ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
ಮೊದಲ ಮಳೆ
ಮೊದಲ ಮಳೆಗೆ ಮೈಮನಗಳು ಪುಳಕ
ಬಿಸಿಲ ಬೇಗೆಯಲಿ ನೊಂದ ಧರೆಗೀಗ ಝಳಕ
ಗುಡು ಗುಡುಗಿ ಮರೆಯಾದ ಮಳೆ ಮೇಘಗಳು
ನಲಿ ನಲಿದು ಧರೆಗಿಳಿದ ಸಂಭ್ರಮದ ಕ್ಷಣಗಳು
ಬಿತ್ತಿದ ಬೆಳೆಗೀಗ ಚಿಗುರೊಡೆವ ಸಂಭ್ರಮ
ವರ್ಷದ ಮೊದಲ ಸ್ಪರ್ಶಕೆ ತುಸು ನಾಚಿದ ವನಸುಮ
ಚಿಗುರಲೆಗಳ ಮೇಲೆ ನರ್ತಿಸುವ ಮಳೆ ಹನಿಗಳು
ತರುಲತೆಗಳ ಮೇಲೆ ನಲಿದುಲಿದ ಮರಿ ಹಕ್ಕಿಗಳು
ಇಳೆಗಿಳಿವ ಹನಿಗಳಿಗೆ ಮನದಿ ಸಾರ್ಥಕ ಭಾವ
ಪ್ರಕೃತಿಯ ಕಣಕಣಕೂ ನವ ಚೈತನ್ಯದ ಜೀವ
ಮೇಘರಾಜನ ಸ್ಪರ್ಶಕೆ ಮಧು ಪಾತ್ರೆಯಾದ ಸುಮವು
ಮಳೆ ಹನಿಯಲಿ ಮಿಂದೆದ್ದು ಮಕರಂದವನರಸಿದ ಭ್ರಮರವು
ಇಳೆಗೆ ಮೊದಲ ಮಳೆ ತಂದ ಸವಿನೆನಪ ಹೊದಿಕೆ
ಧರೆಯೊಡಲು ತುಂಬಿದ ವರ್ಷ ರಾಜನಿಗೆ ಮನದುಂಬಿದ ಹಾರೈಕೆ
—————————————-
ಮಧುಮಾಲತಿ ರುದ್ರೇಶ್
ನಮ್ಮ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ತಮಗೆ ತುಂಬು ಧನ್ಯವಾದಗಳು
ಇದು ಮೊದಲ ಮಳೆ.ಬೀಜ ಬಿತ್ತಿಲ್ಲ ಇನ್ನೂ. ಹಾಗಾಗಿ ಚಿಗುರು ಒಡೆಯುವುದಿ ಲ್ಲ. ಉಳಿದಂತೆ ಕವಿತೆ ಚೆನ್ನಾಗಿ ದೇ.