ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ

ಕುಂತ ಸಭದಾಗ ನಿಂತು ನಿಮಗ ನಾನು ತಿಳಸ್ತಿನ್ರಿ
ಚಿತ್ತಗೊಟ್ಟು ಕೇಳಿರಿ ನಿವೆಲ್ಲರ
ನೃಪತುಂಗ ನೆಲದ ಕವಿ, ಅನುಭಾವಿ, ಋಜು ಜೀವಿ
ಸಂತ ಕವಿ ರಾಮಪ್ಪನ ಮಜಕೂರ

ಸೇಡಂ ತಾಲ್ಲೂಕಿನ್ಯಾಗ ಕೊನೆಪೂರ ಎಂಬ ಊರ
ಇರುವುದು ಕೋಲ್ಕುಂದಿ ಹತ್ತಿರ
ಅಲ್ಯಾಗಿ ಹೋಗ್ಯಾನ ರಾಮಪ್ಪ ಯಾದವನೆಂಬ
ಅನುಭಾವೀ ತತ್ವಪದ ಪದಕಾರ

೧೯೧೦ ರಾಗ ಜನಿಸ್ಯಾನ ರಾಮಪ್ಪ
ಅಲ್ಯೊಂದು ಗೊಲ್ಲರ ಮನಿಯಾಗ
ಚಂದ್ರಪ್ಪ ಬಗ್ಗಮ್ಮ ದಂಪತಿಗೆ ಮಗನಾಗಿ
ಬಡತಾನದಾಗೆ ಬೆಳದಾನ ತಿಪ್ಪಲ್ದಾಗ

ಸಾಲಿ ಹೆಚ್ಚು ಕಲತಿಲ್ಲ ಪೋಲೀಸ ನೌಕರಿ ಮಾಡ್ಯಾನ
ಕಾನೂನೆಲ್ಲ ತಿಳ್ಕೊಂಡು ಪಟವಾರಕೀನು ಮಾಡ್ಯಾನ
ನೇಕೀಲಿಂದ ದುಡದು ಸ್ವಲ್ಪ ಆಸ್ತಿಪಾಸ್ತಿ ಗಳಿಸ್ಯಾನ
ಊರ ಮಂದಿಗಿ ದುಡದು ತಿನ್ನೋ ನ್ಯಾಯ ಹೇಳ್ಯಾನ

ಮೂವರು ಹೆಂಡಿರ ಮಾಡಿಕೊಂಡು ಸಂಸಾರ ಸಾಕಾಗಿ ಊರ ಹೊರಗಿನ ಗುಡಿಸಲದಾಗ ಒಬ್ಬನೇ ನೆಲಿಸ್ಯಾನ
ಎಲೆರಾಜೋಳಿ ಗುರುಮೃಗನ ಶಿಸುಮಗನಾಗಿ
ಗುರುವಿನ ಬೋಧ ಪಡದು ನಿಶ್ಚಿಂತನಾಗ್ಯಾನ

ಆಧ್ಯಾತ್ಮದಾಗ ಮುಳುಗಿ ಏಕತಾರಿ ಹಿಡಕೊಂಡು
ನೂರಾರು ನೀತಿ ಪದ ಆಡುಮಾತಿನ್ಯಾಗ ಹಾಡಿ
ಜಗದ ರೀತಿ ಖಂಡಿಸ್ಯಾನ ಬುದ್ಧಿ ಮಾತು ಹೇಳ್ಯಾನ
ಹೇಸಿ ಸಂಸಾರ ಈಸಲಕ್ಕ ದಾರಿ ತೋರಿಸ್ಯಾನ

ಕೆಟ್ಟ ಕೆಲಸ ಮಾಡಿದ್ರೆoದ್ರ ಯಮ ಲೆಕ್ಕ ಕೇಳ್ತಾನ
ಯಾರಿಗ್ಯಾರು ಅಗೋರಿಲ್ಲ ಸುಮ್ನ್ ಹೈರಾನ್ಯಾಕ್ ಆಗತೀರಿ
ಚಂದ ಬದುಕಿ ಸಂತಿ ಮುಗಿಸಿ ಶಿವನ ಪಾದ ಸೇರಬೇಕಂತ ತತ್ವಪದದಿ ಹೇಳಿಕೋತ ಎಚ್ಚರ ಕೊಟ್ಟಾನ

ಇಂಥ ತತ್ವ ಪದಗಳ ಹುಡುಕಿ ಬಾಲಚಂದ್ರನೆಂಬೋ
ಮಗ ಲಠ್ಠೆ ಅವರಿಂದ ಪುಸ್ತಕ ಮಾಡ್ಸಿ
ಏನಾರ ತಿಳಕೊಳ್ಳಲೆಂಬ ಹೊತ್ತಿಗಿ ಹೊರಗತಂದು
ತಂದಿ ಸ್ಮರಣೆ ಮಾಡಿ ಅವರ ತತ್ವಪದಗಳನ್ನು
ನಮಗ ಹಾಡಲುಳಸ್ಯಾನ ,

ಶರಣೆಂಬೆ ರಾಮಪ್ಪಾಗ ಅನುಭಾವಿ ತತ್ವಪದಕಾರಗ
ಶರಣಂಬೆ ಈ ನೆಲಕೆ ಕೀರ್ತಿ ತಂದವಗ.

Leave a Reply

Back To Top