ್ ಪತ್ನಿಯನ್ನು ಈ ರೀತಿಯಾಗಿ ಖುಷಿ ಪಡಿಸುವ ಪ್ರಯತ್ನ ಮಾಡುತ್ತಿದ್ದರು. ಹಾಗಾಗಿ ಎಂದು ಇಂಥಹ ಘಟನೆಗಳು ನಡೆಯುತ್ತಿತ್ತೋ ಅಂದೆಲ್ಲಾ ವೇಲಾಯುಧನ್ ಹೀಗೆ ಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದರು. ಸುಮತಿಯು ತನಗಾದ ನೋವನ್ನೂ ಮರೆಯುತ್ತಾ ಇದ್ದಳು. ಹೀಗೆಯೇ ದಿನಗಳು ಕಳೆದವು. ಸುಮತಿಯು ಕೆಲವೊಮ್ಮೆ ಅಕ್ಕನ ಮನೆಗೂ ಹೋಗುತ್ತಿದ್ದಳು. ವೇಲಾಯುಧನ್ ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಅವಳನ್ನು ದೊಡ್ದ ನಾದಿನಿಯ ಮನೆಗೆ ಬಿಟ್ಟು ಕೆಲಸದಿಂದ ಹಿಂದಿರುಗುವಾಗ ಅವರ ಮನೆಗೆ ಹೋಗಿ ರಾತ್ರಿಯ ಊಟ ಮುಗಿಸಿ ಪತ್ನಿಯನ್ನು ಕರೆದುಕೊಂಡು ಹಿಂದಿಗುತ್ತಿದ್ದರು. ಆಗಾಗ ಅಪ್ಪನನ್ನು ತಮ್ಮಂದಿರನ್ನು ನೋಡಿಬರಲೆಂದು ಇಬ್ಬರೂ ಹೋಗುತ್ತಿದ್ದರು. ಆದರೆ ಕೆಲವೊಮ್ಮೆ ಕೋಪ ಬಂದಾಗ ಪತಿಯು ತನಗೆ ನೀಡುತ್ತಿದ್ದ ದೈಹಿಕ ಹಿಂಸೆಯನ್ನು ಯಾರೊಂದಿಗೂ ಹೇಳಿಕೊಳ್ಳುತ್ತಾ ಇರಲಿಲ್ಲ.
ಹೀಗೆಯೇ ಇದ್ದಾಗ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಒಂದು ದಿನ ಕೆಲಸದಿಂದ ಪತಿ ಮನೆಗೆ ಬರುವಾಗ ತೂರಾಡುತ್ತಾ ಬಂದು ಸುಮತಿಯನ್ನು ಕರೆದು
ತಾನು ತಂದಿದ್ದ ಮನೆಗೆ ಬೇಕಾದ ಸಾಮಗ್ರಿಗಳನ್ನು ಪತ್ನಿಯ ಕೈಗೆ ಕೊಟ್ಟು…” ಕುಡಿಯಲು ಸ್ವಲ್ಪ ನೀರು ಕೊಡು”…. ಎಂದು ತೊದಲುತ್ತಾ ಹೇಳಿದರು. ಸುಮತಿ ಪತಿಯನ್ನು ಎಂದೂ ಈ ರೀತಿ ಕಂಡಿರಲಿಲ್ಲ. ಕೆದರಿದ ಕೂದಲು, ಕೆಂಪಡರಿದ ಕಣ್ಣುಗಳು, ಮಾತು ತೊದಲುತ್ತಿರುವುದು, ತೂರಾಡುತ್ತಾ ನಡೆವುದು ಹೀಗೆ… ಪತಿಯನ್ನು ಈ ರೀತಿ ಕಂಡು ಬಹಳ ಗಾಭರಿಗೊಂಡಿದ್ದಳು. ಬೇಗನೆ ಅಡುಗೆ ಮನೆಗೆ ಹೋಗಿ ಗಾಜಿನ ಲೋಟದಲ್ಲಿ ಕುಡಿಯುವ ನೀರನ್ನು ತಂದಳು. ಅವಳು ನೀರು ತರುವಷ್ಟರಲ್ಲಿ ಅಲ್ಲಿಯೇ ಹಜಾರದಲ್ಲಿ ಇದ್ದ ಕುರ್ಚಿಯ ಮೇಲೆ ಕುತ್ತಿಗೆ ವಾಲಿಸಿ ಕಣ್ಣು ಮುಚ್ಚಿ ಪತಿ ಕುಳಿತಿದ್ದರು. ಅವರನ್ನು ಎಬ್ಬಿಸಲು ಬಾಗಿದಾಗ ಬಾಯಿಂದ ಏನೋ ಅಹಿತಕರ ವಾಸನೆ ಮೂಗಿಗೆ ಬಡಿಯಿತು. ಸೀರೆಯ ಸೆರಗಿನಿಂದ ಮೂಗು ಮುಚ್ಚಿಕೊಂಡು ಗಾಜಿನ ಲೋಟವನ್ನು ಮೇಜಿನ ಮೇಲೆ ಇಟ್ಟು ಬಂದು ಅವರ ಭುಜ ಹಿಡಿದು ಅಲುಗಾಡಿಸಿದಳು. ಆದರೂ ಎಚ್ಚರವಾಗಿ ಕಣ್ಣು ಬಿಡದೇ ಅವ್ಯಕ್ತವಾಗಿ ಏನೇನೋ ಬಡಬಡಿಸಿಕೊಳ್ಳುತ್ತಾ ಇನ್ನೂ ಪಕ್ಕಕ್ಕೆ ವಾಲಿದರು. ಸುಮತಿಗೆ ಬಹಳ ಹೆದರಿಕೆಯಾಯಿತು. ಪತಿ ಕುಳಿತಿದ್ದ ಕುರ್ಚಿ ಪಕ್ಕಕ್ಕೆ ವಾಲಿ ಅವರು ಬೀಳುವ ಹಾಗೆ ಕಂಡಿತು. ಕೂಡಲೇ ಕುರ್ಚಿಯ ಪಕ್ಕದಲ್ಲಿ ನೆಲದಲ್ಲಿ ಕುಳಿತು ತನ್ನ ತೋಳನ್ನು ಆನಿಸಿ ಕುರ್ಚಿಗೆ ಆಧಾರವಾದರು. ತನ್ನ ಪತಿಗೆ ಏನೋ ಆಗಿದೆ…”ದೇವರೇ ಇದೆಂತಹ ಪರಿಸ್ಥಿತಿ.. ಅವರಿಗೆ ಏನೂ ಆಗದೇ ಇರಲಿ”….ಎಂದು ದೇವರಲ್ಲಿ ಮೊರೆ ಇಡುತ್ತಾ ಹಾಗೇ ಎಚ್ಚರವಾಗಿಯೇ ಎಷ್ಟು ಹೊತ್ತು ಕುಳಿತಿದ್ದಳೋ ತಿಳಿಯದು. ಹೆದರಿ ಪತಿಯನ್ನೇ ವಾರೆಗಣ್ಣಿನಿಂದ ನೋಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು ಕುಳಿತಿದ್ದಳು. ಹಸಿವಾದರೂ ಊಟ ಮಾಡಿರಲಿಲ್ಲ. ಪತಿಗೆ ಉಣಬಡಿಸಿ ಅವರು ಊಟ ಮಾಡಿದ ನಂತರವೇ ಅವಳು ಊಟ ಮಾಡಿ ಪಾತ್ರೆಗಳನ್ನು ತೊಳೆದಿಟ್ಟು ಮರುದಿನ ಬೆಳಗ್ಗೆ ತಿಂಡಿ ಹಾಗೂ ಅಡುಗೆ ಮಾಡಲು ಬೇಕಾದ ಸಾಮಗ್ರಿಗಳನ್ನು ಮೊದಲೇ ಹೊಂದಿಸಿ ಇಟ್ಟು ಮಲಗುವಳು.
ಎಷ್ಟು ಹೊತ್ತಾದರೂ ಪತಿಯು ಏಳುವ ಲಕ್ಷಣ ಕಾಣಲಿಲ್ಲ. ತಾನು ಎದ್ದರೆ ಪತಿ ಎಲ್ಲಿ ಬೀಳುವರೋ ಎಂದು ಹೆದರಿ ಕುಳಿತಲ್ಲಿಂದ ಅವಳು ಏಳಲೇ ಇಲ್ಲ. ಹೊಟ್ಟೆ ಹಸಿಯುತ್ತಿತ್ತು
ನಿದ್ರೆಯೂ ಬರುತ್ತಿತ್ತು ಆದರೂ ಅಲ್ಲಿಂದ ಅವಳು ಕದಲಲಿಲ್ಲ. ಎಷ್ಟು ಹೊತ್ತು ಕಳೆಯಿತೋ ತಿಳಿಯಲಿಲ್ಲ. ಹಾಗೇ ವಾಲಿ ಕುಳಿತು ನಿದ್ರೆಗೆ ಜಾರಿದ್ದ ವೇಲಾಯುಧನ್ ರವರಿಗೆ ಹಸಿವಿನಿಂದ ಎಚ್ಚರವಾಯಿತು. ಕುಡಿದ ಅಮಲು ಇಳಿದಿತ್ತು….”ಸುಮತೀ ಊಟ ಬಡಿಸು ಹಸಿವಾಗುತ್ತಿದೆ”… ಎಂದು ಸ್ವಲ್ಪ ಜೋರಾಗಿಯೇ ಹೇಳುತ್ತಾ ಎದ್ದರು. ಎದ್ದಾಗ ಅವರ ಕಾಲು ಕುರ್ಚಿಯ ಪಕ್ಕದಲ್ಲಿ ನೆಲದಲ್ಲಿ ಕುಳಿತಿದ್ದ ಸುಮತಿಯ ಕಾಲಿಗೆ ತಗುಲಿತು. ಪತಿಯ ಕೂಗು ಕೇಳಿ ದಡಬಡಾಯಿಸಿ ಎದ್ದ ಸುಮತಿ ಪತಿಯ ಕಾಲು ತಗುಲಿ ಬೀಳುವಂತಾದಳು. ಸುಮತಿ ಹೀಗೆ ಕುರ್ಚಿಯ ಪಕ್ಕದಲ್ಲಿ ಕುಳಿತಿರುವುದನ್ನು ವೇಲಾಯುಧನ್ ಗಮನಿಸಿರಲಿಲ್ಲ. ಅವರಿಗೆ ಅಚ್ಚರಿಯಾಯಿತು ಸುಮತಿ ಇಲ್ಲೇಕೆ ಕುಳಿತಿರುವಳು ಅದೂ ಹೀಗೆ ನೆಲದಲ್ಲಿ? ತಮಗಾದ ಅಚ್ಚರಿಯನ್ನು ವ್ಯಕ್ತಪಡಿಸುತ್ತಾ….”ಸುಮತಿ ಇಲ್ಲೇಕೆ ಹೀಗೆ ಕುರ್ಚಿಯನ್ನು ಆನಿಸಿ ನೆಲದಲ್ಲಿ ಕುಳಿತುಕೊಂಡಿರುವೆ ಏನಾಯಿತು?!! ಎಂದು ಕೇಳಿದ ಪತಿಯ ಮಾತಿಗೆ ಉತ್ತರವಾಗಿ…ಅಯ್ಯೋ ನಿಮಗೆ ಏನಾಗಿತ್ತು? ನಾನೆಂದೂ ನಿಮ್ಮನ್ನು ಹೀಗೆ ಕಂಡಿಲ್ಲ…ನಿಮ್ಮ ಆರೋಗ್ಯ ಸರಿ ಇರಲಿಲ್ಲ ಅನಿಸುತ್ತದೆ…ನೀವು ಬಂದು ನನ್ನನ್ನು ಕರೆದು ಮನೆಗೆ ಬೇಕಾದ ಸಾಮಗ್ರಿಗಳನ್ನು ನನ್ನ ಕೈಗೆ ಕೊಟ್ಟು ಕುಡಿಯಲು ನೀರು ಕೇಳುತ್ತಾ ಈ ಕುರ್ಚಿಯ ಮೇಲೆ ಕುಳಿತಿರಿ….ನಾನು ನೀರು ತಂದು ನಿಮ್ಮನ್ನು ಎಷ್ಟು ಎಬ್ಬಿಸಿದರೂ ಏಳದೇ ಪಕ್ಕಕ್ಕೆ ವಾಲಿದಿರಿ….ನನಗೆ ಬಹಳ ಹೆದರಿಕೆಯಾಯಿತು…. ಹಾಗಾಗಿ ಇಲ್ಲಿಯೇ ನಿಮ್ಮ ಪಕ್ಕದಲ್ಲಿಯೇ ಕುರ್ಚಿಯಿಂದ ನೀವು ಬೀಳದೇ ಇರಲಿ ಎಂದು ನೆಲದಲ್ಲಿ ಕುಳಿತೆ…ಎಂದು ಕಾಳಜಿ ತುಂಬಿದ ಧ್ವನಿಯಲ್ಲಿ ಹೇಳಿದಳು.
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು